ಒಡಿಸ್ಸಾದಲ್ಲಿ ಸಿಡಿಲಿಗೆ 11 ಬಲಿ
ಭುವನೇಶ್ವರ, ಜು. 30: ಒಡಿಸ್ಸಾದ ಭದ್ರಾಕ್, ಬಾಲಸೋರ್ ಹಾಗೂ ಕೇಂದ್ರಪಾರ ಜಿಲ್ಲೆಯಲ್ಲಿ ರವಿವಾರ ಸಿಡಿಲ ಆಘಾತಕ್ಕೆ 11 ಮಂದಿ ಮೃತಪಟ್ಟಿದ್ದಾರೆ ಹಾಗೂ 8 ಮಂದಿ ಗಾಯಗೊಂಡಿದ್ದಾರೆ.
ಭದ್ರಾಕ್‌ನಲ್ಲಿ 5 ಮಂದಿ, ಬಾಲಸೋರ್ ಹಾಗೂ ಕೇಂದ್ರಪಾರಾ ಜಿಲ್ಲೆಗಳಲ್ಲಿ ತಲಾ ಮೂರು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರಾಕ್ ಚಂಡಿಬಲಿ ಬ್ಲಾಕ್‌ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ. ಟಿಹಿಡಿ ಬ್ಲಾಕ್‌ನ ಒರಾಲಿ ಗ್ರಾಮ ಹಾಗೂ ಭದ್ರಾಕ್ ಬ್ಲಾಕ್‌ನ ಬಾಂಭಿಲಾ ಗ್ರಾಮಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಎಂದು ಜಿಲ್ಲಾ ತುರ್ತು ನಿರ್ವಹಣಾ ಅಧಿಕಾರಿ ರಾಜೇಂದ್ರ ಪಾಂಡ ತಿಳಿಸಿದ್ದಾರೆ. ಸಿಡಿಲಿನ ಆಘಾತಕ್ಕೆ ಗಾಯಗೊಂಡ ಇತರ ಮೂವರನ್ನು ಬಸುದೇವಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬಾಲಸೋರ್ ಜೆಲ್ಲೆಯ ಸ್ರೀಜಂಗ್ ಹಾಗೂ ಕುಲಿಗಾಂವ್ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇದೇ ಪ್ರದೇಶದ ಮರವೊಂದರ ಅಡಿಯಲ್ಲಿ ನಿಂತದ್ದ ವ್ಯಕ್ತಿಯೊಬ್ಬ ಕೂಡ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಸೋರ್‌ನಲ್ಲಿ ಸಿಡಿಲ ಆಘಾತಕ್ಕೆ ಗಾಯಗೊಂಡ 5 ಮಂದಿಯನ್ನು ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.