ಕೋಚಿಂಗ್ ವಿಭಾಗದ ಎಲೆಮರೆಯ ಕಾಯಿ ಕನ್ನಡಿಗ ರಾಘವೇಂದ್ರ

Update: 2017-08-02 18:44 GMT

ಕೊಲಂಬೊ, ಆ.2: ಭಾರತ ಕ್ರಿಕೆಟ್ ತಂಡದ ಕೋಚಿಂಗ್ ವಿಭಾಗದಲ್ಲಿ ಪ್ರಧಾನ ಕೋಚ್ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ, ತಂಡದ ಯಶಸ್ಸಿಗೆ ಕಾರಣವಾಗುವವರು ಮಾತ್ರ ಯಾವಾಗಲೂ ಎಲೆ ಮರೆಯ ಕಾಯಿಯಾಗಿಯೇ ಉಳಿದಿರುತ್ತಾರೆ.

 ಅಂತಹವರ ಪೈಕಿ ಕರ್ನಾಟಕದ ರಾಘವೇಂದ್ರ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಸಂಕೋಚ ಸ್ವಭಾವದ ಉತ್ತರ ಕನ್ನಡದ ಹುಡುಗ ರಾಘವೇಂದ್ರ ಕ್ರಿಕೆಟ್ ಚೆಂಡು ಎಸೆಯುವಲ್ಲಿ ಎತ್ತಿದ ಕೈ. ಪ್ರತಿ ನಿಮಿಷಕ್ಕೆ ನಾಲ್ಕು ಎಸೆತಗಳನ್ನು ವೇಗವಾಗಿ ಎಸೆಯಬಲ್ಲ ರಾಘು ಭಾರತದ ನಾಯಕ ವಿರಾಟ್ ಕೊಹ್ಲಿಯ ಮನಗೆಲ್ಲಲು ಯಶಸ್ವಿಯಾಗಿದ್ದಾರೆ.

ರಾಘವೇಂದ್ರನಿಗೆ ಗಂಟೆಗೆ 140 ಕಿ.ಮೀ.ಗೂ ಅಧಿಕ ವೇಗದಲ್ಲಿ ಚೆಂಡನ್ನು ಎಸೆಯುವ ಸಾಮರ್ಥ್ಯವಿದೆ ಎಂದು ಭಾರತದ ಬ್ಯಾಟ್ಸ್‌ಮನ್ ಹೇಳುತ್ತಿದ್ದಾರೆ.
ರಾಘವೇಂದ್ರ ಚೆಂಡನ್ನು ಸ್ವಿಂಗ್ ಹಾಗೂ ರಿವರ್ಸ್ ಸ್ವಿಂಗ್ ಮಾಡುತ್ತಾರೆ. ಬ್ಯಾಟ್ಸ್‌ಮನ್‌ಗಳ ಅಭ್ಯಾಸದ ವೇಳೆ ಆತ ಚೆಂಡನ್ನು ಎಸೆಯುವ ಮೂಲಕ ನೆರವಾಗುತ್ತಾರೆ. ಇದೀಗ ಭಾರತ ತಂಡದಲ್ಲಿ ಬಳಕೆಯಲ್ಲಿರುವ ‘ರೋಬೊ-ಆರ್ಮ್’ ರೀತಿ ಕೆಲಸ ಮಾಡುತ್ತಾರೆ. ಹೈದರಾಬಾದ್ ಮೂಲದ ವಿಜ್ಞಾನ ಹಾಗೂ ತಂತ್ರಜ್ಞಾನ ಕಂಪೆನಿಯ ಎಂಡಿ ಪಾರ್ಥಸಾರಥಿ ಕೇವಲ ಒಂದು ವರ್ಷದ ಹಿಂದೆ ರೋಬೊ-ಆರ್ಮ್ ಸಾಧನವನ್ನು ಟೀಮ್ ಇಂಡಿಯಾಕ್ಕೆ ಕೊಡುಗೆಯಾಗಿ ನೀಡಿದ್ದರು.

