ಆನ್‌ಲೈನ್ ವಿಧ್ವಂಸಕ ಕೃತ್ಯ!

Update: 2017-07-23 06:10 GMT

ಒಂದು ಗುಂಪಿಗೆ ಸೇರಿದ, ಒಂದು ಸಿದ್ಧಾಂತಕ್ಕೆ ಬದ್ಧರಾದ ಒಂದಷ್ಟು ಜನ ಸಂಘಟಿತರಾಗಿ ವ್ಯವಸ್ಥಿತವಾಗಿ ತಮ್ಮ ಸಿದ್ಧಾಂತ ಅಥವಾ ರಾಜಕೀಯ ಒಲವಿಗೆ, ಪಕ್ಷಕ್ಕೆ ವಿರೋಧವಾಗಿ ಬರೆಯುವ ಲೇಖಕರನ್ನು ಮಟ್ಟಹಾಕಲು ಈ ಆನ್‌ಲೈನ್ ಟ್ರಾಲಿಂಗ್ ಮಾಡುತ್ತಿದ್ದಾರೆ.


ಇತ್ತೀಚೆಗೆ ಪ್ರಕಟವಾದ ಎನ್‌ಡಿಟಿವಿಯ ಪತ್ರಕರ್ತೆ ಸುನೇತ್ರ ಚೌಧುರಿಯವರ ‘ಬಿಹೈಂಡ್ ಬಾರ್ಸ್‌’ ಎಂಬ ಶೀರ್ಷಿಕೆಯ ಪುಸ್ತಕಕ್ಕೆ ಅಮೆಝಾನ್ ಇಂಡಿಯಾದಲ್ಲಿ 31 ರೆವ್ಯೆ(ಪುಸ್ತಕ ವಿಮರ್ಶೆ)ಗಳು ಬಂದಿವೆ. ಇವುಗಳಲ್ಲಿ 20 ರೆವ್ಯೆಗಳು ಪುಸ್ತಕಕ್ಕೆ ಒಂದು ನಕ್ಷತ್ರ(ಒನ್-ಸ್ಟಾರ್) ರೇಟಿಂಗ್ ನೀಡಿವೆ; ಮತ್ತು ನೇತ್ಯಾತ್ಮಕ(ನೆಗೆಟಿವ್) ರೆವ್ಯೆಗಳನ್ನು ಬರೆದಿವೆ. ಪುಸ್ತಕವೊಂದಕ್ಕೆ ಹೀಗೆ ನೆಗೆಟಿವ್ ರೆವ್ಯೆಗಳು ದೊರಕುವುದು ಸಾಮಾನ್ಯವೆ; ಇದರಲ್ಲೇನೂ ವಿಶೇಷವಿಲ್ಲ. ಆದರೆ ಈ ರೆವ್ಯೆಗಳನ್ನು ಸ್ವಲ್ಪ ಗಮನವಿಟ್ಟು ಪರಿಶೀಲಿಸಿದಾಗ, ರೆವ್ಯೆ ಬರೆದ 20 ಮಂದಿಯಲ್ಲಿ 19 ಮಂದಿ, ಪುಸ್ತಕ ಓದುವ ಮಾತು ಬಿಡಿ; ಪುಸ್ತಕವನ್ನು ಕೊಂಡುಕೊಳ್ಳಲೇ ಇಲ್ಲ. ಹಾಗಾದರೆ ಏನು ನಡೆಯುತ್ತಿದೆ? ಆನ್‌ಲೈನ್ ರೆವ್ಯೆಗಳಲ್ಲಿ ಏನಾಗುತ್ತಿದೆ?

