1962ರ ಭಾರತ-ಚೀನಾ ಯುದ್ಧ ಮತ್ತು ಅದರ ರಾಜಕೀಯ ಪರಿಣಾಮಗಳು

Update: 2017-07-26 18:57 GMT

ಭಾಗ-2

ಯುದ್ಧಮಾಡುವ ತನ್ನ ತೀರ್ಮಾನದ ಪರಿಣಾಮವಾಗಿ ‘ಸದ್ಯೋ ಭವಿಷ್ಯದಲ್ಲಿ ಚೀನಾ-ಭಾರತ ಸಂಬಂಧಗಳು ದುರಸ್ತಿಯಾಗದಷ್ಟು ಹಾನಿಗೊಂಡವು ಮತ್ತು ಎರಡು ಸೂಪರ್ ಪವರ್‌ಗಳು ತಮ್ಮ ಪ್ರಭಾವದಿಂದಾಗಿ ಭವಿಷ್ಯದ ಬೆಳವಣಿಗೆಗಳ ಸೂತ್ರಧಾರಿಗಳಾದವು’ ಎನ್ನುವುದು ಮಾತ್ರ ಮಾವೊರಿಗೆ ಗೊತ್ತಾಗಲಿಲ್ಲ. ಎರಡು ಸೂಪರ್ ಪವರ್‌ಗಳ ವಿರುದ್ಧ ಸೆಟೆದು ನಿಲ್ಲುವ ವೇಳೆ ಈ ಎರಡೂ ಪರಿಣಾಮಗಳು ಕೂಡ ಚೀನಾದ ಹಿತಾಸಕ್ತಿಗೆ ಅನುಕೂಲಕರವಾಗಿರಲಿಲ್ಲ. ಮಾವೊ ಅವರ ಸ್ವದೇಶಿ ಕಾರ್ಯಸೂಚಿ ಅಂತಾರಾಷ್ಟ್ರೀಯ ಅಥವಾ ವಿದೇಶ ನೀತಿ ಪರಿಗಣನೆಗಳನ್ನು ಮೀರಿ ಹೋಗಿತ್ತು. ‘‘ಭಾರತ-ಚೀನಾ ಸಂಬಂಧಗಳ ಮೇಲೆ ಯುದ್ಧದ ಪರಿಣಾಮವು 30 ವರ್ಷಗಳವರೆಗೆ ಉಳಿಯುತ್ತದೆ. ಆ ಬಳಿಕ ಜನ ಅದನ್ನು ಮರೆತು ಬಿಡುತ್ತಾರೆ’’ ಎಂದು ಮಾವೊ ಪಾಲಿಟ್ ಬ್ಯೂರೊಗೆ ಹೇಳಿದ್ದರು. ಯುದ್ಧ ಮುಗಿದು 50 ವರ್ಷಗಳ ಬಳಿಕ ಭಾರತದ ಜನತೆ ಇನ್ನೂ ಆ ಯುದ್ಧವನ್ನು ಮರೆತಿಲ್ಲ.

ಐತಿಹಾಸಿಕ ನೆನಪಿನ ರಾಜಕೀಯ ಉಪಯೋಗಗಳು

ಅಮಿತ್ ದಾಸ್ ಗುಪ್ತಾ ಮತ್ತು ಲಾರೆನ್ಸ್ ಲುಥಿಯರವರ ಪುಸ್ತಕದ ಇನ್ನೊಂದು ಮುಖ್ಯವಾದ ಕೊಡುಗೆ ಎಂದರೆ ಅದು ಐತಿಹಾಸಿಕ ನೆನಪಿನ ಪ್ರಶ್ನೆಯನ್ನು ಎತ್ತುತ್ತದೆ. ನಾವು ಪ್ರಮುಖವಾದ ಐತಿಹಾಸಿಕ ಘಟನೆಗಳನ್ನು ಹೇಗೆ ನೆನಪಿನಲ್ಲಿಟ್ಟುಕೊಳ್ಳುತ್ತೇವೆ ಮತ್ತು ಆ ನೆನಪಿನಿಂದಾಗುವ ರಾಜಕೀಯ ಹಾಗೂ ಇತರ ಉಪಯೋಗಗಳು ಯಾವುವು?

