ದೈತ್ಯಾಕಾರ ತಾಳುತ್ತಿರುವ ನಿರುದ್ಯೋಗ ಸಮಸ್ಯೆ

Update: 2017-08-09 06:04 GMT

ವಲಯ ಕೌಶಲ ಮಂಡಳಿಗಳ ಕಾರ್ಯನಿರ್ವಹಣೆಯ ಪುನರ್ವವ್ಯವಸ್ಥೆ ಮತ್ತು ಪ್ರಶಸ್ತತೆಗಾಗಿರುವ ಸಮಿತಿಯ ವರದಿ

ಸಮಿತಿಯ ಪ್ರಕಾರ ಭಾರತದ ವೃತ್ತಿಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ ಹಲವಾರು ಕುಂದು ಕೊರತೆಗಳಿವೆ. ಉದಾಹರಣೆಗೆ ಅಲ್ಲಿ ರಾಷ್ಟ್ರೀಯ ಮಾನದಂಡಗಳಿಲ್ಲ, ಸ್ಥಳದಲ್ಲಿ ಶಿಷ್ಯವೃತ್ತಿ ತರಬೇತಿ ಇಲ್ಲ, ಕೈಗಾರಿಕಾ ವಲಯದೊಂದಿಗೆ ಅಂತರಕ್ರಿಯೆ ಇಲ್ಲ; ಇದರೊಂದಿಗೆ ಕಡಿಮೆ ಸಾಮರ್ಥ್ಯ, ಹಣಕಾಸಿನ ಕೊರತೆ, ಕಳಪೆ ಗುಣಮಟ್ಟ ಮತ್ತು ದಕ್ಷ ತರಬೇತುದಾರರ ಕೊರತೆಗಳೂ ಕಾಡುತ್ತಿವೆ.

ಕೌಶಲ ತರಬೇತಿ ನೀಡುತ್ತಿರುವ ಅನೇಕ ಸಚಿವಾಲಯಗಳಲ್ಲಿ ದಕ್ಷ ತರಬೇತುದಾರರೂ ಇಲ್ಲ, ಮೂಲ ವ್ಯವಸ್ಥೆಗಳೂ ಇಲ್ಲ. ಹೀಗಾಗಿ ಅಲ್ಲಿ ನೀಡಲಾಗುತ್ತಿರುವ ತರಬೇತಿಯ ಗುಣಮಟ್ಟ ಕಳಪೆಯಾಗಿದೆ. ಕೇವಲ 8 ಗಂಟೆಗಳ ತರಬೇತಿ ನೀಡಿರುವ ಉದಾಹರಣೆಗಳೂ ಇವೆ! ಇವು ಉದ್ಯೋಗ ಪತಿಗಳ ಅಗತ್ಯಗಳನ್ನೂ ಪೂರೈಸುವುದಿಲ್ಲ, ಅಭ್ಯರ್ಥಿಗಳಿಗೆ ತಕ್ಕ ಮಟ್ಟಿನ ಜೀವನ ನಿರ್ವಹಣೆಯ ಅವಕಾಶಗಳನ್ನೂ ಒದಗಿಸುವುದಿಲ್ಲ. ಕಳೆದ 5 ವರ್ಷಗಳ ಅವಧಿಯಲ್ಲಿ ಒಂದನ್ನು ಬಿಟ್ಟು ಉಳಿದೆಲ್ಲಾ ವರ್ಷಗಳಲ್ಲಿ ನಿಗದಿತ ಗುರಿಗಳನ್ನು ಸಾಧಿಸಲಾಗಿಲ್ಲ.

2015-16ರ ಸಾಲಿನಲ್ಲಿ ಕೌಶಲ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ತನ್ನ ಗುರಿಯ ಶೇ. 58ರಷ್ಟನ್ನು ಸಾಧಿಸಿದ್ದರೆ ಉಳಿದ 19 ಸಚಿವಾಲಯಗಳ ಒಟ್ಟಾರೆ ಸಾಧನೆ 42 ಪ್ರತಿಶತ ಅಷ್ಟೆ. ಗಣನೀಯ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಹೊಣೆಗಾರಿಕೆ ಹೊತ್ತಿರುವ ಮಾನವ ಸಂಪನ್ಮೂಲ ಅಭಿವೃದ್ಧಿ, ಜವಳಿ, ವಾಣಿಜ್ಯ, ಕೈಗಾರಿಕೆ, ಪ್ರವಾಸೋದ್ಯಮಗಳಂತಹ ಕೆಲವು ಪ್ರಮುಖ ಸಚಿವಾಲಯಗಳಿಗೆ ಕೌಶಲ ಅಭಿವೃದ್ಧಿ ಕಾರ್ಯವನ್ನು ನೀಡಲಾಗಿಲ್ಲ. ಕೆಲವೊಂದು ಸಚಿವಾಲಯಗಳಿಗೆ ಉದ್ಯೋಗಗಳನ್ನು ಸೃಷ್ಟಿಸುವ ಪಾತ್ರವನ್ನು ನೀಡಲಾಗಿದೆ. ಆದರೆ.... ಇದರ ಅರ್ಥ ಅದೇ ಕಾರಣಕ್ಕೆ ಅವು ಕೌಶಲ ತರಬೇತಿ ಕೂಡಾ ನೀಡಲಿವೆ ಎಂದಲ್ಲ ಎಂದು ವರದಿ ಹೇಳುತ್ತದೆ.

