ಇದು ಭೂಕಂಪಕ್ಕಿಂತ ಅಪಾಯಕಾರಿ

Update: 2017-07-31 18:52 GMT

ಭಾರತದ 29 ಪ್ರಮುಖ ನಗರಗಳು ತೀವ್ರ ಭೂಕಂಪ ವಲಯದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತನ್ನ ವರದಿಯಲ್ಲಿ ತಿಳಿಸಿದೆ. ದಿಲ್ಲಿ, ಪಾಟ್ನಾ, ಶ್ರೀನಗರ, ಕೊಹಿಮಾ, ಪುದುಚೇರಿ, ಗುವಾಹಟಿ, ಹೀಗೆ ಉತ್ತರ ಭಾರತದ ಪ್ರಮುಖ ನಗರಗಳನ್ನು ಈ ವಲಯದಲ್ಲಿ ಹೆಸರಿಸಲಾಗಿದೆ. ಬಹುತೇಕ ಹಿಮಾಲಯಕ್ಕೆ ತಪ್ಪಲಿನ ನಗರಗಳು ಇವಾಗಿವೆ. ಸಂಪೂರ್ಣ ಈಶಾನ್ಯ ಪ್ರದೇಶ, ಜಮ್ಮು-ಕಾಶ್ಮೀರದ ಕೆಲ ಭಾಗಗಳು, ಹಿಮಾಚಲ ಪ್ರದೇಶ, ಗುಜರಾತ್, ಉತ್ತರಾಖಂಡಗಳನ್ನು ವರದಿ ಪ್ರಮುಖವಾಗಿ ಉಲ್ಲೇಖಿಸಿದೆ. ಇವುಗಳಲ್ಲಿ ಗುಜರಾತ್ ರಾಜ್ಯವಂತೂ ಭೂಕಂಪದ ಕಾರಣಕ್ಕಾಗಿ ಹಲವು ಬಾರಿ ದೇಶದಲ್ಲಿ ಸುದ್ದಿಯಾಗಿದೆ.

ಭುಜ್, ಕಚ್ ಸೇರಿದಂತೆ ಹಲವು ಪ್ರಮುಖ ನಗರಗಳು ಭೀಕರ ಭೂಕಂಪದ ರುಚಿಯನ್ನು ಉಂಡಿವೆ. ಆ ವಿಕೋಪದ ಗಾಯಗಳು ಇನ್ನೂ ಉಳಿದುಕೊಂಡಿವೆ. ಉತ್ತರಾಖಂಡವೂ ಪ್ರಕೃತಿ ವಿಕೋಪದಿಂದ ಜರ್ಝರಿತವಾದ ರಾಜ್ಯಗಳಲ್ಲೊಂದು. ಭಾರೀ ಪ್ರವಾಹದಿಂದ ಕೊಚ್ಚಿಹೋದ ಜನಜೀವನಕ್ಕೆ ಇಂದಿಗೂ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಇದು ಕೇವಲ ಉತ್ತರ ಭಾರತದ ಹಿಮಾಲಯ ತಪ್ಪಲಿಗೆ ಸೀಮಿತವಾಗಿಲ್ಲ. ಮಹಾರಾಷ್ಟ್ರದ ಲಾತೂರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ದಶಕಗಳು ಸಂದಿವೆಯಾದರೂ, ಆ ದುರಂತ ದುಃಸ್ವಪ್ನವಾಗಿ ದಕ್ಷಿಣ ಭಾರತವನ್ನು ಇನ್ನೂ ಕಾಡುತ್ತಿದೆ. ಅಷ್ಟೇ ಏಕೆ, ನಮ್ಮ ನೆರೆಯ ತಮಿಳುನಾಡಿನಲ್ಲಿ ಸುನಾಮಿಯಿಂದ ತತ್ತರಿಸಿದ ಬದುಕು ನಮ್ಮಿಳಗೆ ಹತ್ತು ಹಲವು ಪಾಠಗಳಾಗಿ ಉಳಿದುಕೊಂಡಿದೆ. ಪ್ರಕೃತಿಯ ಶಕ್ತಿಯ ಮುಂದೆ ಮನುಷ್ಯ ಎಷ್ಟು ಅಲ್ಪ ಎನ್ನುವುದನ್ನು ಸುನಾಮಿ ನೆನಪಿಸಿತ್ತು. ಕೇಂದ್ರ ವರದಿಯೇನೋ ಇಂತಿಂತಹ ಪ್ರದೇಶಗಳು ಭೂಕಂಪ ವಲಯ ಎಂದು ಘೋಷಿಸಬಹುದು. ಆದರೆ ಅಷ್ಟಕ್ಕೇ ಭೂಕಂಪವನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಇದು ವಿಜ್ಞಾನದ ಮಿತಿ. ಇದೇ ಸಂದರ್ಭದಲ್ಲಿ ಇನ್ನೊಂದನ್ನು ನೆನಪಿಟ್ಟುಕೊಳ್ಳಬೇಕು. ಪ್ರಕೃತಿ ವಿಕೋಪದಿಂದ ನಡೆಯುವ ಸಾವು ನೋವುಗಳಿಗಿಂತ ಮನುಷ್ಯನ ಸ್ವಯಂಕೃತಾಪರಾಧ ಗಳೇ ದುರಂತವನ್ನು ಭಯಾನಕಗೊಳಿಸುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಗುಜರಾತ್ ಭೂಕಂಪ.

