ಹೆಲ್ತ್ ಕಾರ್ಡ್ ದಂಧೆ!

Update: 2017-07-26 18:56 GMT

ಭಾಗ-1

ಈ ಎಲ್ಲಾ ಖಾಸಗಿ ಹೆಲ್ತ್ ಕಾರ್ಡ್‌ಗಳ ಹಕೀಕತ್ತು ಕಾರ್ಡ್‌ದಾರನಿಗೆ ತಿಳಿಯುವುದು ಆಸ್ಪತ್ರೆಗೆ ದಾಖಲಾದ ಬಳಿಕವೇ. ಈ ಹಕೀಕತ್ತು ತಿಳಿದೂ ತಿಳಿದೂ ಪ್ರತೀ ವರ್ಷವೂ ತಮ್ಮ ಹೆಲ್ತ್ ಕಾರ್ಡನ್ನು ನವೀಕರಿಸುವವರ ಸಂಖ್ಯೆಯೂ ಕಡಿಮೆಯಿಲ್ಲ.

‘ಹೆಲ್ತ್ ಕಾರ್ಡ್ ದಂಧೆ’ ಎಂಬ ಈ ಶೀರ್ಷಿಕೆಯೇ ವಿಚಿತ್ರ ಎಂದು ನಿಮಗನಿಸಬಹುದು. ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ, ಕೆಲವು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಮತ್ತು ಸಮಾಜ ಸೇವೆಯ ಸೋಗು ಹಾಕಿಕೊಂಡವರಿಗೆಲ್ಲ ಇದೊಂದು ಭರ್ಜರಿ ಲಾಭದಾಯಕ ದಂಧೆ. ಜನಸಾಮಾನ್ಯರಿಗೆ ಮಿತದರದಲ್ಲಿ ಆರೋಗ್ಯ ಸೇವೆ ನೀಡುವ ನೆಪದಲ್ಲಿ ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳುವುದೇ ಇದರ ಹಿಂದಿನ ಅಸಲಿಯತ್ತು.