1962ರ ಯುದ್ಧವು ನಿಜವಾಗಿಯೂ ಈ ವಿಷಯದ ಕುರಿತ ಒಂದು ಬಹಳ ದೊಡ್ಡ ಉದಾಹರಣೆ ಹಾಗೂ ಪಠ್ಯಪುಸ್ತಕ, ರಾಜಕೀಯ ನೆನಪಿನಿಂದಾಗಿ ಆಗುತ್ತಲೇ ಇರುವ ಪರಿಣಾಮಗಳು, ನಾವು ಹೇಗೆ ಈ ನೆನಪನ್ನು ಕಟ್ಟಿಕೊಳ್ಳುತ್ತೇವೆ ಅಥವಾ ನಿರ್ಮಿಸಿಕೊಳ್ಳುತ್ತೇವೆ? ಮತ್ತು ನೆನಪಿನ ಉಪಯೋಗಗಳು ಹಾಗೂ ದುರುಪಯೋಗಗಳು ಇತ್ಯಾದಿಗಳನ್ನು ನಾವು ಪರಿಶೀಲಿಸುವ ಅಗತ್ಯವಿದೆ. ಯಾಕೆಂದರೆ 1962ರ ಯುದ್ಧದ ನೆನಪು ಇನ್ನೂ ಕೂಡ ಚೀನಾದ ಕುರಿತ ನಮ್ಮ ಮನೋಧರ್ಮ, ನಿಲುವು ಮತ್ತು ಪ್ರತಿಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಭಾರತ ಸರಕಾರದ ಚೀನಾ ನೀತಿಗೆ ರಾಜಕೀಯ ಸಂದರ್ಭವನ್ನು ಕೂಡ ನಿಗದಿಪಡಿಸುತ್ತಿದೆ.

ಯಾಕಾಗಿ ಯುದ್ಧದ ನೆನಪು ಇನ್ನೂ ಕೂಡ ಹೀಗೆಲ್ಲ ಮಾಡುತ್ತದೆ? ಯಾಕೆಂದರೆ ನಾವು ತುಂಬ ಶಕ್ತಿಯುತವಾದ ಹಾಗೂ ದೀರ್ಘಕಾಲದ ವರೆಗೆ ನೆನಪಿನಲ್ಲಿ ಉಳಿಯುವಂತಹ ಯುದ್ಧದ ಒಂದು ಕಥಾನಕವನ್ನು ಅಥವಾ ಕತೆಯನ್ನು ಅಂತರ್ಗತಗೊಳಿಸಿಕೊಂಡಿದ್ದೇವೆ; ಈ ಕಥಾನಕದಲ್ಲಿ ಬದಲಾವಣೆಗಳಿವೆ; ಪ್ರಮುಖವಾದ ಮಹತ್ವಪೂರ್ಣವಾದ ಕ್ಷಣಗಳಿವೆ ಹಾಗೂ ಅಂತ್ಯಗಳಿವೆ.

 ಇದು ಪುನರ್‌ಲೇಖಿಸಬೇಕಾದ ಮತ್ತು ವಿಶ್ವಾಸದ್ರೋಹ ಹಾಗೂ ತೃಪ್ತಿಕರವಲ್ಲದ ಅಂತ್ಯವಿರುವ ಸೋಲಿನ ಒಂದು ಕಥಾನಕ; ಭಾರತೀಯರು ತೀವ್ರವಾಗಿ ಪರಿಭಾವಿಸುವ ಸಬಲವಾದ ಒಂದು ಕಥಾನಕ.

