ಹರ್ಯಾಣ: ಅತ್ಯಾಚಾರವೆಂಬ ಮನಸ್ಥಿತಿ

Update: 2017-08-08 18:55 GMT

ಹರ್ಯಾಣದಲ್ಲಿ ಐಎಎಸ್ ಅಧಿಕಾರಿಯೊಬ್ಬರ ಪುತ್ರಿಯ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣವೊಂದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಸುದ್ದಿ ಮಹಿಳೆಯ ಮೇಲಿನ ಕಾಳಜಿಯಿಂದ ನಡೆಯುತ್ತಿದೆ ಎನ್ನುವುದಕ್ಕಿಂತ, ಇಲ್ಲಿ ಸಂತ್ರಸ್ತ ಮತ್ತು ಆರೋಪಿ ಇಬ್ಬರೂ ಮೇಲ್ವರ್ಗಕ್ಕೆ ಸೇರಿದವರು ಎನ್ನುವುದು ಚರ್ಚೆಗೆ ಮುಖ್ಯ ಕಾರಣ. ಹಿಂಬಾಲಿಸಿ ಬೆದರಿಕೆ ಹಾಕಿ, ಅಪಹರಣಕ್ಕೆ ಯತ್ನಿಸಿದಾತ ಬಿಜೆಪಿ ಮುಖಂಡನೊಬ್ಬನ ಪುತ್ರ. ಇದೇ ಸಂದರ್ಭದಲ್ಲಿ ಸಂತ್ರಸ್ತೆ ಐಎಎಸ್ ಅಧಿಕಾರಿಯೊಬ್ಬರ ಪುತ್ರಿ.

ಈ ದೇಶದಲ್ಲಿ ದಲಿತ , ಕೆಳಜಾತಿ ಅಥವಾ ಬಡವರ್ಗದ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರ ಅದೆಷ್ಟು ಬರ್ಬರವಾಗಿದ್ದರೂ ಮಾಧ್ಯಮಗಳಲ್ಲಿ ಮುಖಪುಟ ಸುದ್ದಿಯಾಗುವುದು ಕಡಿಮೆ. ಅದಕ್ಕಾಗಿ ಮೊಂಬತ್ತಿ ಹಚ್ಚಿ ಬೀದಿಗಿಳಿಯುವವರ ಸಂಖ್ಯೆಯಂತೂ ಇಲ್ಲವೇ ಇಲ್ಲ. ಐಟಿ ಬಿಟಿ ಮಹಿಳೆಯರು ಅಥವಾ ಸಮಾಜದ ಉನ್ನತ ವರ್ಗಕ್ಕೆ ಸೇರಿದ ವಿದ್ಯಾವಂತ ಮಹಿಳೆಯ ಮೇಲೆ ನಡೆಯುವ ದೈಹಿಕ ದೌರ್ಜನ್ಯಗಳನ್ನಷ್ಟೇ ಸಮಾಜ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಇಲ್ಲಿ ಮೇಲ್ವರ್ಗದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ವಿರೋಧಿಸಬಾರದು ಎಂದಲ್ಲ. ಆದರೆ ಮಹಿಳೆಯ ಮೇಲೆ ನಡೆಯುವ ‘ಅತ್ಯಾಚಾರ, ದೌರ್ಜನ್ಯ’ವನ್ನು ಪ್ರತಿಭಟಿಸುವುದೇ ಇಲ್ಲಿ ಮುಖ್ಯ ಉದ್ದೇಶವಾಗಿದ್ದರೆ ಅದು ಎಲ್ಲ ಮಹಿಳೆಯರಿಗೂ ಸಮಾನವಾಗಿ ಅನ್ವಯಿಸಬೇಕು ಎನ್ನುವುದಷ್ಟೇ ಬೇಡಿಕೆ.

