ಖತ್ತಾತಿ ವಿನಾಶದ ನೆರಳಿನಲ್ಲಿರುವ ಒಂದು ಕಲೆ

Update: 2017-07-23 18:42 GMT

ಬೆಂಗಳೂರು ಮೂಲದ ಓರ್ವ ಅಲಂಕಾರ ಅಕ್ಷರ ಕಲಾವಿದ ಅಥವಾ ಕಾಲಿಗ್ರಾಫರ್, ನಶಿಸುತ್ತಿರುವ ಒಂದು ಕಲೆಯನ್ನು ಉಳಿಸಲು ಏಕಾಂಗಿಯಾಗಿ ಹೋರಾಡುತ್ತಿದ್ದಾರೆ.

ದಿಲ್ಲಿ, ಆಗ್ರಾ, ಲಾಹೋರ್‌ನಲ್ಲಿ ಅನೇಕ ಮೊಘಲ್ ಸ್ಮಾರಕಗಳನ್ನು ಹಾಗೂ ಇರಾನ್‌ನ ಇಸ್‌ಫಹನ್‌ನಲ್ಲಿ ಸಫಾವಿದ್ ಕಟ್ಟಡಗಳನ್ನು ಅಲಂಕರಿಸಿರುವ ಕಾಲಿಗ್ರಫಿ ಕಲೆಯನ್ನು ಹೊಂದಿರುವ ಮ್ಯುರಲ್‌ಗಳು ಹಾಗೂ ಪ್ಲೇಕ್‌ಗಳು (ಸ್ಮರಣಿಕೆಗಳು) ಹಲವಾರು ಶತಮಾನಗಳಿಂದ ಸಂದರ್ಶಕರನ್ನು ಸ್ತಂಭೀಭೂತಗೊಳಿಸಿದೆ. ಹೈದರಾಬಾದ್‌ನ ಪೈಗಾ ಮತ್ತು ಜಾನ್‌ಪುರಿಯಲ್ಲಿರುವ ಸರಿವಂತರ ಗೋರಿಗಳ ಮೇಲೆ ಕೂಡ ಈ ಕಲೆಯ ಕುಸುರಿಯನ್ನು ಕಾಣಬಹುದು. ದಿಲ್ಲಿಯ ರಾಷ್ಟ್ರೀಯ ಪ್ರಾಚ್ಯ ಸಂಗ್ರಹಾಲಯದಲ್ಲಿ ಕಾಲಿಗ್ರಫಿಯ ಸೌಂದರ್ಯವನ್ನು ಸೂಸುವ ಅರೆಬಿಕ್ ಹಸ್ತ ಪ್ರತಿಗಳನ್ನು ಸಂರಕ್ಷಿಸಿಡಲಾಗಿದೆ. ರಾಜನ ಆಸ್ಥಾನದಿಂದ ಹೊರಟ ಒಂದು ಫರ್ಮಾನ್, ಅಥವಾ ಒಂದು ಆಸ್ತಿಹಕ್ಕು ಪತ್ರ, ಇಲ್ಲವೇ ಒಂದು ವಿವಾಹ ಆಮಂತ್ರಣ ಪತ್ರಿಕೆ ಯಾವುದೇ ಇರಲಿ, ಜನರು ಒಬ್ಬ ಕಾಲಿಗ್ರಾಫರ್ ಅಥವಾ ಖತ್ತಾತಿಗಾಗಿ ಕಾಯುತ್ತಿದ್ದರು. ಆ ಬಳಿಕವಷ್ಟೇ ಅದನ್ನು ಮುದ್ರಣಕ್ಕಾಗಿ ಲಿಥೋ ಮುದ್ರಣಾಲಯಕ್ಕೆ ಒಯ್ಯಲಾಗುತ್ತಿತ್ತು.