ಲೇಖಕರ ಪುಸ್ತಕಗಳ ರೇಟಿಂಗ್ಸ್‌ಗಳನ್ನು ವ್ಯವಸ್ಥಿತವಾಗಿ ಕಡಿಮೆಮಾಡುವ ಸಂಘಟಿತ ಅಭಿಯಾನಗಳು, ಪ್ರಚಾರಗಳು(ಕ್ಯಾಂಪೇನ್‌ಗಳು) ಮತ್ತು ಲೇಖಕರನ್ನು ಆನ್‌ಲೈನ್‌ನಲ್ಲಿ ಬೇಕಾಬಿಟ್ಟಿ ಟೀಕಿಸಿ, ಬೈದು ಅವರ ಪುಸ್ತಕಗಳು ಮಾರಾಟವಾಗದಂತೆ ಮಾಡುವ, ಶಬ್ದಗಳಲ್ಲಿ ಅವರನ್ನು ಸತತವಾಗಿ ಬೇಟೆಯಾಡುವ ದೂಷಣಾ ಕಾರ್ಯಕ್ರಮ ನಡೆಯುತ್ತಿದೆ. ಇದನ್ನು ‘ಟ್ರಾಲಿಂಗ್’ ಎಂದು ಕರೆಯಲಾಗುತ್ತದೆ. ಒಂದು ಗುಂಪಿಗೆ ಸೇರಿದ, ಒಂದು ಸಿದ್ಧಾಂತಕ್ಕೆ ಬದ್ಧರಾದ ಒಂದಷ್ಟು ಜನ ಸಂಘಟಿತರಾಗಿ ವ್ಯವಸ್ಥಿತವಾಗಿ ತಮ್ಮ ಸಿದ್ಧಾಂತ ಅಥವಾ ರಾಜಕೀಯ ಒಲವಿಗೆ, ಪಕ್ಷಕ್ಕೆ ವಿರೋಧವಾಗಿ ಬರೆಯುವ ಲೇಖಕರನ್ನು ಮಟ್ಟಹಾಕಲು ಈ ಆನ್‌ಲೈನ್ ಟ್ರಾಲಿಂಗ್ ಮಾಡುತ್ತಿದ್ದಾರೆ.

ಅಮೆಝಾನ್‌ನಂತಹ ಆನ್‌ಲೈನ್ ವೇದಿಕೆಯಲ್ಲಿ ಯಾವುದೇ ಉತ್ಪನ್ನದ ಬಗ್ಗೆ ರೆವ್ಯೆಗಳನ್ನು ಹಾಕುವುದು, ಅದರಿಂದ ಗಿರಾಕಿಗಳಿಗೆ ತಾವು ಒಂದು ಉತ್ಪನ್ನವನ್ನು ಕೊಂಡುಕೊಳ್ಳಬೇಕೇ? ಅಥವಾ ಬೇಡವೇ? ಎಂದು ನಿರ್ಧರಿಸಲು ಸಹಾಯವಾಗಲಿ ಎನ್ನುವ ಕಾರಣಕ್ಕಾಗಿ. ಆದರೆ ಈಗ ಈ ವ್ಯವಸ್ಥೆಯ ದುರ್ಬಳಕೆ ನಡೆಯುತ್ತಿದೆ; ಪುಸ್ತಕವೊಂದು ಪ್ರಕಟವಾಗಿ ಕೆಲವೇ ಗಂಟೆಗಳೊಳಗಾಗಿ ನೆಗೆಟಿವ್ ರೆವ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಒಮ್ಮೆಮ್ಮೆ ಆ ಪುಸ್ತಕವನ್ನು ಡೌನ್‌ಲೋಡ್ ಮಾಡಲು ದೈಹಿಕವಾಗಿ ಕೂಡ ಸಾಧ್ಯವಾಗದಷ್ಟು ಮತ್ತು ಹೀಗೆ ಡೌನ್‌ಲೋಡ್ ಮಾಡಿ ಅದನ್ನು ಓದಲು ಸಾಧ್ಯವಿಲ್ಲದಷ್ಟು ಸಮಯದೊಳಗಾಗಿ ಇಂತಹ ನೆಗೆಟಿವ್ ರೆವ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೆಲ್ಲ ಹೇಗೆ ಸಾಧ್ಯ? ಇದರ ಹಿಂದಿರುವ ವ್ಯವಸ್ಥಿತ ಷಡ್ಯಂತ್ರ ಯಾವುದು? ನಡೆಯುವ ಪಿತೂರಿ ಏನು? ಭಾರತೀಯ ಪತ್ರಕರ್ತರು ಬರೆದ ಇತ್ತೀಚಿನ ಪುಸ್ತಕಗಳಿಗೆ ಎರಡು ರೀತಿಯ ಜನ ರೆವ್ಯೆಗಳನ್ನು ಬರೆಯುತ್ತಿರುವುದು ಕಾಣಿಸುತ್ತದೆ: ಪುಸ್ತಕವನ್ನು ನಿಜವಾಗಿ ಓದಿದವರು ಮತ್ತು ಲೇಖಕನನ್ನು ಟ್ರಾಲ್ ಮಾಡುವುದರಷ್ಟೇ ಆಸಕ್ತಿ ಹೊಂದಿದವರು. ಇದು ಒಬ್ಬ ಲೇಖಕನ ಬಗ್ಗೆ ಏನೋ ಅಸಮಾಧಾನ ಅಥವಾ ಸಿಟ್ಟು ಇರುವ ಯಾರೋ ಒಬ್ಬ ರೆವ್ಯೆ ಬರೆಯುವುದಲ್ಲ. ಬದಲಾಗಿ, ಇದು ಕೆಲವು ನಿರ್ದಿಷ್ಟ ಲೇಖಕರ ಪುಸ್ತಕಗಳು ಮಾರಾಟವಾಗದಂತೆ ಮಾಡಲು ಸೋಶಿಯಲ್ ಮೀಡಿಯಾಗಳ ಮೂಲಕ ವ್ಯವಸ್ಥಿತವಾಗಿ ನಡೆಯುವ ಸುಸಂಘಟಿತವಾದ ಒಂದು ಟ್ರಾಲ್ ಉದ್ಯಮ. ಇದು ಉದ್ದೇಶ ಪೂರ್ವಕವಾದ, ಪೂರ್ವಯೋಜಿತ ಹಾಗೂ ಸತತವಾಗಿ ನಡೆಸುವ ಒಂದು ಆನ್‌ಲೈನ್ ದಾಳಿ, ಆನ್‌ಲೈನ್ ವಿಧ್ವಂಸ ಕೃತ್ಯ.

ಈ ವಿಧ್ವಂಸಕೃತ್ಯದ, ದಾಳಿಯ ಗುರಿ ಯಾರು? ಉತ್ತರ ಸ್ಪಷ್ಟವೇ ಇದೆ. ಬಿಜೆಪಿಯನ್ನು ಟೀಕಿಸುವವರು ಮತ್ತು ಅದರ ರಾಜಕೀಯದ ಬ್ರಾಂಡ್ ರಾಜಕಾರಣವನ್ನು ಟೀಕಿಸುವವರು ಆನ್‌ಲೈನ್ ದ್ವೇಷ ದಳದ, ಹೇಟ್ ಬ್ರಿಗೇಡ್‌ನ ದಾಳಿಯ ಗುರಿಯಾಗಿದ್ದಾರೆ.

ಇಂತಹ ದಾಳಿಗಳಿಗೆ ಒಳಗಾದ ಒಂದೆರಡು ಪುಸ್ತಕಗಳನ್ನು ಗಮನಿಸೋಣ. ಒನ್‌ಸ್ಟಾರ್ ರೇಟಿಂಗ್ಸ್ ಮತ್ತು ನೆಗೆಟಿವ್ ರೆವ್ಯೆಗಳ ವಿಶ್ಲೇಷಣೆ ನಡೆಸಿದರೆ ಈ ದಾಳಿಯ ಹಿಂದಿರುವ ಒಂದು ಕುತೂಹಲಕಾರಿ ಮಾದರಿ(ಪ್ಯಾಟರ್ನ್) ಕಾಣಿಸುತ್ತದೆ.

ಒಂದನೆಯ ಪ್ರಕರಣ: ಬರ್ಕಾದತ್ ಬರೆದಿರುವ ‘ದಿಸ್ ಅನ್‌ಕ್ವಾಯಟ್ ಲ್ಯಾಂಡ್: ಸ್ಟೋರೀಸ್ ಫ್ರಮ್ ಇಂಡಿಯಾ’ಸ್ ಫಾಲ್ಟ್ ಲೈನ್ಸ್’

ಪುಸ್ತಕವೊಂದನ್ನು ಡೌನ್-ರೇಟ್ ಮಾಡುವ ಸತತ ಪ್ರಯತ್ನಗಳಿಗೆ ಬರ್ಕಾದತ್ತ್‌ರ ಈ ಪುಸ್ತಕ ಪ್ರಾಯಶಃ ಅತ್ಯುತ್ತಮ ಉದಾಹರಣೆ. ಪುಸ್ತಕಕ್ಕೆ ಆನ್‌ಲೈನ್‌ನಲ್ಲಿ ಒಟ್ಟು 446 ರೆವ್ಯೆಗಳಿವೆ. ಇವುಗಳಲ್ಲಿ 327 ಒನ್-ಸ್ಟಾರ್ ರೆವ್ಯೆಗಳು. ಈ ಒನ್-ಸ್ಟಾರ್ ರೆವ್ಯೆಗಳನ್ನು ಕೂಲಂಕಷವಾಗಿ ಗಮನಿಸಿದರೆ, ಇವುಗಳಲ್ಲಿ 20 ರೆವ್ಯೆಗಳು ಮಾತ್ರ ಪುಸ್ತಕಕೊಂಡುಕೊಂಡವರು ಬರೆದ ರೆವ್ಯೆಗಳು; 307(94%) ರೆವ್ಯೆಗಳನ್ನು ಪೋಸ್ಟ್ ಮಾಡಿದವರು ಪುಸ್ತಕಕೊಂಡುಕೊಳ್ಳದೆ ರೆವ್ಯೆ ಬರೆದವರು.

