ಲಾಹೋರ್: ಮಾರುಕಟ್ಟೆಯಲ್ಲಿ ಆತ್ಮಹತ್ಯಾದಾಳಿ; 20 ಮೃತ್ಯು

Update: 2017-07-24 16:51 GMT

ಲಾಹೋರ್,ಜು.24: ಪಾಕಿಸ್ತಾನದಲ್ಲಿಯೂ ಸೋಮವಾರ ರಕ್ತಪಾತ ನಡೆಸಿರುವ ಭಯೋತ್ಪಾದಕರು, ಲಾಹೋರ್ ನಗರದ ಮಾರುಕಟ್ಟೆಯೊಂದರಲ್ಲಿ ಬಾಂಬ್ ಸ್ಫೋಟಿಸಿ ಕನಿಷ್ಠ 20 ಮಂದಿಯನ್ನು ಹತ್ಯೆಗೈದಿದ್ದಾರೆ.

 ಅರ್ಫಾ ಕರೀಂ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್ ಸಮೀಪದ ಕೋಟ್‌ಲಾಖ್‌ಪತ್ ತರಕಾರಿ ಮಾರುಕಟ್ಟೆಯಲ್ಲಿ ಈ ಭೀಕರ ಸ್ಫೋಟ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸ್ಫೋಟಕ್ಕೆ ಬಲಿಯಾದ ಇಪ್ಪತ್ತು ಮಂದಿಯಲ್ಲಿ ಮೂವರು ಪೊಲೀಸರು ಹಾಗೂ ಓರ್ವ ಮಹಿಳೆ ಕೂಡಾ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

  ಇದೊಂದು ಆತ್ಮಹತ್ಯಾ ದಾಳಿಯೆಂದು ಲಾಹೋರ್‌ನ ಮುಖ್ಯ ಪೊಲೀಸ್ ವರಿಷ್ಠರ ಕಾರ್ಯಾಲಯವು ತಿಳಿಸಿದೆ. ಮಾರುಕಟ್ಟೆಯ ಪ್ರವೇಶದ್ವಾರದಲ್ಲಿ ಬಾಂಬ್ ಸ್ಫೋಟಿಸಿರುವುದಾಗಿ ಅದು ತಿಳಿಸಿದೆ.

   ಘಟನೆಯ ಬಳಿಕ ಕಾನೂನು ಅನುಷ್ಠಾನ ಸಂಸ್ಥೆಗಳ ಸಿಬ್ಬಂದಿ ಇಡೀ ಪ್ರದೇಶವನ್ನು ಸುತ್ತುವರಿದಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಪಾಕ್ ಸೇನೆಯ ತುಕಡಿಯೊಂದು ಸ್ಥಳಕ್ಕೆ ಧಾವಿಸಿದೆ. ಸ್ಫೋಟ ನಡೆದ ಸಂದರ್ಭದಲ್ಲಿ ನಗರಾಡಳಿತದ ಭೂಅತಿಕ್ರಮಣ ವಿರೋಧಿ ಇಲಾಖೆಯು ಭೂಮಾಫಿಯಾದ ವಿರುದ್ಧ ಕಾರ್ಯಾಚರಣೆ ನಡೆಸುತಿತ್ತೆನ್ನಲಾಗಿದೆ.

  ದಾಳಿ ನಡೆದ ಸ್ಥಲವು ನಗರದ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲೊಂದೆಂದು ಪರಿಗಣಿಸಲಾಗಿತ್ತು. ಪಂಜಾಬ್ ಮುಖ್ಯಮಂತ್ರಿ ಹಾಗೂ ಪ್ರಧಾನಿ ನವಾಝ್ ಶರೀಫ್ ಅವರ ಸಹೋದರನಾದ ಶಹಬಾಝ್ ಶರೀಫ್ ಅವರ ಕಚೇರಿಯಿಂದ 100 ಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ.

ಪ್ರಧಾನಿ ನವಾಝ್ ಶರೀಫ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News