ಹೆಣಗಳ ವ್ಯಾಪಾರಕ್ಕಿಳಿದ ಸಂಸದೆ ಕರಂದ್ಲಾಜೆ

Update: 2017-07-20 18:58 GMT

ಬಿಜೆಪಿ ಮುಖಂಡ, ಸಂಸದ ನಳಿನ್ ಕುಮಾರ್ ‘ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ’ ಎಂದು ಬೆದರಿಸಿ ಸುದ್ದಿಯಾದರು. ಇದಾದ ಕೆಲವೇ ತಿಂಗಳಲ್ಲಿ ಬಿಜೆಪಿಯ ರಾಜ್ಯಮಟ್ಟದ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ‘ರಾಜ್ಯಕ್ಕೆ ಬೆಂಕಿ ಹಾಕುವ’ ಬೆದರಿಕೆಯನ್ನು ಒಡ್ಡಿದರು. ಇದೀಗ ಇನ್ನೋರ್ವ ಬಿಜೆಪಿ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆ ಬದುಕಿದ್ದವರನ್ನೇ ಸಾಯಿಸಿ ಸುದ್ದಿಯಲ್ಲಿದ್ದಾರೆ.

ರಾಜ್ಯದಲ್ಲಿ ‘ಹಿಂದೂಗಳ ಹತ್ಯೆ’ ನಡೆಯುತ್ತಿದೆ ಎಂಬ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿರುವ ಶೋಭಾ ಕರಂದ್ಲಾಜೆ, ಈ ಬಗ್ಗೆ ಎನ್‌ಐಎಯಿಂದ ತನಿಖೆ ನಡೆಸಬೇಕು ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಈಗಾಗಲೇ ಕಲ್ಲಡ್ಕದಲ್ಲಿ ಒಂದು ಭೀಕರ ಕೋಮುಗಲಭೆಯನ್ನು ಹುಟ್ಟು ಹಾಕಲು ಪ್ರಯತ್ನಿಸಿ ವಿಫಲರಾಗಿ, ಹತಾಶೆಗೀಡಾಗಿ ಬರೆದಿರುವ ಪತ್ರ ಇದಾಗಿತ್ತು. ಸತ್ಯದ ತಲೆಯ ಮೇಲೆ ಹೊಡೆದಿರುವ ಶೋಭಾ ಕರಂದ್ಲಾಜೆ, ರಾಜಕೀಯ ದುರುದ್ದೇಶಗಳನ್ನು ಸಾಧಿಸಲು ಎಂತಹ ಹೀನ ಕೃತ್ಯಕ್ಕೂ ಇಳಿಯಬಲ್ಲೆ ಎನ್ನುವುದನ್ನು ಈ ಪತ್ರದಲ್ಲಿ ಬಹಿರಂಗಪಡಿಸಿದರು.

ಇಂದು ಈ ಪತ್ರದ ಕಾರಣಕ್ಕಾಗಿ, ಕರಂದ್ಲಾಜೆಯ ವಿರುದ್ಧ ಬಿಜೆಪಿಯ ಮತ್ತು ಸಂಘಪರಿವಾರದ ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ. ಯಾಕೆಂದರೆ, ಪಟ್ಟಿಯಲ್ಲಿರುವ ಹೆಸರುಗಳಲ್ಲಿ ಇಬ್ಬರು ಇನ್ನೂ ಜೀವಂತವಿದ್ದಾರೆ ಎನ್ನುವುದು ಬಹಿರಂಗವಾಗಿದೆ. ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡವರನ್ನೂ ಅವರು ಪಟ್ಟಿಯಲ್ಲಿ ಸೇರಿಸಿದ್ದಾರೆ. ಮುಖ್ಯವಾಗಿ, ತನ್ನ ಜನರ ಬಗ್ಗೆಯೇ ತನಗೆ ಎಷ್ಟು ಅಜ್ಞಾನವಿದೆ ಎನ್ನುವುದನ್ನು ಶೋಭಾ ಕರಂದ್ಲಾಜೆ ಈ ಮೂಲಕ ಪ್ರಕಟಪಡಿಸಿದಂತಾಗಿದೆ.

 ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಿಂಸೆ, ಅತ್ಯಾಚಾರಗಳ ಸಂಖ್ಯೆಗೆ ಹೋಲಿಸಿದರೆ, ಕರ್ನಾಟಕ ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತಂತೆ ಸಮಾಧಾನಪಟ್ಟುಕೊಳ್ಳಬಹುದು. ಒಂದೆಡೆ ಸಮಾಜವನ್ನು ಉದ್ವಿಗ್ನಗೊಳಿಸಲು ಸಂಘಪರಿವಾರ ನೀಚ ತಂತ್ರಗಳಿಗೆ ಮೊರೆಹೋಗಿರುವ ಸಂದರ್ಭದಲ್ಲಿ, ಸರಕಾರ ಸಾಧ್ಯವಾದ ರೀತಿಯಲ್ಲಿ ಆ ತಂತ್ರವನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದೆ. ಹೀಗಿದ್ದರೂ, ರಾಜ್ಯದಲ್ಲಿ ಹಿಂಸೆ, ಕೊಲೆಗಳು ನಡೆದಿರುವುದನ್ನು ನಿರಾಕರಿಸುವಂತಿಲ್ಲ. ಆ ಕೊಲೆಗೆ ಬಲಿಯಾದವರು ಹಿಂದೂಗಳಿರಲಿ, ಮುಸ್ಲಿಮರಿರಲಿ ಅದು ಸರಕಾರದ ವೈಫಲ್ಯದ ಭಾಗವೇ ಆಗಿದೆ. ಹಿಂದೂವನ್ನು ಕೊಲ್ಲುವುದು ತಪ್ಪು, ಮುಸ್ಲಿಮನನ್ನು ಕೊಂದರೆ ಸರಿ ಎನ್ನುವಂತಹ ನಿಲುವುಗಳನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಯಾವ ರಾಜಕಾರಣಿಯೂ ತಳೆಯಬಾರದು.

ಒಂದು ವೇಳೆ ರಾಜ್ಯದಲ್ಲಿ ನಡೆದಿರುವ ಎಲ್ಲ ಹತ್ಯೆಗಳನ್ನು ಅಧ್ಯಯನ ಮಾಡಿ, ಜಾತಿ ಮತ ಭೇದವಿಲ್ಲದೆ ಆ ಹೆಸರುಗಳನ್ನು ಪಟ್ಟಿ ಮಾಡಿ ಕೇಂದ್ರಕ್ಕೆ ಕಳುಹಿಸಿದ್ದಿದ್ದರೆ ಸಂಸದೆಯ ನಿಲುವನ್ನು ಶ್ಲಾಘಿಸಬಹುದಿತ್ತು. ಆದರೆ ಶೋಭಾ ಕರಂದ್ಲಾಜೆಗೆ ಕೊಲೆಗಳನ್ನು ನಿಲ್ಲಿಸುವುದು ಬೇಕಾಗಿಲ್ಲ. ಬದಲಿಗೆ ಹೆಣಗಳ ಪಟ್ಟಿ ಬಿಡುಗಡೆ ಮಾಡಿ, ಇನ್ನಷ್ಟು ಹೆಣಗಳ ವ್ಯಾಪಾರಕ್ಕಿಳಿಯುವುದು ಪತ್ರದ ಗುರಿಯಾಗಿತ್ತು. ಈ ಕಾರಣದಿಂದಲೇ, ಕಂಡ ಕಂಡ ಹೆಸರುಗಳನ್ನೆಲ್ಲ ಪಟ್ಟಿ ಮಾಡಿ ಕೇಂದ್ರ ಸಚಿವರಿಗೆ ಕಳುಹಿಸಿ, ಎನ್‌ಐಎಯಿಂದ ತನಿಖೆ ಮಾಡಲು ಆಗ್ರಹಿಸಿದ್ದಾರೆ. ಈಕೆಯ ಪ್ರಕಾರ ಎನ್‌ಐಎ ತಂಡ ಬಂದು ಮೂಡುಬಿದಿರೆಯ ಅಶೋಕ್ ಪೂಜಾರಿ ಯಾಕೆ ಇನ್ನೂ ಬದುಕಿದ್ದಾನೆ ಎಂದು ತನಿಖೆ ಮಾಡಬೇಕಾಗಿದೆ. ಇಲ್ಲವಾದರೆ ಆತನ ಹೆಸರನ್ನು ಯಾಕೆ ಪಟ್ಟಿಯಲ್ಲಿ ಸೇರಿಸುತ್ತಿದ್ದರು? ಶೋಭಾ ಕರಂದ್ಲಾಜೆಗೆ ಎನ್‌ಐಎ ಎನ್ನುವ ತನಿಖಾ ತಂಡದ ಗಾಂಭೀರ್ಯವೇ ಗೊತ್ತಿಲ್ಲ. ತನ್ನ ಪತ್ರದ ಮೂಲಕ ಬಿಜೆಪಿಯನ್ನು ನಗೆಪಾಟಲಿಗೀಡು ಮಾಡಿದ್ದೇ ಅಲ್ಲದೆ, ರಾಜ್ಯದ ಕುರಿತಂತೆ ತಪ್ಪು ಮಾಹಿತಿಯೊಂದನ್ನು ಹರಡುವ ಹುನ್ನಾರವನ್ನೂ ಅವರು ನಡೆಸಿದರು.