ಗುಜರಾತ್‌ನಲ್ಲಿ ಭೂಕಂಪದಿಂದ ನಡೆದ ಸಾವು ನೋವುಗಳನ್ನು ಅಧ್ಯಯನ ಮಾಡಿದಾಗ, ಹಳೆ ನಗರಕ್ಕಿಂತ, ಹೊಸ ನಗರಗಳಲ್ಲೇ ಹೆಚ್ಚು ಸಾವು ನೋವು ಸಂಭವಿಸಿದ್ದು ಬೆಳಕಿಗೆ ಬಂತು. ಹೊಸದಾಗಿ ಕಟ್ಟಿದ ಕಟ್ಟಡಗಳೇ ಭೂಕಂಪಕ್ಕೆ ಮೊದಲು ನೆಲಕಚ್ಚಿದ್ದವು. ಕೆಲವು ಬ್ರಿಟಿಷ್ ಕಾಲದ ಕಟ್ಟಡಗಳು ಭೂಕಂಪ ಸಂದರ್ಭದಲ್ಲಿ ಹೆಚ್ಚು ಹಾನಿಗೆ ಒಳಗಾಗಿರಲಿಲ್ಲ. ಅವುಗಳಲ್ಲಿ ಸಣ್ಣ ಪುಟ್ಟ ಬಿರುಕುಗಳಷ್ಟೇ ಕಾಣಿಸಿಕೊಂಡಿದ್ದವು. ಇದೇ ಸಂದರ್ಭದಲ್ಲಿ, ಹೊಸದಾಗಿ ನಿರ್ಮಾಣಗೊಂಡ ಬೃಹತ್ ಕಟ್ಟಡಗಳು ಪೈಪೋಟಿಯಿಂದ ಕುಸಿದು ಬಿದ್ದು, ಭಾರೀ ಸಾವುನೋವುಗಳಿಗೆ ಕಾರಣವಾದವು. ಅಷ್ಟೇ ಅಲ್ಲ, ಭೂಕಂಪ ಸಂಭವಿಸಿ, ಸಾವು ನೋವುಗಳ ಅಂಕಿಅಂಶಗಳು ಪ್ರಕಟವಾದ ಬೆನ್ನಿಗೇ ನೂರಾರು ಕಟ್ಟಡ ಇಂಜಿನಿಯರ್‌ಗಳು, ಗುತ್ತಿಗೆದಾರರು ತಲೆಮರೆಸಿಕೊಂಡರು.

ಭೂಕಂಪವೇನೋ ಸಂಭವಿಸಿರಬಹುದು. ಆದರೆ ಅಪಾರ ಸಾವು ನೋವುಗಳಿಗೆ ಭ್ರಷ್ಟ ಇಂಜಿನಿಯರ್‌ಗಳು, ಗುತ್ತಿಗೆದಾರರೇ ಕಾರಣರಾಗಿದ್ದರು. ಕಟ್ಟಡಗಳನ್ನು ನಿರ್ಮಾಣಗಳಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರಗಳನ್ನು ಗುಜರಾತ್ ಭೂಕಂಪ ಬಹಿರಂಗ ಮಾಡಿತು. ಕುಸಿದು ಬಿದ್ದ ಕೆಲವು ನಗರಗಳಂತೂ ತೀರಾ ಇಕ್ಕಟ್ಟು ಪ್ರದೇಶಗಳಲ್ಲಿ ನಿರ್ಮಾಣಗೊಂಡಿದ್ದವು. ಒತ್ತುಒತ್ತಾಗಿ ನಿರ್ಮಿಸಿದ ಮನೆಗಳು, ಕಟ್ಟಡಗಳು ಕುಸಿದು ಬಿದ್ದಾಗ, ಜನರಿಗೆ ಪಾರಾಗಲು ಸ್ಥಳಾವಕಾಶವೇ ಇರಲಿಲ್ಲ. ಅವೈಜ್ಞಾನಿಕವಾದ ನಗರ ನಿರ್ಮಾಣದ ಕಾರಣದಿಂದಲೇ ಅವರೆಲ್ಲ ಜೀವಂತ ಸಮಾಧಿಯಾಗಬೇಕಾಯಿತು. ಮುಂಬೈಯಂತಹ ನಗರಗಳಲ್ಲಿ, ಅವಧಿ ಮುಗಿದ ನೂರಾರು ಕಟ್ಟಡಗಳಲ್ಲಿ ಜನರು ಇನ್ನೂ ವಾಸವಾಗಿದ್ದಾರೆ.