ಸರಕಾರದ ವತಿಯಿಂದ ಯಶಸ್ವಿನಿ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನೇ ನಕಲು ಮಾಡಿಕೊಂಡು ಕಾರ್ಪೊರೇಟ್ ಆಸ್ಪತ್ರೆಗಳವರು ಹೆಲ್ತ್ ಕಾರ್ಡ್ ದಂಧೆ ಮಾಡುತ್ತಾರೆ. ಜನಸಾಮಾನ್ಯರನ್ನು ನಂಬಿಸುವ ಸಲುವಾಗಿ ಇವರು ಸ್ಥಳೀಯಾಡಳಿತ ಸಂಸ್ಥೆಯಾದ ಗ್ರಾಮ ಪಂಚಾಯತ್ ಕಚೇರಿಗಳನ್ನೇ ಹೆಲ್ತ್ ಕಾರ್ಡ್ ದಂಧೆಗೆ ಬಳಸುತ್ತಾರೆ. ಹೆಚ್ಚಿನ ಸ್ಥಳೀಯ ರಾಜಕೀಯ ಪುಡಾರಿಗಳಿಗೆ ಇದರ ತಲೆಬುಡವೇ ಗೊತ್ತಿರುವುದಿಲ್ಲ. ಸ್ಥಳೀಯ ರಾಜಕೀಯ ಪುಡಾರಿಗಳಿಗೆ ತಂತಮ್ಮ ವಾರ್ಡ್‌ಗಳಲ್ಲಿ ಒಳ್ಳೆಯ ಹಿಡಿತವಿರುತ್ತದೆಯಾದ್ದರಿಂದ ಇವರ ಮೂಲಕವೇ ಹೆಲ್ತ್ ಕಾರ್ಡ್ ದಂಧೆಕೋರರು ತಮ್ಮ ಈ ವ್ಯಾಪಾರದ ಜಾಹೀರಾತು ಮಾಡುತ್ತಾರೆ. ಸ್ಥಳೀಯ ರಾಜಕೀಯ ಪುಢಾರಿಗಳು ಇದನ್ನು ಚುನಾವಣೆಗಳಲ್ಲಿ ನಗದೀಕರಿಸುವ ಸಲುವಾಗಿ ಈ ಹೆಲ್ತ್ ಕಾರ್ಡ್ ದಂಧೆಗೆ ಒಳ್ಳೆಯ ಪ್ರಚಾರ ಕೊಟ್ಟು ತಾವೇ ಇಂತಹ ಜನೋಪಯೋಗಿ ಕೆಲಸ ಮಾಡಿದ್ದೆಂದು ಪ್ರಚಾರ ಪಡೆಯುತ್ತಾರೆ. ಮತ್ತು ಚುನಾವಣೆಯ ಸಂದರ್ಭಗಳಲ್ಲಿ ಹೆಲ್ತ್ ಕಾರ್ಡನ್ನು ತಮ್ಮ ಸಾಧನೆಯ ಪಟ್ಟಿಗೆ ಸೇರಿಸಿಬಿಡುತ್ತಾರೆ. ಸಾಮಾನ್ಯವಾಗಿ ಇಂತಹ ಹೆಲ್ತ್ ಕಾರ್ಡ್ ದಂಧೆಯನ್ನು ಕಾರ್ಪೊರೇಟ್ ಆಸ್ಪತ್ರೆಗಳ ಮಂದಿ ಗ್ರಾಮೀಣ ಪ್ರದೇಶದಲ್ಲೇ ಮಾಡುತ್ತಾರೆ. ಸ್ಥಳೀಯಾಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್‌ಗಳಲ್ಲಿ ಇಂತಹ ಕಾರ್ಯಕ್ರಮವನ್ನಿಟ್ಟುಕೊಂಡರೆ ಜನಸಾಮಾನ್ಯರು ಇದನ್ನು ಸರಕಾರದ ಯೋಜನೆಯೆಂದೇ ನಂಬಿ ಹೆಲ್ತ್ ಕಾರ್ಡ್ ಖರೀದಿಸುತ್ತಾರೆ. ನನ್ನ ಹಳ್ಳಿಯಲ್ಲೇ ಕೆಲವು ಕೃಷಿಕರ, ಕೂಲಿ ಕಾರ್ಮಿಕರ ಜೇಬಿನಲ್ಲಿ ಇಂತಹ ನಾಲ್ಕೈದು ಖಾಸಗಿ ಹೆಲ್ತ್ ಕಾರ್ಡ್‌ಗಳಿರುವುದನ್ನು ನಾನು ಸ್ವತಃ ನೋಡಿದ್ದೇನೆ. ಆ ಜನರು ಅದನ್ನು ಮುಗ್ಧವಾಗಿ ನಂಬಿ ಆಪತ್ಕಾಲಕ್ಕಿರಲಿ ಎಂದು ಖಾಸಗಿ ಹೆಲ್ತ್ ಕಾರ್ಡ್‌ಗಳನ್ನು ಮಾಡಿಸುತ್ತಾರೆ.

ಏನಿದು ಹೆಲ್ತ್ ಕಾರ್ಡ್:

