ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರು ಕೂಡಾ ದಲಿತರು, ಮುಸ್ಲಿಮರಷ್ಟೇ ಬಲಿಪಶುಗಳು

Update: 2017-07-24 05:25 GMT

ಬಿಜೆಪಿಗೆ ಒಂದು ರಾಜಕೀಯ ಪಂಥಾಹ್ವಾನ ನೀಡಬಹುದಾದ ನಾಲ್ಕು ಸಾಮಾಜಿಕ ಶಕ್ತಿಗಳಾಗಿರುವ ಯಾದವರು, ಬ್ರಾಹ್ಮಣರು, ದಲಿತರು ಮತ್ತು ಮುಸ್ಲಿಮರು ಒಟ್ಟಾಗದಂತೆ ಅವರನ್ನು ವಿಭಜಿಸಿ ದೂರ ದೂರ ಇಡುವುದೇ ಆರೆಸ್ಸೆಸ್‌ನ ಬೃಹತ್ತರವಾದ ಒಂದು ಯೋಜನೆಯಾಗಿದೆ. ಈ ಲೇಖನದಲ್ಲಿ ಮುಂದಕ್ಕೆ ಸ್ಪಷ್ಟವಾಗಲಿರುವಂತೆ, ಬ್ರಾಹ್ಮಣರನ್ನು ಯಾದವರ ವಿರುದ್ಧ ಎತ್ತಿ ಕಟ್ಟಲಾದ ಊಂಚಹಾರ್ ದುರಂತವು ಬಿಜೆಪಿ ಒಳಸಂಚಿನ ಒಂದು ಭಾಗವಾಗಿದೆ.

ಉತ್ತರ ಪ್ರದೇಶ ಒಂದು ಬಿಕ್ಕಟ್ಟಿಗೆ ಸಿಲುಕಿದೆ. ದುರ್ಬಲ ಯೋಗಿ ಸರಕಾರ ಮುಸ್ಲಿಮರನ್ನಷ್ಟೇ ಬಲಿಪಶುಗಳನ್ನಾಗಿ ಮಾಡುತ್ತಿರುವುದಲ್ಲ. ಆರೆಸ್ಸೆಸ್‌ನ ಪೂರ್ವಯೋಜಿತ ವ್ಯವಸ್ಥಿತ ಯೋಜನೆಯ ಫಲವಾಗಿ, ಈಗಿನ ಆಳುವ ಸರಕಾರಕ್ಕೆ ವಿರುದ್ಧವಾಗಿದ್ದಾರೆ ಎಂದು ಭಾವಿಸಲಾಗಿರುವ ಯಾದವರು, ಬ್ರಾಹ್ಮಣರ ವಿರುದ್ಧ ಹೋರಾಡುವಂತೆ ಮಾಡಲಾಗುತ್ತಿದೆ. ಬ್ರಾಹ್ಮಣರು ಸರಕಾರದ ವಿರುದ್ಧ ದನಿಯಾಗಿ ಮೂಡಿಬರುತ್ತಿರುವುದೇ ಇದಕ್ಕೆ ಕಾರಣ.

ಬಲಿಪಶುಗಳಾಗುತ್ತಿರುವ ಬ್ರಾಹ್ಮಣರು ಬಿಜೆಪಿಗೆ ಒಂದು ರಾಜಕೀಯ ಪಂಥಾಹ್ವಾನ ನೀಡಬಹುದಾದ ನಾಲ್ಕು ಸಾಮಾಜಿಕ ಶಕ್ತಿಗಳಾಗಿರುವ ಯಾದವರು, ಬ್ರಾಹ್ಮಣರು, ದಲಿತರು ಮತ್ತು ಮುಸ್ಲಿಮರು ಒಟ್ಟಾಗದಂತೆ ಅವರನ್ನು ವಿಭಜಿಸಿ ದೂರ ದೂರ ಇಡುವುದೇ ಆರೆಸ್ಸೆಸ್‌ನ ಬೃಹತ್ತರವಾದ ಒಂದು ಯೋಜನೆಯಾಗಿದೆ. ಈ ಲೇಖನದಲ್ಲಿ ಮುಂದಕ್ಕೆ ಸ್ಪಷ್ಟವಾಗಲಿರುವಂತೆ, ಬ್ರಾಹ್ಮಣರನ್ನು ಯಾದವರ ವಿರುದ್ಧ ಎತ್ತಿ ಕಟ್ಟಲಾದ ಊಂಚಹಾರ್ ದುರಂತವು ಬಿಜೆಪಿ ಒಳಸಂಚಿನ ಒಂದು ಭಾಗವಾಗಿದೆ.

