ಇರಾನ್: ಇಬ್ಬರು ಮಹಿಳಾ ಉಪಾಧ್ಯಕ್ಷರ ನೇಮಕ
Update: 2017-08-09 23:36 IST
ಟೆಹರಾನ್, ಆ. 9: ಸಂಪೂರ್ಣ ಪುರುಷ ಸಚಿವ ಸಂಪುಟವನ್ನು ರಚಿಸಿ ಟೀಕೆಗೆ ಒಳಗಾಗಿರುವ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಇಬ್ಬರು ಮಹಿಳಾ ಉಪಾಧ್ಯಕ್ಷರನ್ನು ನೇಮಿಸಿದ್ದಾರೆ.
ಆದಾಗ್ಯೂ, ಯಾವುದೇ ಮಹಿಳಾ ಸಚಿವರನ್ನು ನೇಮಿಸದ ಹಿನ್ನೆಲೆಯಲ್ಲಿ ಸುಧಾರಣಾವಾದಿಗಳು ಅವರನ್ನು ಟೀಕಿಸುವುದನ್ನು ಮುಂದುವರಿಸಿದ್ದಾರೆ.
ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ರೂಹಾನಿಯ ಮರು ಆಯ್ಕೆಗಾಗಿ ಸುಧಾರಣಾವಾದಿಗಳು ಪ್ರಚಾರ ನಡೆಸಿದ್ದರು.
‘‘ಸರಕಾರ ರಚನೆಯಲ್ಲಿ ಅಧ್ಯಕ್ಷರು ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಆಘಾತಕಾರಿ ಹಾಗೂ ನಂಬಲಸಾಧ್ಯ ಬೆಳವಣಿಗೆಯಾಗಿದೆ’’ ಎಂದು ಸಂಸದೀಯ ಮಹಿಳಾ ಗುಂಪಿನ ಮುಖ್ಯಸ್ಥೆ ಪರ್ವಾನೆಹ್ ಸಲಾಶೌರಿ ಹೇಳಿದರು.