ಕೋಳಿ ಸಾಕಣೆ ಕೇಂದ್ರಗಳಿಂದ ಮಾನವನ ಆರೋಗ್ಯಕ್ಕೆ ಅಪಾಯ

Update: 2017-07-21 08:59 GMT

ಪ್ರಾಣಿಗಳ ಸಾಕಣೆ ಕೇಂದ್ರಗಳಲ್ಲಿ ಅವುಗಳ ತ್ವರಿತ ಬೆಳವಣಿಗೆಗಾಗಿ ಬಳಸಲಾಗುತ್ತಿರುವ ಆ್ಯಂಟಿಬಯೊಟಿಕ್ ಅಥವಾ ಪ್ರತಿಜೀವಕಗಳು ಎಷ್ಟೊಂದು ಅಪಾಯಕಾರಿ ಎನ್ನುವುದು ಗೊತ್ತೇ?

ನಮ್ಮ ದೇಶದ ಪೌಲ್ಟ್ರಿ ಅಥವಾ ಕೋಳಿ ಸಾಕಣೆ ಕೇಂದ್ರಗಳಲ್ಲಿ ಪ್ರತಿಜೀವಕಗಳ ಅತಿಯಾದ ಬಳಕೆಯು ಪ್ರತಿಜೀವಕ ಪ್ರತಿರೋಧಿ ಬ್ಯಾಕ್ಟೀರಿಯಾಗಳ ಸೃಷ್ಟಿಗೆ ಕಾರಣ ವಾಗುವ ಹೆಚ್ಚಿನ ಸಾಧ್ಯತೆಯಿದ್ದು, ಈ ಬ್ಯಾಕ್ಟೀರಿಯಾಗಳು ಮಾನವರಿಗೆ ಹರಡುವ ಅಪಾಯವಿದೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ.

ವಾಷಿಂಗ್ಟನ್ ಡಿ.ಸಿ.ಮತ್ತು ದಿಲ್ಲಿಗಳಲ್ಲಿ ಮುಖ್ಯಕಚೇರಿಗಳನ್ನು ಹೊಂದಿರುವ ಸಾರ್ವಜನಿಕ ಆರೋಗ್ಯ ಸಂಶೋಧನಾ ಸಂಸ್ಥೆ ಸಿಡಿಡಿಇಪಿಯು ನಡೆಸಿರುವ ಅಧ್ಯಯನವು ಪಂಜಾಬ್‌ನಲ್ಲಿಯ ಪೌಲ್ಟ್ರಿಗಳಲ್ಲಿ ಅಧಿಕ ಮಟ್ಟದಲ್ಲಿ ಪ್ರತಿಜೀವಕ ವಿರೋಧಿ ಬ್ಯಾಕ್ಟೀರಿಯಾ ಗಳಿರುವುದನ್ನು ಪತ್ತೆ ಹಚ್ಚಿದೆ. ದೇಶದ ಇತರ ಭಾಗಗಳಲ್ಲಿಯೂ ಈ ಅಪಾಯದ ಸಾಧ್ಯತೆಯನ್ನು ಅದು ತಳ್ಳಿಹಾಕಿಲ್ಲ.

ಅಧ್ಯಯನಕ್ಕಾಗಿ ಪಂಜಾಬ್‌ನ ವಿವಿಧೆಡೆಗಳಲ್ಲಿಯ 18 ಪೌಲ್ಟ್ರಿ ಫಾರ್ಮ್‌ಗಳಿಂದ 530 ಕೋಳಿಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಮಾನವರ ಚಿಕಿತ್ಸೆಯಲ್ಲಿ ಪ್ರಮುಖವಾಗಿರುವ ಹಲವಾರು ಪ್ರತಿಜೀವಕಗಳಿಗೆ ಪ್ರತಿರೋಧವನ್ನು ಅರಿಯಲು ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಮೂರನೇ ಎರಡರಷ್ಟು ಪೌಲ್ಟ್ರಿಗಳು ಕೋಳಿಗಳ ತ್ವರಿತ ಬೆಳವಣಿಗೆಗಾಗಿ ಪ್ರತಿಜೀವಕಗಳನ್ನು ಬಳಸುತ್ತಿರುವುದಾಗಿ ತಿಳಿಸಿದ್ದವು. ಈ ಪೌಲ್ಟ್ರಿಗಳಿಂದ ಸಂಗ್ರಹಿಸಲಾಗಿದ್ದ ಸ್ಯಾಂಪಲ್‌ಗಳಲ್ಲಿ ಕೋಳಿಗಳ ಬೆಳವಣಿಗೆಗಾಗಿ ಪ್ರತಿಜೀವಕಗಳನ್ನು ಬಳಸದ ಪೌಲ್ಟ್ರಿಗಳಿಗಿಂತ ಮೂರು ಪಟ್ಟು ಪ್ರಮಾಣದಲ್ಲಿ ಬಹು ಔಷಧಿ ಪ್ರತಿರೋಧ ಅಂಶಗಳ ಸಾಧ್ಯತೆಗಳು ಕಂಡುಬಂದಿದ್ದವು.

