ಹರ್ಷಿಣಿಯ ಅಗ್ನಿಕಾಂಡ

Update: 2017-08-06 18:45 GMT

ನಾಗಪುರದ ರಾಷ್ಟ್ರೀಯ ಅಗ್ನಿಶಾಮಕ ಸೇವೆ ಕಾಲೇಜ್ (ಎನ್‌ಎಫ್‌ಎಸ್‌ಸಿ) ತನ್ನ 46 ವರ್ಷಗಳ ಇತಿಹಾಸದಲ್ಲಿ ಸಮವಸ್ತ್ರ ಧರಿಸಿದ ಯುವತಿ ಕ್ಯಾಂಪಸ್‌ನ ಪ್ರವೇಶದ್ವಾರದಿಂದ ಹೊರಹೋಗು ವುದನ್ನು ಕಂಡಿರಲಿಲ್ಲ. ಆದರೆ 2002ರಲ್ಲಿ 26ರ ಹರೆಯದ ಹರ್ಷಿಣಿ ಕನ್ಹೇಕರ್ ಅವರ ಆಗಮನವು, ಈ ಪರಂಪರೆಗೆ ಅಂತ್ಯಹಾಡಿತು.

ಅಗ್ನಿಶಾಮಕದಳವೆಂಬ ಪುರುಷರ ಭದ್ರಕೋಟೆಗೆ ಲಗ್ಗೆ ಹಾಕಿದ ಹರ್ಷಿಣಿ, ಭಾರತದ ಪ್ರಪ್ರಥಮ ಮಹಿಳಾ ಅಗ್ನಿಶಾಮಕ ಸಿಬ್ಬಂದಿ (ಫೈರ್‌ಫೈಟರ್) ಎಂಬ ದಾಖಲೆಯನ್ನು ಸ್ಥಾಪಿಸಿದ್ದಾರೆ.

ರಾಷ್ಟ್ರೀಯ ಅಗ್ನಿಶಾಮಕ ಸೇವೆಯಲ್ಲಿ ಉತ್ತೀರ್ಣಗೊಂಡಿರುವುದಾಗಿ ಎನ್‌ಎಫ್‌ಎಸ್‌ಸಿನಿಂದ ಟೆಲಿಗ್ರಾಂ ಸಂದೇಶ ಬಂದ ದಿನ ತನ್ನ ಪಾಲಿಗೆ ಅವಿಸ್ಮರಣೀಯವಾದುದು. ಆಗ ತನ್ನ ಸಂತಸಕ್ಕೆ ಪಾರವೇ ಇರಲಿಲ್ಲವೆಂದು ಹರ್ಷಿಣಿ ನೆನಪಿನಂಗಳಕ್ಕೆ ಜಾರುತ್ತಾರೆ. ‘‘ಇದು ನನ್ನ ಬದುಕಿನ ಸುವರ್ಣ ಕ್ಷಣವಾಗಿತ್ತು. ನಾನು ಎನ್‌ಎಫ್‌ಎಸ್‌ಸಿಗೆ ನೇಮಕಾತಿಗಾಗಿ ಅರ್ಜಿ ನಮೂನೆಯನ್ನು ಖರೀದಿಸಿದಾಗ ನನಗೆ ಈ ಸಂಸ್ಥೆಯಲ್ಲಿ ಯಾವುದೇ ಹೆಣ್ಣು ಅಧ್ಯಯನ ಮಾಡಿದ ಇತಿಹಾಸವೇ ಇಲ್ಲವೆಂಬುದು ಗೊತ್ತಿರಲಿಲ್ಲ’’ ಎಂದು ಆಕೆ ಹೇಳುತ್ತಾರೆ.

ಮೊದಲ ಬಾರಿಗೆ ಹರ್ಷಿಣಿ ಎನ್‌ಎಫ್‌ಎಸ್‌ಸಿ ಕ್ಯಾಂಪಸ್‌ಗೆ ಆಗಮಿಸಿದ ಆಕೆಗೆ ಅಲ್ಲಿ ಎಲ್ಲೆಡೆಯೂ ಪುರುಷ ಜನಸ್ತೋಮವೇ ಕಂಡು ಬಂದಿತ್ತು. ಒಬ್ಬಳೇ ಒಬ್ಬ ಮಹಿಳೆಯೂ ಅಲ್ಲಿ ಆಕೆಯ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ ಇದರಿಂದ ಆಕೆ ಹಿಂಜರಿಯಲಿಲ್ಲ. ‘‘ನನಗೆ ಆಗ ಕಂಡಿದ್ದು, ಈ ಸುಂದರವಾದ ಕೆಂಪು ಕಟ್ಟಡ ಮಾತ್ರವೇ. ಈ ಕ್ಷಣದಲ್ಲಿ ನಾನು ಕಾಲೇಜ್‌ಗೆ ಪ್ರವೇಶವನ್ನು ಪಡೆದುಕೊಳ್ಳುವ ಕನಸನ್ನು ಕಂಡಿದ್ದೆ’’ ಎಂದು ಹರ್ಷಿಣಿ ಸ್ಮರಿಸಿಕೊಳ್ಳುತ್ತಾರೆ.

