ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಭವಿಷ್ಯದಲ್ಲಿ ನೌಕರಿ ಗಳಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ

Update: 2017-08-05 06:49 GMT

ಉದ್ಯೋಗ ಮತ್ತು ಆರ್ಥಿಕ ರಂಗದಲ್ಲಿ ಕಳೆದ ಕಾಲು ಶತಮಾನದಲ್ಲಿ ಭಾರೀ ಬದಲಾವಣೆಗಳಾಗಿವೆ. ತಂತ್ರಜ್ಞಾನದಲ್ಲಾಗುವ ಪ್ರತೀ ತಿರುವು ಉದ್ಯೋಗರಂಗದಲ್ಲಿ ಬದಲಾವಣೆಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದೆ. ಒಂದು ಪದವಿ ಪಡೆದು ನಿವೃತ್ತಿಯಾಗುವವರೆಗೆ ನಾಲ್ಕು ದಶಕಗಳ ಕಾಲ ಒಂದೇ ರೀತಿಯ ವೃತ್ತಿ ಮಾಡಿ ಬದುಕು ಸವೆಸುತ್ತಿದ್ದ ದಿನಗಳು ಕಳೆದುಹೋಗಿವೆ.

 ತಂತ್ರಜ್ಞಾನ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ದಿನ ಕಳೆದಂತೆ ಒಂದು ತ್ರಿಕೋನ ಸಂಬಂಧದಲ್ಲಿ ಹೆಚ್ಚು ಹೆಚ್ಚು ಬಂಧಿಸಲ್ಪಡುತ್ತಿವೆ. ದೇಶದ ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ಅರ್ಥ ಶಾಸ್ತ್ರಜ್ಞರು, ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ರಂಗದ ಪಂಥಾಹ್ವಾನಗಳನ್ನೆದುರಿಸಲು ಈ ತ್ರಿಕೋನದ ಮೇಲೆ ಸದಾ ಕಣ್ಣಿಡಬೇಕಾಗಿದೆ.

ಉದ್ಯೋಗ ಮತ್ತು ಆರ್ಥಿಕ ರಂಗದಲ್ಲಿ ಕಳೆದ ಕಾಲು ಶತಮಾನದಲ್ಲಿ ಭಾರೀ ಬದಲಾವಣೆಗಳಾಗಿವೆ. ತಂತ್ರಜ್ಞಾನದಲ್ಲಾಗುವ ಪ್ರತೀ ತಿರುವು ಉದ್ಯೋಗರಂಗದಲ್ಲಿ ಬದಲಾವಣೆಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದೆ. ಒಂದು ಪದವಿ ಪಡೆದು ನಿವೃತ್ತಿಯಾಗುವವರೆಗೆ ನಾಲ್ಕು ದಶಕಗಳ ಕಾಲ ಒಂದೇ ರೀತಿಯ ವೃತ್ತಿ ಮಾಡಿ ಬದುಕು ಸವೆಸುತ್ತಿದ್ದ ದಿನಗಳು ಕಳೆದುಹೋಗಿವೆ. ಇಂಟರ್ನೆಟ್, ಕಂಪ್ಯೂಟರ್‌ಗಳು, ಐ-ಫೋನ್‌ಗಳು, ಡಿಜಿಟಲ್ ಕ್ಯಾಮರಾಗಳು, ಐ-ಪ್ಯಾಡ್‌ಗಳು, ಆ್ಯಂಡ್ರಾಯ್ಡಾ ಗಳು, ರೊಬೋಟ್‌ಗಳು ಹಾಗೂ ಡ್ರೋನ್‌ಗಳು ಸತತ ಕಲಿಕೆಯನ್ನು, ಕಲಿತದ್ದನ್ನು ತೊರೆಯುವುದನ್ನು, ಮರುಕಲಿಕೆಯನ್ನು ಮತ್ತು ಹೊಸ ಕೌಶಲ್ಯಗಳ ಗಳಿಕೆಯನ್ನು ಅನಿವಾರ್ಯವಾಗಿಸುತ್ತಿವೆ. ಇವುಗಳ ಅರ್ಥವೇನೆಂದರೆ ಆಟೊಮೇಶನ್, ಡಿಜಿಟೈಜೇಶನ್, ಕಂಪ್ಯೂಟರೈಜೇಶನ್ ಮತ್ತು ಪ್ರಾಯಶಃ ಔಟ್‌ಸೋರ್ಸಿಂಗ್‌ನ ಪರಿಣಾಮವಾಗಿ, ಸೃಜನಶೀಲತೆ ಅಥವಾ ವಿಶ್ಲೇಷಣಾತ್ಮಕ ಕೌಶಲ್ಯಗಳ ಅಗತ್ಯವಿರದಿದ್ದ ಹಳೆಯ ಏಕರೀತಿಯ (ರೊಟೀನ್) ಉದ್ಯೋಗಗಳು ನಾಶವಾಗಲಿವೆ.

