ಸ್ತ್ರೀಯರ ಬಗ್ಗೆ ತಿಲಕರ ನಿಲುವೇನಿತ್ತು?!

Update: 2017-07-26 06:19 GMT

‘‘ರಾಜಕೀಯಕ್ಕಿಂತ ಮೊದಲು ಸಾಮಾಜಿಕ ಬದಲಾವಣೆಯಾಗ ಬೇಕಾಗಿಲ್ಲ ಎನ್ನುವುದನ್ನು ಇತಿಹಾಸ ತೋರಿಸುತ್ತದೆ. ಶಿವಾಜಿಯು ಮರಾಠಾ ರಾಜ್ಯ ಸ್ಥಾಪಿಸಿದ್ದಾಗಲಿ ಅಥವಾ ಪೇಶ್ವೆಗಳು ಕೇಸರಿ ಧ್ವಜ ಹಾರಿಸಿದ್ದಾಗಲಿ ಶಾಲೆಗೆ ಹೋಗಿ ನಾಲ್ಕನೆ ತರಗತಿಯವರೆಗೆ ಕಲಿತ ಹುಡುಗಿಯರ ಸಹಾಯದಿಂದಲ್ಲ.’’ (ಕೇಸರಿ, 2 ಮಾರ್ಚ್ 1886)

ಪ್ರತಿಯೊಬ್ಬ ಮಹಾರಾಷ್ಟ್ರೀಯನಿಗೂ ತಿಲಕರ ಕುರಿತ ಒಂದು ಕತೆ ಗೊತ್ತಿರುತ್ತದೆ-ಅದು ಅಲ್ಲಿನ ಶಾಲಾ ಪಠ್ಯ ಪುಸ್ತಕದಲ್ಲಿರುವುದರಿಂದ; ತನ್ನ ಶಾಲಾ ದಿನಗಳಲ್ಲಿ ಒಮ್ಮೆ ನೆಲದ ಮೇಲೆ ಬಿದ್ದಿದ್ದ ನೆಲಗಡಲೆ ಸಿಪ್ಪೆಯನ್ನು ತೆಗೆಯುವಂತೆ ತಿಲಕರ ಶಿಕ್ಷಕರು ಹೇಳಿದಾಗ ‘‘ನಾನು ಅವುಗಳನ್ನು ಎಸೆಯಲಿಲ್ಲ; ಮತ್ತೆ ನಾನ್ಯಾಕೆ ತೆಗೆಯಬೇಕು?’’ ಎಂದು ವಾದಿಸಿ ಆ ಸಿಪ್ಪೆಯನ್ನು ತೆಗೆಯಲು ನಿರಾಕರಿಸಿದರು. ಬೇಸರದ ವಿಷಯವೆಂದರೆ, ಅವರು ಭವಿಷ್ಯದ ತಲೆಮಾರುಗಳಿಗಾಗಿ ಸಾಕಷ್ಟು ಸಿಪ್ಪೆಗಳನ್ನು ಚೆಲ್ಲಿ ಹೋಗಿದ್ದಾರೆ ಮತ್ತು ಅವುಗಳನ್ನು ತೆಗೆಯಲು ನಿರಾಕರಿಸುವ ಆ ಲಕ್ಸುರಿ ನಮಗಿಲ್ಲ.

