ಹೋಟೆಲ್‌ಗಳಲ್ಲಿ ಅರ್ಧ ಬಳಸಿದ ಸೋಪ್‌ಗಳೇನಾಗುತ್ತವೆ ಗೊತ್ತೇ.....?

Update: 2017-08-08 10:01 GMT

ನಾವು ಎಲ್ಲಿಯಾದರೂ ಪ್ರವಾಸಕ್ಕೆ ತೆರಳಿ ಮರಳುವಾಗ ಹೆಚ್ಚಿನವರು ಒಂದು ತಪ್ಪಿನ ಕೆಲಸ ಮಾಡುತ್ತಾರೆ. ಅದು ನಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ನೀಡುವ, ನಾವು ಬಳಸದಿದ್ದ ಪುಟ್ಟ ಸೋಪ್ ಮತ್ತು ಇತರ ಸಣ್ಣಪುಟ್ಟ ಟಾಯ್ಲೆಟರಿಗಳನ್ನು ‘ಕದ್ದು’ ತರುತ್ತೇವೆ. ಆದರೆ ನೀವು ಸೋಪ್ ಮತ್ತು ಇತರ ಸಾಮಗ್ರಿಗಳನ್ನು ಅರ್ಧ ಬಳಸಿ ಉಳಿದಿದ್ದನ್ನು ಅಲ್ಲಿಯೇ ಬಿಟ್ಟು ಬರುವವರಾದರೆ ನೀವು ಅಲ್ಲಿಂದ ತೆರಳಿದ ಬಳಿಕ ಅವುಗಳೇನಾಗುತ್ತವೆಯೆಂಂದು ಎಂದಾದರೂ ಊಹಿಸಿದ್ದೀರಾ? ಅದನ್ನು ತಿಳಿದರೆ ನಿಮಗೆ ಆಶ್ಚರ್ಯವಾದೀತು.

ಈ ಉಪಕ್ರಮವೀಗ ಅಮೆರಿಕದಲ್ಲಿ ಆರಂಭಗೊಂಡಿದೆ. ಇದೊಂದು ಉಪಯೋಗ ಕಾರಿ ಉಪಕ್ರಮವಾಗಿರುವುದರಿಂದ ಇದನ್ನು ವಿಶ್ವಾದ್ಯಂತ ಅನುಸರಿಸಬೇಕಾದ ಅಗತ್ಯವಿದೆ. ಈ ಉಪಕ್ರಮವೇನೆಂದು ತಿಳಿಯೋಣ ಬನ್ನಿ.

ಅಮೆರಿಕವೊಂದರಲ್ಲೇ 4.6 ಮಿಲಿಯನ್‌ಗೂ ಅಧಿಕ ಹೋಟೆಲ್ ಕೊಠಡಿಗಳಿವೆ. ಇವುಗಳಲ್ಲಿ ತಂಗುವ ಹೆಚ್ಚಿನವರು ತಮ್ಮ ವಾಸ್ತವ್ಯದ ಅವಧಿಯಲ್ಲಿ ಇಂತಹ ಸೋಪ್ ಅಥವಾ ಇನ್ನಿತರ ವಸ್ತುಗಳನ್ನು ಪೂರ್ತಿಯಾಗಿ ಬಳಸುವುದಿಲ್ಲ. ಹೋಟೆಲ್‌ನವರು ನೀಡುವ ಶಾಂಪೂ ಮತ್ತು ಕಂಡಿಷನರ್ ಬಾಟ್ಲಿಗಳೂ ಅರ್ಧಕ್ಕರ್ಧ ಹಾಗೆಯೇ ಉಳಿದಿ ರುತ್ತವೆ.

  ಇವೆಲ್ಲ ವ್ಯರ್ಥವಾಗುತ್ತಿರುವುದನ್ನು ಮನಗಂಡ ‘ಕ್ಲೀನ್ ದಿ ವರ್ಲ್ಡ್’ ಎಂಬ ಸಂಸ್ಥೆಯು ‘ಗ್ಲೋಬಲ್ ಸೋಪ್ ಪ್ರಾಜೆಕ್ಟ್ಸ್’ ಜೊತೆ ಕೈಜೋಡಿಸಿ ಅರ್ಧ ಬಳಸಿದ ಸೋಪ್‌ಗಳನ್ನು ಮರು ಸಂಸ್ಕರಣೆಗೊಳಪಡಿಸಿ ಹೊಸ ಸೋಪ್‌ಗಳನ್ನು ತಯಾರಿಸಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಗತ್ಯವುಳ್ಳವರಿಗೆ ಅವುಗಳನ್ನು ಉಚಿತವಾಗಿ ಒದಗಿಸುತ್ತಿದೆ. ತನ್ಮೂಲಕ ತ್ಯಾಜ್ಯದ ಪ್ರಮಾಣವನ್ನು ತಗ್ಗಿಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ.