ಹರ್ಷಿಣಿ ಕಾಲೇಜಿಗೆ ಪ್ರವೇಶಾತಿಗಾಗಿ ಅರ್ಜಿ ನಮೂನೆಯನ್ನು ಸಲ್ಲಿಸಿದಾಗ ಆಡಳಿತ ವಿಭಾಗದ ಉದ್ಯೋಗಿಯೊಬ್ಬ ಆಕೆಗೆ, ‘‘ ಮೇಡಂ, ದಯವಿಟ್ಟು ಮಹಿಳಾ ವಿದ್ಯಾರ್ಥಿಗಳಿಗೆ ಸೌಕರ್ಯಗಳಿರುವ ಸೇನೆ ಅಥವಾ ವಾಯುಪಡೆ ಕಾಲೇಜ್‌ಗೆ ಅರ್ಜಿಯನ್ನು ಸಲ್ಲಿಸಿ. ಇದು ಕೇವಲ ಪುರುಷರದೇ ಕಾಲೇಜ್’’ ಎಂದು ಮೂದಲಿಸಿದ್ದ.

 ಎಂದೂ ಸೋಲನ್ನೊಪ್ಪಿಕೊಳ್ಳುವ ಜಾಯಮಾನವಿಲ್ಲದ ಹರ್ಷಿಣಿ, ಆತನ ಮಾತನ್ನು ಚಾಲೆಂಜ್ ಆಗಿ ತೆಗೆದುಕೊಂಡಳು. ಮಾತ್ರವಲ್ಲ. ಅಗ್ನಿಶಾಮಕದಳಕ್ಕೆ ಸೇರ್ಪಡೆಗೊಳ್ಳುವ ನಿರ್ಧಾರವು ಇನ್ನಷ್ಟು ಬಲ ಗೊಂಡಿತು. 2002ರವರೆಗೂ ಅಗ್ನಿಶಾಮಕ ಸೇವೆಯು ಮಹಿಳೆಯರ ಪ್ರಾತಿನಿಧ್ಯವಿರದ ಏಕೈಕ ಕ್ಷೇತ್ರವಾಗಿತ್ತು. ಅದನ್ನು ಬದಲಾಯಿಸಲು ಹರ್ಷಿಣಿ ದೃಢನಿಶ್ಚಯ ಮಾಡಿದ್ದಳು.

 ಎನ್‌ಎಫ್‌ಎಸ್‌ಸಿ ವಿದ್ಯಾರ್ಥಿಗಳ ಪರೇಡ್

ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ನಡೆದ ಎನ್‌ಎಫ್‌ಎಸ್‌ಸಿ ಪ್ರವೇಶ ಪರೀಕ್ಷೆಯಲ್ಲಿ ಕೇವಲ 30 ಸೀಟುಗಳು ಮಾತ್ರವೇ ಇದ್ದವು. ಎರಡನೆ ಸುತ್ತಿನಲ್ಲಿ ವೈದ್ಯಕೀಯ ಪರೀಕ್ಷೆಯೂ ಒಳಗೊಂಡಿತ್ತು. ವೈದ್ಯಕೀಯ ಪರೀಕ್ಷೆಗಳನ್ನು ನಿರ್ವಹಿಸುತ್ತಿದ್ದ ವೈದ್ಯರೊಬ್ಬರು ತನ್ನೊಂದಿಗೆ ಹೇಳಿದ್ದುದು ಈಗಲೂ ಆಕೆಗೆ ನೆನಪಿದೆ. ‘‘ಮಗು, ಇದೊಂದು ಪ್ರಯಾಸಕರವಾದ ಅಧ್ಯಯನ ವಿಷಯವಾಗಿದೆ. ನಿನಗೆ ಅದನ್ನು ಮಾಡಲು ಸಾಧ್ಯವೇ ಎಂಬುದು ಖಾತರಿಯಿದೆಯೇ? ಎಂದವರು ಹರ್ಷಿಣಿಯನ್ನು ವಿಚಾರಿಸಿದ್ದರು.

