ಹೆಲ್ತ್ ಕಾರ್ಡ್ ದಂಧೆ!

Update: 2017-07-27 18:24 GMT

ಭಾಗ-2

ಕೆಲವು ಔಷಧಿಗಳು ಉಚಿತ ಎಂದು ನಿಮ್ಮಲ್ಲಿ ಹೆಲ್ತ್ ಕಾರ್ಡ್ ಪ್ರವರ್ತಕರು ಹೇಳುತ್ತಾರೆ. ಅದ್ಯಾವುದೆಂದರೆ ಸಗಟು ಖರೀದಿಯಲ್ಲಿ ಇಪ್ಪತ್ತರಿಂದ ಮೂವತ್ತು ಪೈಸೆಗೆ ಸಿಗುವ ಔಷಧಿಗಳಾದ ಪ್ಯಾರಾಸಿಟಮೋಲ್, ಸಿಪಿಎಮ್, ರ್ಯಾನಿಟಿಡಿನ್, ಡಾಂಪೆರಿಡೋನ್ ಮುಂತಾದವುಗಳು ಮತ್ತು ಸಗಟು ಖರೀದಿಯಲ್ಲಿ ನೂರು ರೂಪಾಯಿಗೆ ಹತ್ತು ಲೀಟರ್‌ನ ಕ್ಯಾನ್‌ನಲ್ಲಿ ಸಿಗುವ ಕೆಮ್ಮಿನ ಸಿರಪ್. ಇಂತಹ ಸಿರಪ್‌ಗಳನ್ನು ನೂರು ಮಿಲಿ ಲೀಟರ್‌ನ ಶೀಶೆಗೆ ಸುರಿದು ಅದಕ್ಕೆ ಲೇಬಲ್ ಹಚ್ಚಿ ನೀಡುವುದು. ಇತರ ಔಷಧಿಗಳಲ್ಲಿ ಐದರಿಂದ ಹತ್ತು ಶೇಕಡಾ ರಿಯಾಯಿತಿ ನೀಡುತ್ತಾರೆ. ಸಾಮಾನ್ಯವಾಗಿ ಔಷಧಿ ವ್ಯಾಪಾರಸ್ಥನಿಗೆ ಇಪ್ಪತ್ತು ಶೇಕಡಾ ಲಾಭವಿರುತ್ತದೆ. ದೊಡ್ಡ ಮಟ್ಟದ ಸಗಟು ಖರೀದಿದಾರರಿಗೆ ಶೇ. 30ರಿಂದ 40ರ ವರೆಗೂ ಲಾಭವಿರುತ್ತದೆ. ಅದರಿಂದ ಐದೋ ಹತ್ತೋ ಶೇಕಡಾ ರಿಯಾಯಿತಿ ನೀಡಿದರೆ ಕಾರ್ಪೊರೇಟ್ ದಂಧೆಕೋರರ ಜೇಬಿನಿಂದ ಏನೇನೂ ಹೋಗುವುದಿಲ್ಲ.

ಕಾರ್ಡ್‌ದಾರರು ಒಳರೋಗಿಯಾಗಿ ದಾಖಲಾದರೆ ಸರ್ವಿಸ್ ಚಾರ್ಜ್, ವೈದ್ಯರ ಶುಲ್ಕ, ಹಾಸಿಗೆ ಶುಲ್ಕ, ನರ್ಸಿಂಗ್ ಶುಲ್ಕ ಮಾತ್ರ ಉಚಿತ. ತುರ್ತು ನಿಗಾ ಘಟಕದ ಸೇವೆಗೆ ಯಾವ ರಿಯಾಯಿತಿಯೂ ಇಲ್ಲ. ಉಚಿತವಾಗಿ ನೀಡುವುದನ್ನು ಹೆಲ್ತ್ ಕಾರ್ಡ್ ನೀಡುವವರು ಬಹಳ ಸುಲಭವಾಗಿ ಸರಿದೂಗಿಸುತ್ತಾರೆ. ಯಾವುದೇ ಖಾಸಗಿ ಆಸ್ಪತ್ರೆಗಳು ಸಹಸ್ರಾರು ಕಾರ್ಡ್‌ಗಳನ್ನು ಮಾರಾಟ ಮಾಡುತ್ತವೆ. ಅದರ ಇಪ್ಪತ್ತೈದು ಶೇಕಡಾದಷ್ಟು ಮಂದಿ ಮಾತ್ರ ಒಳರೋಗಿಯಾಗಿ ದಾಖಲಾಗುತ್ತಾರೆ. ಒಳರೋಗಿ ಯಾಗಿ ದಾಖಲಾಗದ ಉಳಿದ ಎಪ್ಪತ್ತೈದು ಶೇಕಡಾ ಕಾರ್ಡುಗಳ ಮಾರಾಟದಿಂದ ಬಂದ ದುಡ್ಡಿನಿಂದ ಉಚಿತವಾಗಿ ನೀಡುವುದನ್ನು ಸರಿದೂಗಿಸಲಾಗುತ್ತದೆ.

