ಭಾರತದಲ್ಲಿ ಉನ್ನತ ಶಿಕ್ಷಣದ ಸ್ಥಿತಿಯೇನು?

Update: 2017-08-01 18:40 GMT

ಮುಸ್ಲಿಂ ಸಮುದಾಯದಿಂದ ಕೇವಲ ಶೇ. 4.7 ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದರೆ, ಈ ಸಮುದಾಯದ ಕೇವಲ ಶೇ. 3.4 ಮಂದಿ ಶಿಕ್ಷಕ ವೃತ್ತಿಯಲ್ಲಿದ್ದಾರೆ.

ಳೆದ ಒಂದು ದಶಕದಲ್ಲಿ ಭಾರತ ಉನ್ನತ ಶಿಕ್ಷಣ ರಂಗದಲ್ಲಿ ಭಾರೀ ಮುನ್ನಡೆ ಸಾಧಿಸಿದೆ. ಉನ್ನತ ಶಿಕ್ಷಣದ ಘೋಷಿತ ಉದ್ದೇಶ, ಆರ್ಥಿಕ ಬೆಳವಣಿಗೆ. 12 ವರ್ಷಗಳ ಶಾಲಾ ಶಿಕ್ಷಣದ ಬಳಿಕ ಗಳಿಸಿದ ಯಾವುದೇ ಕೋರ್ಸ್, ಕೌಶಲ್ಯ ಅಥವಾ ತರಬೇತಿಯನ್ನು ‘ಉನ್ನತ ಶಿಕ್ಷಣ’ ಎನ್ನಲಾಗುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ವಿಶ್ವವಿದ್ಯಾನಿಲಯವು ಇತ್ತೀಚೆಗೆ ಆಲ್ ಇಂಡಿಯಾ ಸರ್ವೇ ಆಫ್ ಹೈಯರ್ ಎಜುಕೇಶನ್ (ಎಐಎಸ್‌ಎಚ್‌ಇ) ಅನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯು ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳ ಪರಿಸ್ಥಿತಿ ಕುರಿತ ಮಾಹಿತಿಯನ್ನು, ನಿಜ ಸ್ಥಿತಿಯನ್ನು ಹೇಳುವ ಅಂಕಿ ಸಂಖ್ಯೆಗಳನ್ನು ಒದಗಿಸುತ್ತದೆ. 2011 ಮತ್ತು 2016ರ ನಡುವಣ ಅಭಿವೃದ್ಧಿಯನ್ನು ಒಳಗೊಂಡಿರುವ ಈ ಸಮೀಕ್ಷೆಯನ್ನು 2016ರಲ್ಲಿ ಪೂರ್ಣಗೊಳಿಸಲಾಯಿತು. ಸಮೀಕ್ಷೆಯ ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗಿದೆ.

ನಮ್ಮ ದೇಶದಲ್ಲಿ 799 ವಿಶ್ವವಿದ್ಯಾನಿಲಯಗಳಿವೆ; 39,071 ಕಾಲೇಜುಗಳು ಮತ್ತು 11,923 ‘ಸ್ಟಾಂಡ್ ಅಲೋನ್’ ಸಂಸ್ಥೆಗಳಿವೆ. 268 ವಿಶ್ವವಿದ್ಯಾನಿಲಯ (ವಿವಿ)ಗಳು ಅಫಿಲಿ ಯೇಟಿಂಗ್ ವಿವಿಗಳು, ಅಂದರೆ ಅವುಗಳಲ್ಲಿ ಕಾಲೇಜುಗಳಿವೆ.

277 ವಿವಿಗಳು ಖಾಸಗಿ ಆಡಳಿತಕ್ಕೊಳಪಟ್ಟಿವೆ, 307 ವಿವಿಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಮಹಿಳೆಯರಿಗಾಗಿಯೇ ಮೀಸಲಿರುವ 14 ವಿವಿಗಳಿವೆ; ಇವುಗಳಲ್ಲಿ ನಾಲ್ಕು ವಿವಿಗಳು ರಾಜಸ್ಥಾನದಲ್ಲೂ ಎರಡು ವಿವಿಗಳು ತಮಿಳುನಾಡಲ್ಲೂ ಇವೆ.

459 ಸಾಮಾನ್ಯ(ಜನರಲ್), 101 ತಾಂತ್ರಿಕ, 64 ಕೃಷಿ ಮತ್ತು ಸಂಬಂಧಿತ, 50 ವೈದ್ಯಕೀಯ, 20 ಕಾನೂನು, 11 ಸಂಸ್ಕೃತ ಮತ್ತು 7 ಭಾಷಾ ವಿವಿಗಳಿವೆ. (ಭಾಷಾ ವಿವಿಗಳು ತೆಲುಗು, ಕನ್ನಡ, ಉರ್ದು ಇತ್ಯಾದಿ ಭಾಷೆಗಳಿಗಾಗಿ ಇರುವ ವಿವಿಗಳು).

ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಕಾಲೇಜುಗಳಿರುವ ಟಾಪ್ 8 ರಾಜ್ಯಗಳು:

ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಮಧ್ಯ ಪ್ರದೇಶ.

ದೇಶದಲ್ಲಿ ಗರಿಷ್ಠ ಸಂಖ್ಯೆಯ ಅಂದರೆ 970 ಕಾಲೇಜುಗಳು ಬೆಂಗಳೂರು ಜಿಲ್ಲೆಯಲ್ಲಿವೆ.

ಕಾಲೇಜು ಸಾಂದ್ರತೆ:

ಕಾಲೇಜು ಸಾಂದ್ರತೆ, ಅಂದರೆ (18-23ರ ವಯೋಮಾನದ) ತಲಾ ಒಂದು ಲಕ್ಷ ಜನ ಸಂಖ್ಯೆಗೆ ಇರುವ ಕಾಲೇಜುಗಳ ಸಂಖ್ಯೆಯ ದೃಷ್ಟಿಯಿಂದ ತೆಲಂಗಾಣ ಮೊದಲ ಸ್ಥಾನದಲ್ಲಿದೆ. ಪ್ರತೀ ಅರ್ಹ ಒಂದು ಲಕ್ಷ ಜನ ಸಂಖ್ಯೆಗೆ ಅಲ್ಲಿ 60 ಕಾಲೇಜುಗಳಿವೆ ಬಿಹಾರದಲ್ಲಿ ಈ ಸಂಖ್ಯೆ 7ಕ್ಕೆ ಇಳಿಯುತ್ತದೆ.

ಗ್ರಾಮೀಣ ವರ್ಸಸ್ ನಗರ ಪ್ರದೇಶ:

ಒಟ್ಟು ಕಾಲೇಜುಗಳಲ್ಲಿ ಶೇ. 60 ಕಾಲೇಜುಗಳು ಗ್ರಾಮೀಣ ಪ್ರದೇಶದಲ್ಲಿವೆ. ಶೇ. 11.1 ಕಾಲೇಜುಗಳು ಮಹಿಳೆಯರಿಗಾಗಿಯೇ ಇವೆ. ಶೇ. 1.7 ಕಾಲೇಜುಗಳಲ್ಲಿ ಮಾತ್ರ ಪಿಎಚ್‌ಡಿಗೆ ಅವಕಾಶ ಇದೆ. ಶೇ. 33 ಕಾಲೇಜುಗಳು ಸ್ನಾತಕೋತ್ತರ ಮಟ್ಟದ ಕಾರ್ಯಕ್ರಮ ಹೊಂದಿವೆ.

ಸಾರ್ವಜನಿಕ ವರ್ಸಸ್ ಖಾಸಗಿ:

ಶೇ. 78 ಕಾಲೇಜುಗಳು ಖಾಸಗಿ ಆಡಳಿತಕ್ಕೊಳಪಟ್ಟಿವೆ; ಶೇ. 64 ಖಾಸಗಿ- ಅನುದಾನ ರಹಿತ ಮತ್ತು ಶೇ. 14 ಖಾಸಗಿ- ಅನುದಾನಿತ ಕಾಲೇಜುಗಳಾಗಿವೆ. ಎಪಿ ಮತ್ತು ತೆಲಂಗಾಣದಲ್ಲಿ ಶೇ. 80 ಮತ್ತು ತಮಿಳುನಾಡಿನಲ್ಲಿ ಶೇ. 76 ಖಾಸಗಿ- ಅನುದಾನರಹಿತ ಕಾಲೇಜುಗಳಿವೆ. ಬಿಹಾರ ಮತ್ತು ಅಸ್ಸಾಂನಲ್ಲಿ ಅನುಕ್ರಮವಾಗಿ, ಇವುಗಳ ಸಂಖ್ಯೆ ಶೇ. 13 ಮತ್ತು 10.

ಹುಡುಗರು ವರ್ಸಸ್ ಹುಡುಗಿಯರು:

ಉನ್ನತ ಶಿಕ್ಷಣದಲ್ಲಿ ಒಟ್ಟು ಪ್ರವೇಶಾತಿ 34.6 ಮಿಲಿಯ; ಇದರಲ್ಲಿ 18.6 ಮಿಲಿಯ ಹುಡುಗರು ಮತ್ತು 16 ಮಿಲಿಯ ಹುಡುಗಿಯರು. ಒಟ್ಟು ಪ್ರವೇಶಾತಿಯಲ್ಲಿ ಹುಡುಗಿಯರು ಶೇ. 46.2 ಇದ್ದಾರೆ.