ಬಿಜೆಪಿ ವಿರುದ್ಧ ಬ್ರಾಹ್ಮಣರ ಸಿಟ್ಟು

ಬ್ರಾಹ್ಮಣರನ್ನು ಬದಿಗೆ ತಳ್ಳುವುದು(ಮಾರ್ಜಿನಲೈಝೇಶನ್) ಮತ್ತು ಅವರನ್ನು ಕೊಲ್ಲುವುದು ಉತ್ತರ ಪ್ರದೇಶದ ಗುಪ್ತ ಕಥೆಯಾಗಿದೆ. ವಿಶೇಷವಾಗಿ ಬಿಜೆಪಿ ಅಧಿಕಾರಕ್ಕೆ ಬಂದ ಅವಧಿಗಳಲ್ಲಿ ಬ್ರಾಹ್ಮಣರ ಹತ್ಯೆಯ ಈ ಸರಣಿಯಲ್ಲಿ ಇತ್ತೀಚಿನ ಉದಾಹರಣೆ ಎಂದರೆ ಪ್ರತಾಪ್‌ಗಡ ಜಿಲ್ಲೆಯ ಸಂಗ್ರಾಮ್‌ಗಡ್ ಪ್ರದೇಶದ ನಿವಾಸಿಗಳಾದ ಐದು ಮಂದಿ ಬ್ರಾಹ್ಮಣರ ಹತ್ಯೆ: ರೋಹಿತ್ ಶುಕ್ಲಾ, ನರೇಂದ್ರ ಶುಕ್ಲಾ, ಅಂಕುಶ್ ಮಿಶ್ರಾ ಮತ್ತು ಅನೂಪ್ ಮಿಶ್ರಾ ಇವರೆಲ್ಲರೂ ಸಂಗ್ರಾಮ್‌ಗಡ್‌ನ ನಿವಾಸಿಗಳು ಮತ್ತು ಬ್ರಿಜೇಶ್ ಮಿಶ್ರಾ ರಾಯ್ ಬರೇಲಿಯ ಊಂಚಹಾರ್ ಪ್ರದೇಶದ ಚ್ಚಿತಿಯಾ ಎಂಬ ಹಳ್ಳಿಯ ನಿವಾಸಿ. ಈ ಐದು ಮಂದಿ ಬ್ರಾಹ್ಮಣರ ಹತ್ಯೆಗಳು ಜೂನ್ 26ರಂದು ಊಂಚಹಾರ್‌ನ ಆಪ್ತಾ ಎಂಬ ಹಳ್ಳಿಯಲ್ಲಿ ನಡೆದಿದ್ದವು.

ಹಾಗಾದರೆ ಬ್ರಾಹ್ಮಣರು ಯಾಕೆ ಅಲ್ಲಿ ಇನ್ನೂ ಬಿಜೆಪಿಗೆ ಮತ ನೀಡುವುದನ್ನು ಮುಂದುವರಿಸುತ್ತಿದ್ದಾರೆ? ಎಂಬ ಪ್ರಶ್ನೆ ಏಳಬಹುದು. ಬ್ರಾಹ್ಮಣರು ಬಿಜೆಪಿಯೊಂದಕ್ಕೇ ಮತ ನೀಡುವಂತೆ ಆರೆಸ್ಸೆಸ್ ಪ್ರಚಾರ ಮಾಡುತ್ತದೆ, ಒತ್ತಾಯಿಸುತ್ತದೆ ಎನ್ನುವುದು ಉತ್ತರ. ಆದರೆ ಇದು ಸತ್ಯವಲ್ಲ; ಇದು ಒಂದು ಅನಿಸಿಕೆ ಮಾತ್ರ.

ಇತರ ಜಾತಿಗಳು ಬಿಜೆಪಿಗೆ ಮತ ನೀಡಿದ್ದಕ್ಕಿಂತ ಹೆಚ್ಚಾಗಿ ಏನೂ ಬ್ರಾಹ್ಮಣರು ಬಿಜೆಪಿಗೆ ಮತ ನೀಡಿಲ್ಲ. ಅಂದರೆ ಯಾವುದೇ ಅರ್ಥದಲ್ಲಿ ಬ್ರಾಹ್ಮಣರು ಬಿಜೆಪಿ ಪರವಾಗಿ ವಿಶೇಷ ಒಲವು ತೋರಿಸಿಲ್ಲ.

ಉತ್ತರ ಪ್ರದೇಶದಲ್ಲಿ 75 ಜಿಲ್ಲೆಗಳಿದೆ. ಇವುಗಳಲ್ಲಿ ಕೇವಲ 7-8 ಬಿಜೆಪಿ ಜಿಲ್ಲಾ ಘಟಕಗಳಲ್ಲಿ ಮಾತ್ರ ಬ್ರಾಹ್ಮಣರು ಅಧ್ಯಕ್ಷರಾಗಿದ್ದಾರೆ. ಯುಪಿಯ ಒಟ್ಟು ಮತದಾರರಲ್ಲಿ ಬ್ರಾಹ್ಮಣರು ಶೇ.14ರಷ್ಟು ಇದ್ದಾರೆ. ರಜಪೂತರು ಅಥವ ಠಾಕೂರರು ಶೇ.6 ಮತ್ತು ಬನಿಯಾಗಳು ಶೇ.3ಕ್ಕಿಂತ ಕಡಿಮೆ ಇದ್ದಾರೆ. ಆದರೆ ಬಿಜೆಪಿ ಜಿಲ್ಲಾ ಅಧ್ಯಕ್ಷರಲ್ಲಿ 11 ಮಂದಿ ರಜಪೂತರು ಮತ್ತು 14 ಮಂದಿ ಬನಿಯಾ-ಮಾರ್ವಾಡಿಗಳಿದ್ದಾರೆ.

