ಶಿವಮೊಗ್ಗ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರಕಾರಗಳ ನಿರ್ಲಕ್ಷ!

Update: 2017-08-05 18:44 GMT

ಶಿವಮೊಗ್ಗ, ಆ.5: ಮಲೆನಾಡ ಹೆಬ್ಬಾಗಿಲು ಬಿರುದಾಂಕಿತ ಶಿವಮೊಗ್ಗ ಜಿಲ್ಲೆಯು ವಿಶ್ವ ಭೂಪಟದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಹಲವು ಐತಿಹಾಸಿಕ, ಪಾರಂಪರಿಕ, ಸಾಂಪ್ರದಾಯಿಕ, ವಿಶಿಷ್ಟ ಕಲಾ ಪ್ರಕಾರ, ಪ್ರಾಕೃತಿಕ ಸ್ಥಳ ಸೇರಿದಂತೆ ಹಲವು ವೈವಿಧ್ಯತೆಯನ್ನು ಒಳಗೊಂಡಿರುವ ಜಿಲ್ಲೆಯು ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿದೆ.

ಆದರೆ, ಜಿಲ್ಲೆಯಲ್ಲಿರುವ ಅದೆಷ್ಟೋ ಮಹತ್ವದ ಪ್ರವಾಸಿ ತಾಣಗಳು ಪ್ರಚಾರದ ಕೊರತೆ, ಮೂಲಸೌಲಭ್ಯದ ಅಲಭ್ಯತೆ, ಅಭಿವೃದ್ಧಿಗೆ ಅನುದಾನದ ಕೊರತೆ ಸೇರಿದಂತೆ ಮತ್ತಿತರ ಹಲವು ಕಾರಣಗಳಿಂದ ಪ್ರವಾಸಿಗರಿಂದ ದೂರವೇ ಉಳಿಯುತ್ತಿವೆ. 

ಶಿವಮೊಗ್ಗ ಎಂದರೆ ಕೇವಲ ಜೋಗ ಜಲಪಾತ ಎಂಬ ಹಣೆಪಟ್ಟಿಗೆ ಸೀಮಿತವಾಗುವಂತಾಗಿದ್ದು, ಜಿಲ್ಲೆಯ ಹತ್ತು ಹಲವು ಪ್ರವಾಸಿ ತಾಣಗಳು ಮೂಲೆಗುಂಪಾಗುವಂತಾಗಿದೆ.

 ದೇಶ-ವಿದೇಶಿ ಪ್ರವಾಸಿಗರನ್ನು ಸೆಳೆಯುವಂತಹ ಹಲವು ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಆದರೆ, ಈ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಗರಿಗೆ ಕನಿಷ್ಠ ಮೂಲಸೌಕರ್ಯಗಳ ವ್ಯವಸ್ಥೆಯೂ ಇಲ್ಲ. ಕೆಲವೆಡೆ ಕುಡಿಯುವ ನೀರು, ಶೌಚಾಲಯದ ಸೌಲಭ್ಯವೂ ಇಲ್ಲ. ಇದರಿಂದ ಈ ಪ್ರವಾಸಿ ತಾಣಗಳು ದೇಶ-ವಿದೇಶಿ ಪ್ರವಾಸಿಗರಿಂದ ದೂರವೇ ಉಳಿಯುವಂತಾಗಿದೆ.