1,000 ವರ್ಷಗಳಿಂದ ಬೆಳೆದು ಉಳಿದುಬಂದ ಖತ್ತಾತಿ ಅಥವಾ ಆಲಂಕಾರಿಕ ಅಕ್ಷರ ಬರವಣಿಗೆಯ ಕಲೆ ಇಂದು ವಿನಾಶದ ಗಂಭೀರ ಬೆದರಿಕೆಗೊಳಗಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಾಷೆಗಳ ಕಂಪ್ಯೂಟರೀಕರಣ ಮತ್ತು ಡಿಜಿಟಲೀಕರಣವು ಕಾಲಿಗ್ರಫಿಯಲ್ಲಿ ಬಳಸುವ ಗರಿಗಳನ್ನು ಮತ್ತು ಲೇಖನಿಗಳನ್ನು ಮೂಲೆ ಗುಂಪಾಗಿಸುತ್ತಿದೆ.

ಆದರೆ, ಬೆಂಗಳೂರು ಮೂಲದ ಮುಖ್ತಾರ್ ಅಹ್ಮದ್ ನಶಿಸುತ್ತಿರುವ ಈ ಕಲೆಯನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಓರ್ವ ಬೆಂಗಳೂರಿನ ಗಗನಚುಂಬಿ ಅಪಾರ್ಟ್‌ವೆುಂಟ್‌ನಲ್ಲಿ ಇರುವ ತನ್ನ ಸ್ಟುಡಿಯೋದಲ್ಲಿ ಕೆಲಸಮಾಡುವ ಅಹ್ಮದ್ ಒಂದು ಕಲೆಯಾಗಿ ಕಾಲಿಗ್ರಫಿಯ ಸಾವಿನ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. 46ಹರೆಯದ ಅಹ್ಮದ್ ರಚಿಸುವ ಕಾಲಿಗ್ರಫಿ ಕಲಾಕೃತಿಗಳು ಅವರಿಗೆ ದೇಶದೊಳಗೆ ಮೆಚ್ಚಿಗೆಯೊಂದಿಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ದೊರಕಿಸಿಕೊಟ್ಟಿವೆ.

ಹೈದರಾಬಾದ್ ಸಮೀಪದ ಹಳ್ಳಿಯೊಂದರಲ್ಲಿ ಜನಿಸಿದ ಅಹ್ಮದ್ ಹೈದರಾಬಾದ್‌ನ ಚಟ್ಟಾಬಝಾರ್‌ನ ಮುದ್ರಣಾಲಯವೊಂದರಲ್ಲಿ ಕಾಲಿಗ್ರಫಿಯ ತನ್ನ ಮೊದಲ ತರಬೇತಿ ಪಡೆದರು. ‘‘ಹೆಚ್ಚಿನ ಖತ್ತಾತಿಗಳು ಮಾಡುವ ಕೆಲಸಕ್ಕೂ ಕಾಲಿಗ್ರಫಿಯ ಪ್ರಾಚೀನ ಕಲೆಗೂ ಸಂಬಂಧವೇ ಇರಲಿಲ್ಲ. ಅವರೆಲ್ಲ ಮಾರುಕಟ್ಟೆಯ ಆವಶ್ಯಕತೆಗಳನ್ನು ಪೂರೈಸುವುದನ್ನೇ ತಮ್ಮ ಕಸುಬಾಗಿ ಮಾಡಿಕೊಂಡಿದ್ದರು’’ಎನ್ನುತ್ತಾರೆ ಅಹ್ಮದ್.

