ವಿಶ್ವಾಸಾರ್ಹತೆ ಕಳೆದುಕೊಂಡ ಐಟಿ ದಾಳಿಗಳು

Update: 2017-08-02 18:44 GMT

ಒಂದು ಕಾಲವಿತ್ತು. ರಾಜಕಾರಣಿಗಳ ಮೇಲೆ ಲೋಕಾಯುಕ್ತರು ಅಥವಾ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರೆ ಜನರು ಅದನ್ನು ಸಂಭ್ರಮಿಸುತ್ತಿದ್ದರು. ಯಾವತ್ತೂ ಆ ದಾಳಿಯನ್ನು ಅನುಮಾನದಿಂದ, ರಾಜಕೀಯ ಕಣ್ಣಿನಿಂದ ನೋಡುತ್ತಿರಲಿಲ್ಲ. ಹಾಗೆಂದು ಸಿಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳನ್ನು ರಾಜಕೀಯ ನಾಯಕರು ದುರುಪಯೋಗ ಪಡಿಸಿಕೊಳ್ಳುತ್ತಿರಲಿಲ್ಲ ಎಂದಲ್ಲ. ಆದರೆ, ಈ ಇಲಾಖೆಗಳು ಎಲ್ಲ ಒತ್ತಡಗಳ ನಡುವೆಯೂ ಇರುವ ಅಧಿಕಾರವನ್ನು ಬಳಸಿಕೊಂಡು ಕೆಲವು ರಾಜಕೀಯೇತರವಾಗಿ ದಾಳಿಗಳನ್ನು ನಡೆಸಿ ಭ್ರಷ್ಟರನ್ನು ಬಗ್ಗು ಬಡಿದ ಹಲವು ಉದಾಹರಣೆಗಳಿವೆ.

ಆದರೆ ಮೋದಿ ಸರಕಾರ ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಬಹಿರಂಗವಾಗಿಯೇ ತನ್ನ ರಾಜಕೀಯ ದುರುದ್ದೇಶಗಳಿಗೆ ಬಳಸಿಕೊಳ್ಳುತ್ತಿರುವ ರೀತಿಯಿಂದ, ಈ ದಾಳಿಗಳು ತನ್ನ ಗಾಂಭೀರ್ಯವನ್ನು ಕಳೆದುಕೊಳ್ಳುತ್ತಿದೆ. ರಾಜಕೀಯ ಸೇಡು, ಬೆದರಿಕೆ, ಬ್ಲಾಕ್‌ಮೇಲ್‌ಮೊದ ಸಣ್ಣತನದ ರಾಜಕೀಯಗಳಿಗೆ ಇವುಗಳನ್ನು ಬಳಸಿಕೊಂಡು, ಅದರ ಘನತೆಗೆ ಧಕ್ಕೆ ತರುತ್ತಿದೆ. ರಾಜಕೀಯ ಪಕ್ಷವೊಂದರ ಅಂಗವಾಗಿ ಇವುಗಳು ಬಳಕೆಯಾಗುತ್ತಿರುವುದರಿಂದ, ಪ್ರತೀ ದಾಳಿಗಳನ್ನು ಜನರು ಇಂದು ಅನುಮಾನಾಸ್ಪದವಾಗಿ ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕೇಜ್ರಿವಾಲ್ ವಿರುದ್ಧ ಆರಂಭಗೊಂಡ ಇಂತಹ ರಾಜಕೀಯ ಪ್ರೇರಿತ ದಾಳಿ ಇತ್ತೀಚೆಗೆ ಬಿಹಾರದಲ್ಲಿ ಒಂದು ಸರಕಾರವನ್ನು ಉರುಳಿಸುವುದರೊಂದಿಗೆ ಸುದ್ದಿಯಾಗಿದೆ.