ಜಿಇಆರ್:

ಗ್ರೋಸ್ ಎನ್ರೋಲ್‌ಮೆಂಟ್ ರೇಶಿಯೋ (ಜಿಇಆರ್) ಅಂದರೆ ಒಟ್ಟು ಪ್ರವೇಶಾತಿ ದಾಮಾಶಯ. ಶೇ. 24.5 ಪುರುಷರ ಜನಸಂಖ್ಯೆಗೆ ಜಿಇಆರ್ ಶೇ. 25.4 ಮತ್ತು ಮಹಿಳೆಯರಿಗೆ ಶೇ. 23.5 ಇದೆ. ಪರಿಶಿಷ್ಟ ಜಾತಿಗಳಿಗೆ ಶೇ. 19.9 ಮತ್ತು ಪರಿಶಿಷ್ಟ ವರ್ಗಗಳಿಗೆ ಇದು ಶೇ. 14.2 ಇದೆ.

ಪದವಿ ಮಟ್ಟದ ಕಾರ್ಯಕ್ರಮದಲ್ಲಿ ಶೇ. 79.3 ವಿದ್ಯಾರ್ಥಿಗಳು ಇದ್ದರೆ, ಪಿಎಚ್‌ಡಿಗಾಗಿ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 1.26 ಲಕ್ಷ. ಅಂದರೆ, ಇದು ಒಟ್ಟು ವಿದ್ಯಾರ್ಥಿ ಪ್ರವೇಶಾತಿಯ ಶೇ. 0.4ಕ್ಕಿಂತ ಕಡಿಮೆ.

ಅಧ್ಯಯನ ವಿಷಯಗಳು:

ಪದವಿ ಮಟ್ಟ ಹಾಗೂ ಸಂಶೋಧನೆಯ ಆಯ್ಕೆಯಲ್ಲಿ ವೈರುಧ್ಯ ಕಾಣಿಸುತ್ತದೆ.(ಮಾನವಿಕ ವಿಷಯಗಳಲ್ಲಿ) ಬಿಎ ಕೋರ್ಸಿಗೆ ಶೇ. 40 ಮತ್ತು ವಿಜ್ಞಾನ ಕೋರ್ಸ್‌ಗಳಿಗೆ ಶೇ. 16 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ, ಪಿಎಚ್‌ಡಿ ಮಟ್ಟದಲ್ಲಿ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸಾಮಾಜಿಕ ಅಂಶಗಳು:

ಒಟ್ಟು ದಾಖಲಾತಿಯಲ್ಲಿ ಎಸ್ಸಿ ವಿದ್ಯಾರ್ಥಿಗಳು ಶೇ. 13.9 ಮತ್ತು ಎಸ್ಟಿ ವಿದ್ಯಾರ್ಥಿಗಳು ಶೇ. 4.9 ಮತ್ತು ಶೇ. 33.75 ವಿದ್ಯಾರ್ಥಿಗಳು ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ)ಸೇರಿದವರಾದರೆ, ಶೇ. 4.7 ವಿದ್ಯಾರ್ಥಿಗಳು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಉನ್ನತ ಶಿಕ್ಷಣದಲ್ಲಿ ದಾಖಲಾತಿ ಆಗಿರುವ 45,424 ವಿದೇಶಿ ವಿದ್ಯಾರ್ಥಿಗಳಲ್ಲಿ 1,514 ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಪ್ರವೇಶಾತಿ ಪಡೆದಿದ್ದಾರೆ. ವಿಶ್ವದ 165 ವಿಭಿನ್ನ ದೇಶಗಳಿಂದ ಬಂದ ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿದ್ದಾರೆ.

ಶಿಕ್ಷಕರು:

ಶಿಕ್ಷಕರ ಒಟ್ಟು ಸಂಖ್ಯೆ 15,18,813. ಇದರಲ್ಲಿ ಪುರುಷ-ಮಹಿಳೆ ದಾಮಾಶಯ ಶೇ. 61.39

ವಿದ್ಯಾರ್ಥಿ ವರ್ಸಸ್ ಶಿಕ್ಷಕರು:

ರೆಗ್ಯುಲರ್ ಪ್ರವೇಶಾತಿಯನ್ನು ಪರಿಗಣಿಸಿದರೆ ವಿವಿ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಶಿಕ್ಷಕ ದಾಮಾಶಯ 21.