 ಅಮೆರಿಕನ್ನರಿಗೆ ಈಗಾಗಲೇ ಏನಾಗಿದೆಯೋ ಅದು ಇನ್ನು 10 ಅಥವಾ 20 ವರ್ಷಗಳಲ್ಲಿ ಭಾರತೀಯರಿಗೂ ಆಗಬಹುದು. ಅಮೆರಿಕ ಹೊರಗುತ್ತಿಗೆ ನೀಡಿದ ಲಕ್ಷಗಟ್ಟಲೆ ನೌಕರಿಗಳು ನಮಗೆ ಮುಖ್ಯವಾಗಿ ದಕ್ಷಿಣ ಭಾರತದ ರಾಜ್ಯಗಳು ಮತ್ತು ಮಹಾರಾಷ್ಟ್ರಕ್ಕೆ ಯಾಕೆ ದಕ್ಕಿದವೆಂದರೆ, ಮುಖ್ಯವಾಗಿ ನಮ್ಮ ಬಳಿ ಇಂಗ್ಲಿಷ್ ತಿಳಿದ, ತಾಂತ್ರಿಕವಾಗಿ ಪರಿಣತ ಶ್ರಮಶಕ್ತಿ ಇತ್ತು. ಈಗಿನ ಒಲವುಗಳನ್ನು ನೋಡಿದರೆ, ಸದ್ಯೋಭವಿಷ್ಯದಲ್ಲಿ ಈ ಉದ್ಯೋಗಗಳು ಆಗ್ನೇಯ ಏಶ್ಯಾದ ರಾಷ್ಟ್ರಗಳ, ಮುಖ್ಯವಾಗಿ ಥಾಯ್ಲೆಂಡ್, ವಿಯೆಟ್ನಾಂ, ಇಂಡೋನೇಶ್ಯಾ ಮತ್ತು ಫಿಲಿಪ್ಪೀನ್ಸ್ ದ್ವೀಪಗಳ ಪಾಲಾಗಬಹುದು. ಶ್ರಮ ನೀತಿಯಲ್ಲಿ ಅವುಗಳು ನಮ್ಮನ್ನು ಮೀರಿಸುವುದೇ ಇದಕ್ಕೆ ಕಾರಣ.

