ಸದ್ಯದಲ್ಲೆ ಇತಿಹಾಸವಾಗಲಿರುವ ಪ್ರಸಿದ್ಧ ದೂರದರ್ಶನ ಲಾಂಛನ ರೂಪಿಸಿದವರಿವರು: ದೇವಾಶಿಸ್ ಭಟ್ಟಾಚಾರ್ಯ

Update: 2017-08-10 18:19 GMT

ನೀವು 1970ರ ದಶಕದಲ್ಲಿ ಬೆಳೆದವರಾದರೆ ಒಂದು ರವಿವಾರದ ಸಂಜೆ ಕುಟುಂಬದ ಈ ಕ್ಷಣ ನಿಮಗೆ ನೆನಪಿರುತ್ತದೆ. ನಿಮ್ಮ ತಂದೆ ಟೆರೆಸ್‌ನ ಮೇಲೆ ನಿಂತುಕೊಂಡು ಟಿ.ವಿ ಆ್ಯಂಟೆನಾವನ್ನು ತಿರುಗಿಸುತ್ತಾ ‘‘ಬಂತಾ? ಬಂತಾ?’’ ಅಂತ ಕೇಳುವುದನ್ನು, ನೀವು ನಿಮ್ಮ ತಾಯಿಯ ಜತೆ ಟಿವಿ ಸೆಟ್ ಮುಂದೆ ಕುಳಿತು ಕೊಂಡು ಬಾಲ್ಕನಿಯಿಂದ ‘‘ಬಂತು, ಬಂತು’’ ಅಥವಾ ‘‘ಇಲ್ಲ, ಇಲ್ಲ’’ ಎಂದು ಕೂಗುವುದು, ಟಿವಿ ಪರದೆಯ ಮೇಲೆ ಬೆಳಕುಮೂಡಿ ಕಣ್ಣಿನ ಒಂದು ಚಿತ್ರ ಸುರುಳಿ ಸುರುಳಿಯಾಗಿ ದೊಡ್ಡದಾಗುತ್ತಾ ಒಂದು ಸಂಕೇತ (ಸಿಂಬಲ್) ಆದಾಗ, ಆ ಚಿತ್ರವನ್ನು ರಚಿಸಿದವರಾರೆಂದು ನೀವು ಯಾವತ್ತಾದರೂ ಯೋಚಿಸಿದ್ದುಂಟೆ?

ಅದನ್ನು ರಚಿಸಿದ ವ್ಯಕ್ತಿ, ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‌ಐಡಿ)ಯ ಓರ್ವ ಮಾಜಿ ವಿದ್ಯಾರ್ಥಿ, ದೇವಾಶಿಸ್ ಭಟ್ಟಾಚಾರ್ಯ. ಸದ್ಯದಲ್ಲೇ ಅವರು ಒಂದು ರಸಪ್ರಶ್ನೆಯಾಗಬಹುದು. ಅವರು ರಚಿಸಿದ ದೂರದರ್ಶನ ಸಂಕೇತವನ್ನು ಒಂದು ಹೊಸ ಯುವ ಪ್ರೇಕ್ಷಕ ವರ್ಗಕ್ಕೆ ಟಿವಿಯನ್ನು ಹತ್ತಿರ ತರುವುದಕ್ಕಾಗಿ, ನಿವೃತ್ತಿಗೊಳಿಸಲಾಗುತ್ತಿದೆ.

