ಹೆರಿಗೆ ಬಿಲ್ ಪಾವತಿಸಲು ಶಿಶುವನ್ನೇ ಮಾರಿದರು!

Update: 2017-08-05 03:55 GMT

ಕೇಂದ್ರಪಾರ (ಒಡಿಶಾ), ಆ.5: ಆಸ್ಪತ್ರೆಯಲ್ಲಿ ಹೆರಿಗೆ ಬಿಲ್ ಪಾವತಿಸಲು ಹಣವಿಲ್ಲದ ದಂಪತಿ, ನವಜಾತ ಶಿಶುವನ್ನು ಸಂತಾನವಿಲ್ಲದ ದಂಪತಿಗೆ 7,500 ರೂಪಾಯಿಗಳಿಗೆ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಶಿಶುವಿನ ತಂದೆ ನಿರಾಕಾರ ಮೊಹರಾನ ಈ ಸಂಬಂಧ ಆಶಾ ಕಾರ್ಯಕರ್ತೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಆಸ್ಪತ್ರೆ ಬಿಲ್ ಪಾವತಿಸಲು ಶಿಶುವನ್ನು ಮಾರಾಟ ಮಾಡುವಂತೆ ಸಲಹೆ ಮುಂದಿಟ್ಟ, ಖಾಸಗಿ ಆಸ್ಪತ್ರೆಗೆ ತಮ್ಮನ್ನು ಕರೆದೊಯ್ಯುವಲ್ಲಿ ಆಶಾ ಕಾರ್ಯಕರ್ತೆಯ ಪಾತ್ರವೇ ಪ್ರಮುಖ ಎಂದು ದೂರಿದ್ದಾರೆ. ಆದರೆ ನರ್ಸಿಂಗ್ ಹೋಂ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಮೊಹರಾನ ಹಾಗೂ ಪತ್ನಿ ಗೀತಾಂಜಲಿ ರಾಜನಗರ ತಾಲೂಕು ರಿಘಗಡ ಗ್ರಾಮದವರಾಗಿದ್ದು, ಮೂರನೇ ಹೆರಿಗೆಗಾಗಿ ಜುಲೈ 30ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ದಂಪತಿಯನ್ನು ಆಸ್ಪತ್ರೆಗೆ ಕರೆತಂದ ಆಶಾ ಕಾರ್ಯಕರ್ತೆ, ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ ನೀಡಲಾಗುತ್ತದೆ. ಆದ್ದರಿಂದ ಖಾಸಗಿ ಆಸ್ಪತ್ರೆಗೆ ತಕ್ಷಣ ವರ್ಗಾಯಿಸುವಂತೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ದಿನಗೂಲಿ ನೌಕರನ ಪತ್ನಿಯಾದ ಗೀತಾಂಜಲಿ ಆಗಸ್ಟ್ 1ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

"ಸರ್ಕಾರಿ ಆಸ್ಪತ್ರೆಯಂತೆ ಖಾಸಗಿ ಆಸ್ಪತ್ರೆಯಲ್ಲೂ ಉಚಿತವಾಗಿ ಹೆರಿಗೆ ಮಾಡಿಸುತ್ತಾರೆ ಎಂದು ಕೊಂಡಿದ್ದೆವು. ಆದರೆ ಬಿಡುಗಡೆ ಮಾಡಬೇಕಾದರೆ 7500 ರೂಪಾಯಿ ಪಾವತಿಸುವಂತೆ ಕೇಳಿದರು. ಆಗ ನನ್ನಲ್ಲಿ 1000 ರೂಪಾಯಿಗಿಂತಲೂ ಕಡಿಮೆ ಇತ್ತು. ಹಣ ಪಾವತಿಸದಿದ್ದರೆ ತಾಯಿ-ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ ಆಸ್ಪತ್ರೆ ಸಿಬ್ಬಂದಿ ಕೊನೆಗೆ, ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಾಟ ಮಾಡುವಂತೆ ಸಲಹೆ ಮಾಡಿದರು. ಹಣಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪತ್ನಿಯ ವಿರೋಧದ ನಡುವೆಯೂ ಮಗುವನ್ನು ಮಾರಾಟ ಮಾಡ ಬೇಕಾಯಿತು" ಎಂದು ಹೇಳಿದ್ದಾರೆ.

ಅಸ್ಪತ್ರೆಯೇ ಮಧ್ಯವರ್ತಿಯೊಬ್ಬರನ್ನು ಕರೆಸಿ 7,500 ರೂಪಾಯಿಗೆ ಮಗುವನ್ನು ಮಾರಾಟ ಮಾಡಿಸಿದೆ ಎಂದು ದೂರಿದ್ದಾರೆ. ಆಶಾ ಕಾರ್ಯಕರ್ತೆ ನಮ್ಮನ್ನು ತಪ್ಪುದಾರಿಗೆ ಎಳೆದಿದ್ದರಿಂದ ಈ ಸ್ಥಿತಿ ನಿರ್ಮಾಣವಾಯಿತು ಎನ್ನುವುದು ಅವರ ವಾದ. ಬಾಲ ನ್ಯಾಯ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News