ಈಗ ಯುಪಿಯ ಮತದಾನದ ಮಾದರಿ(ಪ್ಯಾಟರ್ನ್)ಯನ್ನು ಗಮನಿಸುವ. 1991 ಮತ್ತು 1996ರಲ್ಲಿ ಬ್ರಾಹ್ಮಣರು ಬಿಜೆಪಿಗೆ ಗಣನೀಯ ಸಂಖ್ಯೆಯಲ್ಲಿ, ಭಾರೀ ಎನ್ನಬಹುದಾದಷ್ಟು ಮತ ನೀಡಿದರು. ಆದರೆ ಇವು ಬಿಜೆಪಿಯು ತನ್ನ ಸಾಂಪ್ರದಾಯಿಕ ಬೆಂಬಲ ನೆಲೆ (ಸಪೋರ್ಟ್ ಬೇಸ್)ಯನ್ನೂ ಮೀರಿ ಬೆಂಬಲ ಪಡೆದ ಚುನಾವಣೆಗಳಾಗಿದ್ದವು. ನಿಜ ಹೇಳಬೇಕೆಂದರೆ, 1997-2002ರ ಅವಧಿಯಲ್ಲಿ ಬಿಜೆಪಿಯ ಯುಪಿ ಸರಕಾರ ಮೂವರು ಮುಖ್ಯಮಂತ್ರಿಗಳನ್ನು ಕಂಡಿತು: ಕಲ್ಯಾಣ್ ಸಿಂಗ್(ಒಬಿಸಿ), ರಾಮ್ ಪ್ರಕಾಶ್ ಗುಪ್ತಾ(ಬನಿಯಾ) ಮತ್ತು ರಾಜನಾಥ್ ಸಿಂಗ್(ರಜಪೂತ). ಇವರು ಮೂವರಲ್ಲಿ ಯಾರೊಬ್ಬರೂ ಬ್ರಾಹ್ಮಣರಲ್ಲ ಮತ್ತು ಭಾರೀ ಅಪೇಕ್ಷಣೀಯವಾದ(ಪ್ಲಮ್) ಸಚಿವ ಖಾತೆಗಳನ್ನು ಒಬಿಸಿಗಳಿಗೆ, ಬನಿಯಾಗಳಿಗೆ ಮತ್ತು ರಜಪೂತರಿಗೇ ನೀಡಲಾಯಿತು (ಬ್ರಾಹ್ಮಣರಿಗಲ್ಲ).

ಆ ಮೊದಲು ಕೂಡಾ, ನಿರ್ದಿಷ್ಟವಾಗಿ, ಬಿಜೆಪಿ ಯುಪಿಯಲ್ಲಿ ತನ್ನ ಮೊದಲ ಸರಕಾರ ರಚಿಸಿದ 1991ರಲ್ಲಿ ಕೂಡ, ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಸೂಕ್ತ ಪ್ರಾತಿನಿಧ್ಯ ನೀಡಿರಲಿಲ್ಲ. 1993ರಲ್ಲಿ ಬಾಬರಿ ಮಸೀದಿಯ ನಾಶದ ಬೆನ್ನಿಗೇ ನಡೆದ ಯುಪಿ ಚುನಾವಣೆಗಳನ್ನು ನೆನಪಿಸಿಕೊಳ್ಳಿ; ಆಗ ಎಸ್ಪಿ-ಬಿಎಸ್ಪಿ ಜೋಡಿ 72 ಸ್ಥಾನಗಳಸಿತ್ತು. ಬಿಜೆಪಿ 173 ಸ್ಥಾನಗಳಿಸಿತ್ತು. ಅದೇ 1991ರಲ್ಲಿ, ಬಿಜೆಪಿ 221 ಸ್ಥಾನಗಳನ್ನು ಪಡೆದಿತ್ತು.

1991-1993ರ ನಡುವೆ ಯಾಕಾಗಿ ಈ ವ್ಯತ್ಯಾಸ? ಯಾಕೆಂದರೆ ಬ್ರಾಹ್ಮಣರಲ್ಲಿ ಒಂದು ಮಹತ್ವಪೂರ್ಣ ಪ್ರತಿಶತ ಬ್ರಾಹ್ಮಣರು ಬಿಜೆಪಿಯಿಂದ ದೂರ ಸರಿದಿದ್ದರು. ಬ್ರಾಹ್ಮಣರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಬಯಸಿರಬಹುದು. ಆದರೆ ಅವರು ಬಾಬರಿ ಮಸೀದಿ ಧ್ವಂಸದ ಬಗ್ಗೆ ಸಂತೋಷಪಟ್ಟಿರಲಿಲ್ಲ.

