‘ಕ್ವಿಟ್ ಇಂಡಿಯಾ’ ಘೋಷಣೆಯ ಸೃಷ್ಟಿಕರ್ತ: ಯೂಸುಫ್ ಮೆಹರಾಲಿ

Update: 2017-08-10 18:15 GMT

‘ಕ್ವಿಟ್ ಇಂಡಿಯಾ’ ಎಂಬ ಸ್ಲೋಗನ್ ರಚಿಸಿದವರು ಕಾಂಗ್ರೆಸ್ ನಾಯಕ ಯೂಸುಫ್ ಮೆಹರಾಲಿ. ಚಳವಳಿ ಆರಂಭವಾಗುವ ಸ್ವಲ್ಪ ಸಮಯದ ಮೊದಲು ಮುಂಬೈಯಲ್ಲಿ ಗಾಂಧೀಜಿ ತನ್ನ ನಿಕಟ ಸಹವರ್ತಿಗಳ ಜತೆ ನಡೆಸಿದ ಸಭೆಯೊಂದರಲ್ಲಿ ಮೆಹರಾಲಿ ಈ ಎರಡು ಶಬ್ದಗಳನ್ನು ಸೂಚಿಸಿದರೆನ್ನಲಾಗಿದೆ. ಸ್ವಾತಂತ್ರ ಹೋರಾಟದ ಅವಧಿಯಲ್ಲಿ ಅವರು ಎಂಟು ಬಾರಿ ಜೈಲಿಗೆ ಹೋಗಿದ್ದರು.

75 ವರ್ಷಗಳ ಹಿಂದೆ ಸ್ವಾತಂತ್ರ ಹೋರಾಟದ ಘೋಷಣೆಯಾಗಿ ದೇಶಾದ್ಯಂತ ಮೊಳಗಿದ ‘ಕ್ವಿಟ್ ಇಂಡಿಯಾ’ ಕೂಗು ಮುಗಿಲು ಮುಟ್ಟಿತ್ತು. ಆ ಘೋಷಣೆಯನ್ನು, ಸ್ಲೋಗನ್ ಅನ್ನು ಸೃಷ್ಟಿಸಿದವರ್ಯಾರು? ಜನಪ್ರಿಯ ನಂಬಿಕೆಯ ಪ್ರಕಾರ ಮೋಹನ್‌ದಾಸ್ ಗಾಂಧಿ. ಆದರೆ ವಾಸ್ತವಿಕವಾಗಿ ಆ ವ್ಯಕ್ತಿ ಮೋಹನ್‌ದಾಸ್ ಗಾಂಧಿಯಲ್ಲ. ಮುಂಬೈಯ ಗೊವಾಲಿಯಾ ಟ್ಯಾಂಕ್ ಮೈದಾನದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ, 1942 ರ ಆಗಸ್ಟ್ 8ರಂದು, ಗಾಂಧೀಜಿ ಕ್ವಿಟ್ ಇಂಡಿಯಾ ಚಳಿವಳಿಗೆ ಚಾಲನೆ ನೀಡಿದರು. ಅವರ ‘‘ಮಾಡು ಇಲ್ಲವೆ ಮಡಿ’’ ಎನ್ನುವ ಪ್ರಸಿದ್ಧ ಮಾತಿನಿಂದ ಕ್ವಿಟ್ ಇಂಡಿಯಾ ಚಳವಳಿಗೆ ಮತ್ತಷ್ಟು ಜೀವ ತುಂಬಿದರು. ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತದಾದ್ಯಂತ ಸ್ವಾತಂತ್ರ ಹೋರಾಟಗಾರರು ನಾಗರಿಕ ದಂಗೆಯ ಅಲೆಗಳನ್ನೇ ಸೃಷ್ಟಿಸಿ ಗಾಂಧೀಜಿಯ ಕರೆಗೆ ಅದ್ಭುತವಾಗಿ ಓಗೊಟ್ಟರು. ಗಾಂಧಿ ಮತ್ತು ಇತರ ನಾಯಕರ ಬಂಧನ ಮತ್ತು ಬ್ರಿಟಿಷ್ ಅಧಿಕಾರಿಗಳು ನಡೆಸಿದ ದಮನದ ಹೊರತಾಗಿಯೂ ಜನತೆ ಧೈರ್ಯಗೆಡಲಿಲ್ಲ. ಆದರೆ ‘ಕ್ವಿಟ್ ಇಂಡಿಯಾ’ ಎಂಬ ಸ್ಲೋಗನ್ ರಚಿಸಿದವರು ಕಾಂಗ್ರೆಸ್ ನಾಯಕ ಯೂಸುಫ್ ಮೆಹರಾಲಿ. ಚಳವಳಿ ಆರಂಭವಾಗುವ ಸ್ವಲ್ಪ ಸಮಯದ ಮೊದಲು ಮುಂಬೈಯಲ್ಲಿ ಗಾಂಧೀಜಿ ತನ್ನ ನಿಕಟ ಸಹವರ್ತಿಗಳ ಜತೆ ನಡೆಸಿದ ಸಭೆಯೊಂದರಲ್ಲಿ ಮೆಹರಾಲಿ ಈ ಎರಡು ಶಬ್ದಗಳನ್ನು ಸೂಚಿಸಿದರೆನ್ನಲಾಗಿದೆ. ಆಗ 39ರ ಹರೆಯದ ಮೆಹರಾಲಿ ಮುಂಬೈಯ ಮೇಯರ್ ಆಗಿದ್ದರು. ಆ ಹುದ್ದೆಗೆ ಚುನಾಯಿತರಾದ ಮೊದಲ ಸಮಾಜವಾದಿ ಅವರು. ಸ್ವಾತಂತ್ರ ಹೋರಾಟದ ಅವಧಿಯಲ್ಲಿ ಅವರು ಎಂಟು ಬಾರಿ ಜೈಲಿಗೆ ಹೋಗಿದ್ದರು.