ಇಂದಿನ ಯುವಜನಾಂಗಕ್ಕೆ ಅವರನ್ನು ತಲುಪಿಸುವುದಕ್ಕಾಗಿ ಇವತ್ತು ತಿಲಕರನ್ನು ರಕ್ಷಿಸಲಾಗುತ್ತಿದೆ; ಸೆನ್ಸಾರ್ ಮಾಡಲಾಗುತ್ತಿದೆ, ಮತ್ತು ಅಲಂಕರಿಸಲಾಗುತ್ತಿದೆ; ಅವರ ಚಿಂತನೆಯಲ್ಲಿದ್ದ ದೋಷಗಳನ್ನು ಮುಚ್ಚಿಡಲಾಗುತ್ತಿದೆ. ಮಹಾರಾಷ್ಟ್ರದ ನಾಗರಿಕ ಸೇವಾ ಹಾಗೂ ರಾಜ್ಯ ಸೇವಾ ಪರೀಕ್ಷೆಗಳಿಗೆ ಅನಧಿಕೃತವಾಗಿ ಪಠ್ಯ ಪುಸ್ತಕಗಳೆಂದು ಪರಿಗಣಿಸಲಾಗಿರುವ ಬಿಪನ್ ಚಂದ್ರರವರ ಪುಸ್ತಕಗಳಲ್ಲಿ ತಿಲಕರನ್ನು ಚಿತ್ರಿಸಿರುವ ರೀತಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗಿ ಕಾಣುತ್ತದೆ. ಪ್ರಚಾರದ ಕಾರಣಕ್ಕಾಗಿ ಕೆಲವು ಮುಖ್ಯ ಭಾಗಗಳನ್ನು ತೋರಿಸದ, ತಿಲಕರ ಕುರಿತಾದ ಇತ್ತೀಚಿನ ಒಂದು ಮರಾಠಿ ಚಿತ್ರದಲ್ಲೂ ಇದು ಕಾಣಿಸುತ್ತದೆ.

ತಿಲಕರ ಕಾಲದಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸುವ ಮತ್ತು ಮಹಿಳೆಯರ ವಿಮೋಚನೆಗಾಗಿ ಹೋರಾಡುವ ಎಲ್ಲ ಸಮಾಜ ಸುಧಾರಕರನ್ನು ರಾಷ್ಟ್ರವಿರೋಧಿಗಳು ಅಥವಾ ದೇಶದ್ರೋಹಿಗಳು ಎಂದು ಪರಿಗಣಿಸಲಾಗುತ್ತಿತ್ತು. ಇಂದು ಭಾರತದಲ್ಲಿ ಬ್ರಿಟಿಷರಿಲ್ಲ; ಆದರೆ ನಮ್ಮ ಸಾಮಾಜಿಕ ಚೌಕಟ್ಟಿನ ಅನಿಷ್ಟಗಳು ಇನ್ನೂ ಮುಂದುವರಿದಿವೆ. ತಿಲಕರು ಮತ್ತು ಅವರ ಹಾಗೆ ಯೋಚಿಸುತ್ತಿ ದ್ದವರು ಮಾಡಿರುವ ಸಾಮಾಜಿಕ ಹಾನಿಗಳನ್ನು ಇನ್ನೂ ಉಪೇಕ್ಷಿಸಬೇಕೆಂದು ನೀವು ಹೇಳುವುದಾದರೆ, ಕ್ಷಮಿಸಿ; ನಾವು ಇದನ್ನು ಮಾಡಲು ಸಿದ್ಧರಿಲ್ಲ.
ತಿಲಕರದ್ದೇ ಆದ, ‘ದೇಶಭಕ್ತಿ’ ಉದ್ದೀಪಿಸುವ ‘ಮರಾಠಾ’ ಮತ್ತು ‘ಕೇಸರಿ’ ಪತ್ರಿಕೆಗಳಲ್ಲಿ, ಅವರ ಪುಸ್ತಕಗಳಲ್ಲಿ, ಮತ್ತು ಭಾಷ ಣಗಳಲ್ಲಿ ಅವರೇ ಬರೆದ, ಅಡಿದ ಮಾತುಗಳಲ್ಲಿ ಕೆಲವು ಇಲ್ಲಿವೆ:

ಮಹಿಳೆಯರ ಬಗ್ಗೆ ತಿಲಕರ ಅಭಿಪ್ರಾಯಗಳು

‘‘ಇನ್ನು ಶತಮಾನಗಳವರೆಗೆ ಒರಿಜಿನಲ್ ಸಾಹಿತ್ಯದಲ್ಲಿ ನಮ್ಮ ಮಹಿಳೆಯರು ಏನನ್ನಾದರೂ ಬರೆಯುತ್ತಾರೆ, ಸಾಧಿಸುತ್ತಾರೆ ಎಂದು ನಿಮಗೆ ಗಂಭೀರವಾಗಿ ಅನ್ನಿಸುತ್ತದೆಯೇ? ... ಮಾನವನ ಜ್ಞಾನರಾಶಿಗೆ ಕೊಡುಗೆ ನೀಡಿದ ಅಥವಾ ಮಾನವನ ಚಿಂತನೆಯನ್ನು ತಮ್ಮ ಮೆದುಳಿನ ಉತ್ಪನ್ನದಿಂದ ಬದಲಿಸಿದ ಕೆಲವೇ ಕೆಲವು ಹೆಂಗಸರ ಹೆಸರು ನನಗೆ ಗೊತ್ತು.’’