ಕಾರ್ಡುದಾರರಿಗೆ ಚಿಕಿತ್ಸೆ ಕೇವಲ ಜನರಲ್ ವಾರ್ಡ್‌ನಲ್ಲಿ ಮಾತ್ರ ನೀಡಲಾಗುತ್ತದೆ. ಹೆಲ್ತ್ ಕಾರ್ಡ್‌ದಾರನ ಕುಟುಂಬವೊಂದಕ್ಕೆ ಒಳರೋಗಿಯಾಗಿ ದಾಖಲಾದಾಗ ಮೂವತ್ತು ಸಾವಿರ ರೂಪಾಯಿವರೆಗಿನ ಚಿಕಿತ್ಸೆ ಉಚಿತ ಎನ್ನುತ್ತಾರಲ್ವಾ....? ಕಾರ್ಡ್‌ದಾರನ ಕುಟುಂಬದ ಓರ್ವ ಸದಸ್ಯ ಎರಡೋ ಮೂರೋ ದಿನ ಆಸ್ಪತ್ರೆಯಲ್ಲಿ ಒಂದು ಚಿಕ್ಕ ಜ್ವರಕ್ಕೆ ಒಳರೋಗಿಯಾಗಿ ದಾಖಲಾದಾಗಲೇ ಆತನ ಕಾರ್ಡಿನಲ್ಲಿ ನಮೂದಿಸಲಾದ ಮೂವತ್ತು ಸಾವಿರ ರೂಪಾಯಿ ಮುಗಿದುಬಿಡುತ್ತದೆ. ಆದರೆ ಈ ವಿಚಾರವನ್ನು ಆಸ್ಪತ್ರೆಯ ಮಂದಿ ರೋಗಿಗೆ ತಿಳಿಸುವುದಿಲ್ಲ. ಅದೇ ಕುಟುಂಬದ ಸದಸ್ಯ ಅಥವಾ ಮೊದಲ ಬಾರಿ ಒಳರೋಗಿಯಾಗಿ ದಾಖಲಾದವನು ಎರಡನೆ ಬಾರಿ ಒಳರೋಗಿಯಾಗಿ ದಾಖಲಾದಾಗ ಹೆಲ್ತ್ ಕಾರ್ಡ್ ವಿಚಾರ ಪ್ರಸ್ತಾಪಿಸಿದರೆ ‘ಸರಿ’ ಎಂದು ಆತನನ್ನು ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಆತನ ಕಾರ್ಡ್‌ನ ಮೊತ್ತ ಮುಗಿದ ಬಗ್ಗೆ ಆತನಿಗೂ ಯಾವುದೇ ಸೂಚನೆಯನ್ನು ಆಸ್ಪತ್ರೆಯ ಸಿಬ್ಬಂದಿ ನೀಡುವುದಿಲ್ಲ. ನೀವು ಡಿಸ್ಚಾರ್ಜ್ ಆಗುವಾಗ ಬಿಲ್ಲು ನಿಮ್ಮ ಕೈಗೆ ಬಂದಾಗ ನಿಮಗೆ ಅಚ್ಚರಿಯಾಗುತ್ತದೆ. ನೀವು ನಿಮ್ಮ ಹೆಲ್ತ್ ಕಾರ್ಡ್‌ನ ವಿಚಾರ ಎತ್ತಿದರೆ ಅದರ ಮೊತ್ತ ಈಗಾಗಲೇ ನಿಮ್ಮ ಹಿಂದಿನ ಚಿಕಿತ್ಸೆಗೆ ಖರ್ಚಾಗಿದೆ ಎಂದು ನಿಮ್ಮನ್ನು ಮುಂಡಾಮೋಚುತ್ತಾರೆ.

