ಅರುಂಧತಿಗೆ ಮತ್ತೊಂದು ಬೂಕರ್....?

Update: 2017-08-05 18:33 GMT

‘ದಿ ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’-ಅರುಂಧತಿ ರಾಯ್ ಅವರ ಎರಡನೆಯ ಕಾದಂಬರಿ. ಮೊದಲ ಕಾದಂಬರಿಯ ಎರಡು ದಶಕಗಳ ನಂತರ ಪ್ರಕಟವಾಗಿರುವ ಈ ಕಾದಂಬರಿ ಒಂದು ಮಹಾನ್ ಗಾಥೆ. ಹಿಂಸೆ, ಮಾನವ ಸಂಬಂಧಗಳ ಚಕ್ರವ್ಯೆಹ, ಅಟ್ಟಾಡಿಸುವ ಮಾನವ ಬೇಟೆ, ಮನೋವೈಕಲ್ಯ, ರಾಷ್ಟ್ರವೊಂದರ ಸಾರ್ವತ್ರಿಕ ಕ್ಷೋಭೆ, ಗೊಂದಲಗಳು-ಹೀಗೆ ಸಂಕೀರ್ಣ ಜಗತ್ತೊಂದರ ಪುನರ್‌ಸೃಷ್ಟಿ ಎನ್ನಬಹುದಾದ ಈ ಕಾದಂಬರಿ ‘ಮಂಗಳ ಮುಖಿ’ ಅಂಜುಂ ಮತ್ತು ಇಂಗ್ಲಿಷ್ ಮಾತನಾಡುವ ಕ್ರಿಯಾವಾದಿ ತಿಲೋತ್ತಮೆ ಎಂಬೆರಡು ಪಾತ್ರಗಳ ಬದುಕಿನ ಕಥಾನಕದ ಮುಖೇನ ಅನಾವರಣಗೊಳ್ಳುತ್ತದೆ.

ಕಮ್ ಸೆಪ್ಟಂಬರ್- ಎಂದು ಇಂಗ್ಲಿಷ್ ಸಾಹಿತಿಗಳು ನಿರೀಕ್ಷೆಯಲ್ಲಿ ಕಾಯುತ್ತಾರೆ ಈ ತಿಂಗಳಿಗಾಗಿ. ಪ್ರತೀ ವರ್ಷ ಸೆಪ್ಟಂಬರ್-ಅಕ್ಟೋಬರ್ ಪ್ರಪಂಚದ ಇಂಗ್ಲಿಷ್‌ನಲ್ಲಿ ಬರೆಯುವ ಕಾದಂಬರಿಕಾರರನ್ನು ನಿರೀಕ್ಷೆಯ ತುದಿಗಾಲಿನಲ್ಲಿ ನಿಲ್ಲಿಸುತ್ತದೆ. ಏನದು ಈ ತಿಂಗಳುಗಳ ವಿಶೇಷ? ಈ ತಿಂಗಳುಗಳಲ್ಲಿ ಶ್ರೇಷ್ಠ ಇಂಗ್ಲಿಷ್ ಕಾದಂಬರಿಗೆ ನೀಡಲಾಗುವ ಪ್ರತಿಷ್ಠಿತ ವಾರ್ಷಿಕ ‘ಬೂಕರ್ ಪ್ರಶಸ್ತಿ’ಯನ್ನು ಪ್ರಕಟಿಸಲಾಗುತ್ತದೆ. ಎಂದೇ ಈ ಅವಧಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬರೆಯುವ ಕಾದಂಬರಿಕಾರರು ಬೂಕರ್ ಪ್ರಶಸ್ತಿಯ ಭಾಗ್ಯ ತಮ್ಮದಾಗಲಿದೆಯೇ? ಪ್ರಶಸ್ತಿಗೆ ತಮ್ಮ ಕಾದಂಬರಿಯನ್ನು ಪರಿಗಣಿಸಲಾಯಿತೇ ಎಂದು ತವಕ ಕುತೂಹಲಗಳಿಂದ ಕಾಯುತ್ತಾರೆ. ಬೂಕರ್ ಪ್ರಶಸ್ತಿ ಪಡೆಯಲು ಇಂಗ್ಲಿಷ್ ಕಾದಂಬರಿಕಾರರು ಏಕಿಷ್ಟು ಹಾತೊರೆಯುತ್ತಾರೆ? ಏನು ಈ ಪ್ರಶಸ್ತಿಯ ವೈಶಿಷ್ಟ್ಯ?

