ದತ್ತಾಂಶ ಸಂರಕ್ಷಣೆಗೆ ನೀತಿ ರೂಪಿಸಲು ನ್ಯಾ.ಶ್ರೀಕೃಷ್ಣ ನೇತೃತ್ವದ ಸಮಿತಿ ರಚನೆ

Update: 2017-08-01 16:10 GMT

ಹೊಸದಿಲ್ಲಿ,ಆ.1: ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲು ಕೇಂದ್ರ ಸರಕಾರವು ವಿರುದ್ಧವಾಗಿದ್ದರೂ, ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು ಸಮಿತಿಯೊಂದನ್ನು ಅದು ರಚಿಸಿದೆ.

ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ನೇತೃತ್ವದಲ್ಲಿ 10 ಸದಸ್ಯರ ಸಮಿತಿಯೊಂದನ್ನು ರಚಿಸಿ ಸರಕಾರವು ಸೋಮವಾರ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಮಂಗಳವಾರ ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿದರು. ಇದೇ ವೇಳೆ ಖಾಸಗಿತನಕ್ಕೆ ಮೂಲಭೂತ ಹಕ್ಕಿನ ಸ್ಥಾನಮಾನ ನೀಡುವುದನ್ನು ಅವರು ವಿರೋಧಿಸಿದರು.

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ದ ಪರ ವಾದಿಸುತ್ತಿರುವ ಮೆಹ್ತಾ ಅವರು, ಸಮಿತಿಯು ಪ್ರಾಧಿಕಾರದ ಸಿಇಒ ಅಜಯ ಭೂಷಣ್ ಮತ್ತು ವಿಧಿ ಲೀಗಲ್‌ನ ಸ್ಥಾಪಕ ಹಾಗೂ ಸಂಶೋಧನಾ ನಿರ್ದೇಶಕರಾಗಿರುವ ನ್ಯಾಯವಾದಿ ಅರ್ಘ್ಯ ಸೇನಗುಪ್ತಾ ಅವರನ್ನೂ ಒಳಗೊಂಡಿರಲಿದೆ ಎಂದು ತಿಳಿಸಿದರು.

ಈ ಸಮಿತಿಯು ದತ್ತಾಂಶ ರಕ್ಷಣೆಗೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸಲಿದೆ ಎಂದ ಅವರು, ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವುದು ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ ಎಂದು ಅದೇ ಉಸಿರಿನಲ್ಲಿ ಹೇಳಿದರು.

ಖಾಸಗಿತನವು ಮೂಲಭೂತ ಹಕ್ಕು ಅಲ್ಲ ಎನ್ನುವುದು ಯುಐಡಿಎಐದ ಸ್ಪಷ್ಟ ನಿಲುವಾಗಿದೆ ಎಂದು ವಾದವನ್ನು ಆರಂಭಿಸಿದ ಮೆಹ್ತಾ, ಶಾಸನಗಳನ್ನು ಜಾರಿಗೊಳಿಸುವ ಮೂಲಕ ಖಾಸಗಿತನದ ಕೆಲವು ರೂಪಗಳನ್ನು ರಕ್ಷಿಸಲು ಸರಕಾರವು ಸಜ್ಜಿತವಾಗಿದೆ ಎಂದು ಪ್ರತಿಪಾದಿಸಿದರು.

ಇದಕ್ಕೆ ತಿರುಗೇಟು ನೀಡಿದ ಪೀಠವು, ಶಾಸನ ಮತ್ತು ಸಂವಿಧಾನದ ವ್ಯಾಖ್ಯಾನಗಳ ನಡುವೆ ಸಾಗರದಷ್ಟು ವ್ಯತ್ಯಾಸವಿದೆ ಮತ್ತು ಸಂವಿಧಾನವನ್ನು ವ್ಯಾಖ್ಯಾನಿಸುವುದು ಸಂವಿಧಾನ ನ್ಯಾಯಾಲಯದ ಕೆಲಸವಾಗಿದೆಯೇ ಹೊರತು ಸಂಸತ್‌ನದಲ್ಲ ಎಂದು ಹೇಳಿತು.

ಇದನು ಮೆಹ್ತಾ ಒಪ್ಪಿಕೊಂಡರಾದರೂ ಖಾಸಗಿತನವು ವೌಲಿಕ ಹಕ್ಕು ಆಗಿದೆ ಯೇನೋ ನಿಜ, ಆದರೆ ಖಂಡಿತವಾಗಿಯೂ ಅದು ಮೂಲಭೂತ ಹಕ್ಕು ಅಲ್ಲ ಎಂದು ಒತ್ತಿ ಹೇಳಿದರು.

ಒಂದು ಹಂತದಲ್ಲಿ ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ ಮತ್ತು ಡಿ.ವೈ.ಚಂದ್ರಚೂಡ ಅವರು, ಖಾಸಗಿತನವನ್ನು ಅತಿಕ್ರಮಿಸುವ ಅಥವಾ ಖಾಸಗಿತನವನ್ನು ವಂಚಿಸುವ ಕಾನೂನೊಂದು ನಾಳೆಯೇ ಸೃಷ್ಟಿಯಾದರೆ ವ್ಯಕ್ತಿಯೋರ್ವನಿಗೆ ಪರಿಹಾರವೇನು ಎಂದೂ ಪ್ರಶ್ನಿಸಿದರು.

ಖಾಸಗಿತನ ಮೂಲಭೂತ ಹಕ್ಕು ಅಲ್ಲ ಎಂದು ನೀವು ವಾದಿಸುತ್ತಿದ್ದೀರಿ. ಹೀಗಿರುವಾಗ ವ್ಯಕ್ತಿಯೋರ್ವ ಇಂತಹ ಕಾನೂನನ್ನು ಪ್ರಶ್ನಿಸಲು ಹೇಗೆ ಸಾಧ್ಯ? ಕಾನೂನು ಮೂಲಭೂತ ಹಕ್ಕನ್ನು ಉಲ್ಲಂಘಿಸಿದಾಗ ಮಾತ್ರ ಆತ ಸಂವಿಧಾನ ನ್ಯಾಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ಪೀಠವು ಹೇಳಿತು.

ಇದನ್ನು ಪ್ರತಿಯೊಂದು ಪ್ರಕರಣದ ಆಧಾರದಲ್ಲಿ ನಿರ್ಧರಿಸಬೇಕಾಗುತ್ತದೆ ಎಂದು ಮೆಹ್ತಾ ಹೇಳಿದರು.

ಭಾರತದಲ್ಲಿ ಖಾಸಗಿತನಕ್ಕಿಂತ ಆಹಾರ ಮತ್ತು ಶೌಚಾಲಯಗಳಂತಹ ಸೌಲಭ್ಯಗಳು ಹೆಚ್ಚು ಮುಖ್ಯವಾಗಿವೆ ಎನ್ನುವ ಮೂಲಕ ಮೆಹ್ತಾ ತನ್ನ ವಾದಕ್ಕೆ ಮಂಗಳ ಹಾಡಿದರು.

ಬುಧವಾರ ವಾದ-ವಿವಾದಗಳು ಮುಂದುವರಿಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News