ಖಾಸಗಿ ಹೆಲ್ತ್ ಕಾರ್ಡ್‌ಗಳು ಸರಕಾರದ ಯಶಸ್ವಿನಿ, ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆಯ ಕಾರ್ಡುಗಳಂತಲ್ಲ. ಸರಕಾರದ ಯೋಜನೆಗಳ ಹೆಲ್ತ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಬಿಪಿಎಲ್ ಕಾರ್ಡ್‌ನಂತಹ ನಿರ್ದಿಷ್ಠ ಮಾನದಂಡಗಳಿರುತ್ತವೆ. ಅವುಗಳಲ್ಲಿ ಕಾರ್ಡ್‌ದಾರರಿಗೆ ಸರಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಉಚಿತವಾಗಿ ದೊರಕುತ್ತದೆ. ಮತ್ತು ಸರಕಾರಿ ಯೋಜನೆಯ ಹೆಲ್ತ್ ಕಾರ್ಡ್‌ಗಳಿಗೆ ಶುಲ್ಕವೇನೂ ಕಟ್ಟಬೇಕಾಗಿಲ್ಲ.
ಕಾರ್ಪೊರೇಟ್ ಆಸ್ಪತ್ರೆಗಳ, ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಹೆಲ್ತ್ ಕಾರ್ಡನ್ನು ಇನ್ನೂರು, ಮುನ್ನೂರು, ಐದು ನೂರು ರೂಪಾಯಿ ದುಡ್ಡು ಕೊಟ್ಟು ಯಾರು ಬೇಕಾದರೂ ಖರೀದಿಸಬಹುದು. ಹೀಗೆ ಖರೀದಿಸಿದ ಹೆಲ್ತ್ ಕಾರ್ಡ್‌ಗಳಿಗೆ ಸಾಮಾನ್ಯವಾಗಿ ಒಂದು ವರ್ಷದ ವ್ಯಾಲಿಡಿಟಿ ಇರುತ್ತದೆ. ಇದರಲ್ಲಿ ಸಾಮಾನ್ಯವಾಗಿ ಫ್ಯಾಮಿಲಿ ಹೆಲ್ತ್ ಕವರೇಜ್ ಇರುತ್ತದೆ. ಸಾಮಾನ್ಯವಾಗಿ ಒಂದು ಕಾರ್ಡ್‌ನಲ್ಲಿ ಕುಟುಂಬದ ನಾಲ್ಕು ಸದಸ್ಯರ ಹೆಸರು ನೋಂದಾಯಿಸಲು ಅವಕಾಶವಿರುತ್ತದೆ. ಒಂದು ವೇಳೆ ನಾಲ್ಕಕ್ಕಿಂತ ಹೆಚ್ಚು ಸದಸ್ಯರ ಹೆಸರನ್ನು ನೋಂದಾಯಿಸಬೇಕಾದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಹೆಚ್ಚಿನೆಲ್ಲಾ ಖಾಸಗಿ ಹೆಲ್ತ್ ಕಾರ್ಡ್‌ನಲ್ಲಿ ಸದಸ್ಯರು ಒಳರೋಗಿಯಾಗಿ ಅವರ ಆಸ್ಪತ್ರೆಗೆ ದಾಖಲಾದರೆ ಮೂವತ್ತು ಸಾವಿರ ರೂಪಾಯಿವರೆಗಿನ ಯಾವುದೇ ಚಿಕಿತ್ಸೆಗೆ ದುಡ್ಡು ಪಾವತಿಸಬೇಕಾಗಿಲ್ಲ ಎಂದು ಹೇಳುತ್ತಾರೆ. ಕೆಲವು ಕಾರ್ಡ್‌ಗಳ ತಳಭಾಗದಲ್ಲಿ ಚಿಕ್ಕದಾಗಿ Note: Conditions apply ಎಂದು ನಮೂದಿಸುತ್ತಾರೆ. ಕೆಲವರು ಇದನ್ನೂ ನಮೂದಿಸುವುದಿಲ್ಲ. ಈ ಎಲ್ಲಾ ಖಾಸಗಿ ಹೆಲ್ತ್ ಕಾರ್ಡ್‌ಗಳ ಹಕೀಕತ್ತು ಕಾರ್ಡ್ ದಾರನಿಗೆ ತಿಳಿಯುವುದು ಆಸ್ಪತ್ರೆಗೆ ದಾಖಲಾದ ಬಳಿಕವೇ. ಈ ಹಕೀಕತ್ತು ತಿಳಿದೂ ತಿಳಿದೂ ಪ್ರತೀ ವರ್ಷವೂ ತಮ್ಮ ಹೆಲ್ತ್ ಕಾರ್ಡನ್ನು ನವೀಕರಿಸುವವರ ಸಂಖ್ಯೆಯೂ ಕಡಿಮೆಯಿಲ್ಲ.