ಇತ್ತೀಚಿನ ವರ್ಷಗಳಲ್ಲಿ ನೊಬೆಲ್ ಪ್ರಶಸ್ತಿಯಷ್ಟೇ ವಿಶ್ವ ಖ್ಯಾತಿಯನ್ನು ಗಳಿಸಿರುವ ಬೂಕರ್ ಕಥಾ ಸಾಹಿತ್ಯ ಪ್ರಶಸ್ತಿಯನ್ನು 1968ರಲ್ಲಿ ಬೂಕರ್ ಮೆಕ್ಕಾಂಡ್ ಲಿಮಿಟೆಡ್ ಎಂಬ ಕಂಪೆನಿಯು ಸ್ಥಾಪಿಸಿತು. ಶುರುವಿನಲ್ಲಿ ಇದನ್ನು ಬೂಕರ್ ಮೆಕ್ಕಾಂಡ್ ಪ್ರಶಸ್ತಿ ಹೆಸರಿನಲ್ಲಿ ನೀಡಲಾಗುತ್ತಿತ್ತು. ನಂತರ ಇದನ್ನು ಬೂಕರ್ ಪ್ರೈಜ್ ಫೌಂಡೇಷನ್ ಹೆಸರಿನಲ್ಲಿ ಒಂದು ಸ್ವಾಯತ್ತ ದತ್ತಿ ಸಂಸ್ಥೆಯನ್ನಾಗಿ ನೋಂದಾಯಿಸಲಾಯಿತು. ಬೂಕರ್ ಟ್ರೇಡಿಂಗ್ ಸಂಸ್ಥೆಯ ವರ್ಷದ ಪೂರ್ತಿ ಲಾಭವನ್ನು ಈ ದತ್ತಿ ಸಂಸ್ಥೆಗೆ ಪ್ರತೀ ವರ್ಷ ವರ್ಗಾಯಿಸಲಾಗುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಪ್ರತೀ ವರ್ಷ ಪ್ರಕಟವಾಗುವ ಶ್ರೇಷ್ಠ ಕಾದಂಬರಿಗಾಗಿ ನೀಡುವ ಈ ಪ್ರಶಸ್ತಿಯ ಮೊತ್ತ ಪ್ರಾರಂಭದಲ್ಲಿ ಇಪ್ಪತ್ತೊಂದು ಸಾವಿರ ಪೌಂಡುಗಳಾಗಿತ್ತು. 2000ದಲ್ಲಿ ಪ್ರಶಸ್ತಿಯ ಮೊತ್ತವನ್ನು ಐವತ್ತು ಸಾವಿರ ಪೌಂಡುಗಳಿಗೆ ಹೆಚ್ಚಿಸಲಾಯಿತು.

