ಉತ್ತರ ಪ್ರದೇಶದಲ್ಲಿದೆ ಅವಳಿ-ಜವಳಿಗಳ ಗ್ರಾಮ

Update: 2017-08-06 11:33 GMT

‘ಛೋಟೆ ಗುಡ್ಡು ’ಎಂದೇ ಕರೆಯಲ್ಪಡುವ ಹಸನ್ ತನ್ನ ಎಳವೆಯಲ್ಲಿ ಪ್ರತಿದಿನ ಬೆಳಿಗ್ಗೆ ತಾನು ಶಾಲೆಗೆ ಹೋಗುತ್ತಿದ್ದಾಗ ದಾರಿಮಧ್ಯೆ ಯುವತಿಯೋರ್ವಳು ತನ್ನ ಮನೆಯ ಕಿಟಕಿಯನ್ನು ತೆರೆಯುತ್ತಿದ್ದನ್ನು ನೆನಪಿಸಿಕೊಳ್ಳುತ್ತಾನೆ. ಒಂದು ದಿನ, ದೀಪಾವಳಿಯ ಸಂದರ್ಭದಲ್ಲಿ ಹಸನ್‌ನನ್ನು ಹತ್ತಿರಕ್ಕೆ ಕರೆದಿದ್ದ ಆಕೆ ಸಂಜೆ ಏಳು ಗಂಟೆಗೆ ತನ್ನ ಹೆತ್ತವರು ಮನೆಯಲ್ಲಿರದ ಸಮಯದಲ್ಲಿ ಬರುವಂತೆ ಸೂಚಿಸಿದ್ದಳು.

ಕೆಲ ಗಂಟೆಗಳ ಬಳಿಕ ಆತ ಅದೇ ದಾರಿಯಾಗಿ ಹೋಗುತ್ತಿದ್ದಾಗ ಮತ್ತೆ ಆತನನ್ನು ಕರೆದಿದ್ದ ಆಕೆ ಭೇಟಿಯ ಸಮಯದಲ್ಲಿ ಬದಲಾವಣೆಯನ್ನು ತಿಳಿಸಿದ್ದಳು. ಸಂಜೆ ಹಸನ್ ಆಕೆಯ ಮನೆಗೆ ಹೋದಾಗ ಆಕೆ ಗೊಂದಲಕ್ಕೀಡಾಗಿದ್ದಳು. ಆಕೆ ಒಂದು ಗಂಟೆ ಮೊದಲಷ್ಟೇ ಆತನಿಗೆ ಪ್ರೇಮಪತ್ರ ಮತ್ತು ಸಿಹಿತಿಂಡಿಗಳ ಬಾಕ್ಸ್ ನೀಡಿದ್ದಳು. ಹಸನ್‌ಗೆ ವಿಷಯವೇನು ಎನ್ನುವುದು ತಕ್ಷಣಕ್ಕೆ ಗೊತ್ತಾಗಿತ್ತು. ಆತ ಮನೆಗೆ ಹಿಂದಿರುಗಿದಾಗ ಆತನ ಅವಳಿ ಸೋದರ ರೆಹಾನ್ ಯಾನೆ ಬಡೇ ಗುಡ್ಡು ಪ್ರೇಮಪತ್ರ ವನ್ನು ಪ್ರದರ್ಶಿಸುತ್ತ ಸಿಹಿತಿಂಡಿಗಳನ್ನು ಹಂಚುತ್ತಿದ್ದ. ವಿಷಯವನ್ನು ಸ್ಪಷ್ಟಪಡಿಸಲು ಸೋದರರಿಬ್ಬರೂ ಯುವತಿಯ ಮನೆಗೆ ತೆರಳಿದ್ದರು. ಆಕೆ ಅವರಿಬ್ಬರನ್ನೂ ನೋಡಿದ್ದಳು ಮತ್ತು ಹಸನ್ ಬಳಿಕ ಎಂದೂ ಆಕೆಯನ್ನು ಕಾಣಲಿಲ್ಲ.