ಹರ್ಷಿಣಿ ಎದುರಿಸಿದ ಅಂತಿಮ ಸಂದರ್ಶನದಲ್ಲಿ ಸಂದರ್ಶಕರ ಸಮಿತಿಯು ಅಗ್ನಿಶಾಮಕ ಸೇವೆಯ ಬಗ್ಗೆ ಆಕೆಯಲ್ಲಿ ಭೀತಿ ಹುಟ್ಟಿಸಲು ದೃಢನಿಶ್ಚಯ ಮಾಡಿದಂತಿತ್ತು. ಸಂದರ್ಶನ ಆರಂಭಗೊಂಡಾಗ ಸಂದರ್ಶಕರ ಸಮಿತಿ ಯಲ್ಲಿದ್ದವರೊಬ್ಬರು ಹರ್ಷಿಣಿಯನ್ನು ಅಗ್ನಿಶಾಮಕದಳದ ಭಾವೀ ಕಿರಣ್‌ಬೇಡಿ ಎಂದು ಪ್ರಶಂಸಿಸಿದ್ದರು. ‘‘ ಈ ಮಾತನ್ನು ಕೇಳಿ ನನಗೆ ಸಂತಸವಾಯಿತು. ಆದರೆ ಆ ಹೆಮ್ಮೆ ನನ್ನ ತಲೆಗೇರುವುದಕ್ಕೆ ನಾನು ಆಸ್ಪದ ನೀಡಲಿಲ್ಲ’’ ಎಂದಾಕೆ ಹೇಳುತ್ತಾರೆ.

 ಸಂದರ್ಶನದಲ್ಲಿ ಉತ್ತೀರ್ಣಳಾದ ಬಳಿಕ, ಸಮವಸ್ತ್ರವನ್ನು ಧರಿಸುವ ಹರ್ಷಿಣಿಯ ಕನಸು ಈಗ ವಾಸ್ತವಕ್ಕೆ ತುಂಬಾ ಹತ್ತಿರವಾಯಿತು.

ಕಾಲೇಜ್ ಸೇರಿದ ಮೊದಲನೆ ದಿನವೇ ಎನ್‌ಎಫ್‌ಎಸ್‌ಸಿಗೆ ಅರ್ಜಿ ಸಲ್ಲಿಕೆಯು ನಿಷ್ಫಲ ಪ್ರಯತ್ನವೆಂದು ತನಗೆ ಹಿಂಜರಿಕೆಯುಂಟು ಮಾಡಿದ ವ್ಯಕ್ತಿಯನ್ನೇ ಮೊದಲಿಗೆ ಹರ್ಷಿಣಿ ಭೇಟಿಯಾದಳು. ಎನ್‌ಎಫ್‌ಎಸ್‌ಸಿಗೆ ವಿದ್ಯಾರ್ಥಿನಿಯಾಗಿ ತಾನು ಸೇರ್ಪಡೆ ಗೊಂಡಿರುವುದನ್ನು ಕಂಡು ಆತ ತಡವರಿಸುತ್ತಾ, ‘‘ನಮ್ಮ ಕಾಲೇಜ್‌ಗೆ ನಿಮಗೆ ಸದಾ ಸ್ವಾಗತ ಮೇಡಂ’’ ಎಂದು ಹೇಳಿದ. ಆದಾಗ್ಯೂ, ಆನಂತರದ ವರ್ಷಗಳಲ್ಲಿ ಆತ ಮಹಿಳೆ ಯರು ಎನ್‌ಎಫ್‌ಎಸ್‌ಸಿಗೆ ಸೇರ್ಪಡೆಗೊಳ್ಳಲು ಸಕ್ರಿಯವಾಗಿ ನೆರವಾಗುತ್ತಿರುವುದನ್ನು ಹರ್ಷಿಣಿ ಅರಿತುಕೊಂಡರು.

