ತಂದೆಯ ಹಂತಕರನ್ನು ಶಿಕ್ಷಿಸಲು ಐಎಎಸ್ ಅಧಿಕಾರಿಯಾದ ಕಿಂಜಲ್ ಸಿಂಗ್

Update: 2017-08-04 09:49 GMT

ಕಿಂಜಲ್ ಸಿಂಗ್ ಅವರ ನಿಜಜೀವನದ ಕಥೆ ಯಾವುದೇ ಬಾಲಿವುಡ್ ಚಿತ್ರಕ್ಕಿಂತ ಕಡಿಮೆಯಿಲ್ಲ. ಕಿಂಜಲ್ ಚಿಕ್ಕವಳಿದ್ದಾಗಲೇ ಆಕೆಯ ತಂದೆಯನ್ನು ಕೊಲೆ ಮಾಡಲಾಗಿತ್ತು. ತಾಯಿ ಹೊಟ್ಟೆಯಲ್ಲಿ ಕಿಂಜಲ್‌ರ ಕಿರಿಯ ಸಹೋದರಿಯನ್ನು ಹೊತ್ತಿದ್ದರು. ಮುಂದೆ ತಾಯಿಯನ್ನೂ ಕಳೆದುಕೊಂಡ ಕಿಂಜಲ್ ಎಲ್ಲ ಅಡೆತಡೆಗಳನ್ನೂ ಮೆಟ್ಟಿ ನಿಂತು ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ತಂಗಿ ಪ್ರಾಂಜಲ್ ಸಿಂಗ್‌ರನ್ನೂ ಐಪಿಎಸ್ ಅಧಿಕಾರಿಯನ್ನಾಗಿ ಮಾಡಿದ್ದಾರೆ. 31 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಕೊನೆಗೂ ತಮ್ಮಿಂದ ತಂದೆಯ ಭಾಗ್ಯವನ್ನು ಕಿತ್ತುಕೊಂಡಿದ್ದ ಹಂತಕರಿಗೆ ಶಿಕ್ಷೆಯನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಹೋರಾಟ ಮತ್ತು ಯಶಸ್ಸಿನ ಕಥೆಯನ್ನು ಓದಿ......

ಖಡಕ್ ಐಎಎಸ್ ಅಧಿಕಾರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕಿಂಜಲ್ ಯಾವುದೇ ರಾಜಕೀಯ ಲಾಬಿಗಳಿಗೆ ಸೊಪ್ಪು ಹಾಕುವುದಿಲ್ಲ. ಅತ್ಯಂತ ಕುಖ್ಯಾತರಿಗೂ ಅವರ ಹೆಸರು ಕೇಳಿದರೇ ಬೆನ್ನುಹುರಿಯಲ್ಲಿ ಚಳಿ ಹುಟ್ಟಿಕೊಳ್ಳುತ್ತದೆ. ಅಂದ ಹಾಗೆ ಇದು ಬಾಲಿವುಡ್‌ನಿಂದ ಎತ್ತಿಕೊಂಡ ಕಥೆಯಲ್ಲ, ಇದು ಸಹಸ್ರಾರು ಜನರಿಗೆ ಸ್ಫೂರ್ತಿ ನೀಡುವ ನಿಜಜೀವನದ ಕಥೆ.

1982ರಲ್ಲಿ ಉತ್ತರ ಪ್ರದೇಶದ ಗೊಂಡಾದಲ್ಲಿ ಡಿಎಸ್‌ಪಿಯಾಗಿದ್ದ ಕಿಂಜಲ್‌ರ ತಂದೆ ಕೆ.ಪಿ.ಸಿಂಗ್ ಅವರನ್ನು ಅವರ ಸಹೋದ್ಯೋಗಿಗಳೇ ಗುಂಡಿಟ್ಟು ಹತ್ಯೆ ಮಾಡಿದ್ದರು. ಆ ಸಂದರ್ಭದಲ್ಲಿ ಕಿಂಜಲ್ ಕೇವಲ ಆರು ತಿಂಗಳ ಹಸುಗೂಸು ಮತ್ತು ತಾಯಿ ವಿಭಾದೇವಿಯ ಗರ್ಭದಲ್ಲಿ ತಂಗಿ ಪ್ರಾಂಜಲ್ ಬೆಳೆಯುತ್ತಿದ್ದಳು. ‘‘ದಯವಿಟ್ಟು ನನ್ನನ್ನು ಕೊಲ್ಲಬೇಡಿ, ನನಗೆ ಇಬ್ಬರು ಪುಟ್ಟಮಕ್ಕಳಿದ್ದಾರೆ’’ ಎನ್ನುವುದು ಸಿಂಗ್ ಅವರು ಗುಂಡುಗಳಿಗೆ ಬಲಿಯಾಗುವ ಮುನ್ನ ಆಡಿದ್ದ ಕೊನೆಯ ಶಬ್ದಗಳಾಗಿದ್ದವು.

