ಆಧುನಿಕ ಅವಾಂತರಕಾರಿ ಅಮಿತ್ ಶಾ

Update: 2017-08-05 18:44 GMT

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೂಚನೆಯ ಮೇರೆಗೆ ನಿವೃತ್ತ ಪೊಲೀಸ್ ಅಧಿಕಾರಿ ಡಿಜಿ ವಂಝಾರ, ಸೊಹ್ರಾಬುದ್ದೀನ್ ಸೇರಿ ಮೂವರನ್ನು ಎನ್‌ಕೌಂಟರ್‌ನಲ್ಲಿ ಕೊಂದಿದ್ದ ಆರೋಪದ ಕೇಸ್, ಕಳೆದವಾರವಷ್ಟೇ ಖುಲಾಸೆಗೊಂಡಿದೆ. ಅಂದರೆ ಈ ದೇಶದಲ್ಲಿ ಏನು ಮಾಡಿದರೂ ಬಚಾವಾಗಬಹುದು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ನರೇಂದ್ರ ಮೋದಿ ಆಡಳಿತದಲ್ಲಿ ಪ್ರತಿಯೊಂದು ಕೃತ್ಯಕ್ಕೂ ಧರ್ಮದ ಲೇಪ ಹಚ್ಚಿ, ದೇಶಪ್ರೇಮದ ದಂಡ ಬಳಸಿದರೆ, ಬಾರಾ ಖೂನ್ ಮಾಫ್ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇಂತಹ ರಾಜಕಾರಣದಲ್ಲಿ ನುರಿತ ಕಸುಬುಗಾರ ಎಂದೇ ಇತ್ತೀಚಿನ ದಿನಗಳಲ್ಲಿ ಕುಖ್ಯಾತಿ ಗಳಿಸಿರುವ ಅಮಿತ್ ಶಾ, ಕರ್ನಾಟಕಕ್ಕೆ ಬರುತ್ತಿದ್ದಾರೆ. ಬರುವುದಕ್ಕೂ ಮುಂಚೆಯೇ, ಸುದ್ದಿಮಾಧ್ಯಮಗಳು ಆತನಿಗೆ ಅತಿಮಾನುಷನ ಪಟ್ಟ ಕಟ್ಟಿ ಹಾಡಿ ಹೊಗಳುತ್ತಿವೆ. ಮಾಸ್ಟರ್ ಮೈಂಡ್, ಚಾಣಕ್ಯ, ಟ್ರಬಲ್ ಶೂಟರ್ ಎಂದೆಲ್ಲ ಕರೆದು ಕನ್ನಡಿಗರಲ್ಲಿ ಕಿರಿಕಿರಿ ಉಂಟುಮಾಡುತ್ತಿವೆ. ಈ ನಡುವೆ ಅರವಿಂದ್ ಮೆನನ್ ಎಂಬ ಅಮಿತ್ ಶಾರ ಶಿಷ್ಯನನ್ನು ಕರ್ನಾಟಕದ ಸದ್ಯದ ಸ್ಥಿತಿಯ ಅಧ್ಯಯನಕ್ಕೆ ಕಳುಹಿಸಿಕೊಟ್ಟಿದ್ದಾಗಿದೆ. ಆತ ಈಗಾಗಲೇ ಬಿಜೆಪಿಗೆ ಎದುರಾಗಿರುವ ಪ್ರತ್ಯೇಕ ನಾಡಧ್ವಜ, ಪ್ರತ್ಯೇಕ ಲಿಂಗಾಯತ ಧರ್ಮ, ಹಿಂದಿ ಹೇರಿಕೆ, ಮಂಗಳೂರು ಕೋಮು ಗಲಭೆ, ರೈತರ ಸಾಲ ಮನ್ನಾ, ಐಟಿ ದಾಳಿಯ ಕಳಂಕದಂತಹ ಸಂಕಷ್ಟಗಳ ಕುರಿತು ರಾಜ್ಯ ಬಿಜೆಪಿಯ ಹಿರಿ ಕಿರಿ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾಗಿದೆ. ಈ ಎಲ್ಲದರ ಬಗ್ಗೆ ಕರ್ನಾಟಕದ ಜನತೆಯ ಒಲವು-ನಿಲುವೇನು ಎಂಬುದರ ಬಗ್ಗೆ ಶಾಗೆ ವರದಿಯನ್ನೂ ಒಪ್ಪಿಸಿದ್ದಾಗಿದೆ. ಕರ್ನಾಟಕಕ್ಕೆ ಬರುತ್ತಿರುವ ಅಮಿತ್ ಶಾ, ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ, ಪ್ರತಿತಂತ್ರ ರೂಪಿಸುವ, ನಾಯಕರು ಮತ್ತು ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವ ಕಾಯಕಕ್ಕೆ ಕೈ ಹಾಕಲಿದ್ದಾರೆಂಬ ವದಂತಿಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ. ಸದ್ಯಕ್ಕೆ ಅಮಿತ್ ಶಾರ ಕಣ್ಣಮುಂದಿರುವುದು- 2018ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ಸನ್ನು ಮುಕ್ತಗೊಳಿಸುವುದು, ಬಿಜೆಪಿಯನ್ನು ಅಧಿಕಾರಕ್ಕೆ ತರುವುದು. ಈ ನಿಟ್ಟಿನಲ್ಲಿ ಅಮಿತ್ ಶಾರ ಇತಿಹಾಸವನ್ನೊಮ್ಮೆ ಅವಲೋಕಿಸುವುದು ಉಚಿತವೆನಿಸುತ್ತದೆ. 1964ರಲ್ಲಿ ಮುಂಬೈನ ಮಧ್ಯಮವರ್ಗದ ವ್ಯಾಪಾರಿ ಕುಟುಂಬದಲ್ಲಿ ಹುಟ್ಟಿದ ಅಮಿತ್ ಶಾ, ಗುಜರಾತಿ ಬನಿಯಾ-ಜೈನ್ ಸಮುದಾಯಕ್ಕೆ ಸೇರಿದವರು. ಪ್ರಾಥಮಿಕ ಶಿಕ್ಷಣವನ್ನು ಮುಂಬೈನಲ್ಲಿ ಮಾಡಿದ ಅಮಿತ್ ಶಾ, ಅಹಮದಾಬಾದ್‌ನಲ್ಲಿ ಬಯೋಕೆಮಿಸ್ಟ್ರಿ ಪದವಿ ಪಡೆದರು. ಕೆಲ ದಿನಗಳ ಕಾಲ ಶೇರ್ ಬ್ರೋಕರ್ ಆಗಿಯೂ ಕೆಲಸ ಮಾಡಿದರು. ಅಪ್ಪನ ಪಿವಿಸಿ ಪೈಪ್ ವ್ಯವಹಾರದಲ್ಲೂ ಭಾಗಿಯಾದರು.

ಬಾಲಕನಾಗಿದ್ದಾಗಲೇ ಆರೆಸ್ಸೆಸ್‌ನ ಚಡ್ಡಿ ತೊಟ್ಟು, ಲಾಠಿ ಬೀಸುತ್ತ ಶಾಖೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಾ, ಕಾಲೇಜು ದಿನಗಳಲ್ಲಿ ಎಬಿವಿಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. 1982ರಲ್ಲಿ, ಆರೆಸ್ಸೆಸ್ ಶಾಖಾ ಸರ್ಕಲ್‌ನಲ್ಲಿ ನರೇಂದ್ರ ಮೋದಿಯನ್ನು ಮೊದಲ ಬಾರಿಗೆ ಭೇಟಿಯಾಗಿ, ನೋಡನೋಡುತ್ತಿದ್ದಂತೆಯೇ ಆತ್ಮೀಯರಾದರು. ಆ ಮೂಲಕ 1986ರಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿ, ಯುವಮೋರ್ಚಾದ ಆ್ಯಕ್ಟಿವಿಸ್ಟ್ ಆದರು. 