ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ: ಪಕ್ಷಕ್ಕೆ ದಿಗ್ವಿಜಯ ಸಿಂಗ್ ಮನವಿ

Update: 2017-08-07 03:50 GMT

ಹೊಸದಿಲ್ಲಿ, ಆ.7: ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಬೇಗುದಿ ಹೆಚ್ಚುತ್ತಿದ್ದು, ಅಧಿಕಾರ ಮೊಟಕುಗೊಳಿಸಿದಕ್ಕೆ ಪ್ರತಿಭಟನಾರ್ಥವಾಗಿ, ತನ್ನನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಹಿರಿಯ ಮುಖಂಡ ಮತ್ತು ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

ಆಧ್ಯಾತ್ಮಿಕ, ವೈಯಕ್ತಿಕ ಹಾಗೂ ರಾಜಕೀಯರಹಿತ ಆರು ತಿಂಗಳ ನರ್ಮದಾ ಯಾತ್ರೆಯನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ದಿಗ್ವಿಜಯ ಸಿಂಗ್ ಈ ಮನವಿ ಮಾಡಿದ್ದಾರೆ. ಪಕ್ಷದ ಆಂಧ್ರ ಪ್ರದೇಶ ಘಟಕದ ಉಸ್ತುವಾರಿ ಹೊಣೆ ಹೊತ್ತಿದ್ದ ಸಿಂಗ್ ಅವರು, 3,300 ಕಿಲೋ ಮೀಟರ್ ಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ, 'ನರ್ಮದಾ ಪರಿಕ್ರಮ' ಹೆಸರಿನ ಈ ಯಾತ್ರೆ ಮಧ್ಯ ಪ್ರದೇಶ ಹಾಗೂ ಗುಜರಾತ್‌ನ ಎಲ್ಲ ಭಾಗಗಳನ್ನು ಒಳಗೊಳ್ಳಲಿದೆ.

ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದ ದಿಗ್ವಿಜಯ ಸಿಂಗ್(70)ಈ ಮೊದಲು ಗೋವಾ, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಪಕ್ಷದ ಜವಾಬ್ದಾರಿಯನ್ನೂ ಹೊಂದಿದ್ದರು. ಗೋವಾದಲ್ಲಿ ಚುನಾವಣೋತ್ತರ ಪರಿಸ್ಥಿತಿ ನಿಭಾಯಿಸಲು ವಿಫಲವಾದದ್ದು ಹಾಗೂ ಪಕ್ಷವನ್ನು ತಪ್ಪುದಾರಿಗೆ ಎಳೆದ ಆರೋಪ ಇವರ ಮೇಲಿತ್ತು. ಗೋವಾದಲ್ಲಿ ಅತಿದೊಡ್ಡ ಪಕ್ಷವಾಗಿಯೂ, ಸರ್ಕಾರ ರಚಿಸುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು.

ಅಂತೆಯೇ ಅನಾರೋಗ್ಯ ಕಾರಣ ನೀಡಿ, ಪಕ್ಷದ ಮತ್ತೊಬ್ಬ ಹಿರಿಯ ನಾಯಕಿ ಅಂಬಿಕಾ ಸೋನಿ ಕೂಡಾ ಜವಬ್ದಾರಿಯಿಂದ ಮುಕ್ತಗೊಳಿಸುವಂತೆ ಕೋರಿದ್ದಾರೆ. ಜಮ್ಮು ಕಾಶ್ಮೀರ, ಉತ್ತರಾಖಂಡ ಹಾಗೂ ಹಿಮಾಚಲಪ್ರದೇಶದ ಉಸ್ತುವಾರಿಯನ್ನು ಇವರು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News