ಖತ್ತಾತಿ ಅಥವಾ ಇಸ್ಲಾಮಿಕ್ ಕಾಲಿಗ್ರಫಿಯ ಸತ್ವ, ತಿರುಳು ಇಸ್ಲಾಮಿಕ್ ಸೌಂದರ್ಯಶಾಸ್ತ್ರದಲ್ಲಿದೆ. ನಿಜ, ಆರಂಭದಲ್ಲಿ ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದರ ಪರಂಪರೆಗಳನ್ನು ಮುಂದಿನ ಜನಾಂಗಗಳಿಗೆ ರವಾನಿಸುವುದಕ್ಕಾಗಿ ಹಾಗೂ ಸಂರಕ್ಷಿಸುವುದಕ್ಕಾಗಿ ಕಾಲಿಗ್ರಫಿ ಹುಟ್ಟಿಕೊಂಡಿತು. ಪವಿತ್ರ ಕುರ್‌ಆನ್‌ಅನ್ನು ಮೊದಲು ಬರೆದದ್ದು ಕುಫಿಕ್ ಶೈಲಿಯಲ್ಲಿ. ಮೆಸಪೊಟೇಮಿಯನ್ ಇರಾಕ್‌ನ ಐತಿಹಾಸಿಕ ನಗರ ಕುಫಾದಿಂದ ಕುಫಿಕ್ ಎಂಬ ಶಬ್ದ ಬಂದಿದೆ. ಇದಕ್ಕೆ ಅರಬರು ಉಚ್ಚಾರಣಾ ಚಿಹ್ನೆಗಳನ್ನು ಸೇರಿಸಿದರು; ಅವರು ಬಳಸುತ್ತಿದ್ದ ಧ್ವನಿಶಾಸ್ತ್ರ(ಪೊನಾಟಿಕ್ಸ್)ದ ವೈವಿಧ್ಯಗಳಿಂದ ಮೂಡಿಬಂದ ಇನ್ನಷ್ಟು ಅಕ್ಷರಮಾಲಿಕೆ(ಅಲ್ಫಬೆಟ್)ಗಳನ್ನು ಬಳಕೆಗೆ ತಂದರು. ಅರಬರ ದಿಗ್ವಿಜಯಗಳು ಹೆಚ್ಚಿದಂತೆ, ಕಾಲಿಗ್ರಫಿ ಕಲೆ ಬೆಳೆಯುತ್ತ ಹೋಯಿತು. ಪರ್ಶಿಯನ್ ಕವಿ ಫಿರ್ದೌಸಿಯ ಶಹನಾಮಾ ಅಥವಾ ಔರಂಗಾಜೇಬ್ ಬರೆದ ಪವಿತ್ರ ಕುರ್‌ಆನಿನ ಪ್ರತಿಗಳಂತಹ ಖ್ಯಾತ ಕವಿಗಳ ಹಾಗೂ ಸಾಹಿತಿಗಳ ಕೃತಿಗಳಿಗೆ ಚಿನ್ನದ ಲೇಪನವಿರುವ ಅಕ್ಷರಾಲಂಕಾರ ಮಾಡಲಾಗುತ್ತಿತ್ತು.

ಅಹ್ಮದ್ ಇತ್ತಿಚೆಗಷ್ಟೆ ಕೈರೊದಿಂದ ಮರಳಿದ್ದಾರೆ. ಅಂತಾರಾಷ್ಟ್ರೀಯ ಕಾಲಿಗ್ರಫಿ ಸ್ಪರ್ಧೆಯಲ್ಲಿ ಅವರ ಕಾಲಿಗ್ರಫಿ ಕೃತಿಯು 17 ರಾಷ್ಟ್ರಗಳಿಂದ ಬಂದ 700 ಎಂಟ್ರಿಗಳಲ್ಲಿ ದ್ವಿತೀಯ ಅತ್ಯುತ್ತಮ ಎಂಟ್ರಿಯಾಗಿ ಮನ್ನಣೆಗಳಿಸಿತು. ಈ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಆ ಸ್ಪರ್ಧೆಯಲ್ಲಿ ಸುಮಾರು 125 ಮಂದಿ ಪ್ರಸಿದ್ಧ ಕಾಲಿಗ್ರಾಫರ್‌ಗಳಿ ಭಾಗವಹಿಸಿದ್ದರು.