ಅಲ್ಲದೆ ಮೊಟ್ಟೆಗಳಿಗಾಗಿ ಕೋಳಿಗಳನ್ನು ಸಾಕುವ ಕೇಂದ್ರಗಳಿಗಿಂತ ಎರಡು ಪಟ್ಟು ರೋಗಾಣುರೋಧಿ ಪ್ರತಿರೋಧವು ಮಾಂಸಕ್ಕಾಗಿ ಕೋಳಿಗಳನ್ನು ಸಾಕುವ ಕೇಂದ್ರಗಳಿಂದ ಸಂಗ್ರಹಿಸಿದ ಸ್ಯಾಂಪಲ್‌ಗಳಲ್ಲಿ ಪತ್ತೆಯಾಗಿದ್ದವು. ಜೊತೆಗೆ ಪ್ರತಿಜೀವಕ ಔಷಧಿಗಳಿಗೆ ಅಧಿಕ ಪ್ರತಿರೋಧವೂ ಕಂಡುಬಂದಿತ್ತು. ಈ ಪ್ರತಿರೋಧದ ಪ್ರಮಾಣ ಮಾನವರಲ್ಲಿ ಎಂಡೊಕಾರ್ಡಿಟಿಸ್,ಗ್ಯಾಸ್ಟ್ರೊಎಂಟಿರಿಟಿಸ್,ಶ್ವಾಸನಾಳ ಸೋಂಕು ಮತ್ತು ಇತರ ಸೋಂಕುಗಳ ಚಿಕಿತ್ಸೆಯಲ್ಲಿ ಬಳಕೆಯಾಗುವ ಸಿಪ್ರೊಫ್ಲಾಕ್ಸಸಿನ್‌ಗೆ ಶೇ.39 ಮತ್ತು ಮೂತ್ರನಾಳ ಸೋಂಕುಗಳಿಗೆ ಬಳಸುವ ಸಾಮಾನ್ಯ ಔಷಧಿ ನಾಲಿಡಿಕ್ಸಿಕ್ ಆ್ಯಸಿಡ್‌ಗೆ ಶೇ.86ರಷ್ಟಿತ್ತು.
ಇಸ್ಚೆರಿಚಿಯಾ ಕೋಲಿ, ಬ್ಯಾಕ್ಟೀರೀಯಾಗಳಿಂದ ಉಂಟಾಗುವ ನ್ಯುಮೋನಿಯಾ ಮತ್ತು ಇತರ ಸೋಂಕುಗಳ ಚಿಕಿತ್ಸೆಯಲ್ಲಿ ಬಳಕೆಯಾಗುವ ಔಷಧಿಗಳಿಗೆ ಪ್ರತಿರೋಧವನ್ನು ಹೆಚ್ಚಿಸುವ ಕೆಲವು ಕಿಣ್ವಗಳ ಉಪಸ್ಥಿತಿಯನ್ನೂ ಹೆಚ್ಚುವರಿ ಪರೀಕ್ಷೆಗಳು ಬಹಿರಂಗಗೊಳಿಸಿವೆ.

ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಪ್ರಾಣಿಗಳ ಸಾಕಣೆ ಕೇಂದ್ರಗಳಲ್ಲಿ ಪ್ರತಿಜೀವಕಗಳ ಅಧಿಕ ಬಳಕೆಯು ಮಾನವ ಕುಲಕ್ಕೆ ಅಪಾಯದ ಬೆದರಿಕೆಯೊಡ್ಡಿದೆ ಎನ್ನುವುದನ್ನು ಈ ಅಧ್ಯಯನವು ಸ್ಪಷ್ಟಪಡಿಸಿದೆ ಎಂದು ಅಧ್ಯಯನ ವರದಿಯ ಲೇಖಕ ಹಾಗೂ ಸಿಡಿಡಿಇಪಿ ನಿರ್ದೇಶಕ ರಮಣನ್ ಲಕ್ಷ್ಮೀನಾರಾಯಣ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News