ಸಂಶೋಧನೆ:

2015ರಲ್ಲಿ 24,171 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮಟ್ಟದ ಪದವಿ ನೀಡಲಾಯಿತು. ಇವರಲ್ಲಿ 14,887 ಮಂದಿ ಪುರುಷರು ಮತ್ತು 9,824 ಮಂದಿ ಮಹಿಳೆಯರು. ಕೃಷಿ ಮತ್ತು ಸಂಬಂಧಿತ ಕೋರ್ಸ್‌ಗಳಲ್ಲಿ ಶೇ. 22, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸ್‌ಗಳಲ್ಲಿ ಶೇ. 11.7, ವಿಜ್ಞಾನದಲ್ಲಿ ಶೇ. 6.5, ವೈದ್ಯಕೀಯ ವಿಜ್ಞಾನದಲ್ಲಿ ಶೇ. 4 ಮತ್ತು ಸಮಾಜ ವಿಜ್ಞಾನದಲ್ಲಿ ಶೇ. 2.3 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿಗೆ ನೋಂದಾವಣೆ ಮಾಡಿಕೊಂಡಿದ್ದಾರೆ.

ಪಾಲಿಟೆಕ್ನಿಕ್ಸ್:

ಭಾರತದಲ್ಲಿ ಒಟ್ಟು 3,867 ಪಾಲಿಟೆಕ್ನಿಕ್‌ಗಳಿವೆ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳಲ್ಲಿ ಶೇ. 83 ಪುರುಷರು ಮತ್ತು ಶೇ. 17 ಮಹಿಳೆಯರು. ಆದರೆ ನರ್ಸಿಂಗ್ ಮತ್ತು ಶಿಕ್ಷಕರ ತರಬೇತಿ(ಬಿ ಎಡ್) ಸಂಸ್ಥೆಗಳಿಗಾಗುವಾಗ ಇದು ತಿರುವು ಮುರುವು ಆಗುತ್ತದೆ: ದೇಶದಲ್ಲಿರುವ ಒಟ್ಟು 30.60 ನರ್ಸಿಂಗ್ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆದಿರುವ ಒಟ್ಟು 2.3ಲಕ್ಷ ವಿದ್ಯಾರ್ಥಿಗಳಲ್ಲಿ ಸುಮಾರು ಶೇ. 87 ಮಂದಿ ವಿದ್ಯಾರ್ಥಿನಿಯರು ಮತ್ತು ಶೇ. 13 ಮಂದಿ ಪುರುಷ ವಿದ್ಯಾರ್ಥಿಗಳು. ಹಾಗೆಯೇ, ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ ದಾಖಲಾಗಿರುವ ಒಟ್ಟು 2.18 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ. 37 ಪುರುಷರು ಹಾಗೂ ಶೇ. 63 ಮಹಿಳೆಯರು ಇದ್ದಾರೆ.

ಸಾಮಾಜಿಕ ವರ್ಗೀಕರಣದ ಪ್ರಕಾರ ಶಿಕ್ಷಕರು:

ಅಖಿಲ ಭಾರತ ಮಟ್ಟದಲ್ಲಿ ಜನರಲ್ ಕೆಟಗರಿಗೆ ಸೇರಿದ ಶಿಕ್ಷಕರ ಸಂಖ್ಯೆ ಒಟ್ಟು ಶಿಕ್ಷಕರ ಅರ್ಧಕ್ಕಿಂತಲೂ ಹೆಚ್ಚು, ಅಂದರೆ ಶೇ. 65. ಇನ್ನು, ಒಬಿಸಿ ಶೇ. 25.4; ಎಸ್ಸಿ ಮತ್ತು ಎಸ್ಟಿ ಅನುಕ್ರಮವಾಗಿ ಶೇ. 7.5 ಮತ್ತು ಶೇ. 2.1.

 ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದಿಂದ ಕೇವಲ ಶೇ. 3.4 ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಿಂದ ಶೇ. 3.3 ಮಂದಿ ಶಿಕ್ಷಕ ವೃತ್ತಿಯಲ್ಲಿದ್ದಾರೆ.

ಈಗ ಸಾಮಾನ್ಯ ಪ್ರವೇಶಾತಿಯ ದಾಮಾಷಯ ಶೇ. 24.6; ಪ್ರತೀ ವರ್ಷ 24,000 ಮಂದಿಗೆ ಪಿಎಚ್‌ಡಿ ನೀಡಲಾಗುತ್ತಿದೆ; 34.6 ಮಿಲಿಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದಾರೆ, ಒಟ್ಟು ಸಂಖ್ಯೆಯಲ್ಲಿ ಮುಸ್ಲಿಮರ ಪ್ರವೇಶಾತಿ (ಎನ್‌ರೋಲ್‌ಮೆಂಟ್) ಶೇ. 4.7 ತಲುಪುತ್ತಿದೆ.

Writer - ಎಂ.ಎ.ಸಿರಾಜ್

contributor

Editor - ಎಂ.ಎ.ಸಿರಾಜ್

contributor

Similar News

ಜಗದಗಲ
ಜಗ ದಗಲ