ಈ ದಾಳಿಗಳು ಕೇವಲ ಅಕ್ರಮ ಆಸ್ತಿಯನ್ನು ಹೊಂದಿರುವ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡಿಲ್ಲ. ಸರಕಾರಕ್ಕೆ ತಲೆನೋವಾದವರನ್ನೆಲ್ಲ ರಾಜಕೀಯವಾಗಿ ಎದುರಿಸುವ ಬದಲು, ಸಿಬಿಐ, ಐಟಿ ಅಧಿಕಾರಿಗಳನ್ನು ಮುಂದಿಟ್ಟು ಬಗ್ಗು ಬಡಿಯುವ ತಂತ್ರಕ್ಕೆ ಇಳಿದಿದೆ ಕೇಂದ್ರ ಸರಕಾರ. ಇದೀಗ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ನಡೆದಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಇಂತಹ ತಂತ್ರದ ಒಂದು ಭಾಗ ಆಗಿರುವುದರಿಂದ ಅದೀಗ ದೇಶಾದ್ಯಂತ ಚರ್ಚೆಗೊಳಗಾಗಿದೆ. ಹಾಗೆಂದು ಡಿ.ಕೆ. ಶಿವಕುಮಾರ್ ಸಭ್ಯ ರಾಜಕಾರಣಿಯೆಂದು ಯಾರೂ ಭಾವಿಸುತ್ತಿಲ್ಲ.

ಡಿಕೆಶಿ ಸಂಪಾದಿಸಿರುವ ಅಕ್ರಮ ಆಸ್ತಿ, ಸಂಪತ್ತು ಏನು ಎನ್ನುವುದು ರಾಜ್ಯದ ಜನತೆಗೆ ಗೊತ್ತಿರುವಂಥದ್ದೇ ಆಗಿದೆ. ಅವರ ರಾಜಕೀಯ ವರ್ಚಸ್ಸು ತನ್ನ ತನ್ನ ಅಕ್ರಮ ಹಣ ಬಲದಿಂದಲೇ ಸಂಪಾದಿಸಿರುವಂಥದ್ದು. ಇಂದಿಗೂ ರಾಜ್ಯ ಕಾಂಗ್ರೆಸ್‌ಗೆ ತನ್ನ ಹಣ ಮತ್ತು ಜನ ಬಲದಿಂದ ಅವರು ಅನಿವಾರ್ಯ ಅನ್ನಿಸಿಕೊಂಡಿದ್ದಾರೆ. ಆದರೆ, ಡಿಕೆಶಿಯಂತಹ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿರುವುದು ಅವರ ಭ್ರಷ್ಟ ಹಣದ ಹಿನ್ನೆಲೆಯಿಂದ ಅಲ್ಲ. ಗುಜರಾತ್‌ನಲ್ಲಿ ನಡೆಯುತತಿರುವ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಡಿಕೆಶಿ ಮೇಲೆ ಐಟಿ ದಾಳಿ ನಡೆಸಲು ಹೊರಟಿದೆ. ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ಕುದುರೆ ವ್ಯಾಪಾರದಲ್ಲಿ ಸಹಕರಿಸುವುದಕ್ಕಾಗಿ ಐಟಿ ಅಧಿಕಾರಿಗಳು ತಮ್ಮ ಸೇವೆಯನ್ನು ಸಲ್ಲಿಸ್ತಿದ್ದಾರೆ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ‘ಗುಜರಾತ್ ಮಾದರಿ’ಯನ್ನು ಅನುಸರಿಸಲು ಹೋಗಿ ಕಾಲು ಜಾರಿದ್ದನ್ನು ನಾವು ನೋಡಿದ್ದೇವೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಜನಪ್ರತಿನಿಧಿಗಳನ್ನು, ದುಡ್ಡಿನಿಂದ ಕೊಂಡುಕೊಳ್ಳುವ ಹೊಸ ಪರಿಪಾಠದ ಮೂಲಕ, ಪ್ರಜಾಸತ್ತೆಯ ವೌಲ್ಯವನ್ನೇ ಯಡಿಯೂರಪ್ಪ ನೇತೃತ್ವದ ಸರಕಾರ ಹರಾಜಿಗಿಟ್ಟಿತು. ಅದಕ್ಕೆ ‘ಆಪರೇಷನ್ ಕಮಲ’ ಎಂಬ ಹೆಸರನ್ನು ನೀಡಿ, ಭ್ರಷ್ಟಾಚಾರವನ್ನೇ ರಾಜಕೀಯತಂತ್ರವೆಂದು ಹೆಮ್ಮೆಯಿಂದ ಘೋಷಿಸಿಕೊಂಡಿತು.