ಸನ್ನಿವೇಶಗಳು ಬದಲಾದಾಗ ನಮ್ಮ ನಿಲುವು ಮತ್ತು ಪ್ರತಿಕ್ರಿಯೆಗಳಲ್ಲಿ ಬದಲಾವಣೆ ಮಾಡಿಕೊಳ್ಳಲು, ಯುದ್ಧದ ಕಥಾನಕವು ನಾವು ಹಿಂಜರಿಯುವಂತೆ ಮಾಡದಿರುತ್ತಿದ್ದಲ್ಲಿ ಅದು ಮುಖ್ಯವಾಗುತ್ತಿರಲಿಲ್ಲ. ಆದರೆ ಈಗ ಅದು ಚೀನಾದೊಂದಿಗೆ ನಮ್ಮ ವ್ಯವಹಾರಗಳಲ್ಲಿ, ಪ್ರತಿಕ್ರಿಯೆಗಳಲ್ಲಿ ನಮ್ಮ ವಸ್ತುನಿಷ್ಠತೆಯನ್ನು ಹಾಗೂ ನಮನೀಯತೆಯನ್ನು ಸೀಮಿತಗೊಳಿಸಿದೆ. ಉದಾಹರಣೆಗೆ, ಗಡಿಯಲ್ಲಿ ಚೀನಾದ ಸಾಮರ್ಥ್ಯ ಹೆಚ್ಚುತ್ತಿದ್ದಂತೆಯೆ ಹಾಗೂ ಟಿಬೆಟ್‌ನ ಮೇಲೆ ಅದರ ಹಿಡಿತ ಬಲವಾಗುತ್ತಿರುವಂತೆಯೇ ಗಡಿ ವಿವಾದ ಇತ್ಯರ್ಥದ ಕುರಿತು ಚೀನಾ ಮೂರು ಭಿನ್ನಭಿನ್ನವಾದ ನಿಲುವುಗಳನ್ನು ತೆಗೆದುಕೊಂಡಿದೆ: ಒಂದನೆಯದಾಗಿ (1959ರ ಮೊದಲು) ಅಕ್ಸಾ ಚಿನ್‌ನಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕೆಂಬ ಬೇಡಿಕೆ; ಎರಡನೆಯದಾಗಿ (1960-82ರ ಮಧ್ಯೆ) ಪೂರ್ವದಲ್ಲಿ ಮ್ಯಾಕ್ ಮೋಹನ್ ರೇಖೆ (ಗಡಿ)ಯನ್ನು ಒಪ್ಪಿಕೊಂಡು ಪಶ್ಚಿಮದಲ್ಲಿ ತನ್ನ ಆದ್ಯತೆಯ ಗಡಿಗಾಗಿ ಬೇಡಿಕೆ ಮತ್ತು ಮೂರನೆಯದಾಗಿ, ಪಶ್ಚಿಮದಲ್ಲಿ ತಾನು ಹೇಳುವ ರೇಖೆ ಬೇಕೆಂಬ ಮತ್ತು ಪೂರ್ವದಲ್ಲಿ ತವಾಂಗ್ ಸೇರಿದಂತೆ (1985ರಿಂದ) ಭಾರತವು ಪ್ರಮುಖವಾದ ರಿಯಾಯಿತಿಗಳಿಗೆ ಒಪ್ಪಬೇಕೆಂಬ ಬೇಡಿಕೆ.

ಇದಕ್ಕೆ ವ್ಯತಿರಿಕ್ತವಾಗಿ, 1950ರ ದಶಕದಲ್ಲಿದ್ದ ಒಂದೇ ರೀತಿಯ ಅಧಿಕೃತ ನಿಲುವಿಗೆ ಭಾರತ ಅಂಟಿಕೊಂಡಿದೆ. ಸಣ್ಣ ಪುಟ್ಟ ಹೊಂದಾಣಿಕೆಗಳು ಸಾಧ್ಯವಾಗಬಹುದೆಂದು 1988ರಲ್ಲಿ ಭಾರತ ಹೇಳಿದ್ದು ಅದರ ನಿಲುವಿಗೆ ಅದು ಸೇರಿಸಿದ ಒಂದು ಅಂಶ. ಅಲ್ಲದೆ ಗಡಿಯಲ್ಲಿ ಪಡೆಗಳ ನಿಯೋಜನೆಯು 1950ರ ದಶಕದಲ್ಲಿ ಅಥವಾ ನಂತರದ ದಶಕಗಳಲ್ಲಿ ಇದ್ದುದಕ್ಕಿಂತ ಹೆಚ್ಚು ಸಮತೋಲನದಲ್ಲಿದೆ. ಆ ಬಳಿಕ ನಮ್ಮ ದೇಶದ ನಿಲುವು ವಿಕಾಸಹೊಂದಿರಲು, ಬದಲಾಗದಿರಲು ನಾವು ರಚಿಸಿಕೊಂಡ ಕಥಾನಕ ಮತ್ತು ನಮ್ಮ ಗಡಿ ಹಾಗೂ ಚೀನಾದ ಕುರಿತು ನಾವು ಅದನ್ನು ಬಳಸಿಕೊಂಡ ರೀತಿಯೇ ಕಾರಣವಿರಬಹುದು ಅನ್ನಿಸುತ್ತದೆ. ಚೀನಾದ ವರ್ತನೆ, ನಮಗೆ ನಮ್ಮಲ್ಲೇ ಇರುವ ನಂಬಿಕೆ ಇವೆಲ್ಲವೂ 1962ರ ಯುದ್ಧದಿಂದ ಆರಂಭವಾಗುತ್ತದೆ.