 ಹೊಸ ಉದ್ಯೋಗಗಳ ಸೃಷ್ಟಿ ಅಥವಾ ಹಳೆಯ ಉದ್ಯೋಗಗಳ ನಾಶವು ಅರ್ಥವ್ಯವಸ್ಥೆಯ ವರ್ತನೆಯನ್ನವಲಂಬಿಸಿವೆ. ಈ ಹಿಂದೆ ಇದು ಎರಡು ವಿಧಗಳಲ್ಲಿ ಸಂಭವಿಸುತ್ತಿತ್ತು. ಕ್ಯಾಲ್ಕುಲೇಟರ್, ಕಂಪ್ಯೂಟರ್, ಕ್ಯಾಮರಾ ಮತ್ತು ಪ್ರಿಂಟರ್‌ಗಳ ಆವಿಷ್ಕಾರದಿಂದಾಗಿ ಒಬ್ಬ ಸಾಮಾನ್ಯ ವೃತ್ತಿಪರನ ಉತ್ಪಾದಕತೆ ಹೆಚ್ಚಿತು. ಆದರೆ ಇವುಗಳು ಅನೇಕ ಸಹಾಯಕ ಹಾಗೂ ಸಹವರ್ತಿಗಳ ಉದ್ಯೋಗಗಳನ್ನು ನಾಶಮಾಡಿದವು. ಹೆಚ್ಚಿನ ಪತ್ರಕರ್ತರು ಈಗ ಘಟನೆಗಳನ್ನು ನೋಡಿ, ವರದಿಗಳನ್ನು ಕಂಪೋಸ್ ಮಾಡಿ, ಕಂಪ್ಯೂಟರ್‌ನಲ್ಲೇ ಸ್ಪೆಲ್‌ಚೆಕ್‌ಮಾಡಿ ಘಟನೆಗಳನ್ನು ಕೆಮರಾದಲ್ಲಿ ದಾಖಲಿಸಿ ತಾವೇ ನೇರವಾಗಿ ವಾರ್ತಾ ಕೊಠಡಿಗಳಿಗೆ ವರದಿಗಳನ್ನು ಕಳುಹಿಸುತ್ತಾರೆ. ಹೀಗೆ ಅವರು ಅಚ್ಚುಮೊಳೆ ಜೋಡಿಸುವವರ (ಕಂಪೊಸಿಟರ್ಸ್‌), ಛಾಯಾಗ್ರಾಹಕರ ಮತ್ತು ಕರಡು ತಿದ್ದುವವರ (ಪ್ರೂಫ್‌ರೀಡರ್ಸ್‌) ನೌಕರಿಗಳನ್ನು ಕಿತ್ತುಕೊಂಡಿದ್ದಾರೆ.

 ಹಾಗೆಯೇ ಲೆಕ್ಕಪರಿಶೋಧಕರು ದೊಡ್ಡ ದೊಡ್ಡ ಸಂಖ್ಯೆಗಳನ್ನು, ದತ್ತಾಂಶವನ್ನು ತಾವಾಗಿಯೇ ಪ್ರೊಸೆಸ್ ಮಾಡುತ್ತಾರೆ. ಕಲಾವಿದರು, ವಾಸ್ತುಶಿಲ್ಪಿಗಳು ಮತ್ತು ಕಟ್ಟಡ ನಿರ್ಮಾಣಗಾರರು ತಮ್ಮ ಸ್ಕೆಚ್‌ಗಳನ್ನು ಹಾಗೂ ಮ್ಯಾಪ್‌ಗಳನ್ನು, ಬ್ಲೂಪ್ರಿಂಟ್‌ಗಳನ್ನು ತಾವೇ ತಯಾರಿಸಿ ತಮ್ಮ ಗಿರಾಕಿಗಳಿಗೆ ವೆಬ್‌ಸೈಟ್ ಮೂಲಕ ಕಳುಹಿಸುತ್ತಾರೆ. ಶೇರುದಲ್ಲಾಳಿಗಳಿಗೆ ಈಗ ಮೊದಲಿನಷ್ಟು ಗುಮಾಸ್ತರ ಹಾಗೂ ಕಾರ್ಯದರ್ಶಿಗಳ ಆವಶ್ಯಕತೆಯಿಲ್ಲ. 1995ರವರೆಗೆ ತನ್ನ ದಿಲ್ಲಿ ಕಚೇರಿಯಲ್ಲಿ 15 ಮಂದಿ ವಾರ್ತಾ ಪ್ರತಿನಿಧಿಗಳನ್ನು ಇಟ್ಟುಕೊಂಡಿದ್ದ ಒಂದು ವಾರ್ತಾಸಂಸ್ಥೆ ಈಗ ಕೇವಲ ಮೂರು ಮಂದಿಯನ್ನಷ್ಟೆ ನೌಕರಿಯಲ್ಲಿಟ್ಟುಕೊಂಡಿದೆ. ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಿಗೆ ಹಾಗೂ ಸಂಶೋಧಕರಿಗೆ ಈಗ ಬೆರಳೆಣಿಕೆಯಷ್ಟು ಮಂದಿ ಸಂಶೋಧನಾ ಸಹಾಯಕರು ಇದ್ದರೆ ಸಾಕು. ಅವರು ತಮ್ಮದೇ ಆದ ಪವರ್ ಪಾಯಿಂಟ್ ಪ್ರೆಸಂಟೇಶನ್‌ಗಳನ್ನು ತಯಾರಿಸಬಲ್ಲರು. ಗೂಗಲ್ ಮತ್ತು ಇತರ ಸರ್ಚ್ ಇಂಜಿನ್‌ಗಳು ಈ ನೌಕರಿಗಳನ್ನು ನಾಶಮಾಡಿವೆ ಮತ್ತು ಡಾಟಾ ಬ್ಯಾಂಕ್‌ಗಳಿಗೆ ಹಾಗೂ ಲೈಬ್ರೆರಿಗಳಿಗೆ ಬೇಕಾಗುವ ಸ್ಥಳ(ಸ್ಪೇಸ್)ವನ್ನು ಕಡಿತಗೊಳಿಸಿವೆ.