ವಲಯ ಕೌಶಲ ಮಂಡಳಿ

ಉದ್ಯಮಗಳ ನೇತೃತ್ವದಲ್ಲಿರುವ ವಲಯ ಕೌಶಲ ಮಂಡಳಿಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು ಅಲ್ಲಿ ನೀಡಲಾಗುವ ಕೌಶಲ ತರಬೇತಿಗಳು ಉದ್ಯೋಗಪತಿಗಳ ಅಗತ್ಯಗಳಿಗನುಸಾರ ಇರುವಂತೆ ನೋಡಿಕೊಳ್ಳಲಾಗುತ್ತದೆೆ. ಈ ಮಂಡಳಿಗಳಿಗೆ ಕಾರ್ಯಕ್ರಮಗಳನ್ನು ಯೋಜಿಸುವ, ನಡೆಸುವ, ಶಿಕ್ಷಾರ್ಥಿಗಳ ಗುಣಮಟ್ಟ ಅಳೆಯುವ ಜವಾಬ್ದಾರಿ ಇದೆ. ವಾಹನ, ರಿಟೇಲ್, ಆರೋಗ್ಯಸೇವೆ, ಚರ್ಮ, ಆಹಾರ ಸಂಸ್ಕರಣೆಗಳಂತಹ ಅಧಿಕ ಬೆಳವಣಿಗೆಯ ಕ್ಷೇತ್ರಗಳಿಗೆ ಮತ್ತು ಸೌಂದರ್ಯ ಹಾಗೂ ಆರೋಗ್ಯ, ಭದ್ರತೆ, ಮನೆಕೆಲಸ, ಪ್ಲಂಬಿಂಗ್ ಇತ್ಯಾದಿ ಅನೌಪಚಾರಿಕ ಕ್ಷೇತ್ರಗಳಿಗೆಂದು ಸುಮಾರು 40 ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಆದರೆ ಅವುಗಳನ್ನು ಗೊತ್ತುಗುರಿಯಿಲ್ಲದೆ ಸ್ಥಾಪಿಸಲಾಗಿದ್ದು ಮಾನದಂಡಗಳನ್ನು ಗಾಳಿಗೆ ತೂರಲಾಗಿದೆ. ವಲಯ ಕೌಶಲ ಮಂಡಳಿಗಳ ಸ್ಥಾಪನೆ ಸಮಸ್ಯೆಗಳನ್ನು ಬಗೆಹರಿಸುವ ಬದಲು ಗೊಂದಲದ ಗೂಡನ್ನು ಸೃಷ್ಟಿಸಿದೆ ಎನ್ನುತ್ತದೆ ಸಮಿತಿಯ ವರದಿ. ಉದಾಹರಣೆಗೆ ಮಾಧ್ಯಮ ಮತ್ತು ಮನರಂಜನೆ ವಲಯವನ್ನು ತೆಗೆದುಕೊಂಡರೆ ಅಲ್ಲಿ 2013ರಲ್ಲಿ 4 ಲಕ್ಷ ಜನರಿಗೆ ಉದ್ಯೋಗ ನೀಡಿರುವ ಹೊರತಾಗಿಯೂ ಅದಕ್ಕೊಂದು ಮಂಡಳಿಯನ್ನು ಸ್ಥಾಪಿಸಲಾಗಿದೆ.