‘‘ನಾನು ಎಂದೂ ಕ್ಲಾಸ್‌ಗೆ ತಡವಾಗಿ ಬರುತ್ತಿರಲಿಲ್ಲ. ಕವಾಯತು ಹಾಗೂ ಪರೇಡ್ ಸಂದರ್ಭಗಳಲ್ಲಿ ನನಗೆ ಸುಸ್ತಾಗುತ್ತಿರಲಿಲ್ಲ. ಒಂದು ವೇಳೆ ನಾನು ತಡವಾಗಿ ಹೋದಲ್ಲಿ ಜನರು ಎಲ್ಲಾ ಹುಡುಗಿಯರು ಒಂದೇ ಎಂದು ಮೂದಲಿಸತೊಡಗುವರೆಂದು ನನಗೆ ತಿಳಿದಿತ್ತು. ಒಂದು ರೀತಿಯಲ್ಲಿ ಆಗ ನಾನು ಪ್ರಯೋಗಪಶುವಾಗಿದ್ದೆ. ಯಾಕೆಂದರೆ ನನ್ನ ಆನಂತರ ಈ ಕಾಲೇಜ್‌ಗೆ ಸೇರ್ಪಡೆಗೊಳ್ಳುವ ಹುಡುಗಿಯರನ್ನು ನನ್ನ ಸಾಧನೆಯ ಮಾನದಂಡದಿಂದ ಅಳೆಯಲಾಗುವುದು ಎಂಬುದು ಸಹ ನನಗೆ ಅರಿವಿತ್ತು’’ ಎಂದು ಹರ್ಷಿಣಿ ಹೇಳುತ್ತಾರೆ.

ಇಡೀ ಕ್ಯಾಂಪಸ್‌ನಲ್ಲಿ ಒಬ್ಬಳೇ ಹುಡುಗಿಯಿರುವುದು ಎಲ್ಲರಿಗೂ ಒಂದು ಅಸಮಂಜಸವಾದ ವಿಷಯವಾಗಿತ್ತು. ಸಹಜವಾಗಿಯೇ ಈ ವಿಷಯವು ಕಾಲೇಜ್‌ನಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ‘‘ಪ್ರತಿ ಸಲವೂ ನಾನು ಕಟ್ಟಡದ ಸುತ್ತಲೂ ನಡೆದಾಡಿದಾಗ, ಜನರು, ನನ್ನನ್ನು ಸಂಸ್ಥೆಯ ಮೆಟ್ಟಿಲುಗಳನ್ನೇರಿದ ಪ್ರಥಮ ಹುಡುಗಿ ಅಥವಾ ನಿರ್ದೇಶಕರ ಕ್ಯಾಬಿನ್ ಪ್ರವೇಶದ ಮೊದಲ ಹುಡುಗಿ ಎಂದು ನೆನಪಿಸುತ್ತಿದ್ದರು’’ ಎಂದು ನನ್ನನ್ನು ನೆನಪಿಸುತ್ತಿದ್ದರು. ಒಟ್ಟಿನಲ್ಲಿ ನಾನವರ ನಿರಂತರವಾದ ನಿಗಾಕ್ಕೊಳ ಗಾಗಿದ್ದೆ ಎಂದು ಹರ್ಷಿಣಿ ನೆನಪಿಸಿಕೊಳ್ಳುತ್ತಾರೆ.

‘‘ಭಾರವಾದ ಜಲ ಮೆದುಗೊಳವೆ (ಹೋಸ್), ಹೀರುವಿಕೆಯ (ಠ್ಠ್ಚಠಿಜಿಟ್ಞ), ಮೆದುಗೊಳವೆಗಳ ನಿರ್ವಹಣೆ, ಅಣಕು ಕವಾಯತುಗಳು ಹಾಗೂ ಡಮ್ಮಿಗಳ ನಿರ್ವಹಣೆಯು ಎಲ್ಲರಿಗೂ ಕಷ್ಟಕರವಾದು ದಾಗಿದೆ. ಇಲ್ಲಿ ಹೆಣ್ಣು, ಗಂಡು ಎಂಬ ಪ್ರಶ್ನೆ ಬರುವುದಿಲ್ಲ. ನಾನು ದುರ್ಬಲಲೆಂದು ಭಾವಿಸಲ್ಪಡುವುದು ನನಗೆ ಬೇಕಿರಲಿಲ್ಲ. ಹೀಗಾಗಿ ನಾನು ಮುಂಜಾನೆ ಎದ್ದು, ಕಾಲೇಜಿನ ದಾಸ್ತಾನು ಕೊಠಡಿಗೆ ಹೋಗಿ ನಾನಾಗಿಯೇ ಅಭ್ಯಾಸ ಮಾಡುತ್ತಿದ್ದೆ. ಹೀಗಾಗಿ ನಾನು ಎಲ್ಲರೊಂದಿಗೆ ತಲೆಎತ್ತಿ ನಡೆದಾಡಬಲ್ಲವಳಾಗಿದ್ದೆ ಹಾಗೂ ಯಾರೂ ಕೂಡಾ ನನ್ನನ್ನು ಅಣಕಿಸುವ ಹಾಗಿರಲಿಲ್ಲ ’’ ಎಂದು ಹರ್ಷಿಣಿ ಹೇಳುತ್ತಾರೆ.