(ಪ್ರಾಂಜಲ್)

 ಕಿಂಜಲ್ ಮತ್ತು ಪ್ರಾಂಜಲ್ ತಮ್ಮ ಬಾಲ್ಯದ ದಿನಗಳಲ್ಲಿ ಶಿಕ್ಷಣವನ್ನು ಮುಂದುವರಿಸಲು ಎಲ್ಲವನ್ನೂ ತ್ಯಾಗ ಮಾಡಿದ್ದರು. ಪ್ರೌಢಶಾಲಾ ಶಿಕ್ಷಣದ ಬಳಿಕ ಕಿಂಜಲ್‌ಗೆ ದಿಲ್ಲಿಯ ಪ್ರತಿಷ್ಠಿತ ಲೇಡಿ ಶ್ರೀರಾಮ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿತ್ತು. ತನ್ನ ತಾಯಿ ಕ್ಯಾನ್ಸರ್‌ನಿಂದ ನರಳುತ್ತಿದ್ದಾಳೆ ಮತ್ತು ಆಕೆಯ ಅಂತಿಮ ದಿನಗಳು ಸಮೀಪಿಸಿವೆ ಎನ್ನುವುದು ಕಿಂಜಲ್‌ಗೆ ಪದವಿ ಶಿಕ್ಷಣದ ಮೊದಲ ಸೆಮೆಸ್ಟರ್‌ನಲ್ಲಿದ್ದಾಗ ಗೊತ್ತಾಗಿತ್ತು.

ತಾಯಿಯನ್ನು ನೋಡಲು ಹುಟ್ಟೂರಿಗೆ ತೆರಳಿದ್ದ ಕಿಂಜಲ್ ಒಂದಲ್ಲ ಒಂದು ದಿನ ತಾವಿಬ್ಬರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವುದಾಗಿ ವಚನ ನೀಡಿದ್ದರು. ಅವರ ಆತ್ಮವಿಶ್ವಾಸ ವಿಭಾದೇವಿಗೆ ಆ ದಿನಗಳಲ್ಲಿ ತುಂಬ ಅಗತ್ಯವಾದ ಮಾನಸಿಕ ನೆಮ್ಮದಿ ಯನ್ನು ನೀಡಿತ್ತು. ಪುತ್ರಿಯರ ಭವ್ಯ ಭವಿಷ್ಯದ ಕನಸು ಹೊತ್ತುಕೊಂಡೇ ಕೆಲವು ದಿನಗಳ ಬಳಿಕ ಆಕೆ ಕೊನೆಯುಸಿರೆಳೆದಿದ್ದರು.

(ಕೆ.ಪಿ ಸಿಂಗ್ ಮತ್ತು ಪತ್ನಿ ವಿಭಾದೇವಿ ಪುಟ್ಟ ಕಿಂಜಲ್ ಜೊತೆ)

ತನ್ನ ತಾಯಿಯ ನಿಧನದ ಎರಡು ದಿನಗಳ ಬಳಿಕ ಪರೀಕ್ಷೆ ಇದ್ದರಿಂದ ಕಿಂಜಲ್ ದಿಲ್ಲಿಗೆ ವಾಪಸಾಗಿದ್ದರು. ಎಲ್ಲ ಕಷ್ಟಗಳನ್ನು ಎದುರಿಸಿ ದಿಲ್ಲಿ ವಿವಿಗೆ ಪ್ರಥಮ ರ್ಯಾಂಕ್ ಗಳಿಸಿದ್ದ ಅವರಿಗೆ ಚಿನ್ನದ ಪದಕ ಒಲಿದುಬಂದಿತ್ತು.

