ದೈತ್ಯಾಕಾರ ತಾಳುತ್ತಿರುವ ನಿರುದ್ಯೋಗ ಸಮಸ್ಯೆ

Update: 2017-08-07 18:11 GMT

ಭಾಗ-1

2012ರಲ್ಲಿ 4,47,00,000 ಇದ್ದ ಉದ್ಯೋಗಾಕಾಂಕ್ಷಿಗಳ ಸಂಖ್ಯೆ 2014ರಲ್ಲಿ 4,82,61,100ಕ್ಕೆ ಏರಿದೆ. ಮೋದಿ ಸರಕಾರ ಲೋಕಸಭೆಗೆ ನೀಡಿರುವ ಅಂಕಿಅಂಶಗಳ ಪ್ರಕಾರ 2014ರಲ್ಲಿ ಕೇವಲ 3,38,500 ಮಂದಿಗೆ ಉದ್ಯೋಗ ದೊರಕಿದೆ (ಶೇ. 0.7). ಇನ್ನು 2015ರ ಸಾಲಿನಲ್ಲಿ 4,48,52,500 ನೋಂದಾಯಿತ ಉದ್ಯೋಗಾಕಾಂಕ್ಷಿಗಳ ಪೈಕಿ ಕೇವಲ ಶೇ.0.57 ಮಂದಿಗೆ, ಅಂದರೆ 2,53,900 ಮಂದಿಗೆ ಕೆಲಸ ಸಿಕ್ಕಿದೆ. ಅರ್ಥಾತ್ ಪ್ರತೀ 500 ನೋಂದಾಯಿತ ಉದ್ಯೋಗಾಕಾಂಕ್ಷಿಗಳಲ್ಲಿ ಕೆಲಸ ಸಿಕ್ಕಿರುವುದು ಕೇವಲ 3 ಮಂದಿಗೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ‘ಸಬ್ ಕಾ ಸಾಥ್...’, ‘ಮೇಕ್ ಇನ್ ಇಂಡಿಯಾ’ ಇತ್ಯಾದಿ ಘೋಷಣೆಗಳ ಸತ್ಯಾಸತ್ಯತೆಯನ್ನು ಕಂಡಿರುವ ಜನರ ಮನಸ್ಸಿನೊಳಗೆ ನರೇಂದ್ರ ಮೋದಿಯವರ ಚುನಾವಣಾ ಕಾಲದ ಘೋಷಣೆಗಳೆಲ್ಲವೂ ಬರೀ ಪೊಳ್ಳು ಭರವಸೆಗಳೆಂಬ ಸತ್ಯ ನಿಧಾನಕ್ಕೆ ಇಳಿಯತೊಡಗಿದೆ. ಆದರೂ ಪಟ್ಟುಬಿಡದ ಘೋಷಣೆಗಳ ಸರದಾರ ಇದೀಗ ಜಾತಿವಾದ, ಕೋಮುವಾದ, ಬಡತನ, ಭ್ರಷ್ಟಾಚಾರಗಳ ವಿರುದ್ಧ ‘ಕ್ವಿಟ್ ಇಂಡಿಯ’ ಎಂಬ ಹೊಸ ಘೋಷಣೆಯೊಂದನ್ನು ಹೊರಡಿಸಿರುವುದಾಗಿ ವರದಿಯಾಗಿದೆ. ಜಾತಿವಾದ, ಕೋಮುವಾದಗಳ ಗಂಗೋತ್ರಿಯೆ ಆಗಿರುವ ಸಂಘ ಪರಿವಾರದ ಕಟ್ಟಾಳು ಮೋದಿಯವರ ಈ ಆಷಾಢಭೂತಿತನದ ಘೋಷಣೆಯನ್ನು ಕೇಳಿ ನಗಬೇಕೊ ಅಳಬೇಕೊ ಗೊತ್ತಾಗುತ್ತಿಲ್ಲ! ಏಕೆಂದರೆ ಯಾವತ್ತಿನಿಂದ ಕೇಂದ್ರದಲ್ಲಿ ತಮ್ಮವರ ಆಳ್ವಿಕೆ ಪ್ರಾರಂಭವಾಯಿತೊ ಆವತ್ತಿನಿಂದಲೆ ಆರೆಸ್ಸೆಸ್ ತನ್ನ ನೂರಾರು ಅಂಗಸಂಸ್ಥೆಗಳ ಮೂಲಕ ಜಾತಿವಾದಿ, ಕೋಮುವಾದಿ ಕೃತ್ಯಗಳ ಸಂಖ್ಯೆ, ತೀವ್ರತೆ ಮತ್ತು ವ್ಯಾಪ್ತಿಗಳನ್ನು ಹೆಚ್ಚಿಸಿರುವ ವಿದ್ಯಮಾನ ಪ್ರಾರಂಭವಾಗಿದೆ. ಇನ್ನು ಬಡಜನರನ್ನು ತೀರ ಕಡೆಗಣಿಸುತ್ತಿರುವ ಸಂದರ್ಭದಲ್ಲಿ ಬಡತನ ನಿರ್ಮೂಲನದ ಬಗ್ಗೆ ಮಾತಾಡಲು ನಾಲಿಗೆಯಾದರೂ ಹೇಗೆ ಬರುತ್ತದೊ ತಿಳಿಯದು. ಭ್ರಷ್ಟಾಚಾರದ ವಿಷಯಕ್ಕೆ ಬಂದರೆ ಅಂಬಾನಿ, ಅದಾನಿ ಮೊದಲಾದ ಕಾರ್ಪೊರೇಟ್ ಕುಳಗಳಿಗೆ ಸಕಲ ಅನುಕೂಲಗಳನ್ನು ಕಲ್ಪಿಸುವುದು, ಜಾಹೀರಾತುಗಳಲ್ಲಿ ಭಾವಚಿತ್ರ ಹಾಕಿಸುವುದು ಭ್ರಷ್ಟ ಆಚಾರವಲ್ಲವೇ? ಸಂಘಪರಿವಾರಿಗರೆಲ್ಲಾ ಸಚ್ಚಾರಿತ್ರ್ಯವಂತರೆಂದು ನಂಬುವವರು ಅಮಿತ್ ಶಾರ ಸ್ಥಿರ, ಚರ ಸೊತ್ತುಗಳ ಮೌಲ್ಯ ಕಳೆದ ಐದು ವರ್ಷಗಳಲ್ಲಿ ರೂ. 8.54 ಕೋಟಿಯಿಂದ ರೂ. 34.31 ಕೋಟಿಗೆ ಏರಿದುದು ಹೇಗೆಂದು ಕೇಳಬೇಕು. ಬಿಜೆಪಿ ಆಡಳಿತದ ಮಧ್ಯ ಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದನ್ನು ನೋಡಬೇಕು. ಹೀಗಿರುವ ಮೋದಿ ಸರಕಾರದ ಅವ್ಯವಹಾರಗಳ ಪಟ್ಟಿಗೆ ಇತ್ತೀಚಿನ ಸೇರ್ಪಡೆಯೆಂದರೆ ನಿರುದ್ಯೋಗ ನಿವಾರಣೆಗೆನ್ನಲಾದ ‘ಸ್ಕಿಲ್ಸ್ ಇಂಡಿಯಾ’ ಕಾರ್ಯಕ್ರಮ.

