ಟೆಲಿವಿಶನ್ ಕ್ರಾಂತಿಯ ಪಯಣ

Update: 2017-08-10 06:37 GMT

ಟ್ರಾಯ್ ಬಿಡುಗಡೆ ಮಾಡಿರುವ 2015-16ನೆ ಸಾಲಿನ ವಾರ್ಷಿಕ ವರದಿ ನೋಡಿದರೆ, ಅದು ಭಾರತವು ಚೀನಾ ಬಳಿಕ ಎರಡನೆ ಅತಿ ದೊಡ್ಡ ಟಿ.ವಿ. ಮಾರುಕಟ್ಟೆ ಹೊಂದಿರುವುದನ್ನು ಸ್ಪಷ್ಟಪಡಿಸುತ್ತದೆ. ಉದ್ಯಮ ವಲಯದ ಅಂದಾಜಿನ ಪ್ರಕಾರ, 2016ರ ಮಾರ್ಚ್ ಅಂತ್ಯದವರೆಗೆ ಇದ್ದ 2,841 ಮಿಲಿಯನ್ ಮನೆಗಳ ಪೈಕಿ ಸುಮಾರು 1,811 ಮಿಲಿಯನ್ ಮನೆಗಳು ದೂರದರ್ಶನ ಜಾಲದ ಜತೆಗೆ ಕೇಬಲ್ ಟಿ.ವಿ., ಡಿಟಿಎಚ್, ಐಪಿಟಿವಿ ಮೂಲಕ ಸೇವೆಗಳನ್ನು ಪಡೆದುಕೊಳ್ಳುತ್ತಿವೆ.

ವಿಶ್ವದ ಮೊದಲ ಟೆಲಿವಿಶನ್ ಸೇವೆಯನ್ನು 1936ರಲ್ಲಿ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ) ಆರಂಭಿಸಿದ ಸರಿಸುಮಾರು ಎರಡು ದಶಕಗಳ ಬಳಿಕ, ಭಾರತದಲ್ಲಿ 1959ರ ಸೆಪ್ಟಂಬರ್ 15ರಂದು ದಿಲ್ಲಿಯಲ್ಲಿ ಟೆಲಿವಿಶನ್ ಸೇವೆ ಆರಂಭಗೊಂಡಿತು. ಯುನೆಸ್ಕೋ ಸಹಾಯದಿಂದ ಇದನ್ನು ಆರಂಭ ಮಾಡಲಾಯಿತು. ಮೊದಲು ವಾರಕ್ಕೆರಡು ಬಾರಿ ದಿನಕ್ಕೆ ಒಂದು ಗಂಟೆಯ ಕಾರ್ಯಕ್ರಮಗಳನ್ನು ಸಮುದಾಯ ಆರೋಗ್ಯ, ಸಾರಿಗೆ, ರಸ್ತೆ ಸಂವೇದನಾಶೀಲ ನಾಗರಿಕರ ಕರ್ತವ್ಯಗಳು ಮತ್ತು ಹಕ್ಕುಗಳ ವಿಷಯದ ಬಗ್ಗೆ ಪ್ರಸಾರ ಮಾಡಲಾಗುತ್ತಿತ್ತು.

1961ರಲ್ಲಿ ಶಾಲಾ ಶಿಕ್ಷಣ ಟೆಲಿವಿಶನ್ (ಎಸ್.ಟಿ.ವಿ) ಯೋಜನೆಯನ್ನು ಸೇರಿಸಿ ಪ್ರಸಾರವನ್ನು ವಿಸ್ತರಿಸಲಾಯಿತು. ಭಾರತದಲ್ಲಿ ಮೊದಲ ಬಾರಿಗೆ ಟೆಲಿವಿಶನ್ ಸೇವೆಯ ಪ್ರಮುಖವಾದ ವಿಸ್ತರಣೆ ಆರಂಭಗೊಂಡದ್ದು 1972ರಲ್ಲಿ, ಮುಂಬೈಯಲ್ಲಿ ಎರಡನೆ ಟೆಲಿವಿಶನ್ ಕೇಂದ್ರ ಆರಂಭಗೊಂಡಾಗ. ಇದನ್ನು ಅನುಸರಿಸಿ ಶ್ರೀನಗರ ಮತ್ತು ಅಮೃತಸರಗಳಲ್ಲಿ 1973 ರಲ್ಲಿ ಹಾಗೂ ಕೋಲ್ಕತಾ, ಮದ್ರಾಸ್ ಮತ್ತು ಲಕ್ನೋಗಳಲ್ಲಿ 1975ರಲ್ಲಿ ಕೇಂದ್ರಗಳು ಆರಂಭಗೊಂಡವು.