ಮಂದಿರ್-ಮಂಡಲ್

ಮಂದಿರ ಮತ್ತು ಮಂಡಲ್ ಎಲ್ಲ ಈಕ್ವೇಶನ್‌ಗಳನ್ನು ಅಸ್ತವ್ಯಸ್ತಗೊಳಿಸಿತು ಮತ್ತು ಮುಸ್ಲಿಮರು ಹಾಗೂ ಅಹಿರರು(ಯಾದವರು) ಒಂದು ಹೊಸ ಮುಲಾಯಂ ಯಾದವ್ ಕೂಟದಲ್ಲಿ ಒಟ್ಟಾದರು; ದಲಿತರು ಬಿಎಸ್ಪಿಗೆ ಹೋದರು. ಮೊದಲ ಬಾರಿಗೆ ಹೊಸ ಶಕ್ತಿಯಾಗಿ ಮೂಡಿದ ಬಿಜೆಪಿಯು ಮೇಲ್ಜಾತಿ ಪ್ಲಸ್ ಯಾದವೇತರ ಒಬಿಸಿ ಕೂಟವನ್ನು ರಚಿಸಿಕೊಂಡಿತು. ಬ್ರಾಹ್ಮಣರ ‘ಸಂಕಜ’ ಪಕ್ಷವಾದ ಕಾಂಗ್ರೆಸ್ ಬದಿಗೆ ತಳ್ಳಲ್ಪಟ್ಟಿತ್ತು. 2002, 2007 ಮತ್ತು 2012ರಲ್ಲಿ ಬ್ರಾಹ್ಮಣರು ಬಿಜೆಪಿಗೆ ಮತ ನೀಡಲಿಲ್ಲ. ಪರಿಣಾಮವಾಗಿ ಬಿಜೆಪಿ ಕಡಿಮೆ ಮತಗಳಿಸುತ್ತ, 2012ರಲ್ಲಿ 403 ಸ್ಥಾನಗಳ ಅಸೆಂಬ್ಲಿಯಲ್ಲಿ ಅತ್ಯಂತ ಕಡಿಮೆ, ಅಂದರೆ ಕೇವಲ 45 ಸ್ಥಾನಗಳನ್ನು ಪಡೆಯಿತು.

2017ರ ಅಸೆಂಬ್ಲಿ ಚುನಾವಣೆಗಳಲ್ಲಿ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್ ಎಂದು ಸಾರಿತು. ಆದರೆ ಅದು ಸಮಾಜವಾದಿ ಪಕ್ಷದೊಡನೆ ಮೈತ್ರಿ ಮಾಡಿಕೊಂಡದ್ದಕ್ಕೆ ಪ್ರತಿಕ್ರಿಯೆಯಾಗಿ ಬ್ರಾಹ್ಮಣರು ಬಿಜೆಪಿಗೆ ಹೋದರು; ಮುಸ್ಲಿಮರ ಮತಗಳು ವಿಭಜನೆಗೊಂಡವು; ದಲಿತರು ಗೊಂದಲಕ್ಕೊಳಗಾದರು. ಒಬಿಸಿಗಳು ಬಿಜೆಪಿ ಕಡೆಗೆ ವಾಲಿದರು ಮತ್ತು ಇತಿಹಾಸಕಾರರು ಹೇಳುವ ಹಾಗೆ, ಆಮೇಲೆ ನಡೆದದ್ದೆಲ್ಲ ಈಗ ಇತಿಹಾಸ

ಬಿಜೆಪಿಯ ಯುಪಿಯಲ್ಲಿ ಬ್ರಾಹ್ಮಣರು ಕೂಡ ಬಲಿಪಶುಗಳಾಗಿದ್ದಾರೆ

ಯೋಗಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ, ಮುಸ್ಲಿಮರನ್ನು ಹೊರತುಪಡಿಸಿ, ಇತರ ಜಾತಿಗಳಿಂದ ರಾಜಕೀಯ ಪ್ರತೀಕಾರವಾಗಿ 30ಕ್ಕೂ ಹೆಚ್ಚು ಮಂದಿ ಬ್ರಾಹ್ಮಣರು ಕೊಲ್ಲಲ್ಪಟ್ಟಿದ್ದಾರೆ. ಬ್ರಾಹ್ಮಣರು ಸಹಜ ರಾಜಕಾರಣಿಗಳು. ಅನುಕೂಲಕರ ಪರಿಸ್ಥಿತಿ ದೊರಕಿದಲ್ಲಿ ಅವರು ತಮ್ಮ ರಾಜಕೀಯ ಚಟುವಟಿಕೆಯನ್ನು ಆರಂಭಿಸುತ್ತಾರೆ; ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಹೊರಡುತ್ತಾರೆ. ಆದರೂ 1990ರ ದಶಕದಿಂದ ಪ್ರಬಲವಾಗಿ ಸ್ಥಾಪಿತವಾದ ಶಕ್ತಿಗಳಾಗಿರುವ, ಮುಖ್ಯವಾಗಿ ಒಬಿಸಿ ‘ಮತ್ತು ರಜಪೂತ ಶಕ್ತಿಗುಂಪುಗಳು, (ಒಬಿಸಿ ಮತ್ತು ಬಡವರಾದ ರಜಪೂತರಲ್ಲ) ಅಂತಹ ಯಾವುದೇ ಪ್ರಾಬಲ್ಯದ ವಿರುದ್ಧ ಒಗ್ಗಟ್ಟಾಗುತ್ತಿದ್ದಾರೆ.