ನಿರುದ್ಯೋಗ

ಮೋದಿ ಕೊಟ್ಟಿದ್ದ ಭರವಸೆಯಂತೆ ಶೂನ್ಯವಾಗಬೇಕಿದ್ದ ನಿರುದ್ಯೋಗಿಗಳ ಸಂಖ್ಯೆ ಗಗನಕ್ಕೇರುತ್ತಿರುವುದು ಇವತ್ತಿನ ಕಟುವಾಸ್ತವ. ನೋಟು ರದ್ದತಿಯಿಂದ ನಿಶ್ಚೇಷ್ಠಿತವಾದ ಸಣ್ಣಪುಟ್ಟ ಉದ್ದಿಮೆಗಳು, ನಿರ್ಮಾಣ ಕ್ಷೇತ್ರ, ಕೃಷಿ ವಲಯ ಮುಂತಾದವುಗಳಿಗೆ ಈಗ ಜಿಎಸ್‌ಟಿ ಕೊಟ್ಟಿರುವ ಮತ್ತೊಂದು ಆಘಾತದಿಂದ ಚೇತರಿಸಿಕೊಳ್ಳಲು ಅದೆಷ್ಟು ಸಮಯ ಬೇಕೊ ಗೊತ್ತಿಲ್ಲ. ಒಂದೆಡೆ ಇರುವ ಉದ್ಯೋಗಗಳಲ್ಲಿ ಕಡಿತದ ಜೊತೆ ಸಾಕಷ್ಟು ಹೊಸ ಉದ್ಯೋಗಗಳೂ ಸೃಷ್ಟಿಯಾಗದಿರುವುದರಿಂದ ನಿರುದ್ಯೋಗ ಬೆಳೆಯುತ್ತಿದ್ದರೆ ಇನ್ನೊಂದೆಡೆ ಉದ್ಯೋಗಾಕಾಂಕ್ಷಿಗಳಿಗೆ ಕೌಶಲ ತರಬೇತಿಗಳನ್ನು ನೀಡುವಲ್ಲಿಯೂ ದೊಡ್ಡ ವೈಫಲ್ಯ ಕಂಡುಬರುತ್ತಿದೆ. ಭಾಷಣಗಳಿಗಷ್ಟೆ ಸೀಮಿತವಾಗುಳಿದ ಮೇಕ್ ಇನ್ ಇಂಡಿಯಾಗೆ ಪೂರಕ ಎನ್ನಲಾದ ‘ಸ್ಕಿಲ್ಸ್ ಇಂಡಿಯಾ’ ಎಂಬ ಮತ್ತೊಂದು ಕಾರ್ಯಕ್ರಮದಿಂದಲೂ ನಿರುದ್ಯೋಗ ನಿವಾರಣೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಮೊದಮೊದಲು ಇದನ್ನೆಲ್ಲ ವಿರೋಧಿಗಳ ಅಪಪ್ರಚಾರ ಎಂದು ತಳ್ಳಿಹಾಕಿದ ಮೋದಿ ಸರಕಾರ ಈಗ ದೇಶಾದ್ಯಂತ ಹೊಸ ಉದ್ಯೋಗಗಳ ಸೃಷ್ಟಿ ಕಡಿಮೆಯಾಗಿರುವುದನ್ನು ಒಪ್ಪಿಕೊಂಡಿದೆ. ಕೇಂದ್ರ ಕಾರ್ಮಿಕ ಸಚಿವಾಲಯ ಪ್ರಕಟಿಸಿರುವ ನಿರುದ್ಯೋಗದ ಅಂಕಿಅಂಶಗಳು ಇಂದಿನ ಅಸಲಿ ಪರಿಸ್ಥಿತಿಯನ್ನು ನಮ್ಮ ಮುಂದೆ ತೆರೆದಿಡುತ್ತವೆ. ವಿಷಯ ಏನೆಂದರೆ 2012ರಲ್ಲಿ 4,47,00,000 ಇದ್ದ ಉದ್ಯೋಗಾಕಾಂಕ್ಷಿಗಳ ಸಂಖ್ಯೆ 2014ರಲ್ಲಿ 4,82,61,100ಕ್ಕೆ ಏರಿದೆ. ಮೋದಿ ಸರಕಾರ ಲೋಕಸಭೆಗೆ ನೀಡಿರುವ ಅಂಕಿಅಂಶಗಳ ಪ್ರಕಾರ 2014ರಲ್ಲಿ ಕೇವಲ 3,38,500 ಮಂದಿಗೆ ಉದ್ಯೋಗ ದೊರಕಿದೆ (ಶೇ. 0.7). ಇನ್ನು 2015ರ ಸಾಲಿನಲ್ಲಿ 4,48,52,500 ನೋಂದಾಯಿತ ಉದ್ಯೋಗಾಕಾಂಕ್ಷಿಗಳ ಪೈಕಿ ಕೇವಲ ಶೇ.0.57 ಮಂದಿಗೆ, ಅಂದರೆ 2,53,900 ಮಂದಿಗೆ ಕೆಲಸ ಸಿಕ್ಕಿದೆ. ಅರ್ಥಾತ್ ಪ್ರತೀ 500 ನೋಂದಾಯಿತ ಉದ್ಯೋಗಾಕಾಂಕ್ಷಿಗಳಲ್ಲಿ ಕೆಲಸ ಸಿಕ್ಕಿರುವುದು ಕೇವಲ 3 ಮಂದಿಗೆ. ರಾಷ್ಟ್ರೀಯ ವೃತ್ತಿ ಸೇವೆ ಜಾಲತಾಣದ ಪ್ರಕಾರ 2017ರ ಜೂನ್ 30 ತನಕ ನೋಂದಣಿಯಾಗಿರುವ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಈಗಾಗಲೆ 3.89 ಕೋಟಿಯಷ್ಟಿದೆ. 2016ರ ಇಂಡಿಯಾ ಎಕ್ಸ್‌ಕ್ಲೂಷನ್ ವರದಿ (India Exclusion Report) ಹೇಳುವಂತೆ ನಿರ್ದಿಷ್ಟವಾಗಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ 1.2 ಕೋಟಿ ಜನ ಉದ್ಯೋಗ ಮಾರುಕಟ್ಟೆಗಳಿಗೆ ಪ್ರವೇಶಿಸಿದ್ದಾರೆ. ಆದರೆೆ ಸೃಷ್ಟಿಯಾಗಿರುವ ಹೊಸ ಉದ್ಯೋಗಗಳೆಷ್ಟು? ಕೇವಲ 1.35 ಲಕ್ಷ! ಅರಗಿಸಿಕೊಳ್ಳಲು ಕಷ್ಟವಾದರೂ ಈ ಕಟುಸತ್ಯವನ್ನು ಮೋದಿಭಕ್ತರು ಒಪ್ಪಿಕೊಳ್ಳಲೇಬೇಕು.