ಬ್ರಿಟಿಷ್ ಸಾಂಸ್ಕೃತಿಕ ವಲಯಗಳಲ್ಲಿ ಅತಿಯಾದ ಸಡಗರ ಸಂಭ್ರಮಗಳಿಂದ ಸ್ವಾಗತಿಸಲಾಗುವ, ಪ್ರತಿಷ್ಠಿತ ಪ್ರಶಸ್ತಿಯೆಂದು ವಿಜೃಂಭಿಸಲಾಗುವ ಬೂಕರ್ ಪ್ರಶಸ್ತಿಗೆ ಮೊದಲು ಕಾಮನ್‌ವೆಲ್ತ್ ರಾಷ್ಟ್ರಗಳು ಹಾಗೂ ರಿಪಬ್ಲಿಕ್ ಆಫ್ ಜಾಂಬಿಯಾದಲ್ಲಿನ ಇಂಗ್ಲಿಷ್ ಸಾಹಿತಿಗಳು ಮಾತ್ರ ಅರ್ಹರೆಂದು ಪರಿಗಣಿಸಲಾಗುತ್ತಿತ್ತು. 2014ರಲ್ಲಿ ಈ ನಿಯಮ ಸಡಿಲಿಸಿ ವಿಶ್ವದಾದ್ಯಂತ ಪ್ರತೀ ವರ್ಷ ಇಂಗ್ಲಿಷ್‌ನಲ್ಲಿ ಬರೆಯುವ ಎಲ್ಲ ಲೇಖರನ್ನೂ ಎಲ್ಲ ಆಂಗ್ಲ ಕಾದಂಬರಿಗಳನ್ನೂ ಪ್ರಶಸ್ತಿಗೆ ಪರಿಗಣಿಸಲು ನಿರ್ಧರಿಸಲಾಯಿತು. 2010ರಲ್ಲಿ ಬೂಕರ್ಸ್‌ ‘ಲಾಸ್ಟ್‌ಮೆನ್ ಬೂಕರ್ ಪ್ರೈಜ್’ ನೀಡಲಾಯಿತು. 1970ರಲ್ಲಿ ಪ್ರಕಟವಾದ ಇಪ್ಪತ್ತೆರಡು ಕಾದಂಬರಿಗಳನ್ನು ಈ ವಿಶೇಷ ಪ್ರಶಸ್ತಿಗೆ ಪರಿಗಣಿಸಲಾಗಿತ್ತು.

ಬೂಕರ್ ಪ್ರಶಸ್ತಿ ವಿಜೇತ ಸಾಹಿತಿಗಳಿಗೆ ಅಂತಾರಾಷ್ಟ್ರೀಯ ಪ್ರಸಿದ್ಧಿ ಮತ್ತು ಯಶಸ್ಸು ಕಟ್ಟಿಟ್ಟಬುತ್ತಿ. ಆದ್ದರಿಂದಲೇ ಬೂಕರ್ ಅತೀ ಮಹತ್ವದ ಪ್ರಶಸ್ತಿ ಎನಿಸಿದೆ. ಇಂಗ್ಲಿಷ್ ಬರಹಗಾರರಿಗೆ ಅದನ್ನು ಗಳಿಸುವುದು ಒಂದು ಪ್ರತಿಷ್ಠೆಯ ವಿಷಯವಾಗಿದೆ. ಬೂಕರ್ ಪ್ರಶಸ್ತಿ ಬರಲಿ, ಬರದಿದ್ದರೆ ಆ ಪ್ರಶಸ್ತಿಗೆ ಅರ್ಹರು ಎಂದು ಪರಿಶೀಲಿಸುವ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೂ ಅದು ತಮ್ಮ ಸೃಜನಶೀಲ ಪ್ರತಿಭೆಗೆ ಸಲ್ಲುವ ದೊಡ್ಡ ಗೌರವ ಎಂದು ಹಪಹಪಿಸುವ ಲೇಖಕರು ಇದ್ದಾರೆ ಎಂದರೆ ಈ ಪ್ರಶಸ್ತಿಯ ಗೌರವಕಿಮ್ಮತ್ತುಗಳು ಯಾರಿಗಾದರೂ ಅರ್ಥವಾದೀತು. ಇಲ್ಲಿಯವರೆಗೆ ನಲವತ್ತೈದಕ್ಕೂ ಹೆಚ್ಚು ಮಂದಿ ಆಂಗ್ಲ ಕಾದಂಬರಿಕಾರರು ಈ ಪ್ರಶಸ್ತಿಗೆ ಭಾಜನರಾಗಿದ್ದು, ಅವರಲ್ಲಿ ಮೂವರು ಭಾರತೀಯರೆಂಬುದು ನಮಗೆ ಹೆಮ್ಮೆಯ ಸಂಗತಿ.

‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಕಾದಂಬರಿಗೆ ಅರುಂಧತಿ ರಾಯ್ (1997), ‘ದಿ ಇನ್ಹೆರಿಟೆನ್ಸ್ ಆಫ್ ಲಾಸ್’(2006)ಕಾದಂಬರಿಯ ಕಿರಣ್ ದೇಸಾಯಿ ಮತ್ತು ‘ದಿ ವೈಟ್ ಟೈಗರ್ಸ್‌’ನ ಕನ್ನಡಿಗ ಅರವಿಂದ ಅಡಿಗ (2008) ಬೂಕರ್ಸ್‌ನ ಭಾರತೀಯ ವಿಜೇತರು. ಈಗ ಅರುಂಧತಿ ರಾಯ್ ಎರಡನೆಯ ಬಾರಿಗೆ ಈ ವರ್ಷದ ಬೂಕರ್ ಪ್ರಶಸ್ತಿಯ ವಿಜಯಸ್ತಂಭವನ್ನು ಸಮೀಪಿಸಿರುವುದು ಭಾರತಕ್ಕೆ ದುಪ್ಪಟ್ಟು ಹೆಮ್ಮೆಯ ಸಂಗತಿಯಾಗಿದೆ. ಇಂಗ್ಲಿಷ್‌ನಲ್ಲಿ ಬರೆಯುವ ಭಾರತೀಯ ಲೇಖಕಿಯರಲ್ಲಿ ತಮ್ಮ ಪ್ರಥಮ ಕೃತಿಯಿಂದಲೇ ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರರಾಗಿರುವ ಅರುಂಧತಿ ರಾಯ್ ಹುಟ್ಟಿದ್ದು ಮೇಘಾಲಯದ ಶಿಲ್ಲಾಂಗ್‌ನಲ್ಲಿ.

ತಂದೆ ರಾಜೀವ ರಾಯ್ ಬಂಗಾಳಿ. ತಾಯಿ ಮೇರಿ ರಾಯ್ ಮಲೆಯಾಳಿ ಸಿರಿಯನ್ ಕ್ರಿಶ್ಚಿಯನ್. ಬಾಲ್ಯದಲ್ಲಿ ನೀಲಗಿರಿಯ ಲಾರೆನ್ಸ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ. ದಿಲ್ಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್ ನಲ್ಲಿ ವೃತ್ತಿ ಶಿಕ್ಷಣ. ವಾಸ್ತುಶಿಲ್ಪಶಾಸ್ತ್ರದಲ್ಲಿ ಪದವೀಧರೆ. ಪ್ರವೃತ್ತಿಯಿಂದ ಲೇಖಕಿ. ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಮೊದಲ ಕಾದಂಬರಿ. ಈ ಪ್ರಥಮ ಕೃತಿಗೇ 1977ರಲ್ಲಿ ಬೂಕರ್ ಪ್ರಶಸ್ತಿಯ ಕಿರೀಟ. ‘ದಿ ಬ್ಯಾನಿಯನ್ ಟ್ರೀ’ ಅರುಂಧತಿಯವರು ದೂರದರ್ಶನಕ್ಕಾಗಿ ಬರೆದ ಚಿತ್ರ ಕಥಾ ಮಾಲಿಕೆ. ಜಗತ್ತಿನ ವಿವಿಧ ಜನಾಂಗಗಳ ಸಂಸ್ಕೃತಿಯನ್ನು ಶೋಧಿಸಿವ ಪ್ರಯತ್ನ.