ಆಟೊಮ್ಯಾಟಿಕ್ ಟೆಲಿ-ಕಾಲರ್‌ಗಳು, ಎಟಿಎಂಗಳು, ಟಿಕೆಟ್‌ವೆಂಡಿಂಗ್ ಯಂತ್ರಗಳು ಮತ್ತು ಇಂಟರ್‌ಆ್ಯಕ್ಟಿವ್ ವಾಸ್ ರೆಸ್ಪಾನ್ಸ್ ವ್ಯವಸ್ಥೆ(ಸಿಸ್ಟಮ್)ಗಳು ಈ ಮೊದಲು ಮನುಷ್ಯರು ಮಾಡುತ್ತಿದ್ದ ಕೆಲಸಗಳನ್ನು ಕಸಿದುಕೊಳ್ಳುತ್ತಿವೆ. ನೌಕರಿಗಳು ನಾಶವಾಗುವ ಇನ್ನೊಂದು ರೀತಿ ಹೀಗಿದೆ. ಕೆಲಸವನ್ನು ಕಂಪೆನಿ ನೇಮಿಸಿದ ಕೆಲಸಗಾರರಿಂದ ಬಳಕೆದಾರರಿಗೆ ವರ್ಗಾಯಿಸುವುದು. ಉದಾಹರಣೆಗೆ, ಪೆಟ್ರೋಲ್ ಬಂಕ್‌ಗಳಲ್ಲಿ ನಾವೇ ನಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಕೊಳ್ಳಬೇಕು; ಸ್ವಯಂಚಾಲಿತ ಕಾರ್ ಲಾಂಡ್ರಿಗಳಲ್ಲಿ ನಮ್ಮ ಕಾರುಗಳನ್ನು ನಾವೇ ವಾಶ್ ಮಾಡಬೇಕು ಮತ್ತು ಮಾಲ್‌ಗಳಲ್ಲಿ ನಮ್ಮ ನಮ್ಮ ಸಾಮಾನುಗಳನ್ನು ನಾವೇ ಬ್ಯಾಗ್‌ಗಳಿಗೆ ಹಾಕಿ ಹೊರಬೇಕು. ಇಲ್ಲಿ ಇನ್ನೂ ಒಂದು ವಿಷಯ ಇದೆ. ದೈನಂದಿನ ಏಕ ರೀತಿಯ ಕೆಲಸ ಮಾಡುವವರು ಸುಸ್ತಾಗುತ್ತಾರೆ. ಕಂಪ್ಯೂಟರ್‌ಗಳಿಗೆ ಸುಸ್ತಾಗುವುದಿಲ್ಲ. ಮೂರನೆಯದಾಗಿ, ಕೆಲಸಗಾರರನ್ನು ನಿಭಾಯಿಸುವುದು ಸುಲಭವಲ್ಲ. ಕಂಪ್ಯೂಟರ್‌ಗಳಿಗೆ ಮೇಯಿಂಟೆನೆನ್ಸ್ ಬೇಕು ಅಷ್ಟೆ.