ಭಾರತದ ಸ್ವಾತಂತ್ರ ಚಳವಳಿಯ ಕೊನೆಯ ವರ್ಷಗಳಲ್ಲಿ ಪ್ರಧಾನ ಪಾತ್ರವಹಿಸಿದ ‘ಕ್ವಿಟ್ ಇಂಡಿಯಾ’ವನ್ನು ಒಂದು ಘೋಷಣೆಯಾಗಿ ಹೇಗೆ ಸ್ವೀಕರಿಸಲಾಯಿತೆನ್ನುವುದನ್ನು ಕೆ. ಗೋಪಾಲ ಸ್ವಾಮಿ ‘ಗಾಂಧಿ ಆ್ಯಂಡ್ ಬಾಂಬೆ’ ಎನ್ನುವ ತನ್ನ ಪುಸ್ತಕದಲ್ಲಿ ವಿವರಿಸಿದ್ದಾರೆ.

‘‘ಸ್ವಾತಂತ್ರಕ್ಕೆ ಅತ್ಯುತ್ತಮ ಘೋಷಣೆ ಯಾವುದಾಗಬಹುದು ಎಂಬ ಬಗ್ಗೆ ಗಾಂಧೀಜಿ ತನ್ನ ಸಹೋದ್ಯೋಗಿಗಳ ಜತೆ ಚರ್ಚಿಸಿದರೆಂದು ಶಾಂತಿಕುಮಾರ್ ಮೊರಾರ್ಜಿ ದಾಖಲಿಸಿದ್ದಾರೆ. ಅವರಲ್ಲೊಬ್ಬರು ‘ಗೆಟ್ ಔಟ್’ ಆಗಬಹುದೆಂದು ಸೂಚಿಸಿದರು. ಇದು ಸೌಜನ್ಯದ ಮಾತಲ್ಲ (ಇಂಪೊಲೈಟ್) ಎಂದು ಗಾಂಧೀಜಿ ಇದನ್ನು ತಿರಸ್ಕರಿಸಿದರು. ರಾಜ ಗೋಪಾಲಾಚಾರಿ ‘ರಿಟ್ರೀಟ್’ ಅಥವಾ ‘ವಿದ್‌ಡ್ರಾ’ ಎಂಬ ಪದಗಳನ್ನು ಸೂಚಿಸಿದರು. ಯೂಸುಫ್ ಮೆಹರಾಲಿ ‘ಕ್ವಿಟ್ ಇಂಡಿಯಾ’ ಎಂದು ಬರೆದಿದ್ದ ಕಲಾತ್ಮಕವಾದ ಒಂದು ರಿಬ್ಬನನ್ನು ಗಾಂಧೀಜಿಗೆ ನೀಡಿದರು. ಗಾಂಧೀಜಿ ಒಪ್ಪಿಗೆ ಸೂಚಕವಾಗಿ ‘ಆಮೆನ್’ (ಆಗಬಹುದು)ಎಂದರು’’.