ಇಲ್ಲಿ ಮಹಿಳೆ ಮುಖ್ಯವಾಗದೇ ಆಕೆಯ ಜಾತಿ ಮತ್ತು ವರ್ಗವಷ್ಟೇ ಮುಖ್ಯವಾದಾಗ, ಮಹಿಳೆಯ ಮೇಲಿನ ದೌರ್ಜನ್ಯದ ಕುರಿತಂತೆ ನಾವು ಆಡುವ ಮಾತುಗಳು ಅಪ್ರಾಮಾಣಿಕವಾಗುತ್ತದೆ. ಮತ್ತು ಈ ಅಪ್ರಾಮಾಣಿಕತೆಯೇ ಆಳದಲ್ಲಿ, ಇನ್ನಷ್ಟು ಅತ್ಯಾಚಾರಗಳನ್ನು, ಮಹಿಳಾದೌರ್ಜನ್ಯಗಳನ್ನು ಪೋಷಿಸುತ್ತದೆ. ಯಾವುದೇ ಅತ್ಯಾಚಾರ ಪ್ರಕರಣ ಸಂಭವಿಸಲಿ. ನಾವು ಅದಕ್ಕೆ ಸಂಬಂಧಿಸಿದಂತೆ ನೇರವಾಗಿ ಭಾಗಿಯಾದ ಅಪರಾಧಿಗಳನ್ನಷ್ಟೇ ಹೊಣೆ ಮಾಡಿ ಪ್ರಕರಣವನ್ನು ಮುಗಿಸಿ ಬಿಡುತ್ತೇವೆ. ಆದರೆ ಈ ಸಮಾಜದೊಳಗೆ ಅತ್ಯಾಚಾರವೆಂಬ ಮನಸ್ಥಿತಿಯನ್ನು ಪೋಷಿಸುವ ಒಂದು ವ್ಯವಸ್ಥೆಯ ಕುರಿತಂತೆ ಜಾಣ ವೌನ ತಾಳುತ್ತೇವೆ. ಆ ವ್ಯವಸ್ಥೆ ಹೆಣ್ಣಿನ ಕುರಿತಂತೆ ತೀರಾ ಕೆಳಮಟ್ಟದಲ್ಲಿ ಚಿಂತಿಸುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ‘ನಿರ್ಭಯಾ ಪ್ರಕರಣ’.

ಈ ಪ್ರಕರಣ ಸಂಭವಿಸಿದ ಬೆನ್ನಿಗೇ ಕೆಲವರು ನೀಡಿರುವ ಹೇಳಿಕೆಗಳು, ಒಳಗೊಳಗೇ ಅತ್ಯಾಚಾರಗೈದ ಆರೋಪಿಗಳನ್ನು ಬೆಂಬಲಿಸುವಂತಿದ್ದವು ಎನ್ನುವುದನ್ನು ಗಮನಿಸಬಹುದು. ಸ್ವಾಮಿಯ ವೇಷದಲ್ಲಿದ್ದ ಒಬ್ಬ ಹಿರಿಯ ವ್ಯಕ್ತಿ ‘‘ಅತ್ಯಾಚಾರ ಸಂದರ್ಭದಲ್ಲಿ ಆತನನ್ನು ಅಣ್ಣಾ ಎಂದು ಮಹಿಳೆಯರು ಬೇಡಿಕೊಳ್ಳಬೇಕು...’’ ಎಂದು ಸಲಹೆ ನೀಡಿದ. ಅಂದರೆ, ಅತ್ಯಾಚಾರ ನಡೆಸುವ ದುಷ್ಕರ್ಮಿಯನ್ನು ಪ್ರತಿಭಟಿಸದೇ ಅವನಲ್ಲಿ ‘ಅಣ್ಣಾ’ ಎಂದು ಕರೆದು ಬೇಡಿಕೊಳ್ಳಬೇಕು ಎನ್ನುವುದು ಈ ಬಾಬಾನ ಸಲಹೆ. ಇಂತಹದೊಂದು ಸಲಹೆ ನೀಡಿದ ಅಸಾರಾಂ ಬಾಪು ಎನ್ನುವ ಅಸಾಮಿ ಕೆಲವೇ ತಿಂಗಳಲ್ಲಿ ಮಹಿಳೆಯೊಬ್ಬಳನ್ನು ಅತ್ಯಾಚಾರಗೈದ ಆರೋಪದಲ್ಲಿ ಜೈಲು ಸೇರಿದ. ವಿಪರ್ಯಾಸವೆಂದರೆ, ಈ ಮನುಷ್ಯ ಹಲವು ದಶಕಗಳ ಕಾಲ ಒಂದು ಸಮಾಜದ ಸಾಂಸ್ಕೃತಿಕ, ಧಾರ್ಮಿಕ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ.

ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರಗೈದವರು ಅವಿದ್ಯಾವಂತರು. ಕುಡುಕರು. ಸಂಸ್ಕೃತಿ, ಧರ್ಮ ಇತ್ಯಾದಿ ಯಾವುದೇ ಹಿನ್ನೆಲೆ ಇಲ್ಲದವರು. ಆದರೆ ಅಸಾರಾಂ ಬಾಪು ಇವೆಲ್ಲ ಮುಖವಾಡಗಳ ಸಹಿತ ಅತ್ಯಾಚಾರಿ ಮನಸ್ಥಿತಿಯನ್ನು ಹೊಂದಿದ್ದ. ನಿರ್ಭಯಾ ಪ್ರಕರಣದಲ್ಲಿ ಆರೆಸ್ಸೆಸ್‌ನ ಮುಖಂಡರೊಬ್ಬರು ನೀಡಿರುವ ಹೇಳಿಕೆಯೂ ಸ್ತ್ರೀ ವಿರೋಧಿ ಮನಸ್ಥಿತಿಯಿಂದ ಕೂಡಿತ್ತು. ‘ಭಾರತದಲ್ಲಿ ಅತ್ಯಾಚಾರ ನಡೆಯುವುದಿಲ್ಲ, ಇಂಡಿಯಾದಲ್ಲಿ ಮಾತ್ರ ನಡೆಯುತ್ತದೆ’ ಎನ್ನುವ ಮೂಲಕ, ಹೆಣ್ಣು ಆಧುನಿಕಳಾಗಿರುವುದೇ ಅತ್ಯಾಚಾರಕ್ಕೆ ಹೆಚ್ಚಲು ಕಾರಣ ಎಂದು ಹೇಳಿದರು. ಈ ಮೂಲಕ ಅತ್ಯಾಚಾರಕ್ಕೆ ಅವರು ಹೆಣ್ಣನ್ನೇ ಹೊಣೆ ಮಾಡಿದರು. ಇಂತಹ ವ್ಯವಸ್ಥೆಯಲ್ಲಿ ದಲಿತ ಹೆಣ್ಣು ಮಕ್ಕಳನ್ನು ಸಾಮೂಹಿಕವಾಗಿ ಅತ್ಯಾಚಾರಗೈದು, ಮರಕ್ಕೆ ನೇಣು ಹಾಕಿದಾಗ ಅದು ಸುದ್ದಿಯಾಗದೇ ಇದ್ದರೆ ಅದರಲ್ಲಿ ಅಚ್ಚರಿ ಪಡುವಂತಹದ್ದು ಏನೂ ಇಲ್ಲ.

ಹರ್ಯಾಣದಲ್ಲಿ ಮಹಿಳೆಯನ್ನು ಬಿಜೆಪಿ ಮುಖಂಡನ ಪುತ್ರನೊಬ್ಬ ಅಪಹರಿಸಲು ಯತ್ನಿಸಿದ ಘಟನೆಯನ್ನೇ ತೆಗೆದುಕೊಳ್ಳೋಣ. ಈ ಘಟನೆಗಿಂತಲೂ ಭೀಕರವಾಗಿದೆ ತದನಂತರ ನಡೆದಿರುವ ಬೆಳವಣಿಗೆಗಳು. ಆತ ಒಬ್ಬ ಪುಢಾರಿಯ ಪುತ್ರ. ಪಾನಮತ್ತನಾಗಿ ತರುಣಿಯನ್ನು ದೌರ್ಜನ್ಯವೆಸಗಿದ. ಆದರೆ ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಂದರ್ಭದಲ್ಲಿ ನಡೆದಿರುವ ಲೋಪಗಳು ಪಾನಮತ್ತರಿಂದ ಸಂಭವಿಸಿರುವುದು ಅಲ್ಲ. ಮುಖ್ಯವಾಗಿ ಆರೋಪಿಯ ವಿರುದ್ಧ ಗಂಭೀರ ಕ್ರಮವನ್ನು ತೆಗೆದುಕೊಳ್ಳಬೇಕಾಗಿದ್ದ ಪೊಲೀಸರು ಆರೋಪಿಯನ್ನು ರಕ್ಷಿಸಲು ಹವಣಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಸಿಸಿಟಿವಿಗಳಲ್ಲಿ ಆರೋಪಿ ಎಸಗಿರುವ ಕೃತ್ಯಗಳು ದಾಖಲಾಗಿದ್ದರೂ ಅದನ್ನು ಅಳಿಸುವ ಯತ್ನ ನಡೆದಿದೆ. ಆರೋಪಿಯ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣವನ್ನು ದಾಖಲಿಸುವ ಬದಲು, ಪಾನಮತ್ತರಿಂದ ಹಿಂಬಾಲಿಸುವ ಪ್ರಯತ್ನವಷ್ಟೇ ನಡೆದಿದೆ ಎಂದು ದಾಖಲಿಸಿ ಪ್ರಕರಣವನ್ನು ದುರ್ಬಲಗೊಳಿಸಿದರು.