ಲೇಖಕಿಯಾಗಿ ಅರುಂಧತಿ ರಾಯ್ ಮಾನವ ಹಕ್ಕು, ಮನುಷ್ಯನ ಘನತೆ-ಗೌರವ, ವ್ಯಕ್ತಿ ಸ್ವಾತಂತ್ರ್ಯ, ವಿಶ್ವ ಶಾಂತಿಯಂಥ ಮೌಲ್ಯಗಳಿಗೆ ಬದ್ಧರಾದವರು. ಈ ಬದ್ಧತೆ ಅನೇಕ ಸಲ ಅವರನ್ನು ವಾದವಿವಾದಗಳ ಸುಳಿಯಲ್ಲಿ ಸಿಲುಕಿಸಿರುವುದೂ ಉಂಟು, ಕೋರ್ಟಿನ ಮೆಟ್ಟಿಲು ಹತ್ತಿಸಿರುವುದೂ ಉಂಟು. ಕಾಶ್ಮೀರದ ಕೆಲವರ ಪ್ರತ್ಯೇಕತಾ ಬೇಡಿಕೆಯನ್ನು ಬೆಂಬಲಿಸಿದ್ದು, ಸರ್ದಾರ್ ಪಟೇಲ್ ನರ್ಮದಾ ಸರೋವರ ಯೋಜನೆಯ ವಿರುದ್ಧ ಮೇಧಾ ಪಾಟ್ಕರ್ ಚಳವಳಿಯನ್ನು ಬೆಂಬಲಿಸಿದ್ದು, ಪೋಕ್ರಾನ್‌ನಲ್ಲಿ ಭಾರತ ಪರಮಾಣು ಸ್ಫೋಟಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಇವೇ ಮೊದಲಾದವು ಅರುಂಧತಿ ರಾಯ್ ಅವರನ್ನು ವಿವಾದಾಸ್ಪದ ವ್ಯಕ್ತಿಯನ್ನಾಗಿಸಿರುವ ಕೆಲವು ನಿದರ್ಶನಗಳು.

ಅಮೆರಿಕದ ವಿದೇಶಾಂಗ ನೀತಿ ವಿರುದ್ಧ ಪ್ರತಿಭಟನೆ, ಇಸ್ರೇಲ್ ವಿರುದ್ಧ ಯುದ್ಧಾಪರಾಧಿ ರಾಷ್ಟ್ರ ಎಂಬ ಟೀಕೆ ಅರುಂಧತಿ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾನವೀಯ ಮೌಲ್ಯಪರ ಅಹಿಂಸಾ ಹೋರಾಟಗಾರ್ತಿಯಾಗಿ ಪರಿಚಯಿಸಿದವು. ಕಾಶ್ಮೀರಿ ಆಝಾದಿಗಳ ಪ್ರತ್ಯೇಕತಾ ವಾದಿಗಳನ್ನು ಬೆಂಬಲಿಸಿ ಭಾಷಣ ಮಾಡಿದ್ದಕ್ಕಾಗಿ ಹುರಿಯತ್ ನಾಯಕ ಸೈಯದ್ ಅಲಿ ಷಾ ಅವರೊಟ್ಟಿಗೆ ರಾಜದ್ರೋಹದ ಆಪಾದನೆ ಎದುರಿಸಬೇಕಾಯಿತು. 2007ರಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕರಾದ ನೋಮ್ ಚೋಮ್‌ಸ್ಕಿ, ಹಾವರ್ಡ್ ಜಿನು ಮೊದಲಾದವರೊಂದಿಗೆ ‘ದಿ ಗಾರ್ಡಿಯನ್’ ಪತ್ರಿಕೆಗೆ ಇಸ್ರೇಲನ್ನು ಭಯೋತ್ಪಾದಕ ರಾಷ್ಟ್ರವೆಂದು ಟೀಕಿಸಿ ಪತ್ರ ಬರೆದು ಪ್ರಪಂಚದ ಗಮನ ಸೆಳೆದವರು. ಇನ್ನು ದೇಶದೊಳಗೂ ಅರುಂಧತಿ ರಾಯ್ ಅವರು ನರೇಂದ್ರ ಮೋದಿಯವರ ನಾಯಕತ್ವ ವಿರೋಧಿಸಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾದವರು. 2013ರಲ್ಲಿ ಭಾರತೀಯ ಜನತಾ ಪಕ್ಷ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ ಅದನ್ನು ದೇಶದ ‘ದುರಂತ’ ಎಂದು ಟೀಕಿಸಿದ್ದರು. ವಾಣಿಜ್ಯೋದ್ಯಮಿಗಳ ಬೆಂಬಲ ಹೊಂದಿರುವ ಮೋದಿಯವರು ಮಿಲಿಟರಿ ಪ್ರವೃತ್ತಿಯ ಆಕ್ರಮಣಶೀಲ ವ್ಯಕ್ತಿ ಎಂದು ಟೀಕಿಸಿ ವಿವಾದಕ್ಕೊಳಗಾದವರು.