1970ರ ದಶಕದಲ್ಲಿ ಭಾರತದ ಮೊದಲ ವಿನ್ಯಾಸ ಸಂಸ್ಥೆ ಎನ್‌ಐಡಿಯ ಎಂಟು ಮಂದಿ ಗ್ರಾಫಿಕ್ ವಿನ್ಯಾಸ ವಿದ್ಯಾರ್ಥಿಗಳು ಅಹಮದಾಬಾದ್‌ನಲ್ಲಿ ಸರಕಾರದ ಒಂದು ಪ್ರಾಜೆಕ್ಟ್‌ನಲ್ಲಿ ಕಾರ್ಯಮಗ್ನರಾಗಿದ್ದರು. ದೇಶದ ಸಾರ್ವಜನಿಕ ಪ್ರಸಾರ ಸಂಸ್ಥೆಯಾದ ದೂರದರ್ಶನಕ್ಕಾಗಿ ಒಂದು ಸಂಕೇತವನ್ನು ಅವರೂ ತಯಾರಿಸಬೇಕಾಗಿತ್ತು. ತರಗತಿಯ ಅಭ್ಯಾಸದ ಅಂಗವಾಗಿ; ಮನುಷ್ಯನ ಕಣ್ಣಿನಿಂದಾರಂಭಿಸಿ ಭಟ್ಟಾಚಾರ್ಯ ಗೆರೆಗಳನ್ನು ಗೀಚುತ್ತ, ಅದರ ಸುತ್ತ ಎರಡು ವಕ್ರರೇಖೆಗಳನ್ನೆಳೆದು, ಅದನ್ನು ತನ್ನ ಶಿಕ್ಷಕ ವಿಕಾಸ್ ಸತ್ಪಲೇಕರ್‌ಗೆ ನೀಡಿದರು. ಎಂಟು ವಿದ್ಯಾರ್ಥಿಗಳು ಮತ್ತು ಐದು ಮಂದಿ ಶಿಕ್ಷಕರು ಸಲ್ಲಿಸಿದ 14 ವಿನ್ಯಾಸಗಳಲ್ಲಿ ಪ್ರಧಾನಿ ಇಂದಿರಾ ಗಾಂಧಿ ಭಟ್ಟಾಚಾರ್ಯರ ವಿನ್ಯಾಸವನ್ನು ಆಯ್ಕೆ ಮಾಡಿದರು.

ಎನ್‌ಐಡಿ- ವಿಷಯಗಳ ಪ್ರಯೋಗಾಲಯ

ಒಮ್ಮೆ ವಿನ್ಯಾಸದ ಆಯ್ಕೆಯಾದೊಡನೆ ಮುಂದಿನ ಕೆಲಸ ಆರಂಭವಾಯಿತು. ಬಿನಯ್ ಸರ್ಕಾರ್ ಮತ್ತು ಸತ್ಪಲೇಕರ್‌ರಂತಹ ಭಾರತೀಯ ವಿನ್ಯಾಸ ರಂಗದ ಖ್ಯಾತನಾಮರ ಮಾರ್ಗದರ್ಶನದಲ್ಲಿ ಡಿಡಿಯ ಲೋಗೊ ಸಿದ್ಧಗೊಂಡಿತು.

ಎಐಆರ್ (ಆಲ್ ಇಂಡಿಯಾ ರೇಡಿಯೊ) ಆರ್ಕೆಸ್ಟ್ರಾದಲ್ಲಿ ಓರ್ವ ಪ್ರಸಿದ್ಧ ಕಲಾವಿದರಾಗಿದ್ದ ಪಂಡಿತ್ ರವಿಶಂಕರ್, ಉಸ್ತಾದ್ ಅಲಿ ಅಹ್ಮದ್ ಹುಸೈನ್‌ಖಾನ್‌ರೊಡಗೂಡಿ ಅದಾಗಲೇ ಡಿಡಿಯ ಸಿಗ್ನೇಚರ್ ಟ್ಯೂನ್ ಅನ್ನು ಸಂಯೋಜಿಸಿದ್ದರು. 1976ರ ಎಪ್ರಿಲ್ 1 ರಂದು ಡಿಡಿಯ ಸಿಂಬಲ್ ಮತ್ತು ಟ್ಯೂನ್ ಮೊತ್ತಮೊದಲ ಬಾರಿಗೆ ಟಿವಿ ಪರದೆಯ ಮೇಲೆ ಕಾಣಿಸಿಕೊಂಡವು.