ಉತ್ಪ್ರೇಕ್ಷಿತ ಗುರಿಗಳು, ಅವ್ಯವಹಾರಗಳು

ವಲಯ ಕೌಶಲ ಮಂಡಳಿಗಳಿಗೆ ನಿಧಿ ಹಂಚಿಕೆಯಾಗುವುದು ಅವುಗಳ ಗುರಿಯನ್ನು ಹೊಂದಿಕೊಂಡು. ಇಲ್ಲಿ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವು ಇಚ್ಛಾನುಸಾರಿಯಾಗಿ ಮಂಡಳಿಗಳಿಗೆ ಉತ್ಪ್ರೇಕ್ಷಿತ ಗುರಿಗಳನ್ನು ನಿಗದಿಪಡಿಸಿ ಅವುಗಳಿಂದ ಬಲವಂತವಾಗಿ ಸಹಿ ಪಡೆದುಕೊಂಡು ಹೆಚ್ಚಿನ ನಿಧಿಗಳನ್ನು ಸಂಗ್ರಹಿಸಿದೆ. ಉತ್ತರ ಪ್ರದೇಶ, ಹರ್ಯಾಣ, ರಾಜಸ್ಥಾನಗಳ ಕೌಶಲ ಅಭಿವೃದ್ಧಿ ಕೇಂದ್ರಗಳಲ್ಲಿ ನೋಂದಾವಣೆಯಾಗಿರುವ ಹೆಸರುಗಳಲ್ಲಿ ಸುಮಾರು ಶೇಕಡಾ 40ರಷ್ಟು ನಕಲಿ ಎಂದು ಪತ್ತೆಯಾಗಿದೆ (ಹಿಂದೂಸ್ಥಾನ್ ಟೈಮ್ಸ್, ಜೂನ್ 29).

ಆಗ ತಾನೆ ತೇರ್ಗಡೆಯಾದ ಹೊಚ್ಚಹೊಸ ಇಂಜಿನಿಯರಿಂಗ್ ಪದವೀಧರರು ಮತ್ತು ಡಿಪ್ಲೊಮಾ ಹೊಂದಿದವರಿಗೆ 2-5 ದಿನಗಳ ತರಬೇತಿ ನೀಡಿ ತರಬೇತುದಾರರನ್ನಾಗಿ ಮಾಡಲಾಗಿದೆೆ. ಇದು ತರಬೇತುದಾರರ ತರಬೇತಿಯ ಅಣಕವಾಗಿದೆ ಎಂದು ವರದಿ ಹೇಳುತ್ತದೆ. ಹಿಂದಿನ ಕೌಶಲ ಕಲಿಕೆಯ ಗುರುತಿಸುವಿಕೆ ಎಂಬ ಕಾರ್ಯಕ್ರಮದಡಿ ಈಗಾಗಲೇ ಅನುಭವ ಇರುವವರ ಕೌಶಲವನ್ನು ಅಳೆದು ಪ್ರಮಾಣಪತ್ರ ನೀಡುವಲ್ಲಿಯೂ ಅವ್ಯವಹಾರ, ಭ್ರಷ್ಟಾಚಾರ ನಡೆದಿದೆ. ಮಂಡಳಿಗಳು ಅವೈಜ್ಞಾನಿಕವಾಗಿ ಕಾರ್ಯ ನಿರ್ವಹಿಸಿ ಸಂಸ್ಥೆಗಳಿಗೆ, ತರಬೇತುದಾರರಿಗೆ, ಶಿಕ್ಷಾರ್ಥಿಗಳಿಗೆ ಇಚ್ಛಾನುಸಾರವಾಗಿ ಪ್ರಮಾಣಪತ್ರ ನೀಡಿವೆ. 2,3 ಗಂಟೆಗಳ ತರಬೇತಿ ಕೊಟ್ಟು ಪ್ರಮಾಣಪತ್ರ ನೀಡುವ ಮೂಲಕ ಸಂಖ್ಯೆಗಳನ್ನು ಹೆಚ್ಚಿಸಲಾಗಿರುವ ಅಂಶವೂ ಬೆಳಕಿಗೆ ಬಂದಿದೆ. 2008ರಲ್ಲಿ ಸರಕಾರಿ ಮತ್ತು ಖಾಸಗಿ ವಲಯದ ಜಂಟಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಮೂಲಕ ಖಾಸಗಿ ವಲಯದ ಸಹಭಾಗಿ ತರಬೇತು ಸಂಸ್ಥೆಗಳಿಗೆ ಕಡಿಮೆ ಬಡ್ಡಿಗೆ ಸಾಲ, ಷೇರು, ದತ್ತಿಗಳನ್ನು ನೀಡಲಾಯಿತು. ಹೀಗೆ ಆರಂಭದಲ್ಲಿ ಕೊಟ್ಟ ಸುಮಾರು ರೂ.1500 ಕೋಟಿ ಸಾಲಗಳಲ್ಲಿ ಹೆಚ್ಚಿನವು ಮರುಪಾವತಿಯಾಗಿಲ್ಲ ಎಂದು ತಿಳಿದುಬಂದಿದೆ.

