ಬಿಲ್ ಗೇಟ್ಸ್ ರನ್ನು ಹಿಂದಿಕ್ಕಿದ ಜಗತ್ತಿನ ಶ್ರೀಮಂತ ವ್ಯಕ್ತಿ ಯಾರು ಗೊತ್ತೇ ?

Update: 2017-07-28 06:31 GMT

ನ್ಯೂಯಾರ್ಕ್, ಜು.28: ಖ್ಯಾತ ಇ-ಕಾಮರ್ಸ್ ಸೈಟ್ ಅಮೆಝಾನ್ ಇದರ ಸಿಇಒ ಜೆಫ್ ಬೆಝೋಸ್ ಗುರುವಾರ ಕೆಲವೇ ಹೊತ್ತಿನ ತನಕ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮೈಕ್ರೊಸಾಫ್ಟ್ ನ ಬಿಲ್ ಗೇಟ್ಸ್ ಅವರನ್ನೂ ಹಿಂದಿಕ್ಕಿದ್ದಾರೆ. ಅಮೆಝಾನ್ ಕಂಪೆನಿಯ ಸ್ಟಾಕ್ ದರಗಳು ಗುರುವಾರ ಭಾರೀ ಏರಿಕೆ ಕಂಡಿದ್ದರಿಂದ ಕಂಪೆನಿಯ ಸಿಇಒ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿ ಕಾಣುವಂತಾಯಿತು.

ಆದರೆ ಗುರುವಾರ ಅಪರಾಹ್ನದ ಹೊತ್ತಿಗೆ ಮೈಕ್ರೋಸಾಫ್ಟ್ ಸ್ಥಾಪಕ ಜಗತ್ತಿನ ಅತ್ಯಂತ ಶ್ರೀಮಂತ ಸ್ಥಾನವನ್ನು ಮತ್ತೆ ಪಡೆದುಕೊಂಡರು. ಅದಾಗಲೇ ಅಮೆಝಾನ್ ಸ್ಟಾಕುಗಳು ಶೇ.1ರಷ್ಟು ಇಳಿಕೆ ಕಂಡು 1,046 ಡಾಲರ್ ತಲುಪಿದ್ದವು.

ಗುರುವಾರ ಆರಂಭದಲ್ಲಿ ಅಮೆಝಾನ್ ಸ್ಟಾಕ್ ದರಗಳು 1,083.31 ಡಾಲರ್ ತಲುಪಿದ್ದವು. ಸೆಕ್ಯುರಿಟಿ ಫೈಲಿಂಗ್ಸ್ ಪ್ರಕಾರ ಬೆಝೋಸ್ ಅವರು ಕಂಪೆನಿಯ ಶೇ.17 ಅಥವಾ 80 ಮಿಲಿಯನ್ ಶೇರುಗಳನ್ನು ಹೊಂದಿದ್ದು, ಶೇರು ಬೆಲೆ ಗರಿಷ್ಠ ಮಟ್ಟ ತಲುಪಿದ್ದಾಗ ಅದರ ಬೆಲೆ 87 ಬಿಲಿಯನ್ ಡಾಲರ್ ಆಗಿದ್ದವು.
ಬೆಝೋಸ್ ಅವರು ದಿ ವಾಷಿಂಗ್ಟನ್ ಪೋಸ್ಟ್ ಒಡೆತನವನ್ನೂ ಹೋಲ್ಡಿಂಗ್ ಕಂಪೆನಿಯೊಂದರ ಮುಖಾಂತರ ಹೊಂದಿದ್ದಾರೆ.

ಗುರುವಾರ ಮಾರುಕಟ್ಟೆ ತೆರೆದುಕೊಂಡಾಗ ಬೆಝೋಸ್ ಅವರು ಕಂಪೆನಿಯಲ್ಲಿ ಹೊಂದಿದ್ದ ಒಟ್ಟು ಆಸ್ತಿ 90.6 ಬಿಲಿಯನ್ ಆಗಿತ್ತು. ಆ ಸಂದರ್ಭ ಬಿಲ್ ಗೇಟ್ಸ್ ಅವರ ಆಸ್ತಿ ಮೌಲ್ಯ 90.1 ಬಿಲಿಯನ್ ಡಾಲರ್ ಆಗಿತ್ತು. ಬಿಲ್ ಗೇಟ್ಸ್ ಅವರು ವಿವಿಧ ಸಮಾಜಸೇವಾ ಚಟುವಟಿಕೆಗಳಿಗೆ ಬಿಲಿಯಗಟ್ಟಲೆ ಹಣ ಸುರಿಯದೇ ಹೋಗಿರುತ್ತಿದ್ದರೆ ಅವರನ್ನು ಅರೆಕ್ಷಣ ಕೂಡಾ ಯಾರೂ ಹಿಂದಿಕ್ಕಲು ಸಾಧ್ಯವಾಗುತ್ತಿರಲಿಲ್ಲ.

ಆದರೆ ಅಮೆಝಾನ್ ತಾನು ಗಳಿಸುತ್ತಿರುವ ಹಣವನ್ನು ಮತ್ತೆ ತನ್ನ ಉದ್ಯಮಕ್ಕೇ ಸುರಿಯುತ್ತಿದೆ. ಹೊಸ ವೇರ್ ಹೌಸ್ ಗಳ ಸ್ಥಾಪನೆ ಮತ್ತು ಉದ್ಯೋಗಿಗಳ ನೇಮಕಕ್ಕಾಗಿಯೇ ತನ್ನ ಲಾಭದ ಹಣ ಉಪಯೋಗಿಸುತ್ತಿದೆ. ದೇಶಾದ್ಯಂತ ಅದು ಸಾವಿರಾರು ವೇರ್ ಹೌಸ್ ಉದ್ಯೋಗಿಗಳನ್ನು ಉದ್ಯೋಗ ಮೇಳಗಳ ಮುಖಾಂತರ ನೇಮಕಾತಿ ಮಾಡಲು ನಿರ್ಧರಿಸಿದೆ. ಇವುಗಳಲ್ಲಿ ಒಟ್ಟು 50,000 ಉದ್ಯೋಗಗಳಲ್ಲಿ 40,000 ಉದ್ಯೋಗಗಳು ಪೂರ್ಣಕಾಲಿಕವಾಗಿರುತ್ತವೆ. ಮುಂದಿನ ವರ್ಷದ ಮಧ್ಯಭಾಗದೊಳಗೆ ಒಂದು ಲಕ್ಷ ಪೂರ್ಣಕಾಲಿಕ ಉದ್ಯೋಗಿಗಳನ್ನು ನೇಮಿಸುವುದಾಗಿ ಅಮೆಝಾನ್ ಈಗಾಗಲೇ ಘೋಷಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News