ರಾಯ್‌ಬರೇಲಿಯಲ್ಲಿ ನಡೆದದ್ದು ಇಷ್ಟೆ

ಯಾವ ಅಪ್ತಾ ಹಳ್ಳಿಯ ಸಮೀಪ ಮೂವರು ಬ್ರಾಹ್ಮಣ ಯುವಕರ ಮೇಲೆ ಗುಂಪು ಹಲ್ಲೆ ನಡೆಸಿ ಥಳಿಸಲಾಯಿತೋ ಮತ್ತು ಇಬ್ಬರನ್ನು ಜೀವಂತ ಸುಡಲಾಯಿತೋ, ಆ ಹಳ್ಳಿ ಊಂಚಹಾರ್ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಒಂದು ಅಲೆ ಇತ್ತಾದರೂ ಕೂಡ, ಬಿಎಸ್ಪಿಯಿಂದ ಬಿಜೆಪಿಯನ್ನು ಸೇರಿದ ಯಾದವ್‌ನಲ್ಲದ ಒಬಿಸಿ ನಾಯಕ ಸ್ವಾಮಿ ಪ್ರಸಾದ್ ವೌರ್ಯರ ಮಗ, ಬಿಜೆಪಿ ಅಭ್ಯರ್ಥಿ ಉತ್ಕೃಷ್ಟ ವೌರ್ಯ ಸಮಾಜವಾದಿ ಪಕ್ಷದ ಮನೋಜ್ ಪಾಂಡೆ ವಿರುದ್ಧ ಸ್ಪರ್ಧಿಸಿ ಸೋತರು. ರಾಯ್ ಬರೇಲಿ, ವಿಶೇಷವಾಗಿ ರಜಪೂತರ ಮತ್ತು ಬ್ರಾಹ್ಮಣರ ನಡುವೆ ಅನೇಕ ಅಧಿಕಾರ ಹಣಾಹಣಿಗಳನ್ನು ಕಂಡಿದೆ. ಒಂದ್ರು ಪ್ರಸಿದ್ಧ ತಿಕ್ಕಾಟದಲ್ಲಿ, ರಾಯ್ ಬರೇಲಿಯ ಓರ್ವ ಬಲಿಷ್ಠ ವ್ಯಕ್ತಿಯಾಗಿರುವ ಅಖಿಲೇಶ್‌ಸಿಂಗ್, ಮನೋಜ್ ಪಾಂಡೆಯ ಹಿರಿಯ ಸಹೋದರ ರಾಕೇಶ್‌ಪಾಂಡೆಯನ್ನು ಕೊಲೆ ಮಾಡಿದರು ಎನ್ನಲಾಗಿದೆ. ಆದ್ದರಿಂದ, ಮುಸ್ಲಿಮರು ಮತ್ತು ದಲಿತರನ್ನು ಹೊರತುಪಡಿಸಿ ಒಬಿಸಿ ಅಧಿಕಾರ ಗುಂಪುಗಳು ಮತ್ತು ರಜಪೂತರಂತಹ ಇತರ ಜಾತಿಗಳು ಬ್ರಾಹ್ಮಣ ನಾಯಕರು ಮೇಲೆ ಬರುವುದನ್ನು ಸಹಿಸುವುದಿಲ್ಲ. ಜೂನ್ 26ರಂದು 5 ಮಂದಿ ಬ್ರಾಹ್ಮಣರನ್ನು ಕೊಂದ ಯಾದವರ ಗುಂಪು ಬಿಜೆಪಿಯ ಉತ್ಕರ್ಷ ವೌರ್ಯರನ್ನು ಬೆಂಬಲಿಸಿದ ಯಾದವರ ಗುಂಪು. ಬ್ರಾಹ್ಮಣರು ಮನೋಜ್ ಪಾಂಡೆಯನ್ನು ಬೆಂಬಲಿಸಿದ್ದರು.

ಬಿಜೆಪಿ ಪರ ಯಾದವರು ವರ್ಸಸ್ ಬಿಜೆಪಿ ವಿರೋಧಿ ಯಾದವರು.

ರಾಯ್‌ಬರೇಲಿಯಲ್ಲಿ ಯಾದವರು ಎಸ್ಪಿ ಪರ ಇರಲಿಲ್ಲ; ಬದಲಾಗಿ ಬಿಜೆಪಿಗೆ ನಿಷ್ಠರಾಗಿದ್ದರು. ಇದು ತುಂಬ ಮುಖ್ಯ. ಊಂಚಹಾರ್‌ನ ಬ್ರಾಹ್ಮಣ ಶಾಸಕ ಎಸ್ಪಿ ಸೇರಿದವರು; ಆಪಾದಿತ ಯಾದವರು ಬಿಜೆಪಿ ಬೆಂಬಲಿಗರು! ಅದೇ ವೇಳೆ, ಎಸ್‌ಪಿಯ ಯಾದವರು ಮನೋಜ್ ಪಾಂಡೆ ಜತೆಗಿದ್ದಾರೆ!

ಅಖಿಲೇಶ್‌ಸಿಂಗ್ ನಡೆಸಿದ ಸಭೆಯೊಂದರಲ್ಲಿ ಬ್ರಾಹ್ಮಣರನ್ನು ಮುಗಿಸಿಬಿಡಬೇಕೆಂದು ತೀರ್ಮಾನಿಸಲಾಯಿತು ಎನ್ನಲಾಗಿದೆ. ಬಹುಪಾಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ಯೋಗಿ-ಠಾಕೂರ್ ಯುಗದಲ್ಲಿ ನೇಮಕಗೊಂಡ ಠಾಕವಾರರು. ಜೂನ್ 26ರಂದು ಬ್ರಾಹ್ಮಣ ಹುಡುಗರು ಅವರಿಗಾಗಿ ಇಡಲಾಗಿದ್ದ ಬೋನಿನೊಳಗೆ ಬಿದ್ದರು.

