1962ರ ಭಾರತ-ಚೀನಾ ಯುದ್ಧ ಮತ್ತು ಅದರ ರಾಜಕೀಯ ಪರಿಣಾಮಗಳು

Update: 2017-07-26 06:57 GMT

ಅಮಿತ್‌ದಾಸ್ ಗುಪ್ತ ಮತ್ತು ಲಾರೆನ್ಸ್‌ಲುಥಿ ಬರೆದಿರುವ ಪುಸ್ತಕ ‘‘ದಿ ಸೈನೊ-ಇಂಡಿಯನ್ ವಾರ್ ಆಫ್ 1962: ನ್ಯೂ ಪರ್‌ಸ್ಪೆಕ್ಟಿವ್ಸ್’’ ಅತ್ಯಂತ ಸಕಾಲಿಕ ಮತ್ತು ಎರಡು ಕಾರಣಗಳಿಗಾಗಿ ತುಂಬ ಉಪಯೋಗಕಾರಿ. ಒಂದನೆಯದಾಗಿ, ಕಳೆದೆರಡು ದಶಕಗಳಲ್ಲಿ ಲಭ್ಯವಾಗಿರುವ ಪ್ರಾಚ್ಯ ದಾಖಲೆ ಹಾಗೂ ಇತರ ಸಾಮಗ್ರಿಗಳನ್ನು ಬಳಸಿಕೊಂಡು ಅದು ಬಹುಪಾಲು ಉಪೇಕ್ಷೆಗೊಳ ಗಾಗಿರುವ ವಿಷಯವೊಂದನ್ನು ಕೈಗೆತ್ತಿಕೊಳ್ಳುತ್ತದೆ. ಎರಡನೆಯ ದಾಗಿ, ಮಿಲಿಟರಿ ಅರ್ಥದಲ್ಲಿ ಅಷ್ಟೊಂದು ಕಿರಿದಾದ ಅವಧಿಯ ಒಂದು ಸೀಮಿತ ಘರ್ಷಣೆ ಹೇಗೆ ಅಷ್ಟೊಂದು ಭಾರೀ ರಾಜಕೀಯ ಹಾಗೂ ಇತರ ಪರಿಣಾಮಗಳನ್ನುಂಟು ಮಾಡಿತು? ಎನ್ನುವುದನ್ನು ಅರ್ಥಮಾಡಿಕೊಳ್ಳಲು ಅದು ನಮಗೆ ನೆರವಾಗುತ್ತದೆ.