ವ್ಯವಸ್ಥೆಗೊಳಿಸುವುದು(ಆರ್ಗನೈಜಿಂಗ್), ದಾಸ್ತಾನು ಮಾಡುವುದು(ಸ್ಟೋರಿಂಗ್), ಬೇಕಾದಾಗ ಮರಳಿ ಪಡೆಯುವುದು(ರಿಟ್ರೀವಿಂಗ್), ಮಾನಿಟರ್ ಮಾಡುವುದು ಮತ್ತು ಮಾಹಿತಿಯನ್ನು ವ್ಯವಸ್ಥೆಗೊಳಿಸುವುದು. ಈ ಎಲ್ಲ ಕೆಲಸಗಳನ್ನು ಈಗ ಹೆಚ್ಚು ಹೆಚ್ಚಾಗಿ ಕಂಪ್ಯೂಟರ್ ತಂತ್ರಾಂಶ(ಸಾಫ್ಟ್‌ವೇರ್) ದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಇದೆಲ್ಲವನ್ನು ಯಂತ್ರಗಳು ಮಾಡುತ್ತವೆ. ಈ ನಿಟ್ಟಿನಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಲಾರೆನ್ಸ್ ಕಾಟ್ಸ್ ಮತ್ತು ಡೇವಿಡ್ ಆಟರ್ ಬರೆದಿರುವ ‘ಗ್ರಾಂಡ್ ಚ್ಯಾಲೆಂಜಸ್ ಇನ್ ದಿ ಸ್ಟಡಿ ಆಫ್ ಎಂಪ್ಲಾಯ್‌ಮೆಂಟ್ ಆ್ಯಂಡ್ ಟೆಕ್ನಾಲಜಿಕಲ್ ಚೇಂಜ್’ ಕೆಲವು ಮಾರ್ಗದರ್ಶನ ನೀಡುತ್ತದೆ. ಅವರು ಹೇಳುವ ಪ್ರಕಾರ ನಿಗದೀಕೃತ ಕಂಪ್ಯೂಟೇಶನಲ್ ಟಾಸ್ಕ್ ಗಳನ್ನು ಮಾಡುವ ಒಂದಷ್ಟು ಪ್ರಕ್ರಿಯೆಗಳ ವೆಚ್ಚವು ಅಮೆರಿಕದಲ್ಲಿ 1850-2006ರ ಮಧ್ಯೆ ಕನಿಷ್ಠ 1.7 ಟ್ರಿಲಿಯನ್‌ಗಳಷ್ಟು ಕಡಿಮೆಯಾಗಿವೆ. ಇದರಲ್ಲಿ ಬಹಳಷ್ಟು ವೆಚ್ಚ ಕಡಿತವಾದದ್ದು ಕಳೆದ ಮೂರು ದಶಕಗಳಲ್ಲಿ ‘ಮಧ್ಯ-ಕೌಶಲ’(ಮಿಡ್ಲ್-ಸ್ಕಿಲ್) ವೃತ್ತಿಗಳಾದ ಮಾರಾಟ, ಕಚೇರಿ ಕೆಲಸಗಾರರು, ಉತ್ಪಾದನಾ ಕೆಲಸಗಾರರು ಮತ್ತು ಆಪರೇಟರ್‌ಗಳಲ್ಲಿ ಅಲ್ಲಿ ಗಣನೀಯ ಕುಸಿತ ಸಂಭವಿಸಿತು. ಈ ನಾಲ್ಕು ರಂಗಗಳು 1979ರಲ್ಲಿ ಒಟ್ಟು ನೌಕರಿಗಳ ಶೇ. 57 ನೌಕರಿಗಳನ್ನು ನೀಡಿದ್ದರೆ 2009ರಲ್ಲಿ ಇದು ಶೇ. 46ಕ್ಕೆ ಇಳಿಯಿತು ಮತ್ತು ಈ ಇಳಿಕೆಯ ಪ್ರವೃತ್ತಿ ಸ್ಟಷ್ಪವಾಗಿಯೇ, ಇನ್ನಷ್ಟು ಇಳಿಯುತ್ತಲೇ ಹೋಗುತ್ತಿದೆ.