ಮೊದಲ 17 ವರ್ಷ ಟೆಲಿವಿಶನ್ ಪ್ರಸಾರ ನಿಂತು ನಿಂತು ವಿಸ್ತರಣೆಗೊಂಡಿತು ಮತ್ತು ಪ್ರಸಾರ ಕಪ್ಪು-ಬಿಳುಪಿನಲ್ಲಿತ್ತು. 1976ರಲ್ಲಿ, 8 ಟೆಲಿವಿಶನ್ ಕೇಂದ್ರಗಳ ಜಾಲದ ಮೂಲಕ 75,000 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿರುವ 45 ಮಿಲಿಯನ್ ಜನರನ್ನು ಅದು ತಲುಪುತ್ತಿತ್ತು. ಆಕಾಶವಾಣಿಯ ಭಾಗವಾಗಿ ಇಂತಹ ವಿಸ್ತಾರವಾದ ಟೆಲಿವಿಶನ್ ವ್ಯವಸ್ಥೆಯ ಆಡಳಿತ ನಿರ್ವಹಣೆಯಲ್ಲಿ ಎದುರಾದ ಸಮಸ್ಯೆಗಳ ಹಿನ್ನೆಲೆಯಲ್ಲಿ, ಸರಕಾರವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಟೆಲಿವಿಶನ್ ಜಾಲವನ್ನಾಗಿ ‘ದೂರದರ್ಶನ’ ಎಂಬ ಪ್ರತ್ಯೇಕ ವಿಭಾಗವನ್ನು ರಚಿಸಿತು.

 1970ರ ಮಧ್ಯಭಾಗದಿಂದ ಭಾರತದ ಟೆಲಿವಿಶನ್ ಬೆಳವಣಿಗೆಯಲ್ಲಿ ಮೂರು ಜ್ವಲನ ಬಿಂದುಗಳನ್ನು ಗುರುತಿಸಬಹುದು. ಇವುಗಳಿಂದಾಗಿ ಟೆಲಿವಿಶನ್ ಅದ್ಭುತವಾಗಿ ಬೆಳವಣಿಗೆಯಾಯಿತು. 1975ರ ಆಗಸ್ಟ್ ಮತ್ತು 1976ರ ಜುಲೈ ತಿಂಗಳಲ್ಲಿ ನಡೆಸಲಾದ ಉಪಗ್ರಹ ಸೂಚಿತ ಟೆಲಿವಿಶನ್ ಪ್ರಯೋಗ (ಸೈಟ್) ಮೊದಲ ಜ್ವಲನ ಬಿಂದು. 6 ರಾಜ್ಯಗಳ ಗ್ರಾಮಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಇದರಡಿ ಉಪಗ್ರಹವನ್ನು ಬಳಕೆ ಮಾಡಲಾಯಿತು. ಇದರ ಉದ್ದೇಶ ಅಭಿವೃದ್ಧಿಗಾಗಿ ಟೆಲಿವಿಶನ್ ಅನ್ನು ಬಳಕೆ ಮಾಡಿಕೊಳ್ಳುವುದಾಗಿತ್ತು ಆದರೂ ಮನೋರಂಜನಾ ಕಾರ್ಯಕ್ರಮಗಳನ್ನು ಸೇರಿಸಲಾಯಿತು. ಇದರಿಂದಾಗಿ ಟೆಲಿವಿಶನ್ ಜನಸಮೂಹದ ಬಳಿ ಬಂದಂತಾಯಿತು. ಆ ಬಳಿಕ ಇನ್ಸಾಟ್-1 ಎ ಬಂದಿತು. ಇದು ದೇಶದ ಮೊದಲ ದೇಶೀಯ ಸಂಪರ್ಕ ಉಪಗ್ರಹವಾಗಿದ್ದು, 1982ರಲ್ಲಿ ಕಾರ್ಯಾರಂಭ ಮಾಡಿತು. ಇದರಿಂದ ದೂರದರ್ಶನದ ಎಲ್ಲಾ ಪ್ರಾದೇಶಿಕ ಕೇಂದ್ರಗಳ ಜಾಲ ರೂಪಿಸುವುದಕ್ಕೆ ಸಾಧ್ಯವಾಯಿತು. ಇದೇ ಮೊದಲ ಬಾರಿಗೆ ದೂರದರ್ಶನಕ್ಕೆ ‘ರಾಷ್ಟ್ರೀಯ ಕಾರ್ಯಕ್ರಮ’ ಎಂದು ದಿಲ್ಲಿಯಿಂದ ಇತರ ಎಲ್ಲಾ ಕೇಂದ್ರಗಳಿಗೆ ಸರಬರಾಜಾಗುವ ಕಾರ್ಯಕ್ರಮವನ್ನು ಬಿತ್ತರಿಸಲು ಸಾಧ್ಯವಾಯಿತು. 1982ರ ನವೆಂಬರ್ ತಿಂಗಳಲ್ಲಿ ದೇಶವು ಏಶ್ಯನ್ ಗೇಮ್ಸ್ ಆತಿಥ್ಯ ವಹಿಸಿಕೊಂಡಿತು ಮತ್ತು ಸರಕಾರ ವರ್ಣ ಪ್ರಸಾರವನ್ನು ಈ ಕ್ರೀಡಾಕೂಟದ ಪ್ರಸಾರಕ್ಕಾಗಿ ಆರಂಭಿಸಿತು.