ಅಂತಿಮವಾಗಿ ಅದರ ಫಲವನ್ನು ಅನುಭವಿಸಿತು ಕೂಡ. ವಿಪರ್ಯಾಸವೆಂದರೆ, ಅಂದಿನ ‘ಯಡಿಯೂರಪ್ಪ ಮಾದರಿ’ಯನ್ನು ಇಂದು ಗುಜರಾತಿನಲ್ಲಿ ಜಾರಿಗೊಳಿಸುವುದಕ್ಕೆ ಬಿಜೆಪಿ ಹವಣಿಸುತ್ತಿದೆ. ಈಗಾಗಲೇ ಹಲವು ಜನಪ್ರತಿನಿಧಿಗಳನ್ನು ಗುಜರಾತಿನಲ್ಲಿ ಬಿಜೆಪಿ ಕೊಂಡು ಕೊಂಡಿದೆ. ತನ್ನ ಅಭ್ಯರ್ಥಿಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಅವರೆಲ್ಲರನ್ನೂ ಬೆಂಗಳೂರಿನ ಕಡೆಗೆ ವರ್ಗಾಯಿಸಿದೆ. ಅವರ ರಕ್ಷಣೆಯ ಹೊಣೆಯನ್ನು ಡಿ.ಕೆ. ಶಿವಕುಮಾರ್ ಹೊತ್ತುಕೊಂಡಿದ್ದಾರೆ. ಇದೀಗ ರಾಜ್ಯದ ರೆಸಾರ್ಟ್‌ನಲ್ಲಿ ಆಶ್ರಯ ಪಡೆದುಕೊಂಡಿರುವ ಗುಜರಾತ್ ಕಾಂಗ್ರೆಸ್‌ನ ಜನಪ್ರತಿನಿಧಿಗಳನ್ನು ಗುರಿಯಾಗಿರಿಸಿಕೊಂಡು ಕೇಂದ್ರ ಸರಕಾರ ಏಕಾಏಕಿ ಶಸ್ತ್ರಾಸ್ತ್ರ ಪಡೆಗಳ ಜೊತೆಗೆ ಆದಾಯ ತೆರಿಗೆ ಅಧಿಕಾರಿಗಳಿಂದ ಡಿಕೆಶಿ ವಿರುದ್ಧ ದಾಳಿಯನ್ನು ನಡೆಸಿದೆ.

ಐಟಿ ಅಧಿಕಾರಿಗಳು ರಾಜಕೀಯವಾಗಿ ದುರ್ಬಳಕೆಯಾಗುವ ಮೂಲಕ, ದಾಳಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಇದರ ಲಾಭವನ್ನು ಡಿಕೆಶಿಯವರೇ ಪಡೆದುಕೊಳ್ಳುವಂತಾಗಿದೆ. ಒಂದು ರೀತಿಯಲ್ಲಿ ಅವರು ಹುತಾತ್ಮ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡುತ್ತಾ, ಐಟಿ ಅಧಿಕಾರಿಗಳನ್ನೇ ಟೀಕಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಐಟಿ ಅಧಿಕಾರಿಗಳು ಮತ್ತು ಸಿಬಿಐಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ತನ್ನ ವಿರೋಧಿಗಳನ್ನು ಸರದಿಯಲ್ಲಿ ಬಗ್ಗು ಬಡಿಯಲು ಯೋಜನೆ ರೂಪಿಸಿದೆ. ಸಿದ್ದರಾಮಯ್ಯ ನೇತೃತ್ವದ ಜನಪ್ರಿಯ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಲು ಇಂತಹದೊಂದು ಐಟಿ ದಾಳಿಯ ಯೋಜನೆಯನ್ನು ಅದು ಯಾವತ್ತೋ ರೂಪಿಸಿತ್ತು.

ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಡಿಕೆಶಿ, ಜಾರ್ಜ್, ಎಂ.ಬಿ. ಪಾಟೀಲ್, ಎಚ್.ಸಿ. ಮಹದೇವಪ್ಪ ಇವರ ಮೇಲೆ ದಾಳಿ ನಡೆಸಿ ಸರಕಾರದ ವಿರುದ್ಧ ಜನರಲ್ಲಿ ಋಣಾತ್ಮಕ ಭಾವನೆಯನ್ನು ಬಿತ್ತುವ ಅದರ ಯೋಜನೆ ಈಗಾಗಲೇ ಬಹಿರಂಗವಾಗಿದೆ. ಇಂತಹದೊಂದು ದಾಳಿಯನ್ನು ಡಿಕೆಶಿ ನಿರೀಕ್ಷಿಸಿದ್ದಾರಾದರೂ, ಅದನ್ನು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ. ಈ ದಾಳಿಯನ್ನು ಬಿಜೆಪಿ ಸರಕಾರ ತನ್ನ ರಾಜಕೀಯಕ್ಕೆ ಬಳಸಿಕೊಂಡಿರುವುದು ಜಗಜ್ಜಾಹೀರಾಗಿರುವುದರಿಂದ, ಡಿಕೆಶಿಗಿಂತ ಬಿಜೆಪಿಯೇ ಹೆಚ್ಚು ಮುಜುಗರವನ್ನು ಅನುಭವಿಸುವಂತಾಗಿದೆ. ರಾಜಕೀಯವಾಗಿ ಬಿಜೆಪಿ ಹೊಂದಿರುವ ಹತಾಶೆಯಯನ್ನು ಈ ದಾಳಿಯೇ ಹೇಳುತ್ತಿದೆ. ದಿಲ್ಲಿಯಲ್ಲಿ, ಬಿಹಾರದಲ್ಲಿ, ಇದೀಗ ಕರ್ನಾಟಕದಲ್ಲಿ ತನ್ನ ಉದ್ದೇಶ ಸಾಧಿಸಿಕೊಳ್ಳಲು ಪ್ರಜಾಸತ್ತಾತ್ಮಕವಾದ ಸಂಸ್ಥೆಯನ್ನು ಬಳಸಿಕೊಂಡು ಎಷ್ಟು ನೀಚ ರಾಜಕಾರಣವನ್ನೂ ಮಾಡಲು ಹಿಂಜರಿಯಲಾರೆ ಎನ್ನುವುದನ್ನು ಕೇಂದ್ರ ಬಿಜೆಪಿ ಘೋಷಿಸಿಕೊಂಡಿದೆ.