ಐದು ವರ್ಷಗಳ ಕಾಲ ಮಹಿಳಾ ಕಾಲೇಜ್‌ನಲ್ಲಿ ಕಲಿತ ಬಳಿಕ ಹರ್ಷಿಣಿ, ಹುಡುಗರೇ ತುಂಬಿರುವ ಕಾಲೇಜ್‌ನಲ್ಲಿ ಕಲಿಯುವಂತಾ ಯಿತು. ಫೈರ್ ಇಂಜಿನಿಯರಿಂಗ್ ಏಳು ಸೆಮಿಸ್ಟರ್‌ಗಳ ವಸತಿ ಶಿಕ್ಷಣ ಕೋರ್ಸ್ ಆಗಿತ್ತು. ಹೀಗಾಗಿ ನಾನೊಬ್ಬಳೇ ಈ ಕೋರ್ಸ್ ಕಲಿಯುತ್ತಿ ರುವ ಏಕೈಕ ಹುಡುಗಿಯಾದ್ದರಿಂದ, ತರಗತಿಯ ಬಳಿಕ ಮನೆಗೆ ತೆರಳಲು ಗೃಹ ಸಚಿವಾಲಯದಿಂದ ಕಾಲೇಜ್‌ನ ವಿಶೇಷ ಅನುಮತಿಯನ್ನು ಪಡೆಯಬೇಕಾಗಿತ್ತು ಎಂದವರು ಹೇಳುತ್ತಾರೆ.

ಎನ್‌ಸಿಸಿ ಪ್ರೇರಣೆ

ಎನ್‌ಸಿಸಿಯಲ್ಲಿದ್ದಾಗ ಭಾರತೀಯ ವಾಯುಪಡೆಯ ಪ್ರಪ್ರಥಮ ಪೈಲಟ್, ಮೂಲತಃ ವಿದರ್ಭದವರಾದ ಶಿವಾನಿ ಕುಲಕರ್ಣಿಯ ಬಗ್ಗೆ ಲೇಖನವೊಂದನ್ನು ಓದಿದ್ದೆ. ನನಗೆ ಆಕೆಯೇ ಸ್ಫೂರ್ತಿಯಾಗಿದ್ದಾರೆ. ಎನ್‌ಸಿಸಿಯಲ್ಲಿದ್ದಾಗ, ಸಮವಸ್ತ್ರ ಧರಿಸಿದ ಅಧಿಕಾರಿಗಳಲ್ಲಿ ಘನತೆ ಹಾಗೂ ಗಾಂಭೀರ್ಯ ಶೋಭಿಸುತ್ತಿರುವುದನ್ನು ನಾನು ಕಾಣುತ್ತಿದ್ದೆ. ಆ ಸಮಯದಲ್ಲಿ ಸಮವಸ್ತ್ರದ ಬಗ್ಗೆ ನನಗೆ ಆಕರ್ಷಣೆ ಬೆಳೆಯಿತು’’ ಎಂದು ಹರ್ಷಿಣಿ ಹೇಳುತ್ತಾರೆ.