ಸ್ಕಿಲ್ಸ್ ಇಂಡಿಯಾ

ಮೋದಿ ಸರಕಾರ ಅಬ್ಬರದ ಪ್ರಚಾರದೊಂದಿಗೆ ಪ್ರಾರಂಭಿಸಿರುವ ಹಲವಾರು ಕಾರ್ಯಕ್ರಮಗಳಲ್ಲಿ ಸ್ಕಿಲ್ಸ್ ಇಂಡಿಯಾ ಅಥವಾ ರಾಷ್ಟ್ರೀಯ ಕೌಶಲ ವಿಕಾಸ ಕಾರ್ಯಕ್ರಮವೂ ಒಂದು. ಇತ್ತೀಚೆಗೆ ತಿಳಿದುಬಂದಿರುವಂತೆ ಮಿಕ್ಕೆಲ್ಲವುಗಳಂತೆ ಇದೂ ಒಂದು ಫ್ಲಾಪ್ ಷೋ ಆಗಿದ್ದು, ಅದಕ್ಕಾಗಿ ವ್ಯಯಿಸಿರುವ ಕೋಟಿ ಕೋಟಿ ದುಡ್ಡು ಯಾರ್ಯಾರದೊ ಪಾಲಾಗಿದೆ. ವಲಯ ಕೌಶಲ ಮಂಡಳಿಗಳ ಕಾರ್ಯನಿರ್ವಹಣೆಯ ಪುನರ್‌ವ್ಯವಸ್ಥೆ ಮತ್ತು ಪ್ರಶಸ್ತತೆಗಾಗಿರುವ ಸಮಿತಿ (Committee for Rationalisation and Optimisation of the Functioning of the Sector Skill Councils) ಇದೇ ಎಪ್ರಿಲ್ 25ರಂದು ನೀಡಿರುವ ವರದಿ ಮೋದಿ ಸರಕಾರದ ಸ್ಕಿಲ್ಸ್ ಇಂಡಿಯಾ ಕಾರ್ಯಕ್ರಮದ ಒಳಗುಟ್ಟನ್ನೆಲ್ಲಾ ಬಯಲುಮಾಡಿದೆ. 40 ಕೋಟಿ ಮಂದಿಗೆ ಕೌಶಲ ತರಬೇತಿ ನೀಡುವ ಗುರಿಯನ್ನು ಇಟ್ಟುಕೊಂಡು 2015ರಲ್ಲಿ ಜಾರಿಗೊಳಿಸಲಾದ ಈ ಯೋಜನೆಗೆ ಹಾಕಿಕೊಂಡ ಗುರಿ ವಿಪರೀತವಾಯಿತು, ಅದೊಂದು ಅಸಾಧ್ಯವಾದ ಗುರಿ, ಅಷ್ಟೊಂದು ದೊಡ್ಡ ಸಂಖ್ಯೆ ಅಗತ್ಯವಿರಲಿಲ್ಲ ಎಂದು ಸಮಿತಿ ಟೀಕಿಸಿದೆ.