ಇದೆಲ್ಲಕ್ಕಿಂತ ಅಮಾನವೀಯ ಬೆಳವಣಿಗೆಯೆಂದರೆ, ಇಡೀ ಘಟನೆಯಲ್ಲಿ ಸಂತ್ರಸ್ತೆಯನ್ನೇ ಬಿಜೆಪಿ ಮುಖಂಡರು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸಿದ್ದು. ಹರ್ಯಾಣ ಬಿಜೆಪಿ ಘಟಕದ ಉಪಾಧ್ಯಕ್ಷ ರಾಮ್‌ವೀರ್ ಭಟ್ಟಿ ಈ ಬಗ್ಗೆ ಹೇಳಿಕೆ ನೀಡುತ್ತಾ ‘‘ತರುಣಿ ಮಧ್ಯರಾತ್ರಿ ಯಾಕೆ ಮನೆ ಬಿಟ್ಟು ತೆರಳಬೇಕಾಗಿತ್ತು, ತನ್ನ ರಕ್ಷಣೆಗೆ ತಾನೇ ಹೊಣೆ ಎನ್ನುವುದು ಆಕೆಗೆ ಗೊತ್ತಿರಲಿಲ್ಲವೇ?’’ ಎಂಬ ಅರ್ಥ ಬರುವಂತೆ ಮಾತನಾಡಿದ್ದಾರೆ. ಆರೋಪಿಯ ಮೇಲೆ ಬಿಗಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕಾಗಿದ್ದ ಬಿಜೆಪಿಯ ರಾಜ್ಯ ಮುಖಂಡನೇ ಇಂತಹ ಮಾತನ್ನಾಡಿದ ಮೇಲೆ, ಪೊಲೀಸರು ಯಾವ ಧೈರ್ಯದ ಮೇಲೆ ಆರೋಪಿಯನ್ನು ಬಂಧಿಸುತ್ತಾರೆ? ಅಂದರೆ, ಆರೋಪಿಯ ವಿರುದ್ಧ ದುರ್ಬಲ ಪ್ರಕರಣ ದಾಖಲಿಸಲು ಪರೋಕ್ಷವಾಗಿ ಬಿಜೆಪಿ ಸರಕಾರವೇ ಒತ್ತಡವನ್ನು ಹೇರಿದೆ ಎಂದೇ ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಒಬ್ಬ ಐಎಎಸ್ ಅಧಿಕಾರಿಯೊಬ್ಬರ ಪುತ್ರಿಯ ಮೇಲೆ ನಡೆದಿರುವ ದೌರ್ಜನ್ಯದ ಪ್ರಕರಣವೇ ಹೀಗೆ ಆರಂಭದಲ್ಲೇ ಹಳ್ಳ ಹಿಡಿದಿರಬೇಕಾದರೆ, ಆಕೆಯ ಸ್ಥಾನದಲ್ಲಿ ಕೆಳಜಾತಿಯ ಅಥವಾ ಬಡ ಹೆಣ್ಣು ಮಗಳಿದ್ದರೆ ಅವರ ಸ್ಥಿತಿ ಹೇಗಿರಬಹುದು? ಹರ್ಯಾಣ, ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಇದಕ್ಕೆ ಮುಖ್ಯ ಕಾರಣ, ಆ ರಾಜ್ಯಗಳನ್ನಾಳುತ್ತಿರುವ ರಾಜಕಾರಣಿಗಳು ಹೆಣ್ಣಿನ ಕುರಿತಂತೆ ಹೊಂದಿರುವ ಮನಸ್ಥಿತಿ.

ಮೊದಲು ನಾಯಕರು ಹೆಣ್ಣಿನ ಬಗ್ಗೆ ಇರುವ ಮನಸ್ಥಿತಿಯನ್ನು ಬದಲಿಸಿ, ಕಾನೂನು ವ್ಯವಸ್ಥೆಯನ್ನು ಬಿಗಿಗೊಳಿಸಬೇಕು. ಇದೇ ಸಂದರ್ಭದಲ್ಲಿ ಹರ್ಯಾಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ವೌನ ಮುರಿದು, ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಬೇಕು. ಆರೋಪಿಯ ಬೆಂಬಲಕ್ಕೆ ನಿಂತ ಬಿಜೆಪಿ ಮುಖಂಡರನ್ನು ಪಕ್ಷದಿಂದ ಕಿತ್ತು ಹೊರಹಾಕಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News