ಉತ್ತರ ಪ್ರದೇಶದ ಅಲಹಾಬಾದ್ ಸಮೀಪದ ಬಾವ್ರೌಲಿ ವಾಯುಪಡೆಯ ನೆಲೆ ಬಳಿಯ ಮುಹಮ್ಮದ್‌ಪುರ ಉಮ್ರಿ ಹೆಸರಿನ ಪುಟ್ಟ ಗ್ರಾಮವು ಇಂತಹ, ಗುರುತನ್ನು ತಪ್ಪಾಗಿ ಗ್ರಹಿಸಿದ ಕಥೆಗಳಿಂದಲೇ ತುಂಬಿದೆ. ಸುಮಾರು 700ರಷ್ಟು ಜನಸಂಖ್ಯೆಯಿರುವ ಈ ಗ್ರಾಮದಲ್ಲಿ 35 ಕ್ಕೂ ಅಧಿಕ ಅವಳಿ-ಜವಳಿ ಜೋಡಿಗಳಿವೆ. 2006ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು 2013ರಲ್ಲಿ ಅಮೆರಿಕನ್ ನ್ಯಾಷನಲ್ ಲೈಬ್ರೆರಿ ಆಫ್ ಮೆಡಿಸಿನ್ ನಡೆಸಿದ್ದ ಅಧ್ಯಯನ ವರದಿಗಳಂತೆ ವಿಶ್ವದಲ್ಲಿ ಸರಾಸರಿ 1,000 ಹೆರಿಗೆಗಳ ಪೈಕಿ 9-12 ರಲ್ಲಿ ಅವಳಿ ಮಕ್ಕಳು ಹುಟ್ಟುತ್ತವೆ. ಆದರೆ ಉಮ್ರಿಯಲ್ಲಿ ಪ್ರತಿ 1,000 ಹೆರಿಗೆಗಳ ಪೈಕಿ 60 ಪ್ರಕರಣಗಳಲ್ಲಿ ಅವಳಿ-ಜವಳಿ ಮಕ್ಕಳು ಹುಟ್ಟುತ್ತವೆ.

ನಾವು ಅತ್ಯಂತ ಹಿರಿಯ ಜೋಡಿಗಳಾಗಿದ್ದೇವೆ ಎಂದು ಹಸನ್ ಹೇಳುತ್ತಿದ್ದರೆ ಆತನ ತಾರುಣ್ಯದ ದಿನಗಳ ಕಥೆಗಳನ್ನು ಕೇಳಿ ಆತನ ಮಕ್ಕಳಿಗೆ ಮೋಜೋ ಮೋಜು. ಮನೆಗಳಲ್ಲಿ ಹೆರಿಗೆ ಮಾಡಿಸುವ ಪದ್ಧತಿ ಕಡಿಮೆಯಾಗಿದೆ ಮತ್ತು ಜನರ ಉಳಿತಾಯ ಹಾಗೂ ಸಂಪತ್ತು ಕ್ರಮೇಣ ಹೆಚ್ಚುತ್ತಿದೆ. ಹೀಗಾಗಿ ಗ್ರಾಮದಲ್ಲಿ ಶಿಶುಮರಣ ಪ್ರಮಾಣವು ತಗ್ಗಿದೆ ಎಂದು ಆತನ ಸೋದರ ರೆಹಾನ್ ಹೇಳಿದ.

ಆದರೆ ಉಮ್ರಿ ಗ್ರಾಮದಲ್ಲಿ ಅವಳಿ -ಜವಳಿಗಳ ಜನನ ಪ್ರಮಾಣ ಏಕೆ ಹೆಚ್ಚು ಎನ್ನುವುದಕ್ಕೆ ತೃಪ್ತಿಕರವಾದ ಉತ್ತರ ಇನ್ನೂ ದೊರಕಿಲ್ಲ. ವಿಜ್ಞಾನಿಗಳು ಬಂದು ನಮ್ಮ ಜೊಲ್ಲು,ರಕ್ತದ ಜೊತೆ ಇಲ್ಲಿಯ ಮಣ್ಣು ಮತ್ತು ನೀರಿನ ಸ್ಯಾಂಪಲ್‌ಗಳನ್ನು ಪಡೆದಿದ್ದರು. ಇಲ್ಲಿಯ ದನಗಳೂ ಅವಳಿ ಜವಳಿಗಳಿಗೆ ಜನ್ಮ ನೀಡುತ್ತಿರುವುದರಿಂದ ಅವುಗಳ ಸ್ಯಾಂಪಲ್‌ಗಳನ್ನು ಪಡೆದುಕೊಂಡು ಹೋಗಿದ್ದರು. ಆದರೆ ಮತ್ತೆಂದೂ ಅವರು ಇಲ್ಲಿಗೆ ಬಂದಿಲ್ಲ ಎಂದು ಫರ್ಹಾತ್(22) ಹೇಳಿದರು. ಅವರ ಅವಳಿ ಸೋದರಿ ನಿಘಾರ್‌ಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದೆ. ವಿಜ್ಞಾನಿಗಳಿಗೇ ಇಲ್ಲಿನ ಗುಟ್ಟು ಗೊತ್ತಾಗಿಲ್ಲ, ನಮಗೆ ಹೇಗೆ ತಿಳಿಯಬೇಕು ಎನ್ನುವುದು ಫರ್ಹಾತ್ ಪ್ರಶ್ನೆ.