2006ಲ್ಲಿ ಗುಜರಾತ್‌ನ ಮೆಹ್ಸಾನದಲ್ಲಿರುವ ಅಗ್ನಿಶಾಮಕ ಠಾಣೆಗೆ ಹರ್ಷಿಣಿ ಸೇರ್ಪಡೆಗೊಂಡರು. ಮೆಹ್ಸಾನಾದಲ್ಲಿ ಭಾರತೀಯ ತೈಲ ಹಾಗೂ ನೈಸರ್ಗಿಕ ಅನಿಲ ನಿಗಮದ ಎರಡನೆ ಅತಿ ದೊಡ್ಡ ತಟಪ್ರದೇಶದ ತೈಲ ಉತ್ಪಾದನಾ ಘಟಕವಿದೆ. ಮೆಹ್ಸಾನದಲ್ಲಿರುವ 50 ತೈಲ ಸಂಸ್ಥಾಪನೆ ಗಳು ಮೂರು ಅಗ್ನಿಶಾಮಕದಳ ಠಾಣೆಗಳ ವ್ಯಾಪ್ತಿಯಲ್ಲಿವೆ. ಮೆಹ್ಸಾನ ಒಂದು ಸಣ್ಣ ಹಳ್ಳಿಯಾಗಿರುವುದರಿಂದ ಅಲ್ಲಿ ಮುನ್ಸಿಪಲ್ ಅಗ್ನಿಶಾಮಕ ಠಾಣೆಯೂ ಇರಲಿಲ್ಲ. ಹೀಗಾಗಿ ಈ ಗ್ರಾಮಗಳಿಗೆ ಸೇವೆಗಳನ್ನು ಒದಗಿಸುವ ಹೊಣೆಗಾರಿಕೆಯನ್ನು ಓಎನ್‌ಜಿಸಿ ಕೈಗೆತ್ತಿಕೊಂಡಿತ್ತು. ಮೆಹ್ಸಾನಾದಲ್ಲಿ ಸೇವೆಯಲ್ಲಿದ್ದಾಗ ಆಕೆ ಈ ಮೂರು ಅಗ್ನಿಶಾಮಕ ಠಾಣೆಗಳ ಉಸ್ತುವಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 2010ರಲ್ಲಿ ಹರ್ಷಿಣಿ ಅವರನ್ನು ಮುಂಬೈ ಡ್ರಿಲ್ಲಿಂಗ್ ಸೇವೆಗಳಿಗೆ ವರ್ಗಾವಣೆಗೊಳಿಸಲಾಯಿತು.

 ಸಮುದ್ರದಲ್ಲಿರುವ ತೈಲ ಡ್ರಿಲ್ಲಿಂಗ್ ಸೇವೆಗಳನ್ನು ಸಹ ಮಹಿಳೆಯು ನಿರ್ವಹಿಸಬಲ್ಲಳೆಂಬುದಾಗಿ ದೃಢನಂಬಿಕೆಯಿಟ್ಟಿದ್ದಕ್ಕಾಗಿ ನಾನು ಆಡಳಿತವರ್ಗಕ್ಕೆ ಕೃತಜ್ಞ ಳಾಗಿದ್ದೇನೆ. ನನಗಿಂತ ಮೊದಲು ಯಾವುದೇ ಮಹಿಳೆಗೂ, ಸಮುದ್ರಪ್ರದೇಶದ ತೈಲ ಬಾವಿಗಳಲ್ಲಿ ಕರ್ತವ್ಯನಿರ್ವ ಹಿಸುವ ಅವಕಾಶ ದೊರೆತಿರಲಿಲ್ಲ. 2013ರ ಆನಂತರವಷ್ಟೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಅಲ್ಲಿ ಸೇವೆ ಸಲ್ಲಿಸಲು ಪ್ರೋತ್ಸಾಹಿಸಲಾ ಯಿತು. ಸಮುದ್ರ ತೈಲಬಾವಿಗಳಲ್ಲಿ ಅಗ್ನಿಶಾಮಕದಳದ ಅಧಿಕಾರಿಯಾಗಿ ನಿಯೋಜಿತಳಾದ ಮಹಿಳೆಯು ಹೆಲಿಕಾಪ್ಟರ್ ಹತ್ತಿ, ಪರಿಶೀಲನೆ ನಡೆಸಬೇಕಾಗುತ್ತದೆ. ನಿರಂತರವಾದ ನಿಗಾದಲ್ಲಿರಬೇಕಾಗುತ್ತದೆ ಹಾಗೂ ಸಂಭಾವ್ಯ ಅಗ್ನಿಅನಾಹುತದ ವಿರುದ್ಧ ಸುರಕ್ಷತೆಯ ಸಂಪೂರ್ಣ ಹೊಣೆಹೊರಬೇಕಾಗುತ್ತದೆ. ಬಹಳ ಸಮಯದವರೆಗೆ ಮಹಿಳೆಯರಿಗೆ ಇಂತಹ ಕರ್ತವ್ಯಗಳನ್ನು ನಿರ್ವಹಿಸಲು ಬೇಕಾದ ಮೂಲಸೌಕರ್ಯಗಳು ಲಭ್ಯವಿರಲಿಲ್ಲ. ಆದರೆ ಈಗ ಬದಲಾಗಿದೆ. ನಾವೀಗ ಬಹುದೂರದವರೆಗೆ ಸಾಗಿಬಂದಿದ್ದೇವೆ’’ ಎಂದಾಕೆ ಹೇಳುತ್ತಾರೆ.