ಅವಧಿ ಮುಗಿದಿದೆಯೆಂದು ಮನಪಾದ ಸಂಬಂಧಪಟ್ಟ ಅಧಿಕಾರಿಗಳು ಘೋಷಿಸಿದ್ದಾರಾದರೂ, ಅವುಗಳನ್ನು ಕೆಡಹುವುದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ವಿವಿಧ ಲಾಬಿಗಳು ಇದರ ಹಿಂದೆ ಕೆಲಸ ಮಾಡುತ್ತಿರುವುದರಿಂದ, ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಒಂದು ಲಘು ಭೂಕಂಪ ಸಂಭವಿಸಿದರೂ ಸಾಕು, ಮುಂಬೈಯಂತಹ ನಗರಗಳಲ್ಲಿ ಭಾರೀ ಪ್ರಮಾಣದ ಸಾವು ನೋವುಗಳು ಸಂಭವಿಸುವ ಅಪಾಯವಿದೆ. ಉತ್ತರಾಖಂಡದ ಭೀಕರ ಪ್ರಕೃತಿವಿಕೋಪ ನಮಗೆ ಇನ್ನೊಂದು ಉದಾಹರಣೆಯಾಗಿದೆ. ಗಂಗಾನದಿಯಲ್ಲಿ ನಡೆಯುತ್ತಿರುವ ಭಾರೀ ಅಕ್ರಮ ಗಣಿಗಾರಿಕೆಗಳು ಹೇಗೆ ಒಂದು ಕೃತಕವಾದ ಭೀಕರ ಪ್ರವಾಹವನ್ನು ಸೃಷ್ಟಿಸಿತು ಎನ್ನುವುದನ್ನು ನಾವು ನೋಡಿದ್ದೇವೆ.

ಉತ್ತರಾಖಂಡದ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ಹಾಗೆಯೇ ಹಿಮಾಲಯದ ತಪ್ಪಲಲ್ಲಿ ನಡೆಯುತ್ತಿರುವ ಪರಿಸರ ಮಾಲಿನ್ಯಗಳೆಲ್ಲವೂ ಅಂತಿಮವಾಗಿ ಒಂದು ಬೃಹತ್ ವಿಕೋಪವನ್ನು ಉತ್ತರಾಖಂಡಕ್ಕೆ ಕೊಡುಗೆಯಾಗಿ ನೀಡಿದವು. ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಧಾರ್ಮಿಕ ಕಟ್ಟಡಗಳೆಲ್ಲವೂ ಈ ವಿಕೋಪದಲ್ಲಿ ಕೊಚ್ಚಿಕೊಂಡು ಹೋದವು. ಆದರೆ ಇಂದಿಗೂ ಮನುಷ್ಯ ಈ ವಿಕೋಪದ ಹೊಣೆಯನ್ನು ಹೊತ್ತುಕೊಳ್ಳಲು ಸಿದ್ಧನಿಲ್ಲ. ಯಾಕೆಂದರೆ, ಉತ್ತರಾಖಂಡದಲ್ಲಿ ಅಕ್ರಮ ಮರಳುಗಾರಿಕೆ, ಗಣಿಗಾರಿಕೆಗಳು ಮುಂದುವರಿಯುತ್ತಿವೆ. ಮಾತ್ರವಲ್ಲ, ಅಕ್ರಮವಾಗಿ ನಿರ್ಮಾಣಗೊಂಡಿರುವ ಧಾರ್ಮಿಕ ಕಟ್ಟಡಗಳನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸುವಲ್ಲಿಯೂ ಸರಕಾರ ವಿಫಲವಾಗಿದೆ.

