ಶತಮಾನದ ಅತೀ ದೊಡ್ಡ ಹಗರಣ: ಕಾಂಗ್ರೆಸ್

Update: 2017-08-08 17:52 GMT

 ಹೊಸದಿಲ್ಲಿ, ಆ.8: ಭಾರತೀಯ ರಿಸರ್ವ್ ಬ್ಯಾಂಕ್ ಎರಡು ರೀತಿಯ 500 ರೂಪಾಯಿ ನೋಟುಗಳನ್ನು ಮುದ್ರಿಸಿರುವುದರ ಬಗ್ಗೆ ವಿರೋಧ ಪಕ್ಷ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮಂಗಳವಾರ ಕೋಲಾಹಲ ಉಂಟಾಯಿತು. ಹಾಗೂ ರಾಜ್ಯ ಸಭೆಯನ್ನು ಕೆಲವು ಕಾಲ ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ಎರಡೂ 500 ರೂಪಾಯಿಗಳ ಚಿತ್ರವನ್ನು ಪ್ರದರ್ಶಿಸಿ, ಇದರ ಗಾತ್ರ ಹಾಗೂ ವಿನ್ಯಾಸದಲ್ಲಿ ಭಿನ್ನತೆ ಇದೆ ಎಂದು ಹೇಳಿದ ಕಾಂಗ್ರೆಸ್, ಇದು ದೇಶದ ಅತೀ ದೊಡ್ಡ ಹಗರಣ ಎಂದು ಹೇಳಿದೆ.

  ಕೇಂದ್ರ ಸರಕಾರ ನೋಟು ನಿಷೇಧ ಯಾಕೆ ಮಾಡಿತು ಎಂದು ಇಂದು ನಾವು ಪತ್ತೆ ಮಾಡಿದೆವು. ಆರ್‌ಬಿಐ ಎರಡು ಮಾದರಿಯ ನೋಟುಗಳನ್ನು ಮುದ್ರಿಸಿದೆ. ಇದು ವಿವಿಧ ಗಾತ್ರ ಹಾಗೂ ವಿನ್ಯಾಸದಲ್ಲಿವೆ. ಇದು ಹೇಗೆ ಸಾಧ್ಯ ? ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಎರಡು ನೋಟುಗಳ ಜೊತೆ ಭಿತ್ತಿ ಪತ್ರವನ್ನು ಪ್ರದರ್ಶಿಸುತ್ತಾ ಹೇಳಿದರು.

ಪಕ್ಷಕ್ಕೆ ಒಂದು, ಸರಕಾರಕ್ಕೆ ಒಂದು ಎಂದು ನಾವು ಎಂದೂ ಎರಡು ಮಾದರಿಯ ನೋಟುಗಳನ್ನು ಮುದ್ರಿಸಿಲ್ಲ. ಈಗ ಎರಡು ಮಾದರಿಯ 500 ರೂ. ಹಾಗೂ 2000 ರೂ.ನ ಎರಡು ಮಾದರಿಯ ನೋಟುಗಳಿವೆ. ಇದರಿಂದಾಗಿ ಬಿಜೆಪಿಯಲ್ಲಿ ಹೇರಳ ಹಣವಿದೆ ಎಂದು ಗುಲಾಮ್ ನಬಿ ಆಝಾದ್ ಹೇಳಿದರು.

ಕಾಂಗ್ರೆಸ್ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದೆ ಹಾಗೂ ಸದನದಲ್ಲಿ ನಿಷ್ಪ್ರಯೋಜಕ ವಿಷಯಗಳನ್ನು ಎತ್ತುತ್ತಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಪಿಸಿದರು.

 ಇಲ್ಲಿ ಯಾವುದೇ ಕಾಗದ ಪ್ರದರ್ಶಿಸುವುದಕ್ಕೆ ಯಾವುದೇ ಅವಕಾಶ ಇಲ್ಲ. ಕಾಂಗ್ರೆಸ್ ನೋಟಿನ ಬಗ್ಗೆ ಬೇಜವಾಬ್ದಾರಿಯುತ ಟೀಕೆ ಮಾಡುತ್ತಿದೆ. ಇದರಿಂದ ಶೂನ್ಯ ವೇಳೆ ದುರ್ಬಳಕೆ ಆಗುತ್ತಿದೆ ಎಂದು ಜೇಟ್ಲಿ ಹೇಳಿದರು.

ಕಾಂಗ್ರೆಸ್ ಬೆಂಬಲಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ನಾಯಕ ಡೆರಿಕ್ ಒಬ್ರಿಯಾನ್, ನೋಟುಗಳನ್ನು ನೋಡಿ. ಸಿಬಲ್ ಅವರು ಗಂಭೀರ ವಿಷಯವನ್ನು ಎತ್ತಿದ್ದಾರೆ ಎಂದರು. ಸಂಯುಕ್ತ ಜನತಾ ದಳದ ನಾಯಕ ಶರದ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ನರೇಶ್ ಅಗರ್‌ವಾಲ್ ಕೂಡಾ ಕಾಂಗ್ರೆಸ್ ಅನ್ನು ಬೆಂಬಲಿಸಿದರು.

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ನೋಟುಗಳ ಮೂಲವನ್ನು ಪ್ರಶ್ನಿಸಿದರು. ನೋಟುಗಳ ಅಧೀಕೃತತೆಯನ್ನು ಪರಿಶೀಲಿಸಲಾಗುವುದು ಎಂದು ಜೇಟ್ಲಿ ಅನಂತರ ಹೇಳಿದರು. ದೊಡ್ಡ ಪ್ರಮಾಣದಲ್ಲಿ ನೋಟುಗಳ ಮುದ್ರಣ ಮಾಡಿದಾಗ, ಕೆಲವು ಸಂದರ್ಭಗಳಲ್ಲಿ ನೋಟುಗಳು ಸ್ವಲ್ಪ ದೊಡ್ಡದಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

 ನೋಟುಗಳ ಗಾತ್ರ ಹಾಗೂ ವಿನ್ಯಾಸದಲ್ಲಿ ಸ್ಪಲ್ಪ ಮಟ್ಟಿನ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇರುತ್ತದೆ. ಎರಡು ವಿಭಿನ್ನ ಮಾದರಿಯ ನೋಟುಗಳ ಅಟ್ಟಿಗಳನ್ನು ಮುದ್ರಿಸಿ ನೀಡುವಂತೆ ಕೇಂದ್ರ ಸರಕಾರ ಆರ್‌ಬಿಐಗೆ ಹೇಳಿಲ್ಲ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಬೇರೆ ಬೇರೆ ಪ್ರಿಂಟಿಂಗ್ ಪ್ರೆಸ್‌ಗಳಲ್ಲಿ ಮುದ್ರಣವಾದ ನೋಟುಗಳ ಗಾತ್ರ ಹಾಗೂ ವಿನ್ಯಾಸ ಸ್ಪಲ್ಪ ವ್ಯತ್ಯಾಸವಾಗಿರಲಿದೆ. ಇದರ ಅರ್ಥ ಎರಡು ವಿಭಿನ್ನ ನೋಟುಗಳನ್ನು ಮುದ್ರಿಸಲಾಗಿದೆ ಎಂದಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News