ದೇಶ ಕಂಡ ಪ್ರಪ್ರಥಮ ಅಗ್ನಿಶಾಮಕದಳದ ಉದ್ಯೋಗಿ ತಾನೆಂಬ ಬಗ್ಗೆ ಹೆಮ್ಮೆಯಿದೆ ಎಂದು ಹೇಳುವ ಹರ್ಷಿಣಿ ಇದರಿಂದಾಗಿ ತನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎನ್ನುತ್ತಾರೆ.

ಸ್ವಾರಸ್ಯಕರವೆದಂರೆ ಮೋಟಾರ್‌ಸೈಕಲ್ ಸವಾರಿ ಹರ್ಷಿಣಿಯ ಅಚ್ಚುಮೆಚ್ಚಿನ ಹವ್ಯಾಸವಾಗಿದೆ.ಅನುಭವಿ ಬೈಕ್ ಚಾಲಕಿಯಾಗಿರುವ ಈಕೆಯ ಬೈಕ್ ಸವಾರಿಯಲ್ಲಿ ಅಪಾರ ಅಸಕ್ತಿ ಹೊಂದಿರುವ ತನ್ನ ಸ್ನೇಹಿತನನ್ನೇ ವಿವಾಹವಾಗಿದ್ದಾರೆ. ಕ್ರಿಸ್‌ಮಸ್ ದಿನದಂದು ತಾವು ವಿವಾಹವಾಗಿರುವುದರಿಂದ ರಜೆಗಾಗಿ ಮೇಲಧಿಕಾರಿಗಳನ್ನು ವಿನಂತಿಸುವ ತೊಂದರೆ ತನಗಿಲ್ಲವೆಂದು ಹರ್ಷಿಣಿ ಚಟಾಕಿ ಹಾರಿಸುತ್ತಾರೆ.

ಲೇಹ್ ಲಡಾಖ್‌ನ ಕಾರ್ದುಂಗ್ ಲಾ ಪಾಸ್ ಹಾಗೂ ಕಾರ್ಗಿಲ್‌ವರೆಗಿನ ವಿಶ್ವದ ಅತಿ ಎತ್ತರದ ವಾಹನ ರಸ್ತೆ ಪ್ರಯಾಣವು ಅವರ ಇತ್ತೀಚಿನ ಬೈಕಿಂಗ್ ಸಾಹಸಯಾತ್ರೆಗಳಲ್ಲೊಂದಾಗಿದೆ.

 ‘‘ಯಾವುದೇ ವೃತ್ತಿಕ್ಷೇತ್ರವು, ಯಾವುದೇ ಲಿಂಗಕ್ಕೆ ಸೀಮಿತವಾದುದಲ್ಲ. ಉದಾಹರಣೆಗೆ ಹೇಳುವುದಾದರೆ ಒಂದು ಬೈಕ್‌ಗೆ, ತನ್ನ ಮೇಲೆ ಪ್ರಯಾಣಿಸುತ್ತಿರುವ ವ್ಯಕ್ತಿ ಪುರುಷನೋ ಅಥವಾ ಮಹಿಳೆಯೋ ಎಂಬುದು ತಿಳಿದಿರುವುದಿಲ್ಲ. ಅದೇ ರೀತಿ, ಪುರುಷ ಪಾರಮ್ಯ ಅಥವಾ ಸ್ತ್ರೀಪಾರಮ್ಯದ ವೃತ್ತಿಯೆಂಬ ಕಲ್ಪನೆಯು ಹುಸಿಯಾಗಿದೆ. ನೀವು ಒಂದು ವೃತ್ತಿಯನ್ನು ಪ್ರೀತಿಸುತ್ತಿದ್ದಲ್ಲಿ, ಅದರ ಬಗ್ಗೆ ನಿಮಗೆ ಉತ್ಕಟವಾದ ಆಸಕ್ತಿಯಿದ್ದಲ್ಲಿ ನೀವು ಖಂಡಿತವಾಗಿಯೂ ಅದನ್ನು ನಿರ್ವಹಿಸಬಲ್ಲಿರಿ. ನೀವು ಬದುಕುವುದು ಒಮ್ಮೆ ಮಾತ್ರ. ಆದ್ದರಿಂದ ನಿಮ್ಮ ಬದುಕನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಿ. ನಿಮ್ಮ ಕನಸುಗಳನ್ನು ಬೆನ್ನಟ್ಟುವುದನ್ನು ನಿಲ್ಲಿಸದಿರಿ’’.ಹರ್ಷಿಣಿ, ಯುವತಿಯರಿಗೆ ಸಂದೇಶ ನೀಡುತ್ತಾರೆ.