80ರ ದಶಕ ದೂರದರ್ಶನದ ಶಕೆ. ‘ಹಂ ಲೋಗ್’ (1984), ‘ಬುನಿಯಾದ್’ (1986-87) ಪ್ರಸಾರವಾದವು. ಪುರಾಣಾಧಾರಿತ ಧಾರಾವಾಹಿ ರಾಮಾಯಣ (1987-88) ಮತ್ತು ಮಹಾಭಾರತ (1988-89)ನ್ನು ಮಿಲಿಯಾಂತರ ಜನರು ದೂರದರ್ಶನದಲ್ಲಿ ವೀಕ್ಷಿಸಿದರು. ಇಂದು ಸುಮಾರು 1,400 ಭೂಕೇಂದ್ರಿತ ಪ್ರಸಾರಕಗಳ ಜಾಲದ ಮೂಲಕ ಭಾರತದ ಜನಸಂಖ್ಯೆಯ ಶೇ. 90ಕ್ಕೂ ಅಧಿಕ ಜನರು ದೂರದರ್ಶನ ಕಾರ್ಯಕ್ರಮಗಳನ್ನು ಪಡೆಯುತ್ತಿ ದ್ದಾರೆ. ಮೂರನೆ ಪ್ರಬಲ ತಿರುವು ಲಭಿಸಿದ್ದು 90ರ ದಶಕದ ಆದಿಯಲ್ಲಿ. ವಿದೇಶೀ ವಾಹಿನಿಗಳಾದ ಸಿಎನ್ ಎನ್, ಅದನ್ನು ಅನುಸರಿಸಿ ಸ್ಟಾರ್ ಟಿ.ವಿ. ಮತ್ತು ಕೆಲ ಸಮಯದ ಬಳಿಕ ಝೀ ಟಿ.ವಿ., ಸನ್ ಟಿ.ವಿ.ಗಳಂತಹ ದೇಶೀಯ ವಾಹಿನಿಗಳು ಭಾರತೀಯ ಮನೆಗಳಲ್ಲಿ ಕಾರ್ಯಕ್ರಮಗಳನ್ನು ತಂದವು. ಸರಕಾರವು ನಿಧಾನವಾಗಿ ನಿಬಂಧನೆಗಳನ್ನು ಸಡಿಲಿಸಿದಂತೆ, 1990ರ ಮಧ್ಯಭಾಗದಿಂದ ಭಾರತದಲ್ಲಿ ಟೆಲಿವಿಶನ್ ಬೆಳವಣಿಗೆ ಕಾಣಲಾರಂಭಿಸಿತು. ಕೇಬಲ್ ಟಿ.ವಿ. ಮನೆ ಮನೋರಂಜನೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು.