ಕೌಶಲ ತರಬೇತಿಯ ಹಿನ್ನೆಲೆ

2026ಕ್ಕಾಗುವಾಗ ದೇಶದ ಜನಸಂಖ್ಯೆಯ ಶೇ. 64ರಷ್ಟು ಮಂದಿ 15ರಿಂದ 59ರ ವಯಸ್ಸಿನವರಾಗಿರುವ ಸಂಭವ ಇದೆಯೆಂದು ಅಂದಾಜಿಸಲಾಗಿದೆ (Ernst and Young ಸಮೀಕ್ಷೆ). ಅದೇ ವೇಳೆ ವಿಶ್ವದಾದ್ಯಂತ 5.65 ಕೋಟಿ ಕುಶಲ ಕಾರ್ಮಿಕರ ಅಭಾವ ತಲೆದೋರಲಿದೆ ಎನ್ನಲಾಗಿದೆ. ವಿಶ್ವದ ಪರಿಸ್ಥಿತಿ ಹೀಗಿದ್ದರೆ 2026ರಲ್ಲಿ ಭಾರತದಲ್ಲಿ 4.7 ಕೋಟಿ ಹೆಚ್ಚುವರಿ ಕುಶಲ ಕಾರ್ಮಿಕರು ಲಭ್ಯವಾಗಲಿರುವರೆಂದು ಸರಕಾರ ಹೇಳುತ್ತಿದೆ. ಆದರೆ ನೆಲದ ವಾಸ್ತವ ಬೇರೆಯೆ ಇದೆ. ಪ್ರಸಕ್ತ ಭಾರತದ ಯುವಜನರಲ್ಲಿ ಶೇ. 30ರಷ್ಟು ಮಂದಿ ವಿದ್ಯಾಭ್ಯಾಸ ಮಾಡುತ್ತಿಲ್ಲ ಅಥವಾ ತರಬೇತಿ ಪಡೆಯುತ್ತಿಲ್ಲ ಅಥವಾ ನಿರುದ್ಯೋಗಿಗಳಾಗಿದ್ದಾರೆ ಎನ್ನುತ್ತದೆ ಜುಲೈ7ರ ಬ್ಲೂಮ್‌ಬರ್ಗ್ ವರದಿ. ಇಂದು ದಕ್ಷಿಣ ಕೊರಿಯಾದ ಒಟ್ಟು ಕಾರ್ಮಿಕರಲ್ಲಿ ವಿದ್ಯುಕ್ತ ತರಬೇತಿ ಪಡೆದವರ ಸಂಖ್ಯೆ ಶೇ. 98ರಷ್ಟಿದ್ದರೆ ಜಪಾನಿನಲ್ಲಿ ಶೇ. 80, ಜರ್ಮನಿಯಲ್ಲಿ ಶೇ. 75, ಬ್ರಿಟನ್‌ನಲ್ಲಿ ಶೇ. 68, ಅಮೆರಿಕದಲ್ಲಿ ಶೇ. 52 ಮತ್ತು ಚೀನಾದಲ್ಲಿ ಶೇ. 24ರಷ್ಟಿದೆ. ಅದೇ ಭಾರತದಲ್ಲಿ? ಕೇವಲ ಶೇ. 4.69!