ವಸ್ತುನಿಷ್ಠವಾಗಿ ಯುದ್ಧದ ಅಂತಾರಾಷ್ಟ್ರೀಯ ಸಂದರ್ಭ; ಮತ್ತು ಯುದ್ಧದಲ್ಲಿ ಸೂಪರ್ ಪವರ್‌ಗಳಷ್ಟೆ ಅಲ್ಲ, ಇತರ ಅಲಿಪ್ತ ರಾಷ್ಟ್ರಗಳು ವಹಿಸಿದ ಪಾತ್ರವನ್ನು ವಿಶ್ಲೇಷಿಸುವುದು ಈ ಪುಸ್ತಕದ ಅತ್ಯುತ್ತಮ ಅಂಶವಾಗಿದೆ. ರಶ್ಯ ಮತ್ತು ಯುಗೋಸ್ಲಾವಿಯಾದ ಪ್ರಾಚ್ಯ ವಸ್ತುಸಂಗ್ರಹಾಲಯಗಳಲ್ಲಿ ಲಭ್ಯವಾದ ಆಕರ ಸಾಮಗ್ರಿಗಳನ್ನು ಆಧರಿಸಿ ಬರೆಯಲಾದ ಅಧ್ಯಾಯ ಗಳು ಓದುಗರನ್ನು ಆಕರ್ಷಿಸುತ್ತದೆ: ಭಾರತೀಯ ರಾಜತಾಂತ್ರಿಕ ನೀತಿ, ಪಾಶ್ಚಾತ್ಯ ದೇಶಗಳಿಂದ ಮಿಲಿಟರಿ ನೆರವು ಪಡೆಯುವಂತೆ ಒತ್ತಡ ಹೇರಲ್ಪಟ್ಟಾಗ ಅಲಿಪ್ತವಾಗಿ ಉಳಿಯಲು ನೆಹರೂ ಸರಕಾರ ಮಾಡಿದ ಪ್ರಯತ್ನ, ಭಾರತಕ್ಕೆ ಮಿಗ್-21 ಯುದ್ಧ ವಿಮಾನಗಳ ಪೂರೈಕೆಯನ್ನು ಮುಂದುವರಿಸಲು ನಿರ್ಧರಿಸುವ ಮೊದಲು ರಶ್ಯಾ ತೋರಿದ ಹಿಂಜರಿಕೆ ಮತ್ತು ಯುದ್ಧ ನಡೆಯುವ ಹಿಂದಿನ ವರ್ಷಗಳಲ್ಲಿ ‘ಅಲಿಪ್ತರಲ್ಲಿ ಅಲಿಪ್ತವಾಗಿ’ ಇದ್ದು ಭಾರತ ಎಲ್ಲರಿಂದ ದೂರವಾಗಿ ಉಳಿಯಿತು ಎಂಬ ಬಹುಪಾಲು ಸಾರ್ವಕಾಲಿಕ ನಂಬಿಕೆ-ಇವು ಪುಸ್ತಕದಲ್ಲಿ ಮುಖ್ಯವಾಗಿ ಚರ್ಚಿತವಾಗಿರುವ ವಿಷಯಗಳು.
ಭಾರತದಲ್ಲಿ ಆದ ರಾಜಕೀಯ ಪರಿಣಾಮಗಳನ್ನು ಚರ್ಚಿಸುವ ಪುಸ್ತಕದ ಮೂರನೆ ಭಾಗವು ಅದರ ಇನ್ನೊಂದು ಮುಖ್ಯ ಅಂಶವಾಗಿದೆ. ಸಂವಿಧಾನದಲ್ಲಿ ಈಗ ನಾವು ಸಾಮಾನ್ಯವೆಂದು ಪರಿಗಣಿಸುವ ತುರ್ತು ನಿಯಮಗಳ ನಿರ್ದೇಶಗಳ ಸಾಂಸ್ಥೀಕರಣ, ಭಾರತದಲ್ಲಿ ಕಮ್ಯುನಿಸ್ಟ್ ಚಳವಳಿಯ ಮೇಲಾದ ಪರಿಣಾಮ, ಭಾರತದಲ್ಲಿ ದೀರ್ಘಾವಧಿಯಿಂದ ವಾಸಿಸುತ್ತ ಬಂದಿದ್ದ ಚೀನಾ ಮೂಲದ ನಿವಾಸಿಗಳನ್ನು ಅವಮಾನಕಾರಿಯಾಗಿ ಭಾರತ ನಡೆಸಿಕೊಂಡ ರೀತಿ-ಇವುಗಳು ನಾವು ಗಮನಿಸಲೇಬೇಕಾದ ವಿಷಯಗಳಾಗಿವೆ.