ಈಗ ಎಲ್ಲಾ ರೀತಿಯ ಸೇವಾ ನೌಕರಿಗಳು, ಅವುಗಳು ಸೃಜನಾತ್ಮಕವಲ್ಲದೆ ಇದ್ದಲ್ಲಿ, ಅವುಗಳು ಉಳಿಯುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಆದರೆ ಇದು ದೈಹಿಕ ಹಾಗೂ ಮ್ಯಾನ್ಯುವಲ್ ಕೆಲಸವನ್ನೊಳಗೊಂಡ ಉದ್ಯೋಗಗಳಿಗೆ ಅನ್ವಯವಾಗುವುದಿಲ್ಲ. ಉದಾಹರಣೆಗೆ ಪೊಲೀಸ್, ಬೇಕರ್, ಅಡುಗೆಯವ, ಮೇಸ್ತ್ರಿ, ಗಾರೆ ಕೆಲಸ, ಪ್ಲಂಬರ್, ಎಲೆಕ್ಟ್ರಿಶಿಯನ್, ಡೆಲಿವರಿ ಹುಡುಗರು, ದಾದಿಯರು, ಥೆರಪಿಸ್ಟ್‌ಗಳು, ಲಾರಿ ಚಾಲಕರು, ವೈಟರ್‌ಗಳು ಅಥವಾ ಬಾರ್‌ಟೆಂಡರ್‌ಗಳು. ಯಾಕೆಂದರೆ ಈ ಕೆಲಸಗಳನ್ನು ಕಂಪ್ಯೂಟರ್‌ಗಳು ಮಾಡಲಾರವು. ಆದರೆ ಈ ನೌಕರಿಗಳು ಅರ್ಥವ್ಯವಸ್ಥೆಯ ಪರಿಸ್ಥಿತಿಯನ್ನು ಮತ್ತು ವೇತನ ನೀಡುವ ಸಾಮರ್ಥ್ಯವನ್ನು ಅವಲಂಬಿಸಿವೆ. ಆದ್ದರಿಂದ ಭವಿಷ್ಯದ ನೌಕರರು ತಾವು ಮಾಡುವ ಕೆಲಸಕ್ಕೆ ತಾವೇನಾದರೂ ವೌಲ್ಯವನ್ನು ಕೂಡಿಸುತ್ತಿದ್ದೇವೋ ಮತ್ತು ತಾವು ಏನಾದರೂ ವಿಶಿಷ್ಟವಾದ ಹಾಗೂ ಇನ್ನೊಬ್ಬರು ಮಾಡಲಾಗದ, ಯಂತ್ರದಿಂದ ಆಕ್ರಮಿಸಿಕೊಳ್ಳಲಾಗದ ಕೆಲಸ ಮಾಡುತ್ತಿದ್ದೇವೋ ಎಂದು ತಮ್ಮನ್ನು ತಾವೇ ಕೇಳಿಕೊಳ್ಳಬೇಕಾಗುತ್ತದೆ. (ಅವರು ಇಂತಹ ಕೆಲಸ ಮಾಡುವುದಿಲ್ಲವಾದಲ್ಲಿ, ಅವರ ನೌಕರಿಯನ್ನು ಯಂತ್ರಗಳು ಕಿತ್ತುಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ).

ಮುಂದಿನ ಜನಾಂಗವನ್ನು ಹೇಗೆ ಸಿದ್ಧಗೊಳಿಸಬೇಕು? ಎಂದು ನಾವು ಯೋಚಿಸಬೇಕಾಗಿರುವುದು ಇದೇ ನಿಟ್ಟಿನಲ್ಲಿ. ಭವಿಷ್ಯವು ಮಹಾ ಉದ್ಯಮಗಳಾದ ಎಚ್‌ಎಎಲ್, ಬಿಎಚ್‌ಇಎಲ್, ಬಿಇಎಲ್ ಅಥವಾ ಎಚ್‌ಎಂಟಿಯಂತಹ ಕಂಪೆನಿಗಳಿಗೆ 25,000 ನೌಕರರನ್ನು ನೇಮಿಸಿಕೊಳ್ಳುವಂತಹ ದಿಗ್ಗಜ ಕಂಪೆನಿಗಳಿಗೆ ಸೇರಿಲ್ಲ; ಭವಿಷ್ಯದ ಪಟ್ಟಣಗಳು, ಪ್ರತಿಯೊಂದು ಕಂಪೆನಿಯೂ 25ರಿಂದ 50 ವ್ಯಕ್ತಿಗಳನ್ನು ನೇಮಿಸಿಕೊಳ್ಳುವಂತಹ 100 ಕಂಪೆನಿಗಳನ್ನು ಹೊಂದಿರುತ್ತವೆ. ಈಗಿರುವುದಕ್ಕಿಂತ ಹೆಚ್ಚಿನ ದಕ್ಷತೆ ಮತ್ತು ಉತ್ಪಾದಕತೆಯ ಜೊತೆಗೆ ಹೊಸ ಹೊಸ ಆವಿಷ್ಕಾರಗಳು ಅರ್ಥ ವ್ಯವಸ್ಥೆಯನ್ನು ಮುನ್ನಡೆಸಲಿವೆ. ಯಾವ ಕಂಪೆನಿ ಸತತವಾಗಿ ನಾವೀನ್ಯತೆ (ಇನೊವೇಶನ್)ಯನ್ನು ಅಳವಡಿಸಿಕೊಳ್ಳುವುದಿಲ್ಲವೋ ಆ ಕಂಪೆನಿ ಇತರ ಕಂಪೆನಿಗಳಿಗಿಂತ ಹಿಂದೆ ಬೀಳುತ್ತದೆ. ಭವಿಷ್ಯದ ಪಂಥಾಹ್ವಾನಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆ ಎದುರಿಸಬೇಕಾಗಿರುವುದು ಇಲ್ಲಿಯೇ.

