90 ವರ್ಷದ ವೃದ್ಧೆಯ ಮೇಲೆ ಕಾಳದಂಧೆ ಪ್ರಕರಣ

Update: 2017-07-29 03:55 GMT

ಲಕ್ನೋ, ಜು. 29: ನಡೆಯಲು ಕಷ್ಟಪಡುವ 90 ವರ್ಷದ ವೃದ್ಧೆ ಸೀಮೆ ಎಣ್ಣೆಯ ಕಾಳದಂಧೆ ವ್ಯವಹಾರ ನಡೆಸಲು ಸಾಧ್ಯವೇ? ಉತ್ತರ ಪ್ರದೇಶ ಪೊಲೀಸರ ಪ್ರಕಾರ ಸಾಧ್ಯ. ಇಂಥ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿರುವುದು, ಈ ವೃದ್ಧ ಮಹಿಳೆ ತನ್ನ ಕುಟುಂಬದ ಜತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂರುವ ಮೂಲಕ.

ಹಮೀರ್‌ಪುರ ಪೊಲೀಸರು ರಾಮ್‌ ಕುಮಾರಿ (90) ಎಂಬುವವರ ವಿರುದ್ಧ ಕಾಳದಂಧೆ ಪ್ರಕರಣ ದಾಖಲಿಸಿದ್ದಾರೆ. ಹಮೀರ್‌ಪುರ ಬಳಿಯ ಬಿನ್ವಾರ್‌ನಲ್ಲಿ ವಾಸವಿರುವ ಈ ಮಹಿಳೆ ಬಲೆಗೆ ಬಿದ್ದದ್ದು ಹೇಗೆ ಗೊತ್ತೇ? ಜಿಲ್ಲಾ ಅಧಿಕಾರಿಗಳ ತಂಡ ಇತ್ತೀಚೆಗೆ ಬಿನ್ವಾರ್‌ನಲ್ಲಿ 9,800 ಲೀಟರ್ ಸೀಮೆಎಣ್ಣೆ ಇರುವ ಟ್ಯಾಂಕರ್ ವಶಪಡಿಸಿಕೊಂಡಿತ್ತು. ಟ್ಯಾಂಕರ್ ಮಾಲಕ ಹಾಗೂ ಚಾಲಕ ಪರಾರಿಯಾದರು. ಪೊಲೀಸರು ರಾಮ್‌ಕುಮಾರಿ ಸೇರಿದಂತೆ ಹಲವರನ್ನು ವಿಚಾರಣೆಗೆ ಗುರಿಪಡಿಸಿ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿದರು. ದುರಾದೃಷ್ಟಕ್ಕೆ ಟ್ಯಾಂಕರ್ ವಶಪಡಿಸಿಕೊಂಡದ್ದು ರಾಮ್‌ಕುಮಾರಿ ನಿವಾಸದ ಪಕ್ಕದಿಂದ.

ಪ್ರಕರಣ ದಾಖಲಿಸಿದ ಪೊಲೀಸರು ಮಹಿಳೆಯ ಬಂಧನಕ್ಕೂ ಮುಂದಾಗಿದ್ದರು. ಕುಟುಂಬದವರು ಪ್ರತಿರೋಧ ವ್ಯಕ್ತಡಿಸಿದಾಗ, ವಾಗ್ವಾದ ಆರಂಭವಾಯಿತು. ಬಳಿಕ ಗ್ರಾಮಸ್ಥರ ಮಧ್ಯ ಪ್ರವೇಶದಿಂದಾಗಿ ಪೊಲೀಸರ ತಂಡವನ್ನು ವಾಪಾಸು ಕಳುಹಿಸಲಾಯಿತು. ಕಣ್ಣು ಕಾಣದ, ನಡೆಯಲೂ ಕಷ್ಟಪಡುವ ವೃದ್ಧೆ ಕಾಳದಂಧೆ ವ್ಯವಹಾರ ನಡೆಸಲು ಸಾಧ್ಯವೇ ಎನ್ನುವುದು ಕುಟುಂಬದವರ ಪ್ರಶ್ನೆ. ಎಫ್‌ಐಆರ್‌ನಿಂದ ಅವರ ಹೆಸರು ಕಿತ್ತು ಹಾಕಲು ಗ್ರಾಮಸ್ಥರು ಮತ್ತು ಸಂಬಂಧಿಕರು ಆಗ್ರಹಿಸಿದ್ದಾರೆ. ಆದರೆ ಅವರು ಅಮಾಯಕರು ಎಂದು ಸಾಬೀತಾದರೆ ಮಾತ್ರ ಹೆಸರು ಕಿತ್ತುಹಾಕಲು ಸಾಧ್ಯ ಎನ್ನುವುದು ಪೊಲೀಸರ ವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News