ಮೆಹರಾಲಿಯವರ ಜೀವನ ಚರಿತ್ರೆ ಬರೆದಿರುವ ಮಧು ದಂಡವತೆಯವರು ಹೇಳುವಂತೆ ‘‘1942ರ ಚಳವಳಿಯ ಸಂದರ್ಭ ಮೆಹರಾಲಿ ‘ಕ್ವಿಟ್ ಇಂಡಿಯಾ’ ಎಂಬ ಶೀರ್ಷಿಕೆಯ ಒಂದು ಪುಸ್ತಿಕೆ (ಬುಕ್ಲೆಟ್)ಯನ್ನು ಪ್ರಕಟಿಸಿದರು. ಕೆಲವೇ ವಾರಗಳಲ್ಲಿ ಇದರ ಎಲ್ಲ ಪ್ರತಿಗಳೂ ಮಾರಾಟವಾಗಿ ಹೋದವು.’’ ‘‘ಅಲ್ಲದೆ ಆಗಸ್ಟ್ 7ರಂದು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಮೀಟಿಂಗ್ ಆರಂಭವಾಗುವ ಮೊದಲು ಅವರು ಒಂದು ಸಾವಿರಕ್ಕೂ ಹೆಚ್ಚು ‘ಕ್ವಿಟ್ ಇಂಡಿಯಾ’ ಬ್ಯಾಡ್ಜುಗಳನ್ನು ಮುದ್ರಿಸಿ ಈ ಸ್ಲೋಗನ್ ಜನಪ್ರಿಯವಾಗುವಂತೆ ಮಾಡಿದರು,’’ ಎನ್ನುತ್ತಾರೆ ಯೂಸುಫ್ ಮೆಹರಾಲಿ ಕೇಂದ್ರದ ಸ್ಥಾಪಕರಲ್ಲೊಬ್ಬರಾದ ಜಿ. ಜಿ. ಪಾರಿಖ್. ಇದು ಒಂದು ಲಾಭರಹಿತ ಸಂಘಟನೆಯಾಗಿ ಮುಂಬೈಯಲ್ಲಿ ಸ್ಥಾಪಿಸಲ್ಪಟ್ಟ, ಮೆಹರಾಲಿಯವರ ಸಮಾಜವಾದಿ ಹಾಗೂ ಗಾಂಧೀಜಿಯ ಕೊಡುಗೆಯ ಗೌರವಾರ್ಥವಾಗಿ ಇರುವ ಒಂದು ಸಂಸ್ಥೆ.

‘ಸೈಮನ್ ಗೋ ಬ್ಯಾಕ್’

ಕ್ವಿಟ್ ಇಂಡಿಯಾ ಚಳವಳಿಯ ಮೊದಲೇ ಆಕರ್ಷಕ ಪದ ಪುಂಜಗಳನ್ನು ಸೃಷ್ಟಿಸುವಲ್ಲಿ ಮೆಹರಾಲಿಯವರಿಗಿದ್ದ ಪ್ರತಿಭೆ ಸಾಬೀತಾಗಿತ್ತು. ಬ್ರಿಟಿಷ್ ಸರಕಾರದಿಂದ ಭಾರತದ ಬ್ರಿಟಿಷ್ ಆಡಳಿತದ ಸುಧಾರಣೆಗೆ ಶಿಫಾರಸುಗಳನ್ನು ಮಾಡುವುದಕ್ಕಾಗಿ ನೇಮಕಗೊಂಡಿದ್ದ ಎಲ್ಲರೂ ಬ್ರಿಟಿಷರೇ ಇದ್ದ (ಆಲ್-ಬ್ರಿಟಿಷ್) ಸೈಮನ್ ಕಮಿಶನ್ ವಿರುದ್ಧ, 1928ರಲ್ಲಿ ‘‘ಸೈಮನ್ ಗೋಬ್ಯಾಕ್’’ ಎಂಬ ಘೋಷಣೆಯನ್ನು ಸೃಷ್ಟಿಸಿದ್ದವರು ಮೆಹರಾಲಿಯವರೇ.