ಕಣ್ಣಿನ ಕತೆ

ಎನ್‌ಐಡಿಯ ಮತ್ತೊಬ್ಬ ವಿದ್ಯಾರ್ಥಿ, ಆರ್.ಎಲ್.ಮಿಸ್ತ್ರಿ ಮೊದಲ ಮೂಲ ಸಿಂಬಲ್‌ಗೆ ಆ್ಯನಿಮೇಷನ್ ಮಾಡಿದರು. ಅವರು ಭಟ್ಟಾಚಾರ್ಯರ ನಕಾಶೆಗಳನ್ನು ಬಳಸಿ, ಅವುಗಳ ಪ್ರತಿಗಳನ್ನು ಮಾಡಿ, ಕ್ಯಾಮರಾದ ಕೆಳಗೆ ಅವುಗಳನ್ನು ಶೂಟ್‌ಮಾಡಿ, ಅವು ಅಂತಿಮರೂಪ ಪಡೆಯುವ ವರೆಗೆ ಅವುಗಳನ್ನು ತಿರುಗಿಸಿದರು. ಈ ಅಂತಿಮ ರೂಪ ಜನಪ್ರಿಯ ಮಾತಿನಲ್ಲಿ ‘‘ಡಿಡಿ ಕಣ್ಣು’’ ಎಂದು ಖ್ಯಾತವಾಗಿದೆ. ಅದೇನೇ ಇದ್ದರೂ, ವಿನ್ಯಾಸ ತಜ್ಞರಲ್ಲಿ ಈ ಕಣ್ಣಿನ ವಿನ್ಯಾಸ ಮತ್ತು ಅದರ ಅರ್ಥವಿವರಣೆಯ ಬಗ್ಗೆ ಭಿನ್ನಾಭಿಪ್ರಾಯವಿದೆ.

‘‘ಅದು ಒಂದು ಕಣ್ಣು ಆಗಿರಬೇಕೆಂಬುದು ನಮ್ಮ ಉದ್ದೇಶವಾಗಿರಲಿಲ್ಲ. ಅದು ಹಾಗೆ ಕಾಣುವಂತಾಗಿದೆ; ಅಷ್ಟೆ. ಕೇವಲ ಕಣ್ಣು ಅರ್ಥ ನೀಡುವುದಿಲ್ಲ. ನೀವು ನೋಡುವುದು ಮಾತ್ರವಲ್ಲ, ನೀವು ಟಿವಿಯನ್ನು ಆಲಿಸುತ್ತೀರಿ ಕೂಡ. ವಕ್ರರೇಖೆಗಳು ಮತ್ತು ಅವುಗಳ ನಡುವಿನ ಜಾಗ (ಸ್ಪೇಸ್) ಪರಸ್ಪರ ಸೇರಿಕೊಳ್ಳುವುದು, ಹೆಣೆದುಕೊಳ್ಳುವುದು ಇದು ಮಾಹಿತಿಯನ್ನು ಪಡೆದು,ಅದನ್ನು ಪ್ರಸಾರಮಾಡುವುದನ್ನು ಸೂಚಿಸುತ್ತದೆ. ಒಂದು ನ್ಯೂಸ್ ಚ್ಯಾನೆಲ್ ಮಾಡುವುದು ಇದೇ ಕೆಲಸವನ್ನು ತಾನೆ?’’

ಇದು ಸಂಕೇತದಲ್ಲಿ ದೋಷಕಂಡುಹಿಡಿಯುವುದಲ್ಲ, ಯಾವಾಗಲೂ ಸ್ಪಷ್ಟತೆ ಮತ್ತು ಸಂವಹನವೂ ವಿನ್ಯಾಸದ ಗುರಿಯಾಗಿದೆ ಮತ್ತು ಒಂದು ವಿನ್ಯಾಸವು ಸಾಂಸ್ಕೃತಿಕ ಸೂಕ್ಷ್ಮತೆಗಳನ್ನೂ ಸೂಚಿಸಬೇಕು. ಸಂಸ್ಕೃತಿಯೊಂದರ ಅನುಭವವನ್ನು ಸಂವಹನ ಮಾಡಬೇಕಾದದ್ದು ಡಿಡಿ ಸಿಂಬಲ್‌ನ ವಿನ್ಯಾಸಕಾರರ ಮುಂದೆ ಇದ್ದ ಸವಾಲು. ಯಾಕೆಂದರೆ ಅಂತಹ ಒಂದು ಸಿಂಬಲ್ ಆ ಮೊದಲು ಇರಲಿಲ್ಲ. 1975ರ ವರೆಗೆ ಏಳು ನಗರಗಳ ಜನರು ಮಾತ್ರ ಬಂದು ಟಿವಿ ಮುಂದೆ ಕೂತಿದ್ದರು ಮತ್ತು ಆ ಜನರು ಮುಖ್ಯವಾಗಿ ರೇಡಿಯೊ ಆಲಿಸುತ್ತಿದ್ದ ಸಾರ್ವಜನಿಕರು.

