×
Ad

ಗಾಝಾ: ಹಮಸ್ ನೆಲೆಯ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ

Update: 2017-07-24 22:14 IST

ಜೆರುಸಲೇಂ,ಜು.24; ಇಲ್ಲಿನ ಪವಿತ್ರ ಅಲ್‌ಅಕ್ಸಾ ಮಸೀದಿಯ ಪ್ರವೇಶಕ್ಕೆ ಇಸ್ರೇಲ್ ನಿರ್ಬಂಧಗಳನ್ನು ವಿಧಿಸಿರುವ ಬೆನ್ನಲ್ಲೇ, ಇಸ್ರೇಲಿ ಸೇನೆಯು ಸೋಮವಾರ ಗಡಿಯಿಂದ ಗಾಝಾ ಪಟ್ಟಿ ಪ್ರದೇಶದಲ್ಲಿರುವ ಹಮಸ್ ಹೋರಾಟಗಾರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

 ‘‘ ಇಸ್ರೇಲಿ ಟ್ಯಾಂಕೊಂದು ಇಂದು ಮುಂಜಾನೆ ದಕ್ಷಿಣ ಗಾಝಾ ಪಟ್ಟಿಯಲ್ಲಿರುವ ಹಮಸ್ ಗುಂಪಿಗೆ ಸೇರಿದ ಠಾಣೆಯನ್ನು ಗುರಿಯಿರಿಸಿ ಕ್ಷಿಪಣಿ ದಾಳಿ ನಡೆಸಿದೆ ’’ ಎಂದು ಇಸ್ರೇಲಿ ಸೇನೆಯ ಹೇಳಿಕೆ ತಿಳಿಸಿದೆ.

ಈ ಮಧ್ಯೆ ಹಮಸ್ ಸಂಘಟನೆ ಕೂಡಾ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ದೃಢಪಡಿಸಿದೆ. ದಕ್ಷಿಣ ಗಾಝಾದಲ್ಲಿರುವ ಖಾನ್ ಯೂನಿಸ್‌ನಲ್ಲಿರುವ ತನ್ನ ಸೇನಾದಳ ಕಾವಲು ಠಾಣೆಯ ಮೇಲೆ ಇಸ್ರೇಲ್ ಐದು ಕ್ಷಿಪಣಿ ದಾಳಿ ನಡೆಸಿರುವುದಾಗಿ ಅದು ಹೇಳಿದೆ.

ಮಧ್ಯ ಗಾಝಾದಲ್ಲಿರುವ ಹೊಲಗಳ ಮೇಲೂ ಇಸ್ರೇಲ್ ಪ್ರತ್ಯೇಕ ಕ್ಷಿಪಣಿ ದಾಳಿಗಳನ್ನು ನಡೆಸಿದೆಯೆಂದು ಹಮಸ್ ತಿಳಿಸಿದ್ದು, ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ತಿಳಿಸಿದೆ.

ಇಸ್ರೇಲ್ ಸೇನೆಯು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಗಾಝಾ ಪಟ್ಟಿಯಿಂದ ಇಸ್ರೇಲ್ ನೆಲದ ಮೇಲೆ ರಾಕೆಟ್ ದಾಳಿ ನಡೆದ ಕೆಲವು ತಾಸುಗಳ ಬಳಿಕ ತಾನು ಕ್ಷಿಪಣಿಗಳನ್ನು ಎಸೆದಿರುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News