ಮಹಿಳೆಯರು ಸಾಹಿತ್ಯಕ್ಕೆ ಸ್ವತಂತ್ರವಾಗಿ ಕೊಡುಗೆ ನೀಡಬಲ್ಲರೆಂದು ಸಮಾಜ ಸುಧಾರಕರು ವಾದಿಸಿದಾಗ ತಿಲಕರು ಹೇಳಿದ ಮಾತುಗಳು ಹೀಗಿವೆ:

‘‘ಅಂತಹ ಕನಸುಗಳು ನಿಜವಾಗಲಿ ಅಥವಾ ಆಗದಿರಲಿ, ಮಾನವ ಸ್ವಭಾವದಲ್ಲೇನೂ ಬದಲಾವಣೆಯಾಗುವುದಿಲ್ಲ... ಒಬ್ಬಳು ತಾಯಿಗೆ ತನ್ನ ಮೊದಲ ಮಗುವಿನ ಬಗ್ಗೆ ಇರುವ ಸಂತೋಷಕ್ಕೆ, ಆನಂದಕ್ಕೆ ಸಮನಾದದ್ದು ಇನ್ನೊಂದಿಲ್ಲ; ಹಾಗೆಯೇ ಆ ಮಗುವನ್ನು ಕಳೆದುಕೊಂಡಾಗ ಅವಳಿಗಾಗುವ ತೀವ್ರವಾದ ದುಃಖಕ್ಕೆ ಸಮನಾದ ದುಃಖವಿಲ್ಲ... ನಮ್ಮ ಶಾಸ್ತ್ರಗಳು ಹಾಗೂ ಸಂಪ್ರದಾಯಗಳು ಹುಡುಗಿಯೊಬ್ಬಳು ವೈವಾಹಿಕ ಜೀವನಕ್ಕೆ ಅರ್ಹಳಾಗಬೇಕು ಎನ್ನುತ್ತವೆ ಮತ್ತು ನಮ್ಮ ಶಾಲೆಗಳು (ಈ ನಿಟ್ಟಿನಲ್ಲಿ) ಅವಳಿಗೆ ಅವಶ್ಯಕವಾದ ತರಬೇತಿ ನೀಡಲಾರವಾದರೆ ಅವುಗಳು ನಿರುಪಯೋಗಿಗಿಂತಲೂ ಕಳಪೆ.’’ (ಮರಾಠಾ, 13 ನವೆಂಬರ್ 1885, ಪು.3 ‘ಫಿಮೇಲ್ ಎಜುಕೇಶನ್’)

‘‘ತುರ್ತಾಗಿ ಏನು ಬೇಕೆಂದರೆ ಹುಡುಗಿಯರಿಗೆ ಗೃಹ ಜೀವನದಲ್ಲಿ ಉಪಯೋಗ ವಾಗುವಂತಹ ಜ್ಞಾನ ನೀಡುವ ಪ್ರಾಥಮಿಕ ಶಾಲೆಗಳು. ಇಂಗ್ಲಿಷ್ ಕಲಿಸಿದರೆ ಹುಡುಗಿಯರು ಅವರ ಗಂಡಂದಿರ ಪಾಲಿಗೆ ಒಂದು ದೊಡ್ಡ ಹೊರೆಯಾಗುತ್ತಾರೆ.’’ (ಮರಾಠಾ, 22 ಮಾರ್ಚ್ 1891, ಪು.2,3 ‘ವಾಟ್ ಶಲ್ ವಿ ಡು ನೆಕ್ಸ್ಟ್’’)