 ಜತೆಗೆ, ಬಹಳ ಸಮಯದಿಂದ ಉಪೇಕ್ಷೆಗೊಳಗಾಗಿ ಚರ್ಚಿತವಾಗದೆ ಇರುವ ಒಂದು ವಿಷಯವೆಂದರೆ ಚೀನಾದ ದೇಶೀ ಹಾಗೂ ವಿದೇಶ ನೀತಿಯ ಮೇಲೆ 1962ರ ಯುದ್ಧ ಬೀರಿದ ಪರಿಣಾಮ. ಚೀನಾ ತನ್ನ ದೇಶದ ಮೇಲೆ ಯುದ್ಧದಿಂದ ಯಾವ ಪರಿಣಾಮವೂ ಆಗಲಿಲ್ಲವೆಂಬ ನಿಲುವಿಗೆ ಅಂಟಿಕೊಂಡಿತ್ತು. ಆದರೆ ಇದು ಸತ್ಯವನ್ನು ಮರೆಮಾಚುವ ಚೀನಾದ ಒಂದು ರಾಜಕೀಯ ಪ್ರಯತ್ನ ಮತ್ತು ಆಂತರಿಕ ಚೀನೀ ರಾಜಕಾರಣಕ್ಕಾಗಿ ಚೀನಾ 1962ರಲ್ಲಿ ಭಾರತದ ವಿರುದ್ಧ ಯುದ್ಧ ಮಾಡುವ ತನ್ನ ನಿರ್ಧಾರದ ಮಹತ್ವವನ್ನು ಮರೆಮಾಚಿ, ನಂತರ ನಡೆದ ಸಾಂಸ್ಕೃತಿಕ ಶಾಂತಿಯನ್ನು ದೊಡ್ಡದಾಗಿ ಬಿಂಬಿಸುವ ಒಂದು ಹುನ್ನಾರ. ಗ್ರೇಟ್ ಲೀಫ್ ಫಾರ್ವರ್ಡ್ (ಜಿಎಲ್‌ಎಫ್)ನ ಬಳಿಕ ಚೀನಾದ ನಾಯಕತ್ವದೊಳಗೆಯೇ ಅಧಿಕಾರಕ್ಕಾಗಿ ನಡೆದ ಹೋರಾಟ ವನ್ನು ನಿಭಾಯಿಸಲು 1962ರ ಯುದ್ಧ ಸಾರುವ ತೀರ್ಮಾನ ಅಗತ್ಯವಾಗಿತ್ತು. ಮಾವೋ ಅಧಿಕಾರ ಹಿಡಿದದ್ದು ಮತ್ತು ಲಿಯೂ ಶಾವೊಕಿ ಹಾಗೂ ಡೆಂಗ್ ಕ್ಸಿಯಾವೊಪಿಂಗ್ ವಿರುದ್ಧ ಪ್ರತೀಕಾರ ತೆಗೆದುಕೊಂಡದ್ದು-ಇವೆಲ್ಲದರ ಮೊದಲ ಹೆಜ್ಜೆಯಾಗಿ ಆ ಯುದ್ಧದ ಆವಶ್ಯಕತೆ ಇತ್ತು ಎನ್ನಲಾಗಿದೆ.
ಅಲ್ಲದೆ, ಚೀನಾದ ವಿದೇಶ ನೀತಿಯಲ್ಲಿ ತನ್ನ ತೀವ್ರಗಾಮಿತ್ವ(ರ್ಯಾಡಿಕಲಿಸಂ)ವನ್ನು ತನ್ನ ವಿರೋಧಿಗಳು ಒಪ್ಪಿಕೊಳ್ಳುವಂತೆ ಮಾಡಲು, 1962 ಆಗಸ್ಟ್‌ನಲ್ಲಿ ಮಾವೊ ಭಾರತದ ವಿದೇಶ ನೀತಿ ಮತ್ತು ಯುದ್ಧವನ್ನು ಒಂದು ಮುಖ್ಯ ಸಾಧನವಾಗಿ ಬಳಸಿಕೊಂಡರು. ವಾಂಗ್ ಜಿಯಾಕ್ಸಿಯಾಂಗ್‌ರವರನ್ನು ಪಕ್ಷದ ಅಂತಾರಾಷ್ಟ್ರೀಯ ಸಂಬಂಧ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಿಸಿದರು. ವಾಂಗ್‌ರವರು ರಶ್ಯಾ, ಭಾರತ ಮತ್ತು ಅಮೆರಿಕದ ಜತೆಗಿನ ಸಂಬಂಧದಲ್ಲಿ ನಮನೀಯತೆಯ ಪರವಾಗಿದ್ದರು.