‘ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸುವುದು ತಪ್ಪೇ?’ ಎನ್ನುವ ಪ್ರಶ್ನೆಯನ್ನು ಗುರಾಣಿಯಾಗಿಟ್ಟು ಕೇಂದ್ರ ಸರಕಾರ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹವಣಿಸಿಕೊಳ್ಳಬಹುದು. ಆದರೆ, ನೋಟು ನಿಷೇಧದ ಹೊತ್ತಿನಲ್ಲೇ ಕೋಟ್ಯಂತರ ರೂ. ವೆಚ್ಚದಲ್ಲಿ ಜನಾರ್ದನರೆಡ್ಡಿ ತನ್ನ ಮಗಳ ಮದುವೆ ನೆರವೇರಿಸುವಾಗ ಈ ಐಟಿ ಅಧಿಕಾರಿಗಳು ಎಲ್ಲಿದ್ದರು ಎಂಬ ಪ್ರಶ್ನೆಗೂ ಕೇಂದ್ರ ಉತ್ತರ ನೀಡಬೇಕಾಗುತ್ತದೆ. ಅಧಿಕಾರಕ್ಕೆ ಬಂದ ಬಳಿಕ, ಅಮಿತ್ ಶಾ ಅವರ ಸಂಪತ್ತು 300 ಪಟ್ಟು ಹೆಚ್ಚಿದೆ ಎಂಬ ಆರೋಪಗಳಿಗೂ ಸ್ಪಷ್ಟೀಕರಣ ನೀಡಬೇಕು. ಯಾವ ಪಕ್ಷ ಜನಪ್ರತಿನಿಧಿಗಳನ್ನು ದುಡ್ಡುಕೊಟ್ಟು ಕೊಂಡುಕೊಳ್ಳಲು ಹೊರಟಿದೆಯೋ ಆ ಪಕ್ಷದ ನಾಯಕರ ಮೇಲೆ ತುರ್ತಾಗಿ ದಾಳಿಯಾಗಬೇಕಾಗಿದೆ. ಆದರೆ ಐಟಿ ಅಧಿಕಾರಿಗಳು ಬಿಜೆಪಿ ನಾಯಕರ ನಿರ್ದೇಶನದಂತೆ, ಬೆಂಗಳೂರಿನಲ್ಲಿ ಅಡಗಿಕೊಂಡಿರುವ ಗುಜರಾತ್‌ನ ಕಾಂಗ್ರೆಸ್ ಶಾಸಕರ ಜೊತೆಗೆ ವ್ಯವಹಾರ ಕುದುರಿಸಲು ಬಂದಿದ್ದಾರೆಯೋ ಎಂದು ಅನುಮಾನ ಪಡುವಂತಿದೆ.

ಜನರ ವಿಶ್ವಾಸಾರ್ಹತೆ ಕಳೆದುಕೊಂಡ ಸಂಸ್ಥೆಗಳು ನಡೆಸುವ ತನಿಖೆಯ ಲಾಭವನ್ನು ಭ್ರಷ್ಟ ರಾಜಕಾರಣಿಗಳು ತಮ್ಮದಾಗಿಸಿಕೊಳ್ಳುತ್ತಾರೆ. ಈ ಕುರಿತ ಎಚ್ಚರಿಕೆ ಇಲಾಖೆಯ ಅಧಿಕಾರಿಗಳಿಗೆ ಇರಬೇಕಾಗಿದೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯಾಚರಣೆಗೈದರೂ ಅದರಲ್ಲಿ ಜನರು ರಾಜಕೀಯ ಪಾತ್ರವನ್ನು ಅನುಮಾನಿಸುವಂತಾಗುತ್ತದೆ. ತನಿಖಾ ಸಂಸ್ಥೆಗಳು ಸರಕಾರದ ಸೂಚನೆಗಳನ್ನು ಪಾಲಿಸಬೇಕು ಎನ್ನುವುದೇನೋ ನಿಜ, ಹಾಗೆಂದು ಸರಕಾರದ ಗುಲಾಮಗಿರಿಗೆ ಸ್ವಯಂ ಇಳಿದು ತಾನೇ ಭ್ರಷ್ಟವಾದರೆ, ಭ್ರಷ್ಟರನ್ನು ತನಿಖೆಗೊಳಪಡಿಸುವ ಅರ್ಹತೆಯನ್ನೇ ಅದು ಕಳೆದುಕೊಳ್ಳುತ್ತದೆ. ಸದ್ಯಕ್ಕೆ ನಮ್ಮ ತನಿಖಾ ಸಂಸ್ಥೆಗಳು ಇಂತಹದೊಂದು ಅಧಃಪತನದ ಕಡೆಗೆ ಸಾಗುತ್ತಿರುವ ಎಲ್ಲ ಸೂಚನೆಗಳನ್ನು ನೀಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News