ಸ್ತ್ರೀ ಶಿಕ್ಷಣಕ್ಕೆ ವಿರೋಧ

‘‘ರಾಜಕೀಯಕ್ಕಿಂತ ಮೊದಲು ಸಾಮಾಜಿಕ ಬದಲಾವಣೆಯಾಗ ಬೇಕಾಗಿಲ್ಲ ಎನ್ನುವುದನ್ನು ಇತಿಹಾಸ ತೋರಿಸುತ್ತದೆ. ಶಿವಾಜಿಯು ಮರಾಠಾ ರಾಜ್ಯ ಸ್ಥಾಪಿಸಿದ್ದಾಗಲಿ ಅಥವಾ ಪೇಶ್ವೆಗಳು ಕೇಸರಿ ಧ್ವಜ ಹಾರಿಸಿದ್ದಾಗಲಿ ಶಾಲೆಗೆ ಹೋಗಿ ನಾಲ್ಕನೆ ತರಗತಿಯವರೆಗೆ ಕಲಿತ ಹುಡುಗಿಯರ ಸಹಾಯದಿಂದಲ್ಲ.’’ (ಕೇಸರಿ, 2 ಮಾರ್ಚ್ 1886)

ಇಂದು ಕಾಣುತ್ತಿರುವ ವೈವಾಹಿಕ ಅತ್ಯಾಚಾರ ವಿವಾದದ ಮಧ್ಯೆ, ಇದರ ಮೂಲವನ್ನು ನಾವು ತಿಲಕರ ಸಿದ್ಧಾಂತದಲ್ಲಿ ನೋಡಬಹುದು:

‘‘ಹಿಂದೂ ಧರ್ಮದ ಶಿಸ್ತು ಎಷ್ಟು ಕಟ್ಟುನಿಟ್ಟಿನದ್ದೆಂದರೆ, ಕ್ರೂರವಾಗಿ ನಡೆಸಿಕೊಂಡಾಗಲೂ ಹೆಂಡಂದಿರು ತಮ್ಮ ಗಂಡಂದಿರ ಜೊತೆಗೆ ಏಗುತ್ತಲೇ ಇರುತ್ತಾರೆ. ಯಾಕೆಂದರೆ ಹೀಗೆ ಇರುವುದು ತಮ್ಮ ಕರ್ತವ್ಯವೆಂದು ಅವರು ಪರಿಗಣಿಸುತ್ತಾರೆ... (ಸುಧೀರ್ ಚಂದ್ರ ‘‘ಹೂಸ್ ಲಾಸ್?’’, ಪು. 190-197)

‘‘ಶಿಕ್ಷಣದ ಗುರಿಯೇನು? ನಮ್ಮ ಹುಡುಗಿಯರಿಗೆ ಕೊಡುವ ಶಿಕ್ಷಣದಿಂದ ಇಂಗ್ಲಿಷ್ ಮಾದರಿಯನ್ನು ಅನುಸರಿಸಿ ಹಿಂದೂ ಕುಟುಂಬದ ಸ್ವರೂಪವನ್ನು ಬದಲಿಸುವುದಾದರೆ ನಾವು ಹೇಳುವುದಿಷ್ಟೆ: ಇದು ಅತ್ಯಂತ ಅಪಾಯಕಾರಿ ಎಂದು ನಾವು ಇದನ್ನು ಅತ್ಯುಗ್ರವಾಗಿ ಖಂಡಿಸುತ್ತೇವೆ...(ಉಮಾ ಚಕ್ರವರ್ತಿ, ಜಂಡರಿಂಗ್ ಕಾಸ್ಟ್: ತ್ರೂ ದಿ ಫೆಮಿನಿಸ್ಟ್ ಲೆನ್ಸ್, ಕೋಲ್ಕತಾ, 2003 ಪು. 131)

