×
Ad

ಮತಪತ್ರದ ಹಿಂದೆ ಅಡಗಲು ಹಾಫಿಜ್ ಯತ್ನ: ಭಾರತ

Update: 2017-08-05 22:56 IST

ಹೊಸದಿಲ್ಲಿ, ಆ. 4: ಲಷ್ಕರೆ ತಯ್ಯಿಬದ ನಾಯಕ ಹಾಫಿಜ್ ಸಯೀದ್ ರಾಜಕೀಯ ಪ್ರವೇಶಿಸಲು ಯೋಚಿಸುತ್ತಿದ್ದಾನೆ ಎಂಬ ಪಾಕಿಸ್ತಾನ ಮಾಧ್ಯಮದ ವರದಿ ನಡುವೆ, ಶುಕ್ರವಾರ ಭಾರತ, ಬುಲೆಟ್ ವ್ಯಾಪಾರದಲ್ಲಿ ತೊಡಗಿದ ವ್ಯಕ್ತಿ ಬ್ಯಾಲೆಟ್ (ಮತಪತ್ರ)ದ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದ ಹಾಗೂ ಅಸಹ್ಯಕರ ಎಂದು ಹೇಳಿದೆ.

ರಕ್ತಸಿಕ್ತ ಕೈಗಳ ವ್ಯಕ್ತಿ ಚುನಾವಣಾ ಶಾಯಿಯ ಹಿಂದೆ ಅಡಗಿಸಿಕೊಳ್ಳುವುದು ಅಥವಾ ಮಾನವರ ಹತ್ಯೆಗೈಯಲು ಬುಲೆಟ್ ವ್ಯಾಪಾರ ಮಾಡಿದ ವ್ಯಕ್ತಿ ಬ್ಯಾಲೆಟ್‌ನ ಹಿಂದೆ ಅಡಗಿಕೊಳ್ಳುವುದು-ಇದೆರೆಡೂ ಹಾಸ್ಯಾಸ್ಪದ ಹಾಗೂ ಅಸಹ್ಯಕರ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಗೋಪಾಲ್ ಬಾಗ್ಲೇ ತಿಳಿಸಿದ್ದಾರೆ.

ಗೃಹ ಬಂಧನದಲ್ಲಿರುವ ಸಯೀದ್ ತನ್ನ ಸಂಘಟನೆಯ ಹೆಸರನ್ನು ಜಮಾತ್- ಉದ್-ದವಾ ಎಂದು ಬದಲಾಯಿಸಿಕೊಂಡಿದ್ದಾನೆ. ಇದನ್ನು ಮಿಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನ ಪಕ್ಷ ಎಂದು ಹೆಸರು ಇರಿಸಿದ್ದಾನೆ. ಪಕ್ಷವನ್ನು ನೋಂದಣಿ ಮಾಡಲು ಪಾಕಿಸ್ತಾನ ಚುನಾವಣಾ ಆಯೋಗ ಸಂಪರ್ಕಿಸಿದ್ದಾನೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿತ್ತು.

ಸಯೀದ್ ವಿಶ್ವಸಂಸ್ಥೆಯ ನಿಲುವಳಿಯ 1267ನೇ ನಿಯಮದ ಅಡಿಯಲ್ಲಿ ಬರುವ ಅಂತಾರಾಷ್ಟ್ರೀಯ ಭಯೋತ್ಪಾದಕ ಹಾಗೂ ಆತನ ಸಂಘಟನೆಯನ್ನು ಲಷ್ಕರೆ ತಯ್ಯಿಬ ಎಂದು ಕರೆಯಿರಿ ಅಥವಾ ಜಮಾತ್ ವುದ್ ದವಾ ಎಂದು ಕರೆಯಿರಿ. ಅದು ಒಂದೇ ಎಂದು ಅವರು ಹೇಳಿದ್ದಾರೆ.

ಆತ ಭಯೋತ್ಪದಾನೆ ಚಟುವಟಿಕೆಯನ್ನು ಭಾರತದಲ್ಲಿ ಮಾತ್ರ ನಡೆಸಿರುವುದಲ್ಲ. ಇತರ ದೇಶಗಳಲ್ಲೂ ನಡೆಸಿದ್ದಾನೆ. ಆದುದರಿಂದ ಇದು ಭಾರತ ಮಾತ್ರ ಆತಂಕ ಪಡುವ ವಿಚಾರವಲ್ಲ. ಇತರ ದೇಶಗಳೂ ಆತಂಕಪಡುವ ವಿಚಾರ ಎಂದು ಗೋಪಾಲ್ ಬಾಗ್ಲೇ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News