ಪ್ರಕರಣದಲ್ಲಿ ಭಾಗಿಯಾಗಿದ್ದ 9 ವ್ಯಕ್ತಿಗಳನ್ನು ಬಂಧಿಸಲಾಯಿತು. ಅವರೆಲ್ಲರೂ 2017ರಲ್ಲಿ ಸ್ವಾಮಿ ಪ್ರಸಾದ್ ವೌರ್ಯರವರ ಪುತ್ರ ಉತ್‌ಕೃಷ್ಣ ವೌರ್ಯರವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ವೌರ್ಯ ಹಂತಕರ ಪರವಾಗಿ ನಿಂತಿದ್ದರೆಂಬ ಆಪಾದನೆಗಳಿದ್ದವು. ಯಾಕೆಂದರೆ ಕೊಲೆಯಾದವರನ್ನು ಅವರು ‘ಗೂನ್’(ಗೂಂಡಾ) ಗಳೆಂದು ಕರೆದಿದ್ದರು. ಈಗ ಬ್ರಾಹ್ಮಣರು ಜೂನ್ 26ರಂದು ಹತ್ಯೆಯಾದವರ ಕುಟುಂಬದವರಿಗೆ ಕನಿಷ್ಠ ರೂಪಾಯಿ 50 ಲಕ್ಷ ಪರಿಹಾರ, ಸಿಬಿಐ ವಿಚಾರಣೆ ಮತ್ತು ನೌಕರಿ ಹಾಗೂ ಇತರ ಸವಲತ್ತುಗಳನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಈಗ ಯುಪಿಯಲ್ಲಿ ಪರಿಸ್ಥಿತಿ ಬಿಗುವಾಗಿದೆ. ಮುಖ್ಯಮಂತ್ರಿ ಯೋಗಿಯವರ ಬ್ರಾಹ್ಮಣ ವಿರೋಧಿ ಒಲವು ಕೂಡ ಈ ಬಿಗುವಾದ ವಾತಾವರಣಕ್ಕೆ ಕಾರಣ. ಬ್ರಾಹ್ಮಣರು ಬಲಿಪಶುಗಳಾದ ಪ್ರಕರಣಗಳಲ್ಲಿ ಅವರು ಏನನ್ನೂ ಮಾಡಿಲ್ಲ. ವರ್ಗಾವಣೆ/ನೇಮಕಾತಿಗಳಲ್ಲಿ ಅವರು ಬ್ರಾಹ್ಮಣರ ವಿರುದ್ಧ ತಾರತಮ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಯೋಗಿಯವರು 1990ರ ದಶಕದ ಬ್ರಾಹ್ಮಣ ವರ್ಸಸ್ ಠಾಕೂರ್ ಘರ್ಷಣೆಗಳ ಭಾಗವಾಗಿದ್ದರು.

ಉತ್ತರಪ್ರದೇಶದ ರಾಜಕೀಯ ಸಂಸ್ಕೃತಿಯಲ್ಲಿ, ಜಾತಿ ನಾಯಕರು ಒಮ್ಮೆ ಅಧಿಕಾರಕ್ಕೆ ಬಂದರೆಂದರೆ, ಅವರು ಎಲ್ಲ ಜಾತಿಗಳನ್ನೂ ತಮ್ಮ ಜೊತೆ ಒಯ್ಯಬೇಕು. ಮುಲಾಯಂ ಮತ್ತು ಮಾಯಾವತಿ ಖ್ಯಾತ ಜಾತಿ ನಾಯಕರು. ಆದರೆ ಮುಖ್ಯಮಂತ್ರಿಗಳಾದ ಬಳಿಕ ಅವರು ಕೂಡ ಜಾತಿ ಸ್ಪರ್ಧೆಯ, ಜಾತಿದ್ವೇಷದ ತೆರೆದ ಬಯಲಿನ ಪ್ರದರ್ಶನವನ್ನು ಕೈಬಿಡಲೇಬೇಕಾಯಿತು.

ಆದರೆ ಯೋಗಿ ಇದಕ್ಕಿಂತ ಭಿನ್ನವಾದ ರಾಜಕಾರಣಿ. ಮುಖ್ಯಮಂತ್ರಿಯಾದೊಡನೆ ಅವರು ತೆಗೆದುಕೊಂಡ ತೀರ್ಮಾನಗಳಲ್ಲಿ ಹರಿಶಂಕರ್ ತಿವಾರಿ ವಿರುದ್ಧ ಪ್ರತೀಕಾರ ದಾಳಿಗಳನ್ನು ನಡೆಸಲು ಆಜ್ಞೆಮಾಡಿದ್ದೂ ಒಂದು ತೀರ್ಮಾನ. ಈ ತಿವಾರಿ ಗೋರಖ್‌ಪುರದ ವಯಸ್ಸಾಗುತ್ತಿರುವ ಬ್ರಾಹ್ಮಣ ಗ್ಯಾಂಗ್‌ಸ್ಟರ್-ರಾಜಕಾರಣಿ. ಈ ದಾಳಿ ಮಾಡಿಸುವುದರ ಮೂಲಕ ಯೋಗಿ ಹಳೆಯ ಗಾಯಗಳನ್ನು ಕೆದಕಿದಂತೆ ಆಯಿತು.

