ಚೆನ್ನೈ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸುಲಿಗೆ : ಪೊಲೀಸರ ಬಂಧನ

Update: 2017-08-08 15:02 GMT

ಚೆನ್ನೈ, ಆ.8: ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಅವರಲ್ಲಿದ್ದ ವಸ್ತುಗಳನ್ನು ಸುಲಿಗೆ ಮಾಡಿದ ಆರೋಪದಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸಲಾಗಿದೆ.

  ಒಡಿಶಾದ ನಿವಾಸಿ ಬಿಶ್ವನಾಥನ್ ಎಂಬ ರೈಲ್ವೇ ಪ್ರಯಾಣಿಕ ಸೋಮವಾರ ಬೆಳಗ್ಗೆ ಸುಮಾರು 3 ಗಂಟೆ ವೇಳೆ ರೈಲ್ವೇ ನಿಲ್ದಾಣದ ‘ವೈಟಿಂಗ್ ಹಾಲ್’ನಲ್ಲಿ ಮಲಗಿದ್ದ. ಈ ಸಂದರ್ಭ ಅಲ್ಲಿಗಾಗಮಿಸಿದ ಮೂವರು ಪೊಲೀಸರು ತನ್ನನ್ನು ಬೆದರಿಸಿ ಹಲ್ಲೆ ನಡೆಸಿದರು ಹಾಗೂ ತನ್ನ ಬಳಿಯಿದ್ದ 1,500 ರೂ. ಹಣ ಮತ್ತು 1,000 ರೂ. ಮೌಲ್ಯದ ಕೈಗಡಿಯಾರವನ್ನು ಕಿತ್ತೊಯ್ದರು ಎಂದು ಬಿಶ್ವನಾಥನ್ ಆರೋಪಿಸಿದ್ದು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಪ್ರಕರಣದಲ್ಲಿ ಒಳಗೊಂಡಿದ್ದಾರೆ ಎನ್ನಲಾದ ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯ ಮುಗಿಸಿ ತೆರಳಿದ್ದರು. ಅವರನ್ನು ವಶಕ್ಕೆ ಪಡೆದುಕೊಂಡ ಬಳಿಕ ದೂರುದಾರ ಆರೋಪಿಗಳನ್ನು ಗುರುತಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರನ್ನು ತಮಿಳುನಾಡು ವಿಶೇಷ ಪೊಲೀಸ್ ಪಡೆಯ ಜೆ.ಇರುಥಯರಾಜ್, ಜೆ.ಅರುಲ್‌ದಾಸ್ ಮತ್ತು ಎಸ್.ರಾಮಕೃಷ್ಣ ಎಂದು ಗುರುತಿಸಲಾಗಿದ್ದು ಇವರನ್ನು ಕಳೆದ ಒಂದೂವರೆ ತಿಂಗಳಿಂದ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News