ಯುವಜನರಿಗೆ ಸರಿಯಾದ ತರಬೇತಿ ನೀಡಲಾಗಿಲ್ಲ, ಅವರನ್ನು ಸೂಕ್ತ ಉದ್ಯೋಗಗಳಲ್ಲಿ ಸಹಿತ ನಿಯೋಜಿಸಲಾಗಿಲ್ಲ, ವಿವಿಧ ಕ್ಷೇತ್ರಗಳಿಗೆ ಬೇಕಿದ್ದ ಕುಶಲ ಕಾರ್ಮಿಕರ ಗುರಿಯನ್ನೂ ಸಾಧಿಸಲಾಗಿಲ್ಲ. ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ 2013ರಲ್ಲಿ ಪ್ರಾರಂಭಿಸಲಾದ ‘ರಾಷ್ಟ್ರೀಯ ಕೌಶಲ ಪ್ರಮಾಣೀಕರಣ ಮತ್ತು ನಗದು ಬಹುಮಾನ ಯೋಜನೆ’ಯನ್ನು (STAR) ಕೆಟ್ಟದಾಗಿ ರೂಪಿಸಲಾಗಿದ್ದು ಅದರ ಅನುಷ್ಠಾನವೂ ಸರಿಯಾಗಿಲ್ಲ. (STAR) ಕಾರ್ಯಕ್ರಮದ ಮೌಲ್ಯಮಾಪನ ಮಾಡದೆ 2015ರ ಜುಲೈನಲ್ಲಿ ನೇರವಾಗಿ ‘ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ’ಯನ್ನು (ಪ್ರಮಕೌವಿ-1) ಪ್ರಾರಂಭಿಸಿರುವುದರೊಂದಿಗೆ ರೂ. 1500 ಕೋಟಿ ಹೆಚ್ಚುವರಿ ಮೊಬಲಗನ್ನೂ ತೊಡಗಿಸಲಾಗಿದೆ. ಮೋದಿ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನ ಮತ್ತು ಫಲಿತಾಂಶಗಳೆರಡೂ ತೀರ ಕೆಟ್ಟದಾಗಿವೆ ಎಂದು ವರದಿ ತಿಳಿಸುತ್ತದೆ.

ದುಡ್ಡೆಲ್ಲ ಖಾಸಗಿಯವರ ಜೇಬಿಗೆ

ಸಮಿತಿ ಕಂಡುಕೊಂಡಂತೆ 2015-16ರ ಪ್ರಮಕೌವಿ-1 ಯೋಜನೆಯಡಿ ತರಬೇತಾದ 18 ಲಕ್ಷ ಜನರಲ್ಲಿ ಬರೀ ಶೇಕಡಾ 12.4 ಮಂದಿಗೆ ಉದ್ಯೋಗ ಲಭಿಸಿದೆ. (STAR) ಕಾರ್ಯಕ್ರಮದ 14 ಲಕ್ಷ ಜನರಲ್ಲಿ ಬರೀ ಶೇ. 8.5 ಮಂದಿಗೆ ಉದ್ಯೋಗ ಲಭಿಸಿದೆ. ಆದರೆ ಉದ್ಯಮ ವಲಯಕ್ಕೆ ಯಥಾರ್ಥವಾಗಿ ಬೇಕಿರುವ ಕೌಶಲಗಳ ಅಗತ್ಯವನ್ನು ಪೂರೈಸಲಾಗಿಲ್ಲ, ಯುವಜನರಿಗೆ ತಕ್ಕ ಮಟ್ಟಿನ ಸಂಬಳದ ಉದ್ಯೋಗ ಒದಗಿಸಲಾಗಿಲ್ಲ. ಖರ್ಚಾಗಿರುವ ರೂ. 2,500 ಕೋಟಿ ಸಾರ್ವಜನಿಕರ ದುಡ್ಡಿನ ಪ್ರಯೋಜನ ಪಡೆದುಕೊಂಡಿರುವುದು ಖಾಸಗಿ ವಲಯ ಎನ್ನುತ್ತದೆ ವರದಿ. ಅಕ್ರಮಗಳು ನಡೆದಿರುವುದನ್ನು ಒಪ್ಪಿಕೊಂಡಿರುವ ಮೋದಿ ಸರಕಾರ ಅದರ ವಿರುದ್ಧ ಒಂದಿಷ್ಟು ಕ್ರಮ ಕೈಗೊಂಡಿದೆ. ಪ್ರಮಕೌವಿ-1 ಯೋಜನೆಯಡಿ ಅವ್ಯವಹಾರ ನಡೆಸಿರುವ 5 ಸಹಭಾಗಿ ತರಬೇತುದಾರರನ್ನು ಮತ್ತು 11 ಕೌಶಲ ತರಬೇತಿ ಸಂಸ್ಥೆಗಳನ್ನು ಅಮಾನತುಗೊಳಿಸಲಾಗಿದೆ.