ಬ್ರಾಹ್ಮಣ ಕಥಾನಕ

ಈಗ ಬ್ರಾಹ್ಮಣರು ತಮ್ಮ ಸಮುದಾಯದ ಸದಸ್ಯರನ್ನು ಹೇಗೆ ವ್ಯವಸ್ಥಿತವಾಗಿ ಹತ್ಯೆ ಮಾಡಲಾಗಿದೆ ಎಂದು ವಿವರವಾದ ಕಥಾನಕವೊಂದನ್ನು ಕಟ್ಟುತ್ತಿದ್ದಾರೆ. 2004ರಲ್ಲಿ ಗೋಂಡಾದ ಬಿಜೆಪಿ ನಾಯಕ ಘನಶ್ಯಾಮ್ ಶುಕ್ಲಾರವರ ರಾಜಕೀಯ ಕೊಲೆಯ ಹಿಂದಿನ ರಹಸ್ಯ ಇನ್ನೂ ಬಯಲಾಗದಿರುವುದನ್ನು ಇದಕ್ಕೆ ಒಂದು ಉದಾಹರಣೆಯಾಗಿ ನೀಡುತ್ತಾರೆ. ಈಗ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಸಂಸದನಾಗಿರುವ ಬ್ರಿಜ್‌ಭೂಷಣಾಶರಣ್ ಸಿಂಗ್, ಘನಶ್ಯಾಮ್ ಶುಕ್ಲಾರವರ ಕೊಲೆಗಾರನೆಂದು ವ್ಯಾಪಕವಾಗಿ ಅನುಮಾನಿಸಲಾಗಿದೆ. ಶುಕ್ಲಾ ಕೊಲೆಯ ಬಗ್ಗೆ ಸಿಬಿಐ ವಿಚಾರಣೆಯಿಂದ ಕೂಡ ಏನೂ ಪ್ರಯೋಜನವಾಗಲಿಲ್ಲ.

ಈ ಹಿಂದೆ ಸ್ಥಳೀಯ ಮಟ್ಟದ ಮತ್ತು ಉದಯೋನ್ಮುಖರಾದ ಹಲವು ಬ್ರಾಹ್ಮಣ ನಾಯಕರನ್ನು ಕೊಲ್ಲಲಾಗಿದೆ. ಯುಪಿಯಲ್ಲಿ ಬ್ರಾಹ್ಮಣವಿರೋಧಿಯಾದ ಒಂದು ಕಥಾನಕ ಇದೆ. ವಿರೋಧಾಭಾಸವೆಂದರೆ, ವಾಸ್ತವದಲ್ಲಿ ಬ್ರಾಹ್ಮಣರು ಕೂಡ ದಲಿತರು ಹಾಗೂ ಮುಸ್ಲಿಮರಷ್ಟೇ ಬಲಿಪಶುಗಳಾಗಿದ್ದಾರೆ. ಇದಕ್ಕೆ ಕಾರಣ ಯುಪಿಯಲ್ಲಿ ಕಳೆದ 25 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಬ್ರಾಹ್ಮಣರು ಅಧಿಕಾರ ರಹಿತರಾಗಿ ಉಳಿದ ಏಕೈಕ ಗುಂಪು, ಏಕೈಕ ಸಮುದಾಯ ಮತ್ತು ಠಾಕೂರರ ಹಾಗೂ ಒಬಿಸಿಗಳ ನವ-ಶ್ರೀಮಂತರ ದಬ್ಬಾಳಿಕೆಗೆ, ಸರ್ವಾಧಿಕಾರಕ್ಕೆ ಪಂಥಾಹ್ವಾನ ಒಡ್ಡುವ ಏಕೈಕ ಶಕ್ತಿ ಅಲ್ಲಿಯ ಬ್ರಾಹ್ಮಣರು.

ಯುಪಿಯಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಅಧಿಕಾರ ಬೇಕೆಂಬ ಬ್ರಾಹ್ಮಣರ ಒತ್ತಾಯ(ಅಸರ್ಶನ್) ಪ್ರಾಬಲ್ಯ ಮುಸ್ಲಿಮರ ಮತ್ತು ದಲಿತರ ಪ್ರಾಬಲ್ಯಕ್ಕೆ ಕಾರಣವಾಗುತ್ತದೆ. ಈಗ ಯಾದವರು ವಿಪಕ್ಷದಲ್ಲಿರುವುದರಿಂದ ಅವರು ಕೂಡ ಈ ಮೂರು ಗುಂಪುಗಳ ಜತೆ ಸೇರಿಕೊಳ್ಳಬಹುದು. ಹೀಗೆ ನಡೆದಲ್ಲಿ, ಇದು ಯುಪಿಯ ರಾಜಕೀಯ ಮುಖವನ್ನು ಶಾಶ್ವತವಾಗಿ ಬದಲಾಯಿಸಲಿದೆ.