ಮಾವೊರವರ ಮುಂದಿನ ಹೆಜ್ಜೆ ಪಿಎಲ್‌ಎಯನ್ನು ತನ್ನ ನಿಯಂತ್ರಣಕ್ಕೊಳಪಡಿಸುವುದಾಗಿತ್ತು. ಇಲ್ಲಿ ಕೂಡ ಅವರಿಗೆ 1962ರ ಯುದ್ಧ ಪ್ರಯೋಜನಕಾರಿಯಾಗಿತ್ತು. ಮಾವೊರವರಿಗೆ ಭಾರತದ ವಿರುದ್ಧ ಯುದ್ಧ ಸಾರುವುದು ಸಾಧ್ಯವಾಗದೆ ಇರುತ್ತಿದ್ದಲ್ಲಿ ಚೀನಾದ ಸಾಂಸ್ಕೃತಿಕ ಕ್ರಾಂತಿ ಹಾದಿ ತಪ್ಪಬಹುದಿತ್ತು ಅಥವಾ ಅದು ಪಡೆದ ರೂಪವನ್ನು ಪಡೆಯದೆ ಇರಬಹುದಿತ್ತು. ಒಟ್ಟಿನಲ್ಲಿ ಆ ಯುದ್ಧ ಚೀನಾದ ಪಾಲಿಗೆ ಸ್ವದೇಶ ಹಾಗೂ ವಿದೇಶ ನೀತಿಯಲ್ಲಿ ಮಹತ್ವ ಪಡೆದಿತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಯಿದೆ.
1962ರ ಭಾರತ ಚೀನಾ ಯುದ್ಧದಿಂದ ಮಾವೊ ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆದುರುಳಿಸಿದರು. ಆ ಯುದ್ಧದ ಪರಿಣಾಮವಾಗಿ ಅವರ ಹಲವು ರಾಜಕೀಯ ಗುರಿಗಳು ಸಾಧಿಸಲ್ಪಟ್ಟವು. ಭಾರತದೊಂದಿಗೆ ಗಡಿಯಲ್ಲಿ ಪ್ರಾದೇಶಿಕ/ಭೌಗೋಲಿಕ ತಳ್ಳಾಟವನ್ನು ಅದು ನಿಲ್ಲಿಸಿತು; ಅವರು ತನ್ನ ದೇಶದೊಳಗೆ ಉಂಟುಮಾಡಿದ್ದ ಗಂಡಾಂತರಕಾರಿ ಪರಿಸ್ಥಿತಿಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಿತು. ಭಾರತದ ಬೂರ್ಜ್ವಾ ಹಾಗೂ ನೆಹರೂರವರ ಕಿರಿಕಿರಿಯುಂಟುಮಾಡುವ ಸ್ವದೇಶ ಹಾಗೂ ವಿದೇಶ ನೀತಿಗೆ ಅದು ಹಾನಿಯುಂಟುಮಾಡಿತು ಇತ್ಯಾದಿ ಇತ್ಯಾದಿ.. ಎಲ್ಲಕ್ಕಿಂತ ಮುಖ್ಯವಾಗಿ ಅದು, ಅವರ ಕಮ್ಯುನಿಸ್ಟ್ ಪಕ್ಷದ ನಿಯಂತ್ರಣವನ್ನು ಮರಳಿ ಪಡೆಯುವುದರ ಆರಂಭದ ಹೆಜ್ಜೆಯಾಯಿತು.

Writer - ಶಿವಶಂಕರ್ ಮೆನನ್

contributor

Editor - ಶಿವಶಂಕರ್ ಮೆನನ್

contributor

Similar News

ಜಗದಗಲ
ಜಗ ದಗಲ