ನಿಜಕ್ಕೂ ಹರ್ಷಿಣಿಯ ಬದುಕು, ಸಾಧನೆ ಯುವತಿಯರಿಗೆ ಮಾತ್ರವಲ್ಲ ಇಡೀ ಯುವಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ.

ಜೀವವನ್ನೇ ಒತ್ತೆಯಿಟ್ಟು ಕಾರ್ಯಾಚರಣೆ

ಅಗ್ನಿಶಾಮಕ (ಫೈರ್‌ಫೈಟರ್) ಸಿಬ್ಬಂದಿಯಾಗಿ ಹರ್ಷಿಣಿಯ ಬದುಕು ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಆದಾಗ್ಯೂ ಹರ್ಷಿಣಿ ಹಿಂಜರಿಯಲಿಲ್ಲ. 2005ರ ದೀಪಾವಳಿ ಆಚರಣೆಯ ವೇಳೆ ಆಕೆ 6 ಅಗ್ನಿ ದುರಂತದ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು. ಇದು ತನ್ನ ವೃತ್ತಿ ಬದುಕಿನ ಅತ್ಯಂತ ಕಷ್ಟಕರ ಪ್ರಕರಣಗಳಾಗಿದ್ದವು ಎಂದವರು ಹೇಳುತ್ತಾರೆ.

‘‘ಆಗ ದಿಲ್ಲಿಯ ಶಾಸ್ತ್ರಿನಗರದಲ್ಲಿ ಪಾದರಕ್ಷೆ ಕಾರ್ಖಾನೆಯೊಂದಕ್ಕೆ ಬೆಂಕಿ ತಗಲಿತ್ತು. ಕಟ್ಟಡದ ಮೇಲಂತಸ್ತಿನಲ್ಲಿರುವ ಅಂಗಡಿಗೆ ಪಟಾಕಿ ರಾಕೆಟ್ ಪ್ರವೇಶಿಸಿತ್ತು ಹಾಗೂ ಅದರ ಕಿಡಿಯಿಂದಾಗಿ ಅಲ್ಲಿದ್ದ ಹಲವಾರು ಪಾದರಕ್ಷೆಯ ಪೆಟ್ಟಿಗೆಗಳಿಗೆ ಬೆಂಕಿ ಹತ್ತಿಕೊಂಡಿತು. ಧಗಧಗನೆ ಉರಿಯುತ್ತಿದ್ದ ಬೆಂಕಿಯಿಂದಾಗಿ ಕಟ್ಟಡದಲ್ಲಿ ದೊಡ್ಡ ದೊಡ್ಡ ಬಿರುಕುಗಳು ಮೂಡಿದವು. ಬೆಂಕಿ ಬಿದ್ದ ಕಟ್ಟಡದ ಎದುರಿನಲ್ಲಿರುವ ಕಟ್ಟಡವನ್ನು ಹತ್ತಿದ ನಾವು, ಬೆಂಕಿಯನ್ನು ನಂದಿಸಲು ಯತ್ನಿಸಿದೆವು. ಆದರೆ ಅದು ಸಫಲವಾಗಲಿಲ್ಲ. ನಾವು ಬೆಂಕಿಯನ್ನು ನಿಯಂತ್ರಿಸುವುದಕ್ಕಾಗಿ ಪಕ್ಕದಲ್ಲಿದ್ದ ಕಟ್ಟಡದ ಗೋಡೆಯನ್ನು ಮುರಿದು ಒಳಪ್ರವೇಶಿಸಿದೆವು. ಆದರೆ ದಟ್ಟ ಹೊಗೆ ಮೇಲೇಳುತ್ತಲೇ ಇತ್ತು. ನಮ್ಮ ಪ್ರಾಣವನ್ನೇ ಒತ್ತೆ ಇಟ್ಟು, ಬಿರುಕುಬಿಟ್ಟ ಕಟ್ಟಡದೊಳಗೆ ಪ್ರವೇಶಿಸಿದೆವು. ಸುಮಾರು ಆರು ತಾಸುಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ನಾವು ಯಶಸ್ವಿಯಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲ್ಲಿ ಯಶಸ್ವಿಯಾದೆವು. ಎಂದು ಆಕೆ ತನ್ನ ರೋಮಾಂಚಕ ಅನುಭವವನ್ನು ಹಂಚಿಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