ಗೃಹ ಹಿಂಸೆ

 ಒಪ್ಪಿಗೆಯ ವಯಸ್ಸನ್ನು 10 ರಿಂದ 12ಕ್ಕೆ ಏರಿಸುವ ‘ಒಪ್ಪಿಗೆಯ ವಯಸ್ಸು ಮಸೂದೆ’ಯನ್ನು, ಹುಡುಗಿಯೊಬ್ಬಳು ಪುಷ್ಪವತಿಯಾದ ಕೂಡಲೆ ಅವಳು ಮದುವೆಗೆ ಅರ್ಹಳು ಎನ್ನುವ ಶಾಸ್ತ್ರಗಳ ವಿರುದ್ಧ ಎಂಬ ಕಾರಣಕ್ಕಾಗಿ, ಆ ಮಸೂದೆಯನ್ನು ವಿರೋಧಿಸಿ ತಿಲಕರು ಹೇಳಿದ ಮಾತುಗಳಿವು. ‘‘...ಮಸೂದೆಯು ಕಾನೂನಾಗಿ ಸ್ವೀಕೃತವಾದರೆ ಅದು ನಮ್ಮ ಧಾರ್ಮಿಕ ಆಚರಣೆಯಲ್ಲಿ ಹಸ್ತಕ್ಷೇಪ ನಡೆಸಿದಂತಾಗುತ್ತದೆ... ಯಾವ ವಯಸ್ಸಿನಲ್ಲಿ ಹೆಣ್ಣು ವಿವಾಹಯೋಗ್ಯವೆಂದು ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿವೆ. ದೈನಂದಿನ ಆಚರಣೆಯಲ್ಲಿ ಇದನ್ನು ಆಚರಿಸುತ್ತಿರುವಾಗ ಮಸೂದೆಯು ಈ ವಿಷಯದಲ್ಲಿ ಹಸ್ತಕ್ಷೇಪ ನಡೆಸುವಂತಿಲ್ಲ.’’ (ಸಮಗ್ರ ಲೋಕಮಾನ್ಯ ತಿಲಕ್: ಟವರ್ಡ್ಸ್ ಇಂಡಿಪೆಂಡೆನ್ಸ್, ಕೇಸರಿ ಪ್ರಕಾಶನ್, ಪುಣೆ, 1975, ಸಂಪುಟ 7, ಪು.972).

ಆರ್ಯರ ಶ್ರೇಷ್ಠತೆ ವಿಚಾರಗಳು

ಹಿಟ್ಲರ್‌ನಿಗೆ ಆಗಿನ್ನೂ 5 ವರ್ಷ ಆಗಿರಲಿಲ್ಲ. ಆಗಲೇ ತಿಲಕರು ಆರ್ಯರು ಶ್ರೇಷ್ಠರು ಎಂದು ವಾದಿಸಿದ್ದರು. ಅವರು ಆರ್ಕ್‌ಟಿಕ್ ಪ್ರದೇಶದಿಂದ ಬಂದ ಮೇಲ್ಜಾತಿಯವರು, ಮತ್ತು ಆಳಲು ಸಮರ್ಥರಾದ ಶ್ರೇಷ್ಠ ಜನಾಂಗದವರು; ಅಲ್ಲದೆ ಋಗ್ವೇದ ಮೊದಲು ಆರ್ಕ್‌ಟಿಕ್ ಪ್ರದೇಶದಲ್ಲೇ ಬರೆಯಲ್ಪಟ್ಟಿತು ಇತ್ಯಾದಿಯಾಗಿ ತಿಲಕರು ಬರೆದ ಪುಸ್ತಕ ಈಗಲೂ ಪೂನಾದ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿದೆ. (‘‘ದಿ ಆರ್ಕ್‌ಟಿಕ್ ಹೋಮ್ ಇನ್ ದಿ ವೇದಾಸ್’’ ಮೊದಲ ಮುದ್ರಣ 1903, ತಿಲಕ್ ಬ್ರಸ್, ಪೂನಾ 1970, ಪು.9) ಇದೇ ರೀತಿಯಾಗಿ ಶೂದ್ರರು ಮತ್ತು ಅತಿ ಶೂದ್ರರಿಗೆ ಶಿಕ್ಷಣ ನೀಡುವುದಕ್ಕೆ ತಿಲಕರು ವಿರೋಧಿಯಾಗಿದ್ದರು. ಜ್ಯೋತಿ ಭಾ ಫುಲೆಯನ್ನು ಟೀಕಿಸಿದ್ದರು. ಶಿಕ್ಷಣದಲ್ಲಿ ಧಾರ್ಮಿಕ ಶಿಕ್ಷಣ ನೀಡಬೇಕೆಂದು ವಾದಿಸಿದ್ದರು.

ಕೃಪೆ: counterview.org

Writer - ಗೌರವ್ ಸೋಮವಂಶಿ

contributor

Editor - ಗೌರವ್ ಸೋಮವಂಶಿ

contributor

Similar News

ಜಗದಗಲ
ಜಗ ದಗಲ