‘ಜಿಲ್ಲೆಯ ಪ್ರವಾಸಿ ತಾಣಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿ ಸಿದಂತೆ ಹಲವು ಪ್ರಸ್ತಾವಗಳು ಈ ಹಿಂದಿನಿಂದಲೂ ಕೇಂದ್ರ-ರಾಜ್ಯ ಸರಕಾರಗಳ ಅಂಗಳದಲ್ಲಿ ಸಲ್ಲಿಕೆಯಾಗುತ್ತಾ ಬಂದಿವೆ. ಹಲವು ಪ್ರಸ್ತಾವಗಳ ಬಗ್ಗೆ ನಾಗರಿಕರಲ್ಲಿ ಚರ್ಚೆಯಾಗುತ್ತಿವೆ. ಈ ಪ್ರಸ್ತಾವಗಳು ಇಲ್ಲಿಯವರೆಗೂ ಕಾರ್ಯಗತವಾಗಿಲ್ಲ. ಸೂಕ್ತ ಅನುದಾನವೂ ಲಭ್ಯವಾಗುತ್ತಿಲ್ಲ’ ಎಂದು ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸ್ವಯಂ ಪ್ರೇರಿತರಾಗಿ ಶ್ರಮಿಸುತ್ತಿರುವ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ಗಾಜನೂರು ಗ್ರಾಮದಲ್ಲಿರುವ ತುಂಗಾ ಜಲಾಶಯದ ಬಳಿ ಮೈಸೂರಿನ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ಪ್ರಸ್ತಾಪವಿತ್ತು. ಆದರೆ, ಇಲ್ಲಿಯವರೆಗೂ ಇದಕ್ಕೆ ಸರಕಾರದಿಂದ ಹಸಿರು ನಿಶಾನೆ ದೊರೆತಿಲ್ಲ. ಹಾಗೆಯೇ ಥೀಮ್ ಪಾರ್ಕ್ ನಿರ್ಮಾಣ, ದೋಣಿ ವಿಹಾರ ಸೌಲಭ್ಯ, ಲೇಸರ್ ಶೋ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಯೂ ಇದೆ.

ಈ ಡ್ಯಾಂಗೆ ಸಮೀಪದಲ್ಲಿಯೇ ಇರುವ ಸಕ್ರೆಬೈಲು ಆನೆ ಬಿಡಾರದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಬಿಡಾರಕ್ಕೆ ಹೊಂದಿಕೊಂಡಂತಿರುವ ತುಂಗಾ ಡ್ಯಾಂ ಹಿನ್ನೀರಿನಲ್ಲಿ ಬೋಟಿಂಗ್, ಜಲ ಸಾಹಸ ಕ್ರೀಡೆಗಳಿಗೆ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಜಿಲ್ಲೆಯ ಪ್ರವಾಸಿಗರದ್ದು. ತುಂಗಾಭದ್ರಾ ನದಿಗಳ ಸಂಗಮ ಸ್ಥಳವಾದ ಭದ್ರಾವತಿ ತಾಲೂಕಿನ ಕೂಡ್ಲಿಯಲ್ಲಿ ಎರಡು ನದಿಗಳು ಸಂಗಮಿಸುವ ಸ್ಥಳಕ್ಕೆ ತೆರಳಲು ರೋಪ್ ವೇ ನಿರ್ಮಿಸಬೇಕು. ಸಂಗಮೇಶ್ವರ ದೇವಾಲಯವನ್ನು ಕೂಡಲಸಂಗಮದ ರೀತಿಯಲ್ಲಿ ಅಭಿವೃದ್ಧ್ದಿಗೊಳಿಸಬೇಕು.

ಶಿಕಾರಿಪುರ ತಾಲೂಕಿನ ಅಂಜನಾಪುರ ಡ್ಯಾಂ ಸಮೀಪ ಜಲಕ್ರೀಡೆಗಳಿಗೆ ಪ್ರೋತ್ಸಾಹಿಸುವ ವ್ಯವಸ್ಥೆ ಆರಂಭಿಸಬೇಕು. ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥ, ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಗಳನ್ನು ಪಾರಂಪರಿಕ ಪ್ರವಾಸಿ ತಾಣಗಳಾಗಿ ಘೋಷಿಸಿ ಈ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣವಾಗಿ ರೂಪಿಸಬೇಕು.