ಉಮ್ರಿ ಶಾಪಗ್ರಸ್ಥ ಎನ್ನುವದು ಸುತ್ತಲಿನ ಹೆಚ್ಚಿನ ಗ್ರಾಮಗಳ ಜನರ ನಂಬಿಕೆ. ಹತ್ತಿರದ ವಾಯುನೆಲೆಯ ವಿಕಿರಣದಿಂದಾಗಿ ಭ್ರೂಣವು ಎರಡಾಗಿ ವಿಭಜಿಸಲ್ಪಡುವುದು ಇಂತಹ ಜನನಗಳಿಗೆ ಕಾರಣವಾಗಿದೆ ಎಂದು ಹೆಚ್ಚಿನವರು ಹೇಳುತ್ತಾರೆ. ಆದರೆ ಇದನ್ನೆಲ್ಲ ಉಮ್ರಿ ನಿವಾಸಿಗಳು ತಳ್ಳಿಹಾಕುತ್ತಾರೆ. ವಿಶ್ವದ ಎಲ್ಲೆಡೆ ವಾಯುನೆಲೆಗಳಿವೆ,ಆದರೆ ಅಲ್ಲೆಲ್ಲ ಇಂತಹ ಪ್ರಕರಣಗಳಿಲ್ಲ. ಇದು ದೇವರ ಆಶೀವಾದ ಎಂದಷ್ಟೇ ನಾವು ಹೇಳಬಲ್ಲೆವು ಎಂದು ಫರ್ಹಾತ್ ತಾಯಿ ನೂರಿಸ್ತಾ ಹೇಳಿದರು.

15 ವರ್ಷಗಳ ಹಿಂದೆ ಉಮ್ರಿಗೆ ಭೇಟಿ ನೀಡಿದ್ದ ಹೈದರಾಬಾದ್‌ನ ಸೆಂಟರ್ ಫಾರ್ ಸೆಲ್ಯುಲರ್ ಆ್ಯಂಡ್ ಮಾಲೆಕ್ಯೂಲರ್ ಬಯಾಲಜಿ(ಸಿಸಿಎಂಬಿ)ಯ ವಿಜ್ಞಾನಿಗಳ ತಂಡವು ತನ್ನ ಅಧ್ಯಯನವನ್ನು ಇಂದಿಗೂ ಪೂರ್ಣಗೊಳಿಸಿಲ್ಲ, ಇದಕ್ಕೆ ನಿರ್ದಿಷ್ಟವಾದ ಕಾರಣಗಳನ್ನೂ ಅದು ನೀಡಿಲ್ಲ.

ನಾವು 2002ಲ್ಲಿ ಉಮ್ರಿಗೆ ಭೇಟಿ ನೀಡಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದೆವು. ಆದರೆ ಕೆಲವು ಸಮಸ್ಯೆಗಳಿಂದಾಗಿ ಅಧ್ಯಯನ ಪೂರ್ಣಗೊಳ್ಳಲಿಲ್ಲ ಎಂದು ಹೇಳಿದ ಸಿಸಿಎಂಬಿಯ ಗ್ರೂಪ್ ಲೀಡರ್ ಜಿ.ಆರ್.ಚಂಡಕ್ ಅವರು, ಗ್ರಾಮದಲ್ಲಿ ವಿದ್ಯುತ್ ಮತ್ತು ಇತರ ಮೂಲಸೌಕರ್ಯಗಳಿರಲಿಲ್ಲ ಮತ್ತು ತಮ್ಮ ಜೀವನ ಸ್ಥಿತಿಯನ್ನು ಸುಧಾರಿಸಲು ಯಾರೂ ಬರುತ್ತಿಲ್ಲ ಎಂಬ ಅತೃಪ್ತಿ ಗ್ರಾಮಸ್ಥರನ್ನು ಕಾಡುತ್ತಿತ್ತು. ಹಲವಾರು ಅವಳಿ-ಜವಳಿಗಳು ಮದುವೆಯಾಗಿ ಗ್ರಾಮವನ್ನು ತೊರೆದಿದ್ದಾರೆ. ಜನನದ ವೇಳೆಯೇ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದರು.