ಇದೀಗ ಭಾರತ ತಂಡದ ಸಹಾಯಕ ಟ್ರೈನರ್ ಆಗಿರುವ ರಾಘು ಹಾಗೂ ಸಹಾಯಕ ಕೋಚ್ ಹಾಗೂ ಭಾರತದ ಮಾಜಿ ಆಲ್‌ರೌಂಡರ್ ಸಂಜಯ್ ಬಂಗಾರ್ ‘ರೋಬೊ ಆರ್ಮ್’ನ ಪ್ರಯೋಜನ ಪಡೆಯುತ್ತಿದ್ದಾರೆ. ಬ್ಯಾಟ್ಸ್‌ಮನ್‌ಗಳು ಈ ಸಾಧನದೊಂದಿಗೆ ನಿಧಾನವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಕೆಲವು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳು ರೋಬೊ ಆರ್ಮ್‌ಗಾಗಿ ಕಂಪೆನಿಗೆ ಬೇಡಿಕೆ ಸಲ್ಲಿಸಿವೆ.

ಕಳೆದ ತಿಂಗಳು ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕೊಹ್ಲಿ ತಂಡದಲ್ಲಿ ಕನ್ನಡಿಗ ರಾಘವೇಂದ್ರನ ಕೊಡುಗೆಯನ್ನು ಸ್ಮರಿಸಿದ್ದರು.

‘‘ನೆಟ್ ಪ್ರಾಕ್ಟೀಸ್‌ನ ವೇಳೆ ದಾಂಡಿಗನಿಗೆ ಎಲ್ಲ ನೆರವು ನೀಡುವವನು ತೆರೆ ಮರೆಯಲ್ಲೇ ಉಳಿಯುತ್ತಾನೆ. ದಾಂಡಿಗನಿಗೆ ನೀಡುವ ಮಹತ್ವ ಆತನಿಗೆ ನೀಡುವುದಿಲ್ಲ. ಗಂಟೆಗೆ 140 ಕಿ.ಮೀ. ವೇಗದಲ್ಲಿ ಚೆಂಡನ್ನು ಎಸೆಯಬಲ್ಲ ರಾಘು ನನಗೆ ತುಂಬಾ ನೆರವಾಗಿದ್ದಾರೆ’’ ಎಂದು ಕೊಹ್ಲಿ ಹೇಳಿದ್ದರು. ಕೈಗೆ ಆಗಿದ್ದ ಗಂಭೀರ ಗಾಯದಿಂದಾಗಿ ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಆಡಬೇಕೆಂಬ ರಾಘವೇಂದ್ರನ ಕನಸು ಈಡೇರಲಿಲ್ಲ. ಆದರೆ, ಟೀಮ್ ಇಂಡಿಯಾಕ್ಕೆ ಸೇರಬೇಕೆಂಬ ಅವರ ಕನಸು ನನಸಾಗಿದೆ. ಕ್ರಿಕೆಟ್ ದಂತಕತೆಗಳಾದ ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್‌ರ ಶಿಫಾರಸಿನ ಮೇರೆಗೆ ರಾಘವೇಂದ್ರ ಟೀಮ್ ಇಂಡಿಯಾಕ್ಕೆ ‘ಥ್ರೋಡೌನ್ ಎಕ್ಸ್‌ಪರ್ಟ್’ಆಗಿ ಸೇರಿಕೊಂಡರು. ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯಲ್ಲಿ ರಾಘವೇಂದ್ರ ಅವರು ತೆಂಡುಲ್ಕರ್ ಹಾಗೂ ದ್ರಾವಿಡ್‌ಗೆ ಅತ್ಯಂತ ವೇಗವಾಗಿ ಎಸೆತಗಳನ್ನು ಎಸೆಯುವ ಮೂಲಕ ಅಭ್ಯಾಸಕ್ಕೆ ನೆರವಾಗುತ್ತಿದ್ದರು. ಭಾರತ ತಂಡ 2011-12ರಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ರಾಘವೇಂದ್ರ ತಂಡವನ್ನು ಸೇರಿಕೊಂಡಿದ್ದರು. 2014ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ತಂಡದ ಸಹಾಯಕ ಸಿಬ್ಬಂದಿ ವಿಭಾಗಕ್ಕೆ ಮರು ಸೇರ್ಪಡೆಗೊಂಡಿದ್ದರು.

 ಇದೀಗ ಅವರು ಭಾರತದ ಕೋಚಿಂಗ್ ವಿಭಾಗದ ಅವಿಭಾಜ್ಯ ಅಂಗವಾಗಿದ್ದು ಪ್ರಧಾನ ಕೋಚ್ ರವಿ ಶಾಸ್ತ್ರಿ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News