ಅಶೋಕ್ ಪೂಜಾರಿಯ ಪ್ರಕರಣವನ್ನೇ ತೆಗೆದುಕೊಳ್ಳೋಣ. ಈತ ಕೋಮುಗಲಭೆಯ ಸಂದರ್ಭದಲ್ಲಿ ಗಾಯಾಳುವಾಗಿದ್ದ ಎನ್ನುವುದು ಸತ್ಯ. ಆದರೆ ಗಾಯಾಳುವಾದ ಈತನನ್ನು ಆ ಬಳಿಕ ಬಿಜೆಪಿ ಕಣ್ಣೆತ್ತಿ ನೋಡಿರಲಿಲ್ಲ. ತಮ್ಮ ಸಂಘಟನೆ, ಪಕ್ಷದ ನಾಯಕರು ಹೇಳಿದರೆಂದು, ಮುನ್ನುಗ್ಗುವ ಅಮಾಯಕರು ಅಂತಿಮವಾಗಿ ಹೇಗೆ ರಾಜಕೀಯದ ಬಲಿಪಶುಗಳಾಗುತ್ತಾರೆ ಎನ್ನುವುದಕ್ಕೆ ಅಶೋಕ್ ಪೂಜಾರಿ ಉದಾಹರಣೆ. ತನ್ನ ಕಾರ್ಯಕರ್ತರ ಕುರಿತಂತೆ ನಿಜಕ್ಕೂ ಶೋಭಾ ಕರಂದ್ಲಾಜೆ ಅಥವಾ ಸಂಘಪರಿವಾರ ಮುಖಂಡರು ಕಾಳಜಿಯನ್ನು ಹೊಂದಿದ್ದರೆೆ ಅಶೋಕ್ ಪೂಜಾರಿಯ ಬದುಕಿಗೆ ಇವರು ನೆರವಾಗಬೇಕಾಗಿತ್ತು. ಆದರೆ ಸಂಸದೆ ಶೋಭಾ ಕರಂದ್ಲಾಜೆಯ ಪಾಲಿಗೆ ಆತ ಯಾವತ್ತೋ ಸತ್ತಿದ್ದಾನೆ. ಹೀಗಿರುವಾಗ ಅವನನ್ನು ಭೇಟಿಯಾಗಿ ಅವನಿಗೆ ನೆರವು ನೀಡುವುದು ದೂರದ ಮಾತು.

ಸಂಘಟನೆಗಾಗಿ ಬೀದಿಯಲ್ಲಿ ಹೊಡೆದಾಡಿಕೊಂಡು ಗಾಯಾಳುಗಳಾಗಿ ಆಸ್ಪತ್ರೆ ಸೇರುವ ಕಾರ್ಯಕರ್ತರನ್ನು ಕನಿಷ್ಠ ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಲೂ ಯೋಗ್ಯತೆಯಿಲ್ಲದ, ಆತ ಬದುಕಿದ್ದಾನೋ ಇಲ್ಲವೋ ಎನ್ನುವುದೂ ತಿಳಿಯದ ಶೋಭಾ ಕರಂದ್ಲಾಜೆಯಂತಹ ನಾಯಕರು ‘ಹಿಂದೂಗಳ ಕೊಲೆಯಾಗುತ್ತಿದೆ’ ಎಂದು ಸಾರ್ವಜನಿಕವಾಗಿ ಅಳುವುದು, ಕೇಂದ್ರಕ್ಕೆ ಪತ್ರ ಬರೆಯುವುದು ಮೊಸಳೆ ಕಣ್ಣೀರಲ್ಲದೆ ಇನ್ನೇನು? ಇದು ಒಬ್ಬ ಅಶೋಕ್ ಪೂಜಾರಿಯ ಕತೆಯಲ್ಲ. ಕರಾವಳಿಯಲ್ಲಿ ಸಂಘಪರಿವಾರವು ಬಿಲ್ಲವ ಮತ್ತು ಕೆಳಜಾತಿಯ ಯುವಕರನ್ನು ಬಳಸಿ ಎಸೆಯುವ ವೃತ್ತಿಯಲ್ಲಿ ತೊಡಗಿದೆೆ. ಒಮ್ಮೆ ಗಲಭೆಗಳಲ್ಲಿ ಬಲಿಪಶುಗಳಾಗಿ ಗಾಯಗೊಂಡು, ಕೋರ್ಟು ಕಚೇರಿ ಎಂದು ಅಲೆದಾಡುತ್ತಾ, ಮನೆಗೂ, ಸಮಾಜಕ್ಕೂ ಬೇಡವಾಗಿ ಬಳಿಕ ಸಂಘಟನೆಗೂ ಬೇಡವಾಗುತ್ತಾರೆ. ಹೀಗೆ ಬಳಸಿ ಎಸೆದ ಸಾವಿರಾರು ಮುಗ್ಧ ಯುವಕರು ಕೋರ್ಟು ಕಚೇರಿ ಎಂದು ಅಲೆಯುತ್ತಿದ್ದಾರೆ. ಒಂದು ರೀತಿಯಲ್ಲಿ, ಇವರೆಲ್ಲ ಬದುಕಿದ್ದ್ದಾರಾದರೂ, ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಈ ಯುವಕರನ್ನು ಬದುಕಿರುವಾಗಲೇ ಸಾಯಿಸಿದ್ದಾರೆ.