ನದಿ ಪಾತ್ರದ ಬಹುತೇಕ ಭೂಮಿ ಒತ್ತುವರಿಯಾಗಿದ್ದು, ಅನಿವಾರ್ಯವಾಗಿ ಒಂದು ದೊಡ್ಡ ನೆರೆಗೆ ನದಿ ಉಕ್ಕಿ ಹರಿಯಲೇಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ, ಬಿಸಿಯಾಗುತ್ತಿರುವ ತಾಪಮಾನದಿಂದಾಗಿ ಹಿಮಾಲಯ ಕರಗತೊಡಗಿದೆ. ಇದು ಇನ್ನಷ್ಟು ದೊಡ್ಡದೊಂದು ದುರಂತಕ್ಕೆ ಕಾರಣವಾಗಲಿದೆ. ಇಷ್ಟೇ ಅಲ್ಲ. ಇಂದು ಅರ್ಧಕ್ಕರ್ಧ ಭಾರತ ಸರ್ವನಾಶವಾಗಲು ಒಂದು ಭೂಕಂಪವೇ ಸಾಕು ಎನ್ನುವಂತಹ ಸ್ಥಿತಿಯನ್ನು ನಾವೇ ನಿರ್ಮಾಣ ಮಾಡಿಕೊಂಡಿದ್ದೇವೆ. ವಿದೇಶಗಳಲ್ಲಿ ಮುಚ್ಚಲ್ಪಟ್ಟ ಅಣು ಸ್ಥಾವರಗಳು ಒಂದೊಂದಾಗಿ ಭಾರತದಲ್ಲಿ ನೆಲೆ ಕಾಣಲಾರಂಭಿಸಿವೆ. ಈ ಸ್ಥಾವರಗಳಿರುವ ಪ್ರದೇಶದಲ್ಲೇನಾದರೂ ಬೃಹತ್ ಭೂಕಂಪಗಳು ಸಂಭವಿಸಿದರೆ, ಯಾವುದೇ ಯುದ್ಧಗಳು ನಡೆಯದೆಯೇ ಭಾರತ ನಾಶವಾಗಬಹುದು. ಭಾರತಕ್ಕೆ ಇಂದು ಭೂಕಂಪಕ್ಕಿಂತಲೂ ದೊಡ್ಡ ಸವಾಲು ಈ ಅಣುಸ್ಥಾವರಗಳಾಗಿವೆ. ಭೂಕಂಪವನ್ನು ತಡೆಯಲು ಸಾಧ್ಯವಿಲ್ಲ.

ಆದರೆ ಭೂಕಂಪದಿಂದ ಸಾವು ನೋವುಗಳಾಗದಂತೆ ತಡೆಯುವುದಕ್ಕೆ ನಮಗೆ ಅವಕಾಶಗಳಿವೆ. ಆ ಅವಕಾಶವನ್ನು ನಾವು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಾಗಿದೆ. ಮುಖ್ಯವಾಗಿ, ನಗರಗಳಲ್ಲಿರುವ ಅವಧಿ ಮುಗಿದ ಕಟ್ಟಡಗಳನ್ನು ನೆಲಸಮಗೊಳಿಸುವುದಕ್ಕೆ ಒಂದು ಯೋಜನೆಯನ್ನು ರೂಪಿಸಬೇಕಾಗಿದೆ. ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ನಗರಗಳನ್ನು ಪುನರ್ ನಿರ್ಮಿಸುವ ಕುರಿತಂತೆ ಯೋಚಿಸಬೇಕಾಗಿದೆ. ಅಣುಸ್ಥಾವರಗಳನ್ನು ಆಮದು ಮಾಡುವ ಮೊದಲು ಸಾವಿರ ಬಾರಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಾವಿಂದು ಹೆದರಬೇಕಾದುದು ಭೂಕಂಪಕ್ಕಲ್ಲ, ಭ್ರಷ್ಟ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ. ಅವರಿಂದಲೇ ಭೂಕಂಪವೆನ್ನುವುದು ಬರ್ಬರ ರೂಪವನ್ನು ತಾಳುತ್ತಿದೆ. ಆದುದರಿಂದ ಇವರಿಗೆ ಕಡಿವಾಣ ಹಾಕದೆ ಎಲ್ಲ ಹೊಣೆಯನ್ನು ಪ್ರಕೃತಿಯ ತಲೆಗೆ ಕಟ್ಟುವುದು ಬಹುದೊಡ್ಡ ಆತ್ಮವಂಚನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News