3ನೆ ಟೆಸ್ಟ್‌ಗೆ ಅಕ್ಷರ್ ಪಟೇಲ್‌ಗೆ ಅವಕಾಶ

Update: 2017-08-09 18:56 GMT

ಕೊಲಂಬೊ, ಆ.9: ಐಸಿಸಿ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಒಂದು ಟೆಸ್ಟ್‌ಗೆ ಅಮಾನತುಗೊಂಡಿರುವ ಆಲ್‌ರೌಂಡರ್ ರವೀಂದ್ರ ಜಡೇಜ ಬದಲಿಗೆ ಶ್ರೀಲಂಕಾ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್‌ಗೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

 ಆ.12ರಿಂದ ಪಲ್ಲೇಕೆಲೆಯಲ್ಲಿ ಆರಂಭವಾಗಲಿರುವ ಅಂತಿಮ ಟೆಸ್ಟ್‌ಗೆ ಟೀಮ್ ಇಂಡಿಯಾದಲ್ಲಿ ಪಟೇಲ್ ಮೂರನೆ ಸ್ಪಿನ್ನರ್ ಆಗಿರುತ್ತಾರೆ. ಆಫ್-ಸ್ಪಿನ್ನರ್ ಆರ್.ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ತಂಡದಲ್ಲಿದ್ದಾರೆ.

30 ಏಕದಿನ ಮತ್ತು 7 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಅಕ್ಷರ್ ಪಟೇಲ್ ಟೀಮ್ ಇಂಡಿಯಾದ ಪರ ಚೊಚ್ಚಲ ಟೆಸ್ಟ್ ಆಡಲಿದ್ದಾರೆ.
23 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಗುಜರಾತ್‌ನ 23ರ ಹರೆಯದ ಪಟೇಲ್ 79 ವಿಕೆಟ್ ಪಡೆದಿದ್ದಾರೆ.

ಮಂಗಳವಾರ ದಕ್ಷಿಣ ಆಫ್ರಿಕದಲ್ಲಿ ಮುಕ್ತಾಯಗೊಂಡ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ‘ಎ’ ತಂಡದ ಪರ ಆಡಿದ್ದ ಪಟೇಲ್ 7 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಉಡಾಯಿಸಿದ ಮೂರನೆ ಬೌಲರ್ ಎನಿಸಿಕೊಂಡಿದ್ದರು.ಜಡೇಜ ಅವರು ಎರಡನೆ ಟೆಸ್ಟ್‌ನಲ್ಲಿ ಲಂಕಾದ ಬ್ಯಾಟ್ಸ್‌ಮನ್ ಮಲಿಂದಾ ಪುಷ್ಪಕುಮಾರ್ ಅವರತ್ತ ಚೆಂಡನ್ನು ಎಸೆದು ಅಶಿಸ್ತಿನಿಂದ ವರ್ತಿಸಿದ್ದರು. ಕಳೆದ 24 ತಿಂಗಳ ಅವಧಿಯಲ್ಲಿ ಜಡೇಜ ಅವರು 2 ಬಾರಿ ಐಸಿಸಿಯ ನೀತಿ ಸಂಹಿತೆ ಉಲ್ಲಂಘಿಸಿದ 6 ಡಿಮೆರಿಟ್ ಅಂಕ ಪಡೆದ ಕಾರಣಕ್ಕಾಗಿ ಒಂದು ಟೆಸ್ಟ್‌ನಿಂದ ಹೊರಗುಳಿಯುವಂತಾಗಿದೆ.

ಕಳೆದ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 85 ಎಸೆತಗಳಲ್ಲಿ 70 ರನ್ ಮತ್ತು ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 236 ರನ್‌ಗಳಿಗೆ ಲಂಕಾದ 7 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಟೆಸ್ಟ್ ಕೊನೆಗೊಂಡ ಬೆನ್ನಲ್ಲೇ ಅವರಿಗೆ ಐಸಿಸಿ ಒಂದು ಟೆಸ್ಟ್ ಗೆ ನಿಷೇಧ ವಿಧಿಸಿತ್ತು. ಜಡೇಜ ಅವರು ಮಂಗಳವಾರ ಪ್ರಕಟಗೊಂಡ ಐಸಿಸಿ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ನಂ.1 ಸ್ಥಾನ ಮತ್ತು ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲೂ ನಂ.1 ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅಂತಿಮ ಟೆಸ್ಟ್‌ಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ(ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಚೇತೇಶ್ವರ ಪೂಜಾರ, ರೋಹಿತ್ ಶರ್ಮ, ಆರ್.ಅಶ್ವಿನ್, ಅಕ್ಷರ್ ಪಟೇಲ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಇಶಾಂತ್ ಶರ್ಮ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ಕುಲದೀಪ್ ಯಾದವ್, ಅಭಿನವ್ ಮುಕುಂದ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News