1991ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿಯವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿ, ನಾಯಕರ ಕಣ್ಣಿಗೆ ಬಿದ್ದರು. 1995ರಲ್ಲಿ ಗುಜರಾತಿನಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್‌ನ ಕೇಶುಭಾಯ್ ಪಟೇಲ್ ಸರಕಾರ. ಆ ಸಂದರ್ಭದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಸಂಘಟಿಸಿದ್ದು ಮೋದಿ-ಶಾ ಜೋಡಿ. ಮೊದಲಿಗೆ ಹಳ್ಳಿಗಳತ್ತ ಕಾಲಿಟ್ಟ ಈ ಜೋಡಿ, ಸುಮಾರು 8 ಸಾವಿರದಷ್ಟು ನಿರ್ಲಕ್ಷಿಸಲ್ಪಟ್ಟ ಸೆಕೆಂಡ್‌ಲೈನ್ ಲೀಡರ್‌ಗಳನ್ನು ಆಯ್ದು ಪಕ್ಷದತ್ತ ಸೆಳೆದುಕೊಂಡರು. ಅವರ ಬಲದಿಂದ ಪಂಚಾಯತ್ ಚುನಾವಣೆಗಳನ್ನು ಗೆದ್ದರು. ನಂತರ ಪ್ರಭಾವಿ ಸಹಕಾರ ಕ್ಷೇತ್ರ, ಆಮೇಲೆ ಕ್ರೀಡಾ ಕ್ಷೇತ್ರದತ್ತ ಮುಖ ಮಾಡಿದರು. ಆ ಕ್ಷೇತ್ರಗಳಲ್ಲಿ ಈಗಾಗಲೇ ಬೇರುಬಿಟ್ಟಿದ್ದ ಬಲಾಢ್ಯ ಪಟೇಲ್, ಗದೇರಿಯಾ, ಕ್ಷತ್ರಿಯ ಸಮುದಾಯಗಳನ್ನು ಹೊರದಬ್ಬಿದರು. ಕೇವಲ ಎರಡು ವರ್ಷಗಳ ಅವಧಿಯಲ್ಲಿ, 1997ರ ವಿಧಾನಸಭಾ ಚುನಾವಣೆಯಲ್ಲಿ ಗುಜರಾತನ್ನು ಕೈವಶ ಮಾಡಿಕೊಂಡರು. 1997ರಿಂದ 2017ರ ವರೆಗಿನ ಅಮಿತ್ ಶಾರ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ; ಗುಜರಾತಿನಲ್ಲಿ ಬಿಜೆಪಿ ಮಾಡಿದ ಅವಾಂತರಗಳು, ಹತ್ಯಾಕಾಂಡಗಳನ್ನು ಗಮನಿಸಿದರೆ, ಇಲ್ಲಿ ಪ್ರಜಾಪ್ರಭುತ್ವವಿದೆಯೋ ಅಥವಾ ಸಂಘಪರಿವಾರದ ಆಡಳಿತವೋ ಎನ್ನುವುದು ಸ್ಪಷ್ಟವಾಗುತ್ತದೆ. ಇಂತಹ ಕೆಡುಕಿನ ಕುಯುಕ್ತಿ ರಾಜಕಾರಣದ ಫಲದಿಂದಲೇ ಐದು ಬಾರಿ ಶಾಸಕರಾಗಿ ಆಯ್ಕೆಯಾದ ಅಮಿತ್ ಶಾರನ್ನು, ಮುಖ್ಯಮಂತ್ರಿ ನರೇಂದ್ರ ಮೋದಿ, 10 ಖಾತೆಗಳ ಮಂತ್ರಿ ಮಾಡಿ ಮೊೆಸಿದ್ದರು. ಮೊದಲ ಬಾರಿಗೆ ಗೆದ್ದ, 33 ವರ್ಷದ ಅಪ್ರಬುದ್ಧ ಅಮಿತ್ ಶಾರಿಗೆ ಜವಾಬ್ದಾರಿಯುತ ಗೃಹ ಖಾತೆ ಕೊಟ್ಟು ಹಿರಿಯ ಅನುಭವಿ ನಾಯಕರನ್ನು