 ‘‘ನೀವು ಒಂದು ಬ್ರೋಗ್‌ಅನ್ನು ಮಾಡಿ ಅದು ಹಳ್ಳಿಯ ಜನಕ್ಕಾಗಿ ಅಂತ ಹೇಳುವ ಹಾಗಿಲ್ಲ’’ ಎನ್ನುತ್ತಾರೆ ಭಟ್ಟಾಚಾರ್ಯ. ‘‘ಒಂದು ಸಿಂಬಲ್, ಸಂಕೇತ ವಿಭಿನ್ನ ಸಂಸ್ಕೃತಿಗಳಲ್ಲಿ ವಿಭಿನ್ನ ಅರ್ಥನೀಡುತ್ತದೆ, ಭಾರತದಲ್ಲಿ ಹಲವಾರು ರೀತಿಯ ಸಂಸ್ಕೃತಿಗಳಿವೆ. ಆದ್ದರಿಂದ ಡಿಡಿ ಸಿಂಬಲ್ ವ್ಯಕ್ತಿಗತವಾದ ಅರ್ಥಗಳನ್ನು ನೀಡದಂತಹ ಒಂದು ಸಿಂಬಲ್ ಆಗಿರಬೇಕು. ಒಂದು ಕಣ್ಣು ಎಂದರೆ ಅದು ದಕ್ಷಿಣಕ್ಕೂ, ಈಶಾನ್ಯಕ್ಕೂ ಒಂದೇ ಅರ್ಥಕೊಡುತ್ತದೆ.’’

ಖಂಡಿತವಾಗಿಯೂ ಡಿಡಿಗೆ ಅಂತಹ ಸಿಂಬಲ್ ದೊರಕಿತು. ಡಿಡಿಗೆ ಬರುವ ಮೊದಲು ಎಐಆರ್‌ನಲ್ಲಿ ವೃತ್ತಿ ಆರಂಭಿಸಿದ್ದ ಖ್ಯಾತ ಡಿಡಿ ಪ್ರೊಡ್ಯುಸರ್ ಶರತ್‌ದತ್ತ್ ಹೇಳುವಂತೆ, ‘‘ ಡಿಡಿಯ ಸಿಂಬಲ್ ಎಐಆರ್‌ನ (ಆಲ್ ಇಂಡಿಯಾ ರೇಡಿಯೊ) ಸಿಂಬಲ್‌ಗಿಂತ ಉತ್ತಮ. ಸಾರೆ ಜಹಾನ್ ಸೆ ಅಚ್ಚಾ ದ ಟ್ಯೂನ್‌ಗಿಂತ ಡಿಡಿಯ ಟ್ಯೂನ್ ಹೆಚ್ಚು ಉತ್ತಮವಾಗಿರಬೇಕೆಂಬ ಇಂದಿರಾ ಗಾಂಧಿಯವರ ಸಲಹೆಯಂತೆ, ಪಂಡಿತ್ ರವಿಶಂಕರ್ ತನ್ನ ಅತ್ಯುತ್ತಮ ಸಂಗೀತ ಪ್ರತಿಭೆಯೆರೆದು ಡಿಡಿಯ ಟ್ಯೂನ್‌ಅನ್ನು ಸಂಯೋಜಿಸಿದ್ದರು.

ಡಿಡಿಯ ಸಿಗ್ನೇಚರ್ ಟ್ಯೂನ್ ಹೋಗಿ, ಸಿಂಬಲ್ ಮಾತ್ರ ಉಳಿಯಬೇಕೆ? ಅಥವಾ ಎರಡೂ ಹೋಗಬೇಕೆ? ಸಿಂಬಲ್‌ಗಳು ಸಾಂಸ್ಕೃತಿಕ ನೆನಪುಗಳೊಂದಿಗೆ ತಳಕುಹಾಕಿ ಕೊಂಡಿರುತ್ತವೆ. ಆದ್ದರಿಂದ ಹೊಸವಿನ್ಯಾಸವನ್ನು ರಚಿಸುವ ವಿನ್ಯಾಸಕಾರನ ಮೇಲೆ ತುಂಬ ದೊಡ್ಡ ಜವಾಬ್ದಾರಿ ಇದೆ.

ಕೃಪೆ: hindustantimes.com

Writer - ಪರಮಿತ ಘೋಷ್

contributor

Editor - ಪರಮಿತ ಘೋಷ್

contributor

Similar News

ಜಗದಗಲ
ಜಗ ದಗಲ