ಇನೊವೇಶನ್ ಎನ್ನುವುದು ವಿಮರ್ಶಾತ್ಮಕ ಚಿಂತನೆ ಮತ್ತು ತರ್ಕ, ಅಮೂರ್ತ ವಿಶ್ಲೇಷಣಾತ್ಮಕ ಕೌಶಲ್ಯಗಳು, ಕಲ್ಪನೆ, ತೀರ್ಮಾನ ತೆಗೆದುಕೊಳ್ಳುವುದು, ಸೃಜನಶೀಲತೆ ಮತ್ತು ಲೆಕ್ಕಾ ಚಾರದ ಪರಿಣಾಮ. ಇದಕ್ಕೆ ಹೆಚ್ಚಿನ ಮಟ್ಟದ ಸಾಂದರ್ಭೀಕರಣ ಮತ್ತು ಒಳನೋಟ ಬೇಕಾಗುತ್ತದೆ; ಒಂದು ಸನ್ನಿವೇಶವನ್ನು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹೊಸತಾದ ಏನನ್ನೋ ಸೃಷ್ಟಿಸಬೇಕಾಗುತ್ತದೆ. ಎರಡನೆಯದಾಗಿ, ಭವಿಷ್ಯದಲ್ಲಿ ಶ್ರಮಶಕ್ತಿಯ ಒಂದು ದೊಡ್ಡ ಪಾಲು ಕಂಪ್ಯೂಟರ್‌ಗಳನ್ನು ಅವಲಂಬಿಸಲಿರುವುದರಿಂದ, ಹೆಚ್ಚು ಹೆಚ್ಚು ಬಾರಿ ನೌಕರರು ತಮ್ಮ ಮಧ್ಯೆ ಹೆಚ್ಚು ಹೆಚ್ಚು ಸಂವಹಿಸಬೇಕಾಗುತ್ತದೆ; ಹೆಚ್ಚು ಹೆಚ್ಚು ಸಹಯೋಗ ನೀಡಬೇಕಾಗುತ್ತದೆ. ಅಲ್ಲದೆ ಸಿಸ್ಟಮ್‌ಗಳು, ಅಳತೆಗಳು ಇತ್ಯಾದಿಗಳು ತಮ್ಮ ನಡುವೆ ಹೆಚ್ಚು ಹೊಂದಿಕೊಳ್ಳಬೇಕಾಗುತ್ತದೆ ಮತ್ತು ನೌಕರರು ಮತ್ತು ಕೆಲಸದ ಯುನಿಟ್‌ಗಳ ನಡುವೆ ಹೆಚ್ಚಿನ ಸಂಯೋಜನೆ ಬೇಕಾಗುತ್ತದೆ. ಆದ್ದರಿಂದ ಶಿಕ್ಷಣವು ಸಮಗ್ರ ವ್ಯಕ್ತಿಯನ್ನು ಗುರಿಯಾಗಿ ಇಟ್ಟುಕೊಳ್ಳಬೇಕೇ ಹೊರತು ಗರಿಷ್ಠ ಅಂಕಗಳಿಸುವ (ಟಾಪ್-ಸ್ಕೋರರ್) ವಿದ್ಯಾರ್ಥಿಗಳನ್ನಷ್ಟೇ ಉತ್ಪಾದಿಸಕೂಡದು. ಹಾಗಾಗಿ, ನಾವು ತರಬೇಕಾಗಿರುವ ಬದಲಾವಣೆಗಳಲ್ಲಿ ಅತ್ಯಂತ ಮುಖ್ಯವಾದ ಘಟಕವೆಂದರೆ ಶಿಕ್ಷಕರು. ಸಮಗ್ರ ವ್ಯಕ್ತಿಯನ್ನು ಸಮಾಜಕ್ಕೆ ನೀಡುವ ಗುರುತರ ಜವಾಬ್ದಾರಿಯನ್ನು ಹೊರುವವರು ಶಿಕ್ಷಕರು.