 ಜನರಿಗೆ ಸುರಕ್ಷಿತ ನೀರು, ನೈರ್ಮಲ್ಯ ಮತ್ತು ಆರೋಗ್ಯಪೂರ್ಣ ವಾತಾವರಣದ ಕೊರತೆಯಿರುವ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ತರುವ ನಿಟ್ಟಿನಲ್ಲಿ ಇದೊಂದು ಅತ್ಯಂತ ಅಗತ್ಯವಾದ ಅಭಿಯಾನವಾಗಿದೆ. ಶುದ್ಧ ನೀರಿನ ಕೊರತೆ ಮತ್ತು ಅನೈರ್ಮಲ್ಯ ನ್ಯುಮೋನಿಯಾ ಮತ್ತು ಡಯರಿಯಾದಂತಹ ರೋಗಗಳಿಗೆ ಕಾರಣವಾಗುತ್ತವೆ. ಹೀಗಾಗಿ ಜನರಿಗೆ ಸೋಪ್ ದೊರಕಿದರೆ ಕನಿಷ್ಠ ಪಕ್ಷ ದೇಹದ ನೈರ್ಮಲ್ಯ ಕಾಪಾಡಿಕೊಳ್ಳಲಾದರೂ ಸಾಧ್ಯವಾಗುತ್ತದೆ.

ಅರ್ಧ ಬಳಕೆಯಾದ ಟಾಯ್ಲೆಟ್ ಸಾಮಗ್ರಿಗಳ ಮರು ಸಂಸ್ಕರಣೆಯ ವೆಚ್ಚ ಅಮೆರಿಕದಲ್ಲಿ ಪ್ರತಿ ಕೊಠಡಿಗೆ ತಿಂಗಳಿಗೆ ಕೇವಲ 75 ಸೆಂಟ್‌ಗಳಾಗುತ್ತವೆ. ಅಲ್ಲಿ ಉಳಿದ ಸೋಪ್, ಬಾಡಿ ವಾಷ್, ಶಾಂಪೂ ಮತ್ತು ಕಂಡಿಷನರ್‌ಗಳನ್ನು ಮರು ಸಂಸ್ಕರಣೆಗೊಳ ಪಡಿಸಿದ ನಂತರ ವಿಶ್ವ ನಾನಾ ಭಾಗಗಳಿಗೆ ಕಳುಹಿಸುವ ಮುನ್ನ ಅವುಗಳ ಶುದ್ಧತೆಯನ್ನು ಪರೀಕ್ಷಿಸಲಾಗುತ್ತದೆ.

ಕೆಲವು ಹೋಟೆಲ್‌ಗಳು ತಮ್ಮಲ್ಲಿಯ ಇಂತಹ ಅರ್ಧ ಬಳಕೆಯಾದ ಸಾಮಗ್ರಿಗಳನ್ನು ಸ್ಥಳೀಯ ನಿರ್ವಸಿತರು ಅಥವಾ ಮಹಿಳೆಯರ ಆಶ್ರಮಗಳು ಅಥವಾ ಸಮುದಾಯ ಆಧಾರಿತ ನೆಟ್‌ವರ್ಕ್‌ಗಳಿಗೆ ನೀಡುತ್ತವೆ. ಇತರ ಕೆಲವು ಹೋಟೆಲ್‌ಗಳು ಸ್ಥಳೀಯ ಕ್ಲಿನಿಕ್‌ಗಳು ಮತ್ತು ಅನಾಥಾಶ್ರಮಗಳಿಗೆ ಒದಗಿಸುತ್ತವೆ.

ಈಗ ಹೇಳಿ ಇಂತಹುದೊಂದು ಉದಾತ್ತ ಕಾರ್ಯ ನಮ್ಮಲ್ಲಿಯೂ ನಡೆಯಬೇಕಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News