ಇಂತಹ ಹೆಲ್ತ್ ಕಾರ್ಡ್‌ನ್ನು ವೈದ್ಯಕೀಯ ಕಾಲೇಜಿನವರು ಮಾಡಿದರೆ ಅವರಿಗೆ ದುಪ್ಪಟ್ಟು ಲಾಭ. ಕೋಟಿಗಟ್ಟಲೆ ಕೊಟ್ಟು ವೈದ್ಯಕೀಯ ಕಲಿಯಲು ಬಂದ ಅವರ ಗ್ರಾಹಕರಿಗೆ (ವಿದ್ಯಾರ್ಥಿಗಳಿಗೆ) ಹೆಲ್ತ್ ಕಾರ್ಡ್ ಹೆಸರಲ್ಲಿ ರೋಗಿಗಳು ಅವರ ಮನೆ ಬಾಗಿಲಿಗೆ ಅನಾಯಾಸವಾಗಿ ಬಂದು ಬಿಡುತ್ತಾರೆ. ನೀವು ಯಾವುದೇ ಚಿಕ್ಕಪುಟ್ಟ ಖಾಯಿಲೆಯ ಚಿಕಿತ್ಸೆಗೆ ಹೆಲ್ತ್ ಕಾರ್ಡ್ ಇದೆಯಲ್ಲಾ ಎಂದು ಆಸ್ಪತ್ರೆಗೆ ಹೋದರೆ ನಿಮ್ಮ ಖಾಯಿಲೆಯನ್ನು ಸುಮ್ಮನೆ ಗಂಭೀರವೆಂದು ವಿವರಿಸಿ ಅಡ್ಮಿಟ್ ಆಗಲು ಸೂಚಿಸುತ್ತಾರೆ. ನೀವು ಹೇಗಿದ್ದರೂ ಹೆಲ್ತ್ ಕಾರ್ಡ್ ಇದೆಯಲ್ಲಾ ಎಂದು ಹೆಚ್ಚು ಯೋಚಿಸದೇ ಅದಕ್ಕೆ ಒಪ್ಪಿಬಿಡುತ್ತೀರಿ. ಆಗ ಸುಲಭವಾಗಿ ಮಿಕ ಅವರ ಕೈಗೆ ಸಿಕ್ಕಂತಾಗುತ್ತದೆ. ಇಂತಹ ಅವಕಾಶವನ್ನು ಯಾವುದೇ ಕಾರ್ಪೊರೇಟ್ ಆಸ್ಪತ್ರೆ ತಪ್ಪಿಸಿಕೊಳ್ಳುವುದಿಲ್ಲ. ಅಲ್ಲಿನ ವೈದ್ಯರಿಗೆ ಇದೊಂದು ಅತ್ಯಂತ ಕ್ಷುಲ್ಲಕ ಖಾಯಿಲೆ ಎಂಬರಿವಿದ್ದರೂ ಆತ ಆ ವ್ಯವಸ್ಥೆಯ ಕೈಗೊಂಬೆಯಾಗಿಬಿಟ್ಟಿರುತ್ತಾನೆ.

ಒಟ್ಟಿನಲ್ಲಿ ಈ ಹೆಲ್ತ್ ಕಾರ್ಡ್ ಎಂಬುವುದು ವೈದ್ಯಕೀಯ ದಂಧೆಯ ನೂರಾರು ಮೋಸಗಳಲ್ಲಿ ಒಂದು. ಆದುದರಿಂದ ಖಾಸಗಿ ಹೆಲ್ತ್ ಕಾರ್ಡ್ ಮಾಡಿಸುವ ಮುನ್ನ ಹತ್ತು ಬಾರಿ ಯೋಚಿಸುವುದೊಳಿತು.

Writer - ಇಸ್ಮತ್ ಫಜೀರ್

contributor

Editor - ಇಸ್ಮತ್ ಫಜೀರ್

contributor

Similar News

ಜಗದಗಲ
ಜಗ ದಗಲ