ಈ ದೃಷ್ಟಿಕೋನದಿಂದ ನೋಡಿದಾಗ, ನಮ್ಮ ಶಿಕ್ಷಣ ವ್ಯವಸ್ಥೆಯು ಈಗ ನಮಗೆ ಎದುರಾಗಿರುವ ಪಂಥಾಹ್ವಾನ ತುಂಬ ದೂರ ಉಳಿದಿದೆ. ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆ ಒಂದು ಬಿಕ್ಕಟ್ಟಿನಲ್ಲಿ ಸಿಲುಕಿದೆ. ಅದು ಹೊಸ ವಿಚಾರಗಳನ್ನು ಉತ್ಪಾದಿಸುತ್ತಿಲ್ಲ ಅಥವಾ ಹೊಸ ವ್ಯಕ್ತಿಗಳನ್ನು ನಿರ್ಮಾಣ ಮಾಡುತ್ತಿಲ್ಲ. ಅದಿನ್ನೂ ಹಳೆಯ ಕಾಲದ ಹಳೆಯ ಪಠ್ಯಕ್ರಮಕ್ಕೆ ಜೋತುಬಿದ್ದಿದೆ. ಅಕಡೆಮಿಸಿಯನ್‌ಗಳು, ಶಿಕ್ಷಣರಂಗದಲ್ಲಿರುವ ತಜ್ಞರು, ಅಧ್ಯಾಪಕರು, ಪ್ರಾಧ್ಯಾಪಕರು ಸೆಮಿನಾರ್ ಸರ್ಕಿಟ್‌ಗಳಲ್ಲಿ, ವಿಚಾರಗೋಷ್ಠಿಗಳ ವರ್ತುಲಗಳಲ್ಲಿ ಉಳಿಯುವುದಕ್ಕಾಗಿಯೇ ಈಗ ಭಾರೀ ಮೊತ್ತದ ವೇತನಗಳನ್ನು ಪಡೆಯುತ್ತಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಸಂಶೋಧನೆಯನ್ನು ನಿಯಂತ್ರಿಸುವ ಮತ್ತು ತಾವು ಮಾಡುವ ಸಂಶೋಧನೆಗೆ ಸಂಶೋಧಕರನ್ನು ಉತ್ತರದಾಯಿಗಳನ್ನಾಗಿ ಮಾಡುವ ಯಾವುದೇ ವ್ಯವಸ್ಥೆ, ಯಾವುದೇ ಕ್ರಮ ಇಲ್ಲವಾಗಿದೆ.

ಆದ್ದರಿಂದ ನಮ್ಮ ಅರ್ಥ ವ್ಯವಸ್ಥೆಯಲ್ಲಿ ಹೊಸದಾಗಿ ಮೂಡುತ್ತಿರುವ ಒಲವುಗಳಿಗೆ, ಪ್ರವೃತ್ತಿಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮಾನವ ಶಕ್ತಿಯನ್ನು ಉತ್ಪಾದಿಸಲು ನಮಗೆ ತಜ್ಞ ಶಿಕ್ಷಕರು ಬೇಕಾಗಿದ್ದಾರೆ. ಇದಕ್ಕಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಾಗಿದೆ.

ದುಃಖದ ಸಂಗತಿ ಎಂದರೆ ಈ ದಿಕ್ಕಿನಲ್ಲಿ ಯಾವುದೇ ಆರಂಭಿಕ ಹೆಜ್ಜೆ ಕಾಣಿಸುತ್ತಿಲ್ಲ.

Writer - ಎಂ.ಎ.ಸಿರಾಜ್

contributor

Editor - ಎಂ.ಎ.ಸಿರಾಜ್

contributor

Similar News

ಜಗದಗಲ
ಜಗ ದಗಲ