ಸಂದರ್ಶನವೊಂದರಲ್ಲಿ ಬಿಜೆಪಿಯ ಒಬ್ಬ ಮಾಜಿ ಸ್ವಯಂ ಸೇವಕಿ ಸಾಧ್ವಿ ಬೋಸ್ಲಾ ಹೇಳಿರುವಂತೆ, ದತ್‌ರವರ ಪುಸ್ತಕ ಪ್ರಕಟವಾದಾಗ ಅದು ಮಾರಾಟವಾಗದಂತೆ ಖಚಿತಪಡಿಸಲು ಬಿಜೆಪಿ ಸ್ವಯಂ ಸೇವಕರ ತಂಡ ಅಗತ್ಯವಾದ ಎಲ್ಲ ಯೋಜನೆಗಳನ್ನು ಹಾಕಿಕೊಂಡಿತ್ತು.

ಪ್ರಕರಣ 2: ‘‘ಗುಜರಾತ್ ಫೈಲ್ಸ್’’-ಲೇಖಕಿ, ರಾಣಾ ಅಯ್ಯೂಬ್

ಈ ಪುಸ್ತಕದ ಒಟ್ಟು 725 ರೆವ್ಯೆಗಳಲ್ಲಿ 181 ಒನ್-ಸ್ಟಾರ್ ರೆವ್ಯೆಗಳು. ಈ 181ರಲ್ಲಿ 164 ಅಥವಾ ಶೇ.91 ರೆವ್ಯೆಗಳು ಪುಸ್ತಕ ಕೊಂಡುಕೊಳ್ಳದವರು ಬರೆದ ರೆವ್ಯೆಗಳು.

ಪ್ರಕರಣ 3: ಸ್ವಾತಿ ಚತುರ್ವೇದಿ ಬರೆದಿರುವ ‘ಐ ಆ್ಯಮ್ ಎ ಟ್ರಾಲ್’

2016ರಲ್ಲಿ ಪ್ರಕಟವಾದ ಈ ಪುಸ್ತಕ ಪ್ರಕಟವಾಗುತ್ತದೆಂಬ ಸುದ್ದಿ ಬಂದ ಕೂಡಲೇ ಒನ್-ಸ್ಟಾರ್ ರೇಟಿಂಗ್ಸ್‌ಗಳು ಕಾಣಿಸಿಕೊಳ್ಳಲಾರಂಭಿಸಿದವು. ‘ಪ್ರೆಸ್‌ಟಿಕ್ಯೂಟ್’ ಅಥವಾ ‘ಸ್ವತಃ ಲೇಖಕಿಯೇ ಒಂದು ಟ್ರಾಲ್’ ಇತ್ಯಾದಿ ಬರೆದ ಟ್ರಾಲ್‌ಗಳು ಪುಸ್ತಕಕ್ಕಿಂತ ಹೆಚ್ಚಾಗಿ ಪುಸ್ತಕದ ಲೇಖಕಿಯನ್ನೇ ತಮ್ಮ ಗುರಿಯಾಗಿಸಿಕೊಂಡಿದ್ದವು.

ಸಂಘಟಿತ ದ್ವೇಷ ಗುಂಪುಗಳು ಬರೆಯುವ ನೆಗೆಟಿವ್ ರೇಟಿಂಗ್‌ಗಳನ್ನು ಕಿತ್ತು ಹಾಕುವ ವ್ಯವಸ್ಥೆಯೊಂದನ್ನು ಅಥವಾ ಪುಸ್ತಕಗಳನ್ನು ಕೊಂಡುಕೊಳ್ಳದವರು ಬರೆಯುವ ರೆವ್ಯೆಗಳನ್ನು ಸೋಸಿ ಕಿತ್ತೊಗೆಯುವ ದಾರಿಯೊಂದನ್ನು ಅಮೆಝಾನ್ ಇಂಡಿಯಾ ಕಂಡುಹಿಡಿಯುವ ವರೆಗೆ, ಭಾರತೀಯ ಲೇಖಕರು ಟ್ರಾಲ್ ಬ್ರಿಗೇಡ್‌ನ ಸಿಟ್ಟು ಹಾಗೂ ದ್ವೇಷಕ್ಕೆ ಗುರಿಯಾಗುವುದು ಮುಂದುವರಿಯುತ್ತಲೇ ಇರುತ್ತದೆ.

ಕೃಪೆ: altnews.in

Writer - ಸ್ಯಾಮ್ ಜಾವೇದ್

contributor

Editor - ಸ್ಯಾಮ್ ಜಾವೇದ್

contributor

Similar News

ಜಗದಗಲ
ಜಗ ದಗಲ