ಜಿ.ಜಿ. ಪಾರಿಖ್ ಹೇಳಿದರು: ‘‘1928ರ ಫೆಬ್ರವರಿಯಲ್ಲಿ ಆಯೋಗದ ಸದಸ್ಯರು ಮುಂಬೈ ಬಂದರಿನಲ್ಲಿ ಬಂದಿಳಿದಾಗ ಮೆಹರಾಲಿಯವರು ಒಂದು ಪ್ರತಿಭಟನೆಯನ್ನು ಸಂಘಟಿಸಿದ್ದರು. ಅವರು ಮತ್ತು ಸಹೋದ್ಯೋಗಿಗಳು ಒಳಗೆ ಹೋಗುವ ಅವಕಾಶ ಪಡೆಯುವುದಕ್ಕಾಗಿ ಕೂಲಿಗಳ ವೇಷ ಧರಿಸಿದ್ದರು; ಬಳಿಕ ಆಯೋಗದ ಸದಸ್ಯರನ್ನು ‘‘ಸೈಮನ್ ಗೋಬ್ಯಾಕ್’’ ಘೋಷಣೆ ಕೂಗಿ ಇದಿರುಗೊಂಡರು.

ಸ್ವಾತಂತ್ರ ಹೋರಾಟದಲ್ಲಿ ಮೆಹರಾಲಿಯವರು ವಹಿಸಿದ ಪಾತ್ರ ಕೇವಲ ಘೋಷಣೆಗಳನ್ನು ರಚಿಸುವುದಕ್ಕಷ್ಟೆ ಸೀಮಿತವಾಗಿರಲಿಲ್ಲ. ‘ಯೂಸೂಫ್ ಮೆಹರಾಲಿ: ಕ್ವೆಸ್ಟ್ ಫಾರ್ ನ್ಯೂ ಹಾರಿಝನ್ಸ್’ ಎನ್ನುವ ತನ್ನ ಪುಸ್ತಕದಲ್ಲಿ ದಂಡವತೆ ಬರೆಯುತ್ತಾರೆ: ರಾಮಮನೋಹರ ಲೋಹಿಯಾ, ಅರುಣಾ ಅಸಫ್ ಆಲಿ ಮತ್ತು ಅಚ್ಯುತ್ ಪಟವರ್ಧನ್ ಸೇರಿದಂತೆ, ತನ್ನ ಸಮಾಜವಾದಿ ಸಹೋದ್ಯೋಗಿಗಳನ್ನು ಜತೆಗೊಡಿ ಕಾಂಗ್ರೆಸ್ ನಾಯಕರ ಬಂಧನವಾದ ಬಳಿಕ, ಭೂಗತರಾಗಿದ್ದುಕೊಂಡು ಅವರು ಕ್ವಿಟ್‌ಇಂಡಿಯಾ ಚಳವಳಿಯನ್ನು ಮುನ್ನಡೆಸುವಂತೆ ನೋಡಿಕೊಳ್ಳುವಲ್ಲಿ ಮೆಹರಾಲಿಯವರು ವಹಿಸಿದ ಪಾತ್ರ ಗಣನೀಯವಾಗಿದೆ. ನಿಜ ಹೇಳಬೇಕೆಂದರೆ 1942ರ ಆಗಸ್ಟ್ 9ರಂದು ಗಾಂಧೀಜಿ ಮತ್ತು ಇತರರೊಂದಿಗೆ ಬಂಧಿಸಲ್ಪಟ್ಟ ಹಿರಿಯ ನಾಯಕರಲ್ಲಿ ಮೆಹರಾಲಿಯವರೂ ಒಬ್ಬರು.

1946ರಲ್ಲಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬಳಿಕ ಅವರು ಸ್ವತಂತ್ರ ಭಾರತದಲ್ಲಿ ಓರ್ವ ಶಾಸಕರಾದರು ಮತ್ತು ಕಾಂಗ್ರೆಸ್ ಸೋಶಲಿಸ್ಟ್ ಪಾರ್ಟಿ (ಕಾಂಗ್ರೆಸ್ ಸಮಾಜವಾದಿ ಪಕ್ಷ)ಯ ಸ್ಥಾಪಕರಾದರು. ಅವರು 1950ರಲ್ಲಿ ಮುಂಬೈಯಲ್ಲಿ ನಿಧನರಾದರು.

ಕೃಪೆ: scroll.in

Writer - ಆರೀಫಾ ಜೊಹಾರಿ

contributor

Editor - ಆರೀಫಾ ಜೊಹಾರಿ

contributor

Similar News

ಜಗದಗಲ
ಜಗ ದಗಲ