ಅಶೋಕ್ ಪೂಜಾರಿ ಅಂತಹ ಒಬ್ಬ ಯುವಕ ಅಷ್ಟೇ. ಶೋಭಾ ಕರಂದ್ಲಾಜೆಗೆ ಅಶೋಕ್ ಪೂಜಾರಿಯಂತಹ ಯುವಕರು ಬದುಕಿದ್ದರೂ, ಸತ್ತರೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಯಾಕೆಂದರೆ ಆಕೆಯ ರಾಜಕೀಯದ ಬೆಂಕಿಗೆ ಅವರು ಉರುವಲು ಮಾತ್ರ. ಶೋಭಾ ಕರಂದ್ಲಾಜೆ ತನ್ನ ಪಟ್ಟಿಯಲ್ಲಿ ಕೊಟ್ಟಿರುವ ಎಲ್ಲ ಯುವಕರು ಒಂದಲ್ಲ ಒಂದು ರೀತಿ, ಇಂತಹ ರಾಜಕಾರಣಿಗಳ ಬೆಂಕಿ ಹಚ್ಚುವ ಯೋಜನೆಗಳಿಗೆ ಉರುವಲಾದವರು. ಇವರೆಲ್ಲರ ಸಾವಿನ ಕುರಿತಂತೆ ಗಂಭೀರವಾಗಿ ಎನ್‌ಐಎ ತನಿಖೆ ಮಾಡಿದ್ದೇ ಆದರೆ, ಆರೆಸ್ಸೆಸ್ ಮತ್ತು ಸಂಘಪರಿವಾರದ ಹಲವು ನಾಯಕರು ಜೈಲು ಸೇರಬೇಕಾಗುತ್ತದೆ. ಇದು ಕೇವಲ ಸಂಘಪರಿವಾರಕ್ಕೆ ಸೀಮಿತವಾಗಿಲ್ಲ. ಕರಾವಳಿಯಲ್ಲಿ ಮುಸ್ಲಿಮ್ ಯುವಕರೂ ಇಂತಹ ರಾಜಕೀಯಗಳಿಗೆ ಸಮಿತ್ತುಗಳಾಗುತ್ತಿದ್ದಾರೆ. ನಾಯಕರು ತಮ್ಮ ಕಾರ್ಯಕರ್ತರ ಹೆಣಗಳ ಹೆಸರುಗಳ ಪಟ್ಟಿಗಳನ್ನು ಹಿಡಿದುಕೊಂಡು ಇನ್ನಷ್ಟು ಹೆಣಗಳನ್ನು ಬೀಳಿಸುವುದಕ್ಕೆ ಅತ್ಯಾತುರರಾಗಿದ್ದಾರೆ.

ಈ ಬಗ್ಗೆ ಆಯಾ ಜಾತಿ, ಸಮುದಾಯವೇ ಜಾಗೃತಗೊಂದು ತಮ್ಮ ಸಮುದಾಯದ ಮಕ್ಕಳನ್ನು ರಾಜಕೀಯ ಸಂಚುಕೋರರಿಂದ ರಕ್ಷಿಸಿಕೊಳ್ಳಬೇಕಾಗಿದೆ. ತನ್ನ ಪಟ್ಟಿಯಲ್ಲಿ ಹತ್ಯೆಗೀಡಾಗಿರುವ ಅಶೋಕ್ ಪೂಜಾರಿಯನ್ನು ಸೇರಿಸಿರುವುದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ವಿಷಾದಿಸಿದ್ದಾರೆ. ಈ ವಿಷಾದ ಆತ ಇನ್ನೂ ಸತ್ತಿಲ್ಲ ಎನ್ನುವ ಕಾರಣಕ್ಕೋ ಅಥವಾ ಆತನನ್ನು ಸಾಯಿಸಿದ್ದಕ್ಕೋ ಎನ್ನುವುದನ್ನು ಅವರು ಸ್ಪಷ್ಟಪಡಿಸುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News