ಶಿವಮೊಗ್ಗ ನಗರದಲ್ಲಿರುವ ಶಿವಪ್ಪನಾಯಕ ಅರಮನೆಯ ಆವರಣದಲ್ಲಿ ‘ಲೈಟ್ಸ್ ಆ್ಯಂಡ್ ಸೌಂಡ್ಸ್ ಸಿಸ್ಟಮ್’ ಅನುಷ್ಠಾನ, ಅರಮನೆಯಿಂದ ಪಕ್ಕದಲ್ಲಿಯೇ ಹಾದು ಹೋಗಿರುವ ತುಂಗಾ ನದಿಯ ಮಧ್ಯದಲ್ಲಿ ನಿಂತು ನದಿ ವೀಕ್ಷಣೆ ಮಾಡಲು ತೂಗು ಸೇತುವೆ ನಿರ್ಮಿಸಬೇಕು. ಆಗುಂಬೆ ದಟ್ಟ ಅರಣ್ಯದಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಿಗೆ ಚಾರಣ ವ್ಯವಸ್ಥೆ ಮಾಡಬೇಕು. ಅಲ್ಲಿರುವ ಜಲಪಾತ, ರಮ್ಯ ತಾಣಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಬೇಕು. ಸಾಗರ ಹಾಗೂ ಸೊರಬ ತಾಲೂಕುಗಳನ್ನು ಕರಕುಶಲ ಕೇಂದ್ರಗಳೆಂದು ಘೋಷಿಸಬೇಕು.

ಹೊಸನಗರ, ಸಾಗರ, ಶಿಕಾರಿಪುರ ತಾಲೂಕಿನಲ್ಲಿರುವ ಹತ್ತು ಹಲವು ಐತಿಹಾಸಿಕ, ಪಾರಂಪರಿಕ, ಪ್ರಾಕೃತಿಕ ಪ್ರವಾಸಿ ತಾಣಗಳ ಸರ್ವಾಂಗೀಣ ಅಭಿವೃದ್ಧ್ದಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆಸಕ್ತಿ ವಹಿಸಿರುವ ಮುಖಂಡರು ಆಗ್ರಹಿಸಿದ್ದಾರೆ.

ತಾಲೂಕುವಾರು ಪ್ರವಾಸಿ ಪ್ಯಾಕೇಜ್ ರೂಪಿಸಿ

ಜಿಲ್ಲೆಯ ಪ್ರತಿಯೊಂದು ತಾಲೂಕು ಹತ್ತು ಹಲವು ಐತಿಹಾಸಿಕ, ಪಾರಂಪರಿಕ, ಪ್ರಾಕೃತಿಕ ಪ್ರವಾಸಿ ತಾಣಗಳನ್ನೊಳಗೊಂಡಿದೆ. ಪ್ರತಿ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಗೊಳಿಸಬೇಕು. ಸೂಕ್ತ ಮೂಲಸೌಕರ್ಯ, ಭದ್ರತೆ ಕಲ್ಪಿಸಬೇಕು. ತಾಲೂಕುವಾರು ಪ್ರವಾಸಿ ಪ್ಯಾಕೇಜ್‌ಗಳನ್ನು ರೂಪಿಸಬೇಕು. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಸಮರ್ಪಕವಾಗಿ ಮಾಹಿತಿ ನೀಡುವ ಕೆಲಸ ಮಾಡಬೇಕು. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘಸಂಸ್ಥೆಗಳ ನೆರವು ಪಡೆದುಕೊಳ್ಳಬೇಕು. ಇಲ್ಲವೆ ಸಹಭಾಗಿತ್ವದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧ್ದಿಗೆ ಕ್ರಮ ಕೈಗೊಳ್ಳಬೇಕು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆ ಸಾಧ್ಯವಾಗಲಿದೆ ಎನ್ನುವುದು ಸ್ಥಳೀಯ ಪ್ರವಾಸಿಗರ ಅಭಿಪ್ರಾಯ.

Writer - ಬಿ. ರೇಣುಕೇಶ್

contributor

Editor - ಬಿ. ರೇಣುಕೇಶ್

contributor

Similar News