ಭಾರತದ ಆರ್ಥಿಕತೆಗೆ ಅತ್ಯಧಿಕ ಕೊಡುಗೆ ನೀಡುವ ಸೇವಾ ವಲಯಕ್ಕೆ ಅಧಿಕ ಕೌಶಲದ ಕಾರ್ಮಿಕರ ಅಗತ್ಯವಿದೆ. ಉತ್ಪಾದನಾ ವಲಯಕ್ಕೂ ಕುಶಲ ಕಾರ್ಮಿಕರು ಬೇಕು. ಭಾರತದಲ್ಲಿ ಕನಿಷ್ಠ ಶೇ. 69 ಉದ್ಯೋಗಗಳು ಸ್ವಯಂಚಾಲಿತ ಆಗುವ ಸಾಧ್ಯತೆಗಳಿವೆ ಎಂದು ಊಹಿಸಲಾಗಿದೆ. ಸವಾಲನ್ನು ಗ್ರಹಿಸಿದ ಯುಪಿಎ ಸರಕಾರ 2022ರ ಒಳಗಾಗಿ 50 ಕೋಟಿ ಜನರಿಗೆ ತರಬೇತಿ ನೀಡುವ ಗುರಿಯನ್ನು ಹಾಕಿಕೊಂಡು 2009ರಲ್ಲಿ ‘ಕೌಶಲ ಅಭಿವೃದ್ಧಿಗೆ ರಾಷ್ಟ್ರೀಯ ನೀತಿ’ಯನ್ನು ಜಾರಿಗೊಳಿಸಿತ್ತು. ಆದರೆ ಈ 50 ಕೋಟಿಯ ಗುರಿಯನ್ನು ಯಾವುದೇ ಆಧಾರವಿಲ್ಲದೆ ನಿಗದಿಪಡಿಸಲಾಗಿತ್ತು ಎಂದು ಸಮಿತಿ ಹೇಳಿದೆ.

2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ 2015ರಲ್ಲಿ ಅದೇ ಹಳೆ ಮದ್ಯವನ್ನು ‘ಸ್ಕಿಲ್ಸ್ ಇಂಡಿಯಾ’ ಎಂಬ ಹೊಸ ಬಾಟಲಿನಲ್ಲಿ ತುಂಬಿ ಭಾರೀ ಬಾಜಾಬಜಂತ್ರಿಯೊಂದಿಗೆ ಜನರ ಮುಂದೆ ಪ್ರಸ್ತುತಪಡಿಸಿತು. ‘ವಿಶ್ವ ಯುವಜನ ಕೌಶಲ ದಿನ’ವಾದ ಜುಲೈ 15, 2015ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೋದಿ, ‘‘2022ರ ಒಳಗಾಗಿ ಹೊಸಬರು ಮತ್ತು ಮೇಲ್ಮಟ್ಟದ/ ಮರುತರಬೇತಿಯ ಅಗತ್ಯವಿರುವವರಿಗೆ ತರಬೇತಿ ನೀಡಿ ಒಟ್ಟು 40.2 ಕೋಟಿ ಕುಶಲ ಕಾರ್ಮಿಕರನ್ನು ಒದಗಿಸುವುದು ಯೋಜನೆಯ ಗುರಿ’’ ಎಂದರು. ಆದರೆ ಕೌಶಲ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ತನ್ನದೇ ಆದ ಬೇರೊಂದು ಗುರಿಯನ್ನು ಹಾಕಿಕೊಂಡಿದ್ದು ಅದರ ಪ್ರಕಾರ ಕೌಶಲ ತರಬೇತಿ ನೀಡಬೇಕಾಗಿರುವುದು ಸುಮಾರು 12.7 ಕೋಟಿ ಜನರಿಗೆ ಅಂತೆ! ಅಂದರೆ ಸರಕಾರದೊಳಗೇ ಗೊಂದಲಗಳಿರುವಂತಿದೆ.

Writer - ಸುರೇಶ ಭಟ್ ಬಾಕ್ರಬೈಲು

contributor

Editor - ಸುರೇಶ ಭಟ್ ಬಾಕ್ರಬೈಲು

contributor

Similar News

ಜಗದಗಲ
ಜಗ ದಗಲ