ಟ್ರಾಯ್ ಬಿಡುಗಡೆ ಮಾಡಿರುವ 2015-16ನೆ ಸಾಲಿನ ವಾರ್ಷಿಕ ವರದಿ ನೋಡಿದರೆ, ಅದು ಭಾರತವು ಚೀನಾ ಬಳಿಕ ಎರಡನೆ ಅತಿ ದೊಡ್ಡ ಟಿ.ವಿ. ಮಾರುಕಟ್ಟೆ ಹೊಂದಿರುವುದನ್ನು ಸ್ಪಷ್ಟಪಡಿಸುತ್ತದೆ. ಉದ್ಯಮ ವಲಯದ ಅಂದಾಜಿನ ಪ್ರಕಾರ, 2016ರ ಮಾರ್ಚ್ ಅಂತ್ಯದವರೆಗೆ ಇದ್ದ 2,841 ಮಿಲಿಯನ್ ಮನೆಗಳ ಪೈಕಿ ಸುಮಾರು 1,811 ಮಿಲಿಯನ್ ಮನೆಗಳು ದೂರದರ್ಶನ ಜಾಲದ ಜತೆಗೆ ಕೇಬಲ್ ಟಿ.ವಿ., ಡಿಟಿಎಚ್, ಐಪಿಟಿವಿ ಮೂಲಕ ಸೇವೆಗಳನ್ನು ಪಡೆದುಕೊಳ್ಳುತ್ತಿವೆ. ಪಾವತಿ ಮೂಲಕ ಟಿ.ವಿ. ಸೇವೆ ಪಡೆದುಕೊಳ್ಳುತ್ತಿರುವ (ಪೇ ಟಿ.ವಿ.) ಸಂಖ್ಯೆಯಲ್ಲಿ ಸುಮಾರು 1,021 ಮಿಲಿಯನ್ ಕೇಬಲ್ ಟಿ.ವಿ. ಚಂದಾದಾರರಾಗಿದ್ದಾರೆ, 88.64 ಮಿಲಿಯನ್ ನೊಂದಾಯಿತ ಡಿಟಿಎಚ್ ಚಂದಾದಾರರಾಗಿದ್ದಾರೆ. (ಇದರಲ್ಲಿ 58.53 ಮಿಲಿಯನ್ ಮಂದಿ ಸಕ್ರಿಯ ಚಂದಾದಾರರು) ಮತ್ತು ಸುಮಾರು ಅರ್ಧ ಮಿಲಿಯನ್ ಐಪಿಟಿವಿ ಚಂದಾದಾರರು. ದೂರದರ್ಶನದ ಭೂಮಿಯ ಮೇಲಿನ ಕೇಂದ್ರಗಳ ಟಿ.ವಿ. ಜಾಲ ಭೂಮಿಯ ಮೇಲಿನ ಪ್ರಸಾರಕಗಳ ಮೂಲಕ ಶೇ. 92.62 ಜನರನ್ನು ತಲುಪುತ್ತಿದೆ.

ಇಲ್ಲಿ 48 ಶುಲ್ಕ ಆಧಾರಿತ ಪ್ರಸಾರಕರಿದ್ದಾರೆ. ಅಂದಾಜು 60,000 ಕೇಬಲ್ ಆಪರೇಟರ್‌ಗಳು, 6,000 ಬಹು ವ್ಯವಸ್ಥೆಯ ಆಪರೇಟರ್‌ಗಳು, (ಎಂಎಸ್‌ಒಗಳು), ಶುಲ್ಕ ಮೂಲಕ ಕಾರ್ಯಾಚರಿಸುವ 6 ಡಿಟಿಎಚ್ ಆಪರೇಟರುಗಳು ಮತ್ತು ಇದರ ಜತೆಗೆ ಉಚಿತ ಡಿಟಿಎಚ್ ಸೇವೆ ಒದಗಿಸುವ ಸಾರ್ವಜನಿಕ ರಂಗದ ಪ್ರಸಾರಕ ದೂರದರ್ಶನವೂ ಇದೆ. 2015-16 ಹಣಕಾಸು ವರ್ಷದ ಅಂತ್ಯದ ವೇಳೆಗೆ ಮಾಹಿತಿ ಮತ್ತು ಪ್ರಸಾರ ಮಂತ್ರಾಲಯದಲ್ಲಿ ನೋಂದಾಯಿತ 869 ಟಿ.ವಿ. ಚಾನೆಲ್‌ಗಳಲ್ಲಿ 205 ಸ್ಟಾಂಡರ್ಡ್ ಡೆಫಿನೇಶನ್ (ಎಸ್.ಡಿ) ಪಾವತಿ ವಾಹಿನಿಗಳು (ಇದರಲ್ಲಿ 5 ಜಾಹೀರಾತುಗಳ ಉಚಿತ ವಾಹಿನಿಗಳೂ ಸೇರಿವೆ.) ಮತ್ತು 58 ಹೈ ಡೆಫಿನೇಶನ್ (ಎಚ್ ಡಿ.) ಶುಲ್ಕ ಪಾವತಿ ವಾಹಿನಿಗಳು.

