ಉತ್ತರ ಪ್ರದೇಶ: ಗ್ರಾಮ ಪ್ರಧಾನನಿಂದ ಸರಕಾರಿ ಶಾಲೆಯಲ್ಲಿ ಡ್ಯಾನ್ಸ್ ಪಾರ್ಟಿ!

Update: 2017-08-10 06:57 GMT

ವಾರಣಾಸಿ, ಆ.10: ಪೂರ್ವ ಉತ್ತರ ಪ್ರದೇಶದ ಮಿರ್ಜಾಪುರ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯು ಇತ್ತೀಚೆಗೆ ರಕ್ಷಾ ಬಂಧನದ ರಾತ್ರಿಯಂದು ಡ್ಯಾನ್ಸ್ ಪಾರ್ಟಿಯ ಸ್ಥಳವಾಗಿ ಮಾರ್ಪಟ್ಟಿದ್ದು ಭಾರೀ ಸುದ್ದಿಯಾಗಿದೆ. ಸ್ಥಳೀಯ ಗ್ರಾಮದ ಮುಖ್ಯಸ್ಥನ ಕುಟುಂಬಸ್ಥರು ಶಾಲೆಯಲ್ಲಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದು, ಅಲ್ಲಿ ನೃತ್ಯ ಕಾರ್ಯಕ್ರಮ ನಡೆದಿತ್ತೆನ್ನಲಾಗಿದೆ.

ರಕ್ಷಾ ಬಂಧನದ ನಿಮಿತ್ತ ಸೋಮವಾರ ಜಮಲಪುರದ ತೆತ್ರೈಹಿಯ ಕಲಾ ಖುರ್ಡ್ ಎಂಬಲ್ಲಿನ ಸರಕಾರಿ ಶಾಲೆಗೆ ರಜೆಯಿತ್ತು. ಮಂಗಳವಾರ ಬೆಳಗ್ಗೆ ಎಂದಿನಂತೆ ಶಿಕ್ಷಕರು ಶಾಲೆಗೆ ಆಗಮಿಸಿದಾಗ ಇಡೀ ಶಾಲೆಯ ಆವರಣದಲ್ಲಿ ಕಸ ಹರಡಿಕೊಂಡಿತ್ತು. ಗ್ರಾಮದ ಮುಖ್ಯಸ್ಥ ರಾಮಕೇಶ್ ಯಾದವ್ ಕುಟುಂಬ ಇಲ್ಲಿ ಪಾರ್ಟಿ ಆಯೋಜಿಸಿತ್ತೆಂದು ಗ್ರಾಮಸ್ಥರು ಹೇಳಿದಾಗಲೇ ಶಿಕ್ಷಕರಿಗೆ ಈ ವಿಷಯ ತಿಳಿದು ಬಂದಿದ್ದು.

ಶಿಕ್ಷಕರು ಕೂಡಲೇ ಪ್ರಾಥಮಿಕ ಶಿಕ್ಷಣ ಅಧಿಕಾರಿ ಪ್ರವೀಣ್ ಕುಮಾರ್ ತಿವಾರಿಗೆ ಮಾಹಿತಿ ನೀಡಿದ್ದು, ಅವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ತನಿಖಾ ವರದಿಯೊಂದಿಗೆ ಗ್ರಾಮದ ಮುಖ್ಯಸ್ಥನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಮುಖ್ಯ ಅಭಿವೃದ್ಧಿ ಅಧಿಕಾರಿಗೆ ಆದೇಶಿಸುವಂತೆ ಕೇಳಿಕೊಳ್ಳಲಾಗುವುದು ಎಂದು ತಿವಾರಿ ತಿಳಿಸಿದ್ದಾರೆ.

ಶಾಲೆಯಲ್ಲಿ ಪಾರ್ಟಿ ಆಯೋಜಿಸಿದ್ದು ನಿಜವಾದರೂ ತಾನು ಅದರಲ್ಲಿ ಭಾಗವಹಿಸಿರಲಿಲ್ಲ ಎಂದ ಗ್ರಾಮದ ಮುಖ್ಯಸ್ಥ ರಾಮಕೇಶ್ ಯಾದವ್ ಹೇಳಿದ್ದಾರೆ. ತಾನು ಆ ದಿನ ಹತ್ತಿರದ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದೆ ಎಂದೂ ಯಾದವ್ ಹೇಳಿಕೊಂಡಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News