ಹೈದರಾಬಾದ್‌ನ ಖ್ಯಾತ ಕಾಲಿಗ್ರಾಫರ್‌ಗಳಾದ ಝಾಕಿರ್ ಅಲಿ ಹಶ್ಮಿ, ಮುಹಮ್ಮದ್ ಝಕರಿಯಾ ಮತ್ತು ತಹೀರುದ್ದೀನ್ ಕೈಸರ್‌ರವರ ಕೆಳಗೆ ಅಹ್ಮದ್ ತರಬೇತಿ ಪಡೆದರು. ಇಸ್ತಾಂಬುಲ್‌ನ ಐಆರ್‌ಸಿಐಸಿಎ ಸಂಸ್ಥೆಯ ತಜ್ಞ ಕಾಲಿಗ್ರಾಫರ್ ದಾವೂದ್ ಬಕ್ತಾಶ್ ಬಳಿ ಮೂರು ವರ್ಷಗಳ ತರಬೇತಿ ಪಡೆದ ಬಳಿಕ ಅಹ್ಮದ್‌ರವರ ಕುಂಚ ರೇಖೆಗಳು ಪ್ರೌಢತೆ ಪಡೆದವು. ಖತ್ತ್ -ಎ-ತುಲುತ್ ಮತ್ತು ಖತ್ತ್-ಎ-ನಸ್ಕ್ ಎಂದು ಕರೆಯಲ್ಪಡುವ ಕಾಲಿಗ್ರಫಿಯ ಶೈಲಿಗಳಲ್ಲಿ ಅಹ್ಮದ್‌ರವರು ಸ್ನಾತಕೋತ್ತರ (ಮಾಸ್ಟರ್ಸ್‌) ಸರ್ಟಿಫಿಕೆಟ್ ಪಡೆದರು. ಈ ಶೈಲಿಗಳನ್ನು ಅರೆಬಿಕ್ ಲಿಪಿಯಲ್ಲಿ ಬಳಸಲಾಗುತ್ತಿತ್ತು. ಆದರೆ ಪರ್ಷಿಯನ್ ಮತ್ತು ಉರ್ದು ಕೃತಿಗಳಲ್ಲಿ ಖತ್ತ್-ಎ-ನಸ್ಕ್ ಶೈಲಿಯನ್ನೇ ಬಳಸಲಾಗುತ್ತದೆ. ಈ ಶೈಲಿಯಲ್ಲಿ ಪ್ರಾವೀಣ್ಯ ಪಡೆಯಲು ಕೆನಡಾದ ವ್ಯಾಂಕೋವರ್‌ಗೆ ತೆರಳಿದ ಅಹ್ಮದ್ ಅಲ್ಲಿ ಇರಾನಿನ ಖ್ಯಾತ ಕಾಲಿಗ್ರಾಫರ್ ಮಸೂದ್ ಕರಿಮಯಿ ಜತೆ ಸ್ವಲ್ಪ ಸಮಯ ಕಳೆದು ಕಾಲಿಗ್ರಫಿಯ ಈ ವಿಭಾಗದಲ್ಲಿ ಎಂ.ಎ. ಪದವಿಗೆ ಸಮಾನವಾದ ಐದನೆಯ ಹಂತವನ್ನು ಅಭ್ಯಾಸ ಮಾಡುತ್ತಿದ್ದಾರೆ.

