ನೀತಿ ಆಯೋಗದ ಉಪಾಧ್ಯಕ್ಷರಾಗಿ ಅರ್ಥ ಶಾಸ್ರಜ್ಞ ರಾಜೀವ್‌ಕುಮಾರ್ ನೇಮಕ
ಹೊಸದಿಲ್ಲಿ, ಆ.5: ನೀತಿ ಆಯೋಗದ ಉಪಾಧ್ಯಕ್ಷರಾಗಿ ಅರ್ಥ ಶಾಸ್ರಜ್ಞ ರಾಜೀವ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಖ್ಯಾತ ಆರ್ಥಿಕತಜ್ಞ ಅರವಿಂದ ಪನಗರಿಯ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ನೇಮಕ ನಡೆಸಲಾಗಿದೆ.
ಆಕ್ಸ್‌ಫರ್ಡ್ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಡಿ ಫಿಲ್ ಪದವಿ ಪಡೆದಿರುವ ಕುಮಾರ್, ಲಕ್ನೊ ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ‘ಪಾಲಿಸಿ ಆ್ಯಂಡ್ ರಿಸರ್ಚ್ ’ ಕೇಂದ್ರದ ಚಿಂತಕರ ಚಾವಡಿಯ ಹಿರಿಯ ಸದಸ್ಯರಾಗಿದ್ದಾರೆ. ಭಾರತೀಯ ಅರ್ಥವ್ಯವಸ್ಥೆ ಮತ್ತು ಭಾರತದ ರಾಷ್ಟ್ರೀಯ ಭದ್ರತೆ ವಿಷಯದ ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ. ಹಲವು ಸಂಸ್ಥೆಗಳಲ್ಲಿ ಉನ್ನತ ಹುದ್ದೆ ನಿರ್ವಹಿಸಿದ್ದ ರಾಜೀವ್ ಕುಮಾರ್, ರಿಯಾದ್‌ನ ಪ್ರತಿಷ್ಠಿತ ‘ಕಿಂಗ್ ಅಬ್ದುಲ್ಲ ಪೆಟ್ರೋಲಿಯಂ ಸ್ಟಡೀಸ್ ಆ್ಯಂಡ್ ರಿಸರ್ಚ್ ಸೆಂಟರ್’ ಸೇರಿದಂತೆ ಹಲವು ಅಂತರಾಷ್ಟ್ರೀಯ ಸಂಸ್ಥೆಗಳ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಎಐಐಎಂಎಸ್‌ನ ಶಿಶುಶಾಸ್ತ್ರ ವಿಭಾಗದ ಮುಖ್ಯಸ್ಥ ವಿನೋದ್ ಪೌಲ್ ಅವರನ್ನು ನೀತಿ ಆಯೋಗದ ಸದಸ್ಯರನ್ನಾಗಿ ನೇಮಿಸಲಾಗಿದೆ.