2014-15ರಲ್ಲಿ 4,75,003 ಕೋಟಿ ರೂ.ಗಳಷ್ಟಿದ್ದ ಭಾರತೀಯ ಟೆಲಿವಿಶನ್ ಉದ್ಯಮ 2015-16 ರಲ್ಲಿ 5,42,003 ಕೋಟಿ ರೂ.ಗೆ ವೃದ್ಧ್ದಿಯಾಗಿ ಸುಮಾರು ಶೇ.14.10ರಷ್ಟು ಬೆಳವಣಿಗೆ ದಾಖಲಿಸಿತು. ಚಂದಾದಾರಿಕೆ ಮೂಲಕ ಆದಾಯ ಉದ್ಯಮದ ಒಟ್ಟು ಆದಾಯದಲ್ಲಿ ಸಿಂಹಪಾಲು ಆಗಿದೆ. 2014-15ರಲ್ಲಿ 3,20,003 ಕೋಟಿ ರೂ.ಯಷ್ಟಿದ್ದ ಚಂದಾದಾರಿಕೆ ಮೂಲದ ಆದಾಯ 2015-16ರಲ್ಲಿ 3,61,003 ಕೋಟಿ ರೂ.ಗೆ ಏರಿದೆ. ಅದೇ ರೀತಿಯಲ್ಲಿ ಜಾಹೀರಾತು ಮೂಲದ ಆದಾಯ 201415ರಲ್ಲಿ 1,55,003 ಕೋಟಿ ರೂ.ಯಷ್ಟಿದ್ದದ್ದು 2015-16ರಲ್ಲಿ 1,81,003 ಕೋಟಿ ರೂ.ಗೆ ಏರಿದೆ. ಕಳೆದ ದಶಕ ಕೇಬಲ್ ಮತ್ತು ಉಪಗ್ರಹ ಟಿ.ವಿ.(ಸಿ.ಮತ್ತು ಎಸ್) ಮಾರುಕಟ್ಟೆಯಲ್ಲಿ ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಯಿತು. ಅತ್ಯಂತ ಪ್ರಮುಖ ಬೆಳವಣಿಗೆ ಎಂದರೆ ಭಾರತದ ಟಿ.ವಿ. ವಲಯದ ಡಿಜಿಟಲೀಕರಣವಾಗಿದೆ.