ಕಾಲಿಗ್ರಫಿಯು ಕರಕುಶಲ ಕಲೆಯ ಹಾಗೆ, ಮತ್ತು ಡಿಜಿಟಲೀಕರಣ ಲಿಖಿತ ಅಕ್ಷರವನ್ನೇ ಬುಡಮೇಲುಗೊಳಿಸುವ ಬೆದರಿಕೆ ಒಡ್ಡುತ್ತಿರುವ ಇಂದಿನ ಜಗತ್ತಿನಲ್ಲಿ ಕಾಲಿಗ್ರಫಿಗೆ ವಾಣಿಜ್ಯ ಪ್ರಸ್ತುತತೆಯಿಲ್ಲ ಎನ್ನುತ್ತಾರೆ ಅಹ್ಮದ್. ಸಂಸ್ಥೆಗಳು ಲೋಗೊಗಳು, ಮತ್ತು ಪ್ರಸಿದ್ಧ ಕೃತಿಗಳ ಶೀರ್ಷಿಕೆ ಪುಟ ಇತ್ಯಾದಿಗಳ ವಿನ್ಯಾಸದಲ್ಲಿ ಕಾಲಿಗ್ರಾಫರ್‌ಗಳನ್ನು ನೇಮಿಸಿಕೊಳ್ಳುವ ಮಧ್ಯಪೂರ್ವ ರಾಷ್ಟ್ರಗಳು ನೀಡುವ ಆಶ್ರಯದಿಂದಾಗಿ ಕಾಲಿಗ್ರಫಿ ಉಳಿದುಕೊಂಡಿದೆ ಎನ್ನುತ್ತಾರೆ ಅಹ್ಮದ್. ‘‘ಮುಕಹರ್’’ಎಂದು ಕರೆಯಲ್ಪಡುವ, 700-800 ವರ್ಷಗಳವರೆಗೆ ಸುರಕ್ಷಿತವಾಗಿ ಉಳಿಯುವ ಮತ್ತು ಕೈಯಿಂದ ತಯಾರಿಸಲ್ಪಟ್ಟ ಒಂದು ವಿಶೇಷ ಕಾಗದದ ಮೇಲೆ ಖತ್ತಾತಿಯನ್ನು ಮಾಡಲಾಗುತ್ತದೆ. ಪೈಂಟ್‌ಗಳೂ ಸೇರಿದಂತೆ ಯಾವುದೇ ರೀತಿಯ ಸಸ್ಯಮೂಲವಾದ ಅಥವಾ ರಾಸಾಯನಿಕ ಶಾಯಿಗಳನ್ನು ಈ ಕಾಗದದಲ್ಲಿ ಬರೆಯಲು ಬಳಸಬಹುದು. ಕಾಗದಕ್ಕೆ ಹಾನಿ ಮಾಡದೆ, ಒಮ್ಮೆ ಬರೆದ ಅಕ್ಷರಗಳನ್ನು ಉಜ್ಜಿ ತೆಗೆಯಬಹುದು. ಶಾಯಿಯನ್ನು ಇರಾನ್, ಜರ್ಮನಿ ಅಥವಾ ಜಪಾನ್‌ನಿಂದ ಆಮದು ಮಾಡಬೇಕಾಗುತ್ತದೆ. ಬರೆಯಲು ಬಳಸುವ ಕಾಲಂ ಅಥವಾಸ್ಟೈಲಸ್(ಲೇಖನಿ)ಗಳನ್ನು ಹುಲ್ಲಿನ ಕಡ್ಡಿ, ಹಕ್ಕಿಗಳ ಗರಿ ಅಥವಾ ಇಂಡೋನೇಷಿಯಾದಲ್ಲಿ ದೊರಕುವ ಜವಿ ಅಥವಾ ಹಂಡಮ್ ಎಂದು ಕರೆಯಲ್ಪಡುವ ವಿಶೇಷ ರೀತಿಯ ಮರದ ಬಿಸಿಲುಗಳಿಂದ ತಯಾರಿಸಲಾಗುತ್ತದೆ.

ದಿ ನ್ಯಾಶನಲ್ ಕೌನ್ಸಿಲ್ ಫಾರ್ ಪ್ರಮೋಶನ್ ಆಫ್ ಉರ್ದು ಲ್ಯಾಂಗ್ವೇಜ್ ಎಂಬ ಸಂಸ್ಥೆಯು, ಬೆಂಗಳೂರು ಸೇರಿದಂತೆ 60 ಕೇಂದ್ರಗಳಲ್ಲಿ ಭಾರತದಲ್ಲಿ ಕಾಲಿಗ್ರಾಫರ್‌ಗಳಿಗೆ ತರಬೇತಿ ನೀಡುತ್ತಿದೆ. ಈ ಸಂಸ್ಥೆಯು ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯವೆಸಗುತ್ತದೆ.

Writer - ಎಮ್.ಎ.ಸಿರಾಜ್

contributor

Editor - ಎಮ್.ಎ.ಸಿರಾಜ್

contributor

Similar News

ಜಗದಗಲ
ಜಗ ದಗಲ