ಪ್ಯಾರಿಸ್ ಒಪ್ಪಂದಕ್ಕೆ ವಿದಾಯ: ವಿಶ್ವಸಂಸ್ಥೆಗೆ ಅಮೆರಿಕ ವಿವರಣೆ
ವಾಶಿಂಗ್ಟನ್,ಆ.5: ಸಾಧ್ಯವಿದ್ದಷ್ಟೇ ಬೇಗನೆ ತಾನು 2015ರ ಐತಿಹಾಸಿಕ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಅಮೆರಿಕವು ಶನಿವಾರ ವಿಶ್ವಸಂಸ್ಥೆಗೆ ಔಪಚಾರಿಕವಾಗಿ ತಿಳಿಸಿದೆ.
ಆದಾಗ್ಯೂ, ಪ್ಯಾರಿಸ್ ಒಡಂಬಡಿಕೆಯ ನಿಬಂಧನೆಗಳ ಪ್ರಕಾರ ಅಮೆರಿಕವು 2020ರ ನವೆಂಬರ್ 4ರವರೆಗೆ ಸಂಪೂರ್ಣವಾಗಿ ಹಿಂದೆಸರಿಯಲು ಸಾಧ್ಯವಿಲ್ಲ. ಇದು ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಯ ಮರುದಿನವಾಗಲಿರುವುದರಿಂದ ಮುಂದಿನ ಅಮೆರಿಕ ಅಧ್ಯಕ್ಷರು ಮತ್ತೆ ಒಪ್ಪಂದವನ್ನು ಮುಂದುವರಿಸಬಹುದಾದ ಸಾಧ್ಯತೆಯೂ ಇದೆ.
ಕೈಗಾರಿಕೆಗಳಿಂದ ವಾತಾವರಣಕ್ಕೆ ವಿಸರ್ಜನೆಯಾಗುವ ಇಂಗಾಲದ ಪ್ರಮಾಣವನ್ನು ಕಡಿಮೆಗೊಳಿಸುವ ಮೂಲಕ ಭೂಮಿಯ ತಾಪಮಾನವನ್ನು 2 ಸೆಂಟಿಗ್ರೇಡ್‌ನಷ್ಟು ಇಳಿಸುವ ಗುರಿಯನ್ನು ಪ್ಯಾರಿಸ್ ಒಪ್ಪಂದ ಹೊಂದಿದೆ.
ಅಮೆರಿಕದ ಉದ್ಯಮಗಳು ಕಾರ್ಮಿಕರು, ಜನತೆ ಹಾಗೂ ತೆರಿಗೆದಾರರಿಗೆ ಪ್ರಯೋಜನವಾಗು ಉದ್ದೇಶದಿಂದ ಪ್ಯಾರಿಸ್ ಒಪ್ಪಂದವನ್ನು ಮರುಪರಿಶೀಲಿಸಲು ಸಿದ್ಧನಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೂನ್ 1ರಂದು ಘೋಷಿಸಿದ್ದರು.
ದೇಶದ ಆರ್ಥಿಕ ಬೆಳವಣಿಗೆ ಉತ್ತೇಜಿಸಲು ಹಾಗೂ ಇಂಧನ ಭದ್ರತೆಯನ್ನು ಖಾತರಿಪಡಿಸುವ ಉದ್ದೇಶದಿಂದ, ಇಂಗಾದ ಹೊರಸೂಸುವಿಕೆಯನ್ನು ನಿಯಂತ್ರಿಸುವ ಹವಾಮಾನನೀತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆಯೆದಂು ಅಮೆರಿಕ ಪ್ರತಿಪಾದಿಸುತ್ತಿದೆ.