ಚೀನಾ ರೀತಿಯ ವಿಕಾಸ ಮತ್ತು 1959-62ರ ಅವಧಿಯಲ್ಲಿ ನೆಹರೂರವರ ಉಗ್ರ ಟೀಕಾಕಾರರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರಂಥಹ ನಾಯಕರ ಅಭಿಪ್ರಾಯಗಳನ್ನು ಪರಿಶೀಲಿಸಿದಾಗ ಹೊಸ ಸಂಗತಿಗಳು ತಿಳಿದು ಬರುತ್ತವೆ. ಚೀನಾದೊಂದಿಗಿನ ನೆಹರೂರವರ ನೀತಿಯ ಕಟು ವಿಮರ್ಶಕರಾಗಿದ್ದ ವಾಜಪೇಯಿಯವರು 1979ರಲ್ಲಿ ವಿದೇಶಾಂಗ ವ್ಯವಹಾರ ಸಚಿವರಾಗಿ ಚೀನಾಕ್ಕೆ ಭೇಟಿ ನೀಡಿದರು. ಅವರ ಈ ಭೇಟಿ ಭಾರತ ಚೀನಾ ಸಂಬಂಧ ಸರಿಪಡಿಸುವುದರಲ್ಲಿ ಒಂದು ಆರಂಭಿಕ ಹೆಜ್ಜೆಯಾಯಿತು. ರಾಜಕಾರಣದಲ್ಲಿ ಅದಾಗಲೇ ಸ್ಥಿರವಾಗಿರುವ ಕಥಾನಕಗಳನ್ನು ಹಾಗೂ ನಂಬಿಕೆಗಳನ್ನು ಬದಲಿಸುವಲ್ಲಿ ಜವಾಬ್ದಾರಿ ಹಾಗೂ ಹೆಚ್ಚಿನ ತಿಳುವಳಿಕೆಗೆ ಇಂತಹ ಅದ್ಭುತ ಶಕ್ತಿ ಇದೆ. ಚೀನಾದ ವಿಷಯದಲ್ಲೂ ಇದು ನಿಜ. ಭಾರತದ ಕುರಿತ ತನ್ನ ಯೋಚನೆಗಳ ವಿಕಾಸದಲ್ಲಿ ಡೆಂಗ್‌ಕ್ಸಿಯಾಒಪಿಂಗ್ ಇಂತಹದೇ ಬದಲಾವಣೆಗೆ ಒಳಪಟ್ಟಂತೆ ಕಾಣುತ್ತದೆ. 1950ರ ಹಾಗೂ 1960ರ ದಶಕಗಳಲ್ಲಿ ಅವರು ಭಾರತದ ಬಗ್ಗೆ ಹೊಂದಿದ್ದ ದೃಷ್ಟಿಕೋನಗಳು ಹಾಗೂ ಅವರ ಹೇಳಿಕೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

1962ರ ಯುದ್ಧ ಹಾಗೂ ಚೀನಾದ ಬಗ್ಗೆ ನಮಗೆ ಇನ್ನಷ್ಟು ವಿದ್ವತ್ಪೂರ್ಣ ಅಧ್ಯಯನಗಳನ್ನು ಆಧರಿಸಿದ ಪುಸ್ತಕಗಳು ಬೇಕಾಗಿವೆ. ವಸ್ತುನಿಷ್ಠ ವಾಸ್ತವಿಕತೆಗೆ ಚೀನಾ ಕುರಿತ ನಮ್ಮ ಕಥಾನಕ ಸಂವಾದಿಯಾಗಬೇಕಾದರೆ, ಸರಿದೂಗಬೇಕಾದರೆ ಇಂತಹ ಅಧ್ಯಯನಗಳ ಅಗತ್ಯವಿದೆ. ಈ ನಿಟ್ಟಿನಿಂದ ಗುಪ್ತ ಮತ್ತು ಲುಥಿಯವರ ಹೊಸ ಪುಸ್ತಕ ತುಂಬ ವೌಲಿಕವಾಗಿದೆ. ಭಾರತ-ಚೀನಾ ಸಂಬಂಧಗಳ ಬಗ್ಗೆ ಆಸಕ್ತರಾದವರೆಲ್ಲರೂ ಇದನ್ನು ಓದಬೇಕಾಗಿದೆ. ಭಾರತ-ಚೀನಾ ಸಂಬಂಧಗಳ ಸಮಕಾಲೀನ ಇತಿಹಾಸದ ಕುರಿತು ಪ್ರಾಥಮಿಕವಾದ, ಮೂಲವಾದ ಆಕರ ಸಾಮಗ್ರಿಗಳನ್ನಾಧರಿಸಿ ಬರಲಿರುವ ಇನ್ನಷ್ಟು ವಿವರವಾದ, ವಿದ್ವತ್ಪೂರ್ಣವಾದ ಪುಸ್ತಕಗಳಿಗೆ ಗುಪ್ತ ಮತ್ತು ಲುಥಿಯವರ ಪುಸ್ತಕ ಒಂದು ಶುಭ ಆರಂಭವಾಗಲಿ ಆಶಿಸೋಣ.

Writer - ಶಿವಶಂಕರ್ ಮೆನನ್

contributor

Editor - ಶಿವಶಂಕರ್ ಮೆನನ್

contributor

Similar News

ಜಗದಗಲ
ಜಗ ದಗಲ