ಕೆಲವು ವರ್ಷಗಳ ಹಿಂದಷ್ಟೇ ಉಮ್ರಿ ಗ್ರಾಮಕ್ಕೆ ವಿದ್ಯುತ್ ಭಾಗ್ಯ ಲಭಿಸಿದೆ. ಮಿಡ್ಲ್‌ಸ್ಕೂಲ್‌ವರೆಗೆ ಶಿಕ್ಷಣದ ಅವಕಾಶವೂ ಪ್ರಾಪ್ತವಾಗಿದೆ. ಆದರೆ ಆಸ್ಪತ್ರೆಗಳಾಗಲೀ ಔಷಧಿ ಅಂಗಡಿಗಳಾಗಲೀ ಇಲ್ಲ. ಸಮೀಪದ ಆಸ್ಪತ್ರೆ ಐದು ಕಿ.ಮೀ.ದೂರವಿದೆ. ನಮಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸೌಲಭ್ಯವೂ ಇಲ್ಲ ಎಂದು ಗ್ರಾಮದ ಪ್ರಧಾನ ಮುಹಮ್ಮದ್ ಉಮರ್ ಹೇಳಿದರು.

22ರ ಹರೆಯದ ಅವಳಿ ಸೋದರರಾದ ಅಮಿತ್ ಮತ್ತು ವಿಪಿನ್ ಅಲಹಾಬಾದ್ ಕ್ರಿಕೆಟ್ ಲೀಗ್‌ನಲ್ಲಿ ಆಡುತ್ತಾರೆ. ಅವರ ಹೆತ್ತವರು ಗ್ರಾಮದಲ್ಲಿ ತರಕಾರಿ ಮಾರಿಕೊಂಡಿ ದ್ದಾರೆ. ಕಡು ಬಡತನದಿಂದಾಗಿ ಕ್ರಿಕೆಟ್‌ನಲ್ಲಿ ಮುಂದೆ ಬರಬೇಕೆಂಬ ಈ ಸೋದರರ ಕನಸು ಕಮರಿದೆ. ಆದರೆ ತಾವಿಬ್ಬರು ಅವಳಿ-ಜವಳಿಗಳಾಗಿರುವದರಿಂದ ಕ್ರಿಕೆಟ್ ಪಂದ್ಯಗಳಲ್ಲಿ ನಡೆಯುವ ಸ್ವಾರಸ್ಯಕರ ಘಟನೆಗಳನ್ನು ಹೇಳಿಕೊಳ್ಳುವುದರಲ್ಲಿ ಖುಷಿ ಪಡುತ್ತಾರೆ.

ಐದು ವರ್ಷಗಳ ಹಿಂದೆ ಫತೇಪುರದಲ್ಲಿ ಮ್ಯಾಚ್ ನಡೆದಿದ್ದಾಗ ಅಮಿತ್ 33 ರನ್‌ಗಳಿಗೆ ಔಟ್ ಆಗಿದ್ದರು. ಬೌಲರ್ ಆಗಿರುವ ವಿಪಿನ್ ಸರದಿ ಬಂದಾಗ ಅಮಿತ್ ಬ್ಯಾಟ್ ಹಿಡಿದುಕೊಂಡು ಮತ್ತೆ ಮೈದಾನಕ್ಕೆ ಇಳಿದಿದ್ದರು. ಆದರೆ ಇದು ಯಾರಿಗೂ ಗೊತ್ತಾಗಿರಲಿಲ್ಲ. ‘ಕೊನೆಗೆ ನಮ್ಮ ತಂಡವೇ ಜಯ ಗಳಿಸಿತ್ತು’ ಎಂದು ನೆನಪಿಸಿಕೊಂಡಿದ್ದಾರೆ ವಿಪಿನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News