‘ದಿ ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’-ಅರುಂಧತಿ ರಾಯ್ ಅವರ ಎರಡನೆಯ ಕಾದಂಬರಿ. ಮೊದಲ ಕಾದಂಬರಿಯ ಎರಡು ದಶಕಗಳ ನಂತರ ಪ್ರಕಟವಾಗಿರುವ ಈ ಕಾದಂಬರಿ ಒಂದು ಮಹಾನ್ ಗಾಥೆ. ಹಿಂಸೆ, ಮಾನವ ಸಂಬಂಧಗಳ ಚಕ್ರವ್ಯೆಹ, ಅಟ್ಟಾಡಿಸುವ ಮಾನವ ಬೇಟೆ, ಮನೋವೈಕಲ್ಯ, ರಾಷ್ಟ್ರವೊಂದರ ಸಾರ್ವತ್ರಿಕ ಕ್ಷೋಭೆ, ಗೊಂದಲಗಳು-ಹೀಗೆ ಸಂಕೀರ್ಣ ಜಗತ್ತೊಂದರ ಪುನರ್‌ಸೃಷ್ಟಿ ಎನ್ನಬಹುದಾದ ಈ ಕಾದಂಬರಿ ‘ಮಂಗಳ ಮುಖಿ’ ಅಂಜುಂ ಮತ್ತು ಇಂಗ್ಲಿಷ್ ಮಾತನಾಡುವ ಕ್ರಿಯಾವಾದಿ ತಿಲೋತ್ತಮೆ ಎಂಬೆರಡು ಪಾತ್ರಗಳ ಬದುಕಿನ ಕಥಾನಕದ ಮುಖೇನ ಅನಾವರಣಗೊಳ್ಳುತ್ತದೆ. ಗುಜರಾತ್ ಗಲಭೆಗಳಿಂದ ಹಿಡಿದು ಕಾಶ್ಮೀರದಲ್ಲಿನ ಭಯೋತ್ಪಾದನೆವರೆಗೆ ಭಾರತವನ್ನು ಆತಂಕಪೀಡಿತವನ್ನಾಗಿಸಿದ ರಾಜಕೀಯ ಘಟನೆಗಳು ಮತ್ತು ವಿದ್ಯಮಾನಗಳನ್ನು ನಿರೂಪಿಸುವ ‘ದಿ ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’ ಸ್ಥಾಪಿತ ಮೌಲ್ಯಗಳ ಸಮಾಜದೊಳಗೆ ‘ಅನ್ಯ’ರೆನಿಸಿಕೊಂಡ ಒಬ್ಬ ‘ಮಂಗಳ ಮುಖಿ’ ಮತ್ತು ಇನ್ನೊಬ್ಬಳು ಬಂಡಾಯಗಾರಳ ತೀಕ್ಷ್ಣ ಸಂವೇದನಾಮಯತೆಯನ್ನೂ, ಅಸ್ತಿತ್ವಕ್ಕಾಗಿ ಅವರು ನಡೆಸುವ ಹೋರಾಟವನ್ನೂ, ಮನುಷ್ಯ ಮನುಷ್ಯರ ನಡುವಣ ತಣ್ಣಗಿನ ಕ್ರೌರ್ಯದ ಮಸೆತ, ತವಕ-ತಲ್ಲಣಗಳೊಂದಿಗೆ ತೆರೆದಿಡುತ್ತದೆ.