ಅವಮಾನಿಸಿದ್ದರು. ಅದೂ ಸಾಲದೆಂದು, ಪ್ರತಿಷ್ಠಿತ ಗುಜರಾತ್ ಫೈನಾನ್ಸ್, ಅಹಮದಾಬಾದ್ ಡಿಸ್ಟ್ರಿಕ್ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಕ್ರಿಕೆಟ್ ಬೋರ್ಡ್ ಅಧ್ಯಕ್ಷನನ್ನಾಗಿಸಿದ್ದರು. ಹುದ್ದೆಗಳ ಮೇಲೆ ಹುದ್ದೆಗಳು, ಅಧಿಕಾರದ ಮೇಲೆ ಅಧಿಕಾರ, ಮಾಡಿದ ಕೆಟ್ಟ ಕೆಲಸಗಳಿಗೆಲ್ಲ ಮಾಧ್ಯಮಗಳಿಂದ ಜಯಕಾರ... ತನ್ನ ಮಾರ್ಗವೇ ಸರಿ ಎಂದು ಭ್ರಮಿಸಿದ, ಭಾವಿಸಿದ ಅಮಿತ್ ಶಾ, ಗುಜರಾತಿನಲ್ಲಿ ಹಿಂದೂ ಬಿಲ್ ಜಾರಿಗೆ ತರುವ ಮೂಲಕ ಸಂವಿಧಾನವನ್ನೇ ಕಡೆಗಣಿಸಿ ಕಾಲಕಸ ಮಾಡಿಬಿಟ್ಟರು. 2002ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದಲ್ಲಿ ಖುದ್ದು ಭಾಗಿಯಾದ ಆರೋಪ ಹೊತ್ತಿದ್ದರು. ಸೊಹ್ರಾಬುದ್ದೀನ್ ಸೇರಿ ಮೂವರ ನಕಲಿ ಎನ್‌ಕೌಂಟರ್ ಕೇಸ್‌ನಲ್ಲಿ ಪ್ರತ್ಯಕ್ಷ ಆರೋಪಿಯ ಸ್ಥಾನದಲ್ಲಿದ್ದರು. 2010ರಲ್ಲಿ ಸಿಬಿಐ ಅಮಿತ್ ಶಾರನ್ನು ಬಂಧಿಸಿ, ಎರಡು ವರ್ಷಗಳ ಕಾಲ ಗುಜರಾತ್‌ಗೆ ಕಾಲಿಡದಂತೆ ನಿರ್ಬಂಧ ಹೇರಿತ್ತು. ಇಂತಹ ಕುಖ್ಯಾತ ಹಿನ್ನೆಲೆಯ ವ್ಯಕ್ತಿಯನ್ನು ಪೋಷಿಸಿ ಪೊರೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರಕಾರವನ್ನೇ ಇವರ ಬೆನ್ನಿಗೆ ಕಟ್ಟಿ ದೇಶಾಂತರ ತಿರುಗುತ್ತಿದ್ದಾರೆ. ಇವರು ಅಂಬಾನಿ, ಅದಾನಿಗಳಂತಹ ಕಾರ್ಪೊರೇಟ್ ಕುಳಗಳೊಂದಿಗೆ ಕೈ ಜೋಡಿಸಿ, ಬಡವರ ಬಾಯಿಗೆ ಮಣ್ಣು ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮನ್ನು ಬೆಳೆಸಿದ ಹಿರಿಯ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿಯವರನ್ನೇ ಮೂಲೆಗುಂಪು ಮಾಡಿದ್ದಾರೆ. ಅಂದ ಹಾಗೆ ಅಮಿತ್ ಶಾ ಸತ್ಯಸಂದರೇನಲ್ಲ, ಕೇವಲ 5 ವರ್ಷಗಳ ಅಂತರದಲ್ಲಿ ಅವರ ಘೋಷಿತ ಆದಾಯ ಶೇ.300ರಷ್ಟು ವೃದ್ಧಿಯಾಗಿದೆ. ಇನ್ನು ಅಘೋಷಿತ, ಬೇನಾಮಿ.. ಇನ್ನೆಷ್ಟು, ನಿಮ್ಮ ಊಹೆಗೆ ಬಿಟ್ಟದ್ದು.