  ಪದವಿ ಶಿಕ್ಷಣದ ಬಳಿಕ ತಂಗಿ ಪ್ರಾಂಜಲ್‌ರನ್ನು ದಿಲ್ಲಿಗೆ ಕರೆಸಿಕೊಂಡಿದ್ದ ಕಿಂಜಲ್ ವಾಸಕ್ಕಾಗಿ ಮುಖರ್ಜಿ ನಗರದಲ್ಲಿ ಅಪಾರ್ಟ್‌ಮೆಂಟ್‌ವೊಂದನ್ನು ಬಾಡಿಗೆಗೆ ಪಡೆದಿದ್ದರು. ಅಲ್ಲಿ ಸೋದರಿಯರಿಬ್ಬರೂ ಯುಪಿಎಸ್‌ಸಿ ಪರೀಕ್ಷೆಯನ್ನು ಗೆಲ್ಲಲು ಸಿದ್ಧತೆಗಳನ್ನು ಆರಂಭಿಸಿದ್ದರು. ಇತರ ಹುಡುಗಿಯರು ಆಗಾಗ್ಗೆ ತಮ್ಮ ಸ್ನೇಹಿತರನ್ನು ಮತ್ತು ಕುಟುಂಬವನ್ನು ಭೇಟಿಯಾಗುತ್ತಿದ್ದರೆ ಈ ಸೋದರಿಯರಿಬ್ಬರು ಮಾತ್ರ ಸದಾ ಅಭ್ಯಾಸ ದತ್ತವೇ ಗಮನ ಕೇಂದ್ರೀಕರಿಸಿದ್ದರು. ಹಬ್ಬಗಳ ಸಂದರ್ಭದಲ್ಲಿಯೂ ಅವರು ತಮ್ಮ ಹುಟ್ಟೂರಿಗೆ ಹೋಗಿರಲಿಲ್ಲ.

ಪರಸ್ಪರರಿಗೆ ಶಕ್ತಿಯಾಗಿದ್ದ ಈ ಸೋದರಿಯರು ನಿರಂತರವಾಗಿ ಪರಸ್ಪರ ಸ್ಫೂರ್ತಿಯಾಗಿ ದ್ದರು. ಅದೇ ವರ್ಷ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಇಬ್ಬರೂ ತೇರ್ಗಡೆಗೊಂಡಿದ್ದರು. ಕಿಂಜಲ್ ಐಎಎಸ್ ಅಧಿಕಾರಿಯಾದರೆ ಪ್ರಾಂಜಲ್‌ಗೆ ಐಪಿಎಸ್ ಹುದ್ದೆ ಲಭಿಸಿತ್ತು. ತಮ್ಮ ತಂದೆಯ ಹಂತಕರಿಗೆ ಶಿಕ್ಷೆಯನ್ನು ಕೊಡಿಸಲೇಬೇಕೆಂಬ ಅವರ ದೃಢನಿರ್ಧಾರ ನ್ಯಾಯಾಂಗದಲ್ಲಿ ಸಂಚಲನವನ್ನುಂಟು ಮಾಡಿತ್ತು. ಡಿಎಸ್‌ಪಿ ಕೆ.ಪಿ.ಸಿಂಗ್ ಅವರ ಕೊಲೆ ಆರೋಪಿಗಳಾಗಿದ್ದ ಮೂವರು ಪೊಲೀಸರಿಗೆ ಉತ್ತರ ಪ್ರದೇಶದ ನ್ಯಾಯಾಲಯವು ಮರಣ ದಂಡನೆಯನ್ನು ವಿಧಿಸಿತ್ತು. 31 ವರ್ಷಗಳ ಬಳಿಕ 2013,ಜೂನ್ 5ರಂದು ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯವು ಸಿಂಗ್ ಹತ್ಯೆಗೆ ಹೊಣೆಯಾಗಿದ್ದ ಎಲ್ಲ 18 ಪೊಲೀಸರಿಗೆ ಸೂಕ್ತ ಶಿಕ್ಷೆಯನ್ನು ಪ್ರಕಟಿಸಿತ್ತು.

ಪ್ರತಿಯೊಂದು ಅರ್ಥದಲ್ಲಿಯೂ ಪುತ್ರಿಯರು ಪುತ್ರರಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ ಎಂದು ಕಿಂಜಲ್ ಸಾಧಿಸಿ ತೋರಿಸಿದ್ದರು. ಅವರ ಯಶಸ್ಸು ಪ್ರತಿಯೋರ್ವ ಭಾರತೀಯನಿಗೂ ಸ್ಫೂರ್ತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News