ಭಾರತದಲ್ಲಿ ಟೆಲಿವಿಶನ್ ಭವಿಷ್ಯ

 ಏಶ್ಯಾ ಪೆಸಿಫಿಕ್ ವಲಯದಲ್ಲಿ ಚಂದಾದಾರರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಭಾರತ ಅತಿ ಹೆಚ್ಚು ಸಂಖ್ಯೆಯ ಚಂದಾದಾರರು ಇರುವ ಎರಡನೆ ಅತಿದೊಡ್ಡ ಟೆಲಿವಿಶನ್ ಮಾರುಕಟ್ಟೆಯಾಗಿದೆ. ಟೆಲಿವಿಶನ್ ಜಾಹೀರಾತಿಗೆ ಸಂಬಂಧಿಸಿದಂತೆ 2020ರವರೆಗೆ ಎರಡಂಕಿಯ ಅಭಿವೃದ್ಧಿ ದಾಖಲಿಸುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವು ಒಂದಾಗಿರಲಿದೆ. ಒಂದು ಹಂತದಲ್ಲಿ ಚಂದಾದಾರರ ಸರಾಸರಿ ಸಂಖ್ಯೆಯಲ್ಲಿ ವಾರ್ಷಿಕವಾಗಿ ಇಳಿಕೆ ಕಂಡು ಬಂದರೂ ಉಪಗ್ರಹ ಟೆಲಿವಿಶನ್‌ಗೂ ಮಿಗಿಲಾಗಿ ಕೇಬಲ್ ಟೆಲಿವಿಶನ್ 2020ರವರೆಗೆ ಮಾರುಕಟ್ಟೆಯಲ್ಲಿ ಮುಂಚೂಣಿ ಪಾತ್ರ ವಹಿಸಲಿದೆ. ಮಾತ್ರವಲ್ಲ ಡಿಜಿಟಲೀಕರಣದಿಂದ ಟೆಲಿವಿಶನ್ ವಾಹಿನಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಸಂಖ್ಯೆ 800 ದಾಟಿದೆ. ಭಾರತದಲ್ಲಿ ಟೆಲಿವಿಶನ್ ಪ್ರಸ್ತುತ ಶೇ.61ರಷ್ಟು ಜನರನ್ನು ತಲುಪುತ್ತಿದ್ದು, ಈ ಅಂಕಿ ಅಂಶಗಳು ಇನ್ನೂ ಬೆಳವಣಿಗೆ ಮತ್ತು ವಿಸ್ತರಣೆಗೆ ಅವಕಾಶ ಇರುವುದನ್ನು ಹೇಳುತ್ತವೆ.
‘‘ಭಾರತೀಯ ಮಾಧ್ಯಮ ಮತ್ತು ಮನೋರಂಜನೆ (ಎಂ ಆ್ಯಂಡ್ ಇ) ಉದ್ಯಮ ಹಾಲಿ ಶೇ.10.5ರಷ್ಟು ಒಟ್ಟು ವಾರ್ಷಿಕ ಬೆಳವಣಿಗೆ ದರದಿಂದ 2021ರ ವೇಳೆಗೆ 45.1 ಬಿಲಿಯನ್ ಡಾಲರ್ ತಲುಪಲಿದೆ. ಪ್ರಸ್ತುತ ಇದು 27.3 ಬಿಲಿಯನ್ ಡಾಲರಿನಷ್ಟಿದೆ’’ ಎನ್ನುತ್ತದೆ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಎಂಬ ಸಲಹಾ ಸಂಸ್ಥೆಯು ಬಿಡುಗಡೆ ಮಾಡಿದ ‘ಜಾಗತಿಕ ಮನೋರಂಜನೆ ಮತ್ತು ಮಾಧ್ಯಮ ಮುನ್ನೋಟ 2017-21 ರ ವರದಿ.
2017 ಮತ್ತು 2021ರ ನಡುವೆ ಭಾರತದಲ್ಲಿ ಡಿಜಿಟಲ್ ಜಾಹೀರಾತು ಬೆಳವಣಿಗೆ ಅತ್ಯಂತ ತ್ವರಿತ ರೀತಿಯಲ್ಲಿ ಆಗಲಿದ್ದು, ಸಿಎಜಿಆರ್ 18.65 ನಷ್ಟಿರುತ್ತದೆ ಮತ್ತು ಟೆಲಿವಿಶನ್ ಜಾಹೀರಾತು ಬೆಳವಣಿಗೆ ಸಿಎಜಿಆರ್ ಶೇ.11.1ರಷ್ಟಾಗುವ ನಿರೀಕ್ಷೆ ಇದೆ.. ‘ಆರ್ಥಿಕತೆ ಬೆಳೆದಂತೆ, ಅಲ್ಲಿ ಟಿವಿ ಮಾರುಕಟ್ಟೆ ವಿಸ್ತರಣೆಯ ಬಲವಾದ ಅವಕಾಶಗಳು ಉಂಟಾಗಲಿವೆ’ ಎಂದು ವರದಿ ಹೇಳುತ್ತದೆ.

ಲೇಖಕರು ಗುಜರಾತಿನ ಆನಂದದಲ್ಲಿರುವ ಭಾಷಾ ಅಧ್ಯಯನ ಸಂಸ್ಥೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂಪರ್ಕ ವಿಭಾಗದಲ್ಲಿ ಬೋಧಕರಾಗಿದ್ದಾರೆ. ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳಾಗಿವೆ. (ಈ ಲೇಖನ ಅಹಮದಾಬಾದ್ ಪಿ.ಐ.ಬಿ.ಯ ಕೊಡುಗೆ)  

Writer - ಸಂಜಯ್ ಕಚೋಟ್

contributor

Editor - ಸಂಜಯ್ ಕಚೋಟ್

contributor

Similar News

ಜಗದಗಲ
ಜಗ ದಗಲ