ವಾಚಕರ ಪ್ರಜ್ಞೆ-ಸಂವೇದನೆಗಳಿಗೆ ಘಾತಕೊಡುವ, ಕ್ಷೋಭೆಯುಂಟುಮಾಡುವ ಅರುಂಧತಿಯವರ ಈ ಕಾದಂಬರಿ 2017ರ ಬೂಕರ್ ಪ್ರಶಸ್ತಿಯ ಪರಿಗಣನೆಗೆ ಆಯ್ಕೆಯಾಗಿರುವ ಕೃತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ವರದಿಗಳು ಹೇಳುತ್ತವೆ. ‘ದಿ ಮಿನಿಸ್ಟ್ರಿ ಆಫ್ ಅಟ್ ಮೋಸ್ಟ್ ಹ್ಯಾಪಿನೆಸ್’ ನೊಂದಿಗೆ ಬೂಕರ್ ಪ್ರಶಸ್ತಿಗೆ ಪೈಪೋಟಿ ನಡೆಸಿರುವ ಹದಿಮೂರು ಕಾದಂಬರಿಗಳಲ್ಲಿ ಪ್ರಮುಖವಾದ ಇನ್ನೆರಡು ಕಾದಂಬರಿಗಳು- ಇದೇ ಉಪಖಂಡದ ಖ್ಯಾತ ಲೇಖಕರಾದ ಮೊಹಸಿನ್ ಹಮೀದ್ ಅವರ ‘ಎಕ್ಸಿಟ್ ವೆಸ್ಟ್’ ಮತ್ತು ಕಮೀಲಾ ಶಂಸೀ ಯವರ ‘ಹೋಂ ಫೈರ್’. ಹಮೀದ್ ಅವರ ‘ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್’ 2007ರ ಬೂಕರ್ ಪ್ರಶಸ್ತಿಗೆ ಶಿಫಾರಸಾದ ಕೃತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಈಗ ಬೂಕರ್ ನಿರೀಕ್ಷೆಯಲ್ಲಿರುವ ‘ಎಕ್ಸಿಟ್ ವೆಸ್ಟ್’ ನಿರಾಶ್ರಿತರ ಹೆಣಗಾಟದ ದಾರುಣ ಬದುಕನ್ನು ಚಿತ್ರಿಸುವ ಮನೋಜ್ಞ ಕಾದಂಬರಿ.

