ವಿದ್ಯಾರ್ಥಿ ವಿಕಸನ : ಮಡಿಕೇರಿ ಜಿಲ್ಲೆಯ 3 ಶಾಲೆಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Update: 2017-08-05 13:09 GMT

ಮಡಿಕೇರಿ, ಆ.5 :ಮಂಗಳೂರಿನ ವಿಕಾಸ್ ಪದವಿ ಪೂರ್ವ ಕಾಲೇಜು 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಅಂತರ್‍ಶಾಲಾ ಮಟ್ಟದ ವಿದ್ಯಾರ್ಥಿ ವಿಕಸನ ಮಾದರಿ ಸ್ಪರ್ಧೆಯಲ್ಲಿ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ಸಂತ ಜೋಸೆಫರ ಶಾಲೆ ಹಾಗೂ ಪೊನ್ನಂಪೇಟೆಯ ಸಾಯಿಶಂಕರ ವಿದ್ಯಾ ಸಂಸ್ಥೆ ವಿವಿಧ ವಿಭಾಗಗಳಲ್ಲಿ ಪ್ರಥಮ ಬಹುಮಾನವನ್ನುಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ.

ವಿದ್ಯಾರ್ಥಿಗಳಲ್ಲಿ ಅಡಗಿರುವ ಶೈಕ್ಷಣಿಕ ಪ್ರತಿಭೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿಕಾಸ್ ಪದವಿ ಪೂರ್ವ ಕಾಲೇಜು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಕ್ಕೆ ಸಂಬಂಧಿಸಿದಂತೆ ಮಾದರಿ ಸ್ಪರ್ಧೆಯನ್ನು ಆಯೋಜಿಸಿದ್ದರು. ಎಲ್ಲಾ ಸ್ಪರ್ಧೆಗಳಲ್ಲಿ ಸುಮಾರು 42 ತಂಡಗಳು ಅತಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭಾ ಕೌಶಲ್ಯವನ್ನು ಮೆರೆದರು. ಪ್ರಯೋಗಶೀಲ ಪ್ರದರ್ಶನದ ಮೂಲಕ ತೀರ್ಪುಗಾರರ ಗಮನ ಸೆಳೆದರು. 

ಕಲಾ ವಿಭಾಗದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ವಿಜ್ಞಾನ ವಿಭಾಗದಲ್ಲಿ ಸಂತ ಜೋಸೆಫರ ಶಾಲೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಸಾಯಿ ಶಂಕರ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ತಂಡ ಕ್ರಮವಾಗಿ ಪ್ರಥಮ ಬಹುಮಾನವನ್ನು ಗೆದ್ದು ಕೊಂಡವು. ಮೂರೂ ತಂಡಗಳಿಗೆ ತಲಾ 5 ಸಾವಿರ ರೂ. ನಗದು ಬಹುಮಾನವನ್ನು ವಿತರಿಸಲಾಯಿತು.

ಇದೇ ಆ.16 ರಂದು ಮಂಗಳೂರಿನ ವಿಕಾಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ನಡೆಯಲಿದ್ದು, ಆಯ್ಕೆಯಾಗಿರುವ ಈ ಮೂರು ತಂಡಗಳು ಸ್ಪರ್ಧಿಸಲಿವೆ ಎಂದು ಕಾಲೇಜಿನ ಸಲಹೆಗಾರರಾದ ಡಾ.ಹೆಚ್.ಅನಂತಪ್ರಭು ತಿಳಿಸಿದ್ದಾರೆ.

ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲರಾದ ಕಲ್ಲುಮಾಡಂಡ ಸರಸ್ವತಿ ಸುಬ್ಬಯ್ಯ, ಪ್ರಮುಖರಾದ ಎನ್.ಇ.ಚಿಣ್ಣಪ್ಪ, ಸಿ.ಡಿ.ಕಾಳಪ್ಪ, ಎನ್.ಎಸ್.ಪೊನ್ನಪ್ಪ ಹಾಗೂ ಶಿಕ್ಷಕ ವೃಂದ ಈ ಸಂದರ್ಭ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News