ಈಗೀಗ ಸಾಮಾನ್ಯವಾಗಿ ಎಲ್ಲಾ ಹೆಲ್ತ್ ಕಾರ್ಡ್ ಪ್ರಮೋಟರ್ಸ್‌ಗಳು ತಮ್ಮ ಕಾರ್ಡ್‌ನಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಸತ್ಯವನ್ನೇ ಹೇಳುತ್ತಾರೆ. ಆದರೆ ಅದರೊಳಗೂ ಇನ್ನೊಂದು ಸತ್ಯ ಅಡಗಿರುತ್ತದೆ. ಅದನ್ನು ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸುವವರು ಮಾತ್ರ ಅರಿಯಲು ಸಾಧ್ಯ. ಆ ಸತ್ಯವೇನೆಂದು ನೋಡಿ.

ಕಾರ್ಡ್ ವಿತರಕರು ನಿಮ್ಮಲ್ಲಿ ಹೇಳುತ್ತಾರೆ, ನಮ್ಮ ಕಾರ್ಡ್ ಇದ್ದರೆ ನಿಮಗೆ ನಮ್ಮ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆಯುವಾಗ ಹಲವು ವಿಶೇಷ ರಿಯಾಯಿತಿ ದೊರೆಯುತ್ತದೆ. ಅನೇಕ ಲ್ಯಾಬೋರೇಟರಿ ಪರೀಕ್ಷೆಗಳು ಉಚಿತ, ಕೆಲವು ಪರೀಕ್ಷೆಗಳಲ್ಲಿ ಇಪ್ಪತ್ತು ಶೇಕಡಾದವರೆಗೆ ರಿಯಾಯಿತಿ ದೊರೆಯುತ್ತದೆ. ಮೂವತ್ತು ನಲ್ವತ್ತು ರೂಪಾಯಿಗಳವರೆಗಿನ ಚಿಕ್ಕಪುಟ್ಟ ಪರೀಕ್ಷೆಗಳನ್ನು ಮಾತ್ರ ಉಚಿತವಾಗಿ ಮಾಡುತ್ತಾರೆ. ದೊಡ್ಡ ಮೊತ್ತದ ಪರೀಕ್ಷೆಗಳಿಗೆ ಇಪ್ಪತ್ತು ಶೇಕಡಾದವರೆಗೆ ರಿಯಾಯಿತಿ ಇದೆ ಎನ್ನುತ್ತಾರಲ್ಲಾ ಅದರ ಅಸಲಿಯತ್ತು ಇಷ್ಟೇ. ನಿಗದಿತ ದರಕ್ಕಿಂತ ಹೆಚ್ಚಿನ ದರ ಹಾಕಿ ಅದರಿಂದ ರಿಯಾಯಿತಿ ನೀಡುವುದು. ಸ್ಕ್ಯಾನಿಂಗ್, ಎಕ್ಸ್-ರೇಗಳಲ್ಲೂ ಇದೇ ಕತೆ. ನಿಗದಿತ ದರಕ್ಕಿಂತ ಹೆಚ್ಚು ಮೊತ್ತದ ಬಿಲ್ ಮಾಡಿ ಅದರಿಂದ ಹತ್ತು ಇಪ್ಪತ್ತು ಶೇಕಡಾ ರಿಯಾಯಿತಿ ನೀಡುವುದು.

Writer - ಇಸ್ಮತ್ ಫಜೀರ್

contributor

Editor - ಇಸ್ಮತ್ ಫಜೀರ್

contributor

Similar News

ಜಗದಗಲ
ಜಗ ದಗಲ