ಪ್ರಥಮ ಪ್ರಮಕೌವಿ ಯೋಜನೆಯ ಸಮಸ್ಯೆಗಳನ್ನೆ ಬಗೆಹರಿಸಲಾಗದ ಮೋದಿ ಸರಕಾರ ಜುಲೈ 2016ರಲ್ಲಿ ದ್ವಿತೀಯ ಪ್ರಮಕೌವಿ ಯೋಜನೆಗೆ ಚಾಲನೆ ನೀಡಿದೆ. ಇದಕ್ಕಾಗಿ ರೂ. 12,000 ಕೋಟಿಯಷ್ಟು ಮೊಬಲಗನ್ನೂ ತೆಗೆದಿರಿಸಿದೆ. ಆದರೆ ಇಲ್ಲಿ ತರಬೇತುದಾರರ ಅಭಾವವನ್ನು ಪರಿಗಣಿಸಿರುವಂತೆ ತೋರುತ್ತಿಲ್ಲ. ಭಾರತದಲ್ಲಿ ಪ್ರತಿ ವರ್ಷ ನಾನಾ ಬಗೆಯ 20,000 ತರಬೇತುದಾರರ ಆವಶ್ಯಕತೆ ಇದೆ. ಆದರೆ ನಾವಿಂದು ವರ್ಷವೊಂದರ ಕೇವಲ 8,268 ತರಬೇತುದಾರರನ್ನಷ್ಟೆ ಉತ್ಪಾದಿಸಬಲ್ಲೆವು. ಸಮಸ್ಯೆಯ ಅಗಾಧತೆ ಎಷ್ಟಿದೆ ಎಂದು ಇದರಿಂದ ಊಹಿಸಬಹುದು.

ಇಡೀ ಯೋಜನೆ ಅವ್ಯವಹಾರ, ಭ್ರಷ್ಟಾಚಾರ, ತರಬೇತುದಾರರ ಅಭಾವಗಳಿಂದ ನರಳುತ್ತಿರುವ ಸನ್ನಿವೇಶವಿರುವಾಗ ಪ್ರಮಕೌವಿ-2ರ ಗತಿ ಏನಾಗಲಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ನಿರುದ್ಯೋಗದ ಸಮಸ್ಯೆ ಎಂಬ ಟೈಮ್‌ಬಾಂಬ್ ಈಗಾಗಲೆ ಟಿಕ್‌ಟಿಕ್ ಸದ್ದು ಮಾಡಲಾರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ‘‘ನಿರುದ್ಯೋಗ ಹೋಗಲಾಡಿಸುವೆ, ಭಾರತವನ್ನು ವಿಶ್ವದ ಕೌಶಲ ರಾಜಧಾನಿಯಾಗಿಸುವೆ’’ ಎನ್ನುವ ಮಾತು ಮಿಕ್ಕೆಲ್ಲಾ ಜನಾಕರ್ಷಕ ಘೋಷಣೆಗಳ ಹಾಗೆ ಬರೀ ಬಡಾಯಿಯಲ್ಲದೆ ಬೇರೇನೂ ಅಲ್ಲ ಎನ್ನುವ ಸತ್ಯವನ್ನು ಮತದಾರರು ಎಷ್ಟು ಬೇಗ ಅರಿತುಕೊಳ್ಳುತ್ತಾರೊ ಅಷ್ಟೂ ಒಳ್ಳೆಯದು.

(ಆಧಾರ: ವಯರ್.ಕಾಮ್ ಲೇಖನ; ಇಂಡಿಯಾಸ್ಪೆಂಡ್.ಕಾಮ್‌ನಲ್ಲಿ ಚೈತನ್ಯ ಮಲ್ಲಾಪುರರ ಲೇಖನ)

Writer - ಸುರೇಶ ಭಟ್ ಬಾಕ್ರಬೈಲು

contributor

Editor - ಸುರೇಶ ಭಟ್ ಬಾಕ್ರಬೈಲು

contributor

Similar News

ಜಗದಗಲ
ಜಗ ದಗಲ