ಬ್ರಾಹ್ಮಣ-ದಲಿತ-ಮುಸ್ಲಿಂ

ನಿಜವಾಗಿ ಮಂದಿರ-ಪೂರ್ವ, ಮಂಡಲ್-ಪೂರ್ವ ಯುಗದಲ್ಲಿ ದಲಿತ-ಮುಸ್ಲಿಂ-ಬ್ರಾಹ್ಮಣ ಕೂಟವನ್ನು ಪ್ರತಿ ಚುನಾವಣೆಯಲ್ಲಿ 1952ರಿಂದ 1985ರವರೆಗೆ, ಬ್ರಾಹ್ಮಣರೇ ಮುನ್ನಡೆಸಿದ್ದರು ಮತ್ತು ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವೇ ಗೆದ್ದಿತ್ತು ಎಂದರೆ ಇಂದಿನ ತಲೆಮಾರಿಗೆ ಆಶ್ಚರ್ಯವಾಗಬಹುದು.

1980ರಲ್ಲಿ ಬಿಜೆಪಿಯಾಗಿ ರೂಪಾಂತರಗೊಂಡ ಜನಸಂಘಕ್ಕೆ ಉತ್ತರ ಪ್ರದೇಶದಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿಗೆ ದೊರಕುತ್ತಿದ್ದ ಸ್ಥಾನಗಳಿಗಿಂತಲೂ ಕಡಿಮೆ ಸ್ಥಾನಗಳು ದೊರಕುತ್ತಿದ್ದವು!

1990ರ ಮೊದಲ ದಶಕದ ವರೆಗೆ ಆಳುವ ಪಕ್ಷ(ಕಾಂಗ್ರೆಸ್) ಮತ್ತು ವಿಪಕ್ಷ ಎರಡೂ ಕೂಡ ವ್ಯಾಪಕವಾಗಿ ಸೆಕ್ಯುಲರ್, ಲೆಫ್ಟ್-ಆಫ್-ಸೆಂಟರ್ ರಾಜಕೀಯ ಚೌಕಟ್ಟಿನ ಒಳಗೆ ಇದ್ದವು. ಮೊದಲು ಡಾ.ರಾಮ್ ಮನೋಹರ ಲೋಹಿಯಾ ಮತ್ತು ಆ ಬಳಿಕ ಚೌಧರಿ ಚರಣ ಸಿಂಗ್ ನೇತೃತ್ವದ ಯುಪಿ ವಿಪಕ್ಷ ರಾಜಕಾರಣವು ಅಹಿರ್-ಜಾಟ್-ಗುಜ್ಜರ್-ರಜಪೂತ್(ಎಜೆಜಿಎಆರ್) ಅಕ್ಷದ ಸುತ್ತವೇ ಸುತ್ತುತ್ತಿತ್ತು. ಆದ್ದರಿಂದ ಯುಪಿಯಲ್ಲಿ 1990ರ ದಶಕದ ವರೆಗೆ, ಒಂದೆಡೆ ಕಾಂಗ್ರೆಸ್ ನೇತೃತ್ವದ ಬ್ರಾಹ್ಮಣ-ದಲಿತ-ಮುಸ್ಲಿಂ ಒಕ್ಕೂಟ ಮತ್ತು ಇನ್ನೊಂದೆಡೆ ಎಜೆಜಿಎಆರ್ ಕೂಟದಲ್ಲಿ, ಕಾಂಬಿನೇಶನ್‌ನಲ್ಲಿ ರಾಜಕಾರಣ ನಡೆಯುತ್ತಿತ್ತು. ಆದರೆ ಇವೆಲ್ಲ ಸರಳವಾದ ಜಾತಿ ಸಾಮಾನ್ಯೀಕರಣ(ಈಕ್ವೇಶನ್ಸ್)ಗಳಲ್ಲ.

ಒಟ್ಟಿನಲ್ಲಿ, ಬ್ರಾಹ್ಮಣ-ಮುಸ್ಲಿಂ-ದಲಿತ ಕೂಟವು(ಕಾಂಬಿನೇಶನ್) ಮಧ್ಯಮ ಶಕ್ತಿಗಳು, ಬುದ್ಧಿಜೀವಿಗಳು, ಕೃಷಿ ಕಾರ್ಮಿಕರು ಮತ್ತು ಚಿಕ್ಕಪುಟ್ಟ ವಾಣಿಜ್ಯ-ವ್ಯಾಪಾರಗಳ ಒಂದು ವರ್ಗ ಮೈತ್ರಿ(ಕ್ಲಾಸ್ ಅಲಯನ್ಸ್)ಯನ್ನು ಪ್ರತಿನಿಧಿಸುತ್ತಿತ್ತು.

(ಅಮರೇಶ್ ಮಿಶ್ರಾ ಪ್ರಶಸ್ತಿ ವಿಜೇತರಾದ ಓರ್ವ ಲೇಖಕ)

Writer - ಅಮರೇಶ್ ಮಿಶ್ರಾ

contributor

Editor - ಅಮರೇಶ್ ಮಿಶ್ರಾ

contributor

Similar News

ಜಗದಗಲ
ಜಗ ದಗಲ