ಅಪನಂಬಿಕೆಯಿಂದ ಛಿದ್ರಛಿದ್ರವಾದ ಎರಡು ಸಮಕಾಲೀನ ಕುಟುಂಬಗಳ ಕಥೆಯನ್ನು ಹೇಳಲು ಶಂಸೀ ‘ಅಂತಿಗೊನೆ’ ಮೊರೆಹೊಕ್ಕಿದ್ದಾರೆ ಎನ್ನುತ್ತಾರೆ ವಿಮರ್ಶಕರು. ಇವಲ್ಲದೆ ಈಗಾಗಲೇ ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇನ್ನೂ ಕೆಲವು ಕಾದಂಬರಿಗಳು ಈ ವರ್ಷದ ಬೂಕರ್ ಪ್ರಶಸ್ತಿ ಪರಿಶೀಲನಾ ಪಟ್ಟಿಯಲ್ಲಿರುವುದು ಪೈಪೋಟಿಯ ಕಾವನ್ನು ಹೆಚ್ಚಿಸಿದೆ. ಕಾಲ್ಸನ್ ವೈಟ್ಹೆಡ್ ಅವರ ‘ದಿ ಅಂಡರ್ ಗ್ರೌಂಡ್ ರೈಲ್ ರೋಡ್’ ಇವುಗಳಲ್ಲಿ ಮುಖ್ಯವಾದದ್ದು. ಮತ್ತೊಂದು ಐರಿಷ್ ಲೇಖಕ ಸೆಬಾಸ್ಟಿಯನ್ ಬ್ಯಾರಿ ಅವರ ‘ಡೇಸ್ ವಿತೌಟ್ ಎಂಡ್’. ಕಳೆದ ವರ್ಷ ಪಾಲ್ ಬೆಟ್ಟಿ ಅವರ ‘ದಿ ಸೆಲೌಟ್’ ಕಾದಂಬರಿ ಬೂಕರ್ ಪ್ರಶಸ್ತಿಗೆ ಭಾಜನವಾಗಿತ್ತು. 2014ರಲ್ಲಿ ಕಾಮನ್ವೆಲ್ತ್ ಮತ್ತು ರಿಪಬ್ಲಿಕ್ ಆಫ್ ಜಿಂಬಾಬ್ವೆ ಲೇಖಕರಿಗೆ ಮಾತ್ರ ಬೂಕರ್ ಎನ್ನುವ ನಿಯಮವನ್ನು ತೆಗೆದುಹಾಕಿ ಜಗತ್ತಿನ ಎಲ್ಲ ಇಂಗ್ಲಿಷ್ ಸಾಹಿತಿಗಳಿಗೆ ಮುಕ್ತವಾಗಿಸಿದ ನಂತರ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ಪ್ರಪ್ರಥಮ ಅಮೆರಿಕನ್ ಲೇಖಕ ಪಾಲ್ ಬೆಟ್ಟಿ. ಈ ವರ್ಷದ ಪರಿಶೀಲನಾ ಪಟ್ಟಿಯಲ್ಲಿ ನಾಲ್ವರು ಅಮೆರಿಕನ್ ಸಾಹಿತಿಗಳಿದ್ದಾರೆ.

ಬೂಕರ್ ಪ್ರಶಸ್ತಿಯ ಅಂತಿಮ ಪರಿಶೀಲನೆಗಾಗಿ ಆರು ಕಾದಂಬರಿಗಳನ್ನು ಆಯ್ಕೆಮಾಡಲಾಗುವುದು. ಈ ಆರು ಕೃತಿಗಳ ಪಟ್ಟಿ ಸೆಪ್ಟಂಬರ್‌ನಲ್ಲಿ ಪ್ರಕಟಗೊಳ್ಳಲಿದೆ. ಅಕ್ಟೋಬರ್ 15ರಂದು ಪ್ರಶಸ್ತಿ ವಿಜೇತ ಕೃತಿ ಮತ್ತು ಕೃತಿಕಾರರ ಹೆಸರನ್ನು ಪ್ರಕಟಿಸಲಾಗುವುದು. ಪ್ರಶಸ್ತಿ ಹಾಗಿರಲಿ, ಈ ಪ್ರಶಸ್ತಿಯ ಪರಿಶೀಲನೆಗೆ ಅರ್ಹರಾದ ಕ್ರತಿಕಾರರ-ಕೃತಿಗಳ ಪಟ್ಟಯಲ್ಲಿ ತಮ್ಮ ಹೆಸರು ಇರುವುದೇ ದೊಡ್ಡ ಸೌಭಾಗ್ಯವೆಂದು ತಿಳಿದಿರುವ ಸಾಹಿತಿಗಳಿದ್ದಾರೆ ಎಂದಾಗ ಈ ಬೂಕರ್ ವೈಶಿಷ್ಟ್ಯಕ್ಕೆ ‘ಉಘೇ ಉಘೇ’.....

Writer - ಜಿ. ಎನ್.ರಂಗನಾಥ್ ರಾವ್

contributor

Editor - ಜಿ. ಎನ್.ರಂಗನಾಥ್ ರಾವ್

contributor

Similar News