ಇಷ್ಟಾದರೂ ಆರೆಸ್ಸೆಸ್‌ನ ಕರ್ಮಠ ಪಡೆ ಅಮಿತ್ ಶಾರ ಬೆನ್ನಿಗೆ ನಿಂತು ಬೆಂಬಲಿಸುತ್ತಿದೆ. ಅದಕ್ಕೆ ಕಾರಣ-ಹಿಂದಿ, ಹಿಂದುತ್ವ, ಹಿಂದೂಸ್ಥಾನ, ಗೋವು, ದೇಶಪ್ರೇಮದ ಅಸ್ತ್ರಗಳನ್ನು ಬಳಸಿ ಬಹುಸಂಖ್ಯಾತರನ್ನು ಬಗ್ಗುಬಡಿಯುತ್ತಿರುವುದು. ಸಹಬಾಳ್ವೆಯ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿ ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತಿರುವುದು. ಈಗಾಗಲೇ ಕೇಂದ್ರ ಸರಕಾರದ ಅಧಿಕಾರ ಬಳಸಿ ಪ್ರತಿಪಕ್ಷಗಳನ್ನು ಮಣಿಸಿ ಸುಮಾರು ಹತ್ತು ರಾಜ್ಯಗಳಲ್ಲಿ ಬಿಜೆಪಿಯನ್ನು ಪ್ರತಿಷ್ಠಾಪಿಸುವಲ್ಲಿ ಸಫಲರಾಗಿದ್ದಾರೆ. ಜನಮನ್ನಣೆ ಗಳಿಸಲಾಗದ ಕಡೆ ಶಾಸಕರನ್ನೇ ಖರೀದಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಸರಕಾರ ರಚಿಸಿದ ಉದಾಹರಣೆಗಳೂ ಇವೆ. ಅಮಿತ್ ಶಾ ಮೇಲೆ ಇದಷ್ಟೇ ಅಲ್ಲ, ಚುನಾವಣಾ ಆಯೋಗ, ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದಂತಹ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡ ಗುರುತರ ಆಪಾದನೆಗಳಿವೆ. ಅದಕ್ಕೆ ಉದಾಹರಣೆಯಾಗಿ ಗೋವಾ, ದಿಲ್ಲಿ, ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರಾಖಂಡ ರಾಜ್ಯಗಳಲ್ಲಾದ ಐಟಿ ದಾಳಿಗಳನ್ನು ಮತ್ತು ರಾಜಕೀಯ ಅಸ್ಥಿರತೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅರ್ಥವಾಗುತ್ತದೆ. ಇದರ ಮುಂದುವರಿದ ಭಾಗವೇ ಕರ್ನಾಟಕದ ಸದ್ಯದ ವಿದ್ಯಮಾನ. ಇನ್ನು ಎಂಟು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದೆ. ಅದರ ಪೂರ್ವ ತಯಾರಿಗಾಗಿಯೇ ಅಮಿತ್ ಶಾ ಈ ವಾರ ಕರ್ನಾಟಕಕ್ಕೆ ಬರುತ್ತಿದ್ದಾರೆ. ಬರುವ ಮುಂಚೆ ಇಲ್ಲಿನ ಕಾಂಗ್ರೆಸ್ ಸರಕಾರವನ್ನು ಭ್ರಷ್ಟ ಸರಕಾರವೆಂದು ಬ್ರಾಂಡ್ ಮಾಡುವುದು, ಮಂತ್ರಿಗಳ ಮನೆಗಳ ಮೇಲೆ ದಾಳಿ ನಡೆಸಿ, ಮಾಧ್ಯಮಗಳಿಂದ ಹುಯಿಲೆಬ್ಬಿಸಿ, ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸಕ್ಕೆ ಕೈಹಾಕಿದ್ದಾರೆ.  ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅಡ್ವಾಣಿಯವರನ್ನೇ ರಾಜಕೀಯವಾಗಿ ಮುಗಿಸುವ, ಈ ನಾಡಿಗೆ ಸ್ವಾತಂತ್ರ ತಂದುಕೊಟ್ಟ ಗಾಂಧಿಯನ್ನೇ ಬನಿಯಾ ವ್ಯಾಪಾರಿ ಎಂದು ಹೀಗಳೆವ, ವಿರೋಧ ಪಕ್ಷಗಳೇ ಇಲ್ಲದಂತೆ ಮಾಡುವ, ನೆಲದ ಕಾನೂನನ್ನೇ ನಿರ್ಲಕ್ಷಿಸುವ ಅಮಿತ್ ಶಾಗೆ ಕರ್ನಾಟಕವೆಂದರೆ ಏನು ಎಂಬುದನ್ನು ಅರ್ಥ ಮಾಡಿಸುವ ಅಗತ್ಯವಿದೆ. ಅವರು ಆಡುವ ಆಟಕ್ಕೆ, ಉರುಳಿಸುವ ದಾಳಕ್ಕೆ ಬಲಿ ಯಾಗದೆ ಟಿಪ್ಪು, ಬಸವ, ಕುವೆಂಪು ಹುಟ್ಟಿದ ನಾಡಿನ ಸೊಗಸನ್ನು ಸಾರಬೇಕಿದೆ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News