ಕುದುರೆ ವ್ಯಾಪಾರಕ್ಕೆ ಹೊರಟು ಕತ್ತೆಗಳನ್ನು ಕೊಂಡವರು

Update: 2017-08-10 18:32 GMT

ಗುಜರಾತ್‌ನ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ನಡೆಸಿರುವ ರಾಜಕಾರಣ ಅತ್ಯಂತ ನೀಚ ಮತ್ತು ಅಪಾಯಕಾರಿಯಾದುದು. ಪ್ರಜಾಸತ್ತೆಗಿಂತ ನಾವು ದೊಡ್ಡವರು ಎನ್ನುವುದನ್ನು ದೇಶಕ್ಕೆ ಸಾಬೀತು ಮಾಡಲು ಹೋಗಿ, ಅಮಿತ್ ಶಾ ಮತ್ತು ನರೇಂದ್ರ ಮೋದಿ ದೇಶದ ಮುಂದೆ ಬೆತ್ತಲಾಗಿದ್ದಾರೆ.

ಅವರು ತಮ್ಮ ಯತ್ನದಲ್ಲಿ ಸಂಪೂರ್ಣ ಸೋತಿದ್ದಾರೆ ಎಂದು ಇದರ ಅರ್ಥವಲ್ಲ. ಇಡೀ ಪ್ರಜಾಸತ್ತೆಯನ್ನೇ ಕೆಲ ಹೊತ್ತು ಹೈಜಾಕ್ ಮಾಡಿ, ಚುನಾವಣೆಯ ಫಲಿತಾಂಶವನ್ನು ತಲೆಕೆಳಗೆ ಮಾಡುವುದರಲ್ಲಿ ಅವರು ಭಾಗಶಃ ಯಶಸ್ವಿಯಾಗಿದ್ದರು. ಒಂದು ವೇಳೆ, ಚುನಾವಣಾ ಆಯೋಗವೂ ಈ ನಾಯಕರ ಮೂಗಿನ ನೇರಕ್ಕೆ ತನ್ನ ತೀರ್ಪನ್ನು ನೀಡಿದ್ದಿದ್ದರೆ ಅಲ್ಲಿ ಪ್ರಜಾಸತ್ತೆ ಗುಜರಾತ್‌ನಲ್ಲಿ ಮಧ್ಯರಾತ್ರಿ ಗಲ್ಲಿಗೇರಿ ಬಿಡುತ್ತಿತ್ತು. ಮುಂದಿನ ದಿನಗಳಲ್ಲಿ ಈ ರಾಜಕಾರಣವನ್ನೇ ಮಾದರಿಯಾಗಿಟ್ಟುಕೊಂಡು ದೇಶವನ್ನು ಸಂಪೂರ್ಣ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಈ ನಾಯಕರು ಹಿಂದೇಟು ಹಾಕುತ್ತಿರಲಿಲ್ಲ. ಆದುದರಿಂದ ಮಂಗಳವಾರ ನಡೆದ ಚುನಾವಣೆಯಲ್ಲಿ ನಿಜಕ್ಕೂ ಗೆದ್ದಿದ್ದು ಚುನಾವಣಾ ಆಯೋಗ ಮಾತ್ರ. ತಾನಿನ್ನೂ ರಾಜಕಾರಣಿಗಳ ಅಧಿಕಾರ, ಹಣಕ್ಕೆ ಮಾರಾಟವಾಗಿಲ್ಲ ಎನ್ನುವುದನ್ನು ಅದು ಆ ಸಂದರ್ಭದಲ್ಲಿ ಮೋದಿ ಮತ್ತು ಅಮಿತ್ ಶಾರಿಗೆ ಸ್ಪಷ್ಟಪಡಿಸಿತು. ಬಹುಶಃ ನೂತನ ಮುಖ್ಯ ಚುನಾವಣಾ ಆಯುಕ್ತರ ಆಗಮನದ ಬಳಿಕವೂ ಇಂತಹದೊಂದು ನಿರ್ಧಾರವನ್ನು ಆಯೋಗಕ್ಕೆ ತೆಗೆದುಕೊಳ್ಳಲು ಸಾಧ್ಯ ಅನ್ನಿಸುವುದಿಲ್ಲ. ಆದುದರಿಂದಲೇ ಮುಂದಿನ ದಿನಗಳಲ್ಲಿ ಪ್ರಜಾಸತ್ತೆ ಇನ್ನಷ್ಟು ಅಪಾಯಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ ಎನ್ನುವ ಸೂಚನೆಯನ್ನೂ ಗುಜರಾತ್‌ನ ಬೆಳವಣಿಗೆಗಳು ತಿಳಿಸಿವೆ.

ಗುಜರಾತ್‌ನಲ್ಲಿ ಎರಡು ಬಿಜೆಪಿ ಅಭ್ಯರ್ಥಿಗಳಷ್ಟೇ ಆಯ್ಕೆಯಾಗುವಂತಹ ಸನ್ನಿವೇಶವಿತ್ತು. ಮೂರನೆ ಅಭ್ಯರ್ಥಿ ಆಯ್ಕೆಯಾಗುವ ಯಾವ ಸಾಧ್ಯತೆಗಳೂ ಅಲ್ಲಿರಲಿಲ್ಲ. ಸಾಧಾರಣವಾಗಿ ಒಂದೆರಡು ಮತಗಳ ಅಂತರದಲ್ಲಿ ಗೆಲ್ಲುವ ಸಾಧ್ಯತೆಗಳಿದ್ದಾಗ ಆಯಾ ಪಕ್ಷಗಳು ಮೂರನೆ ಅಭ್ಯರ್ಥಿಯನ್ನು ಕಣಕ್ಕಳಿಸಿ, ಕಾರ್ಯತಂತ್ರವನ್ನು ರೂಪಿಸುತ್ತವೆ. ಗೆಲ್ಲುವ ಸಾಧ್ಯತೆಗಳೇ ಇಲ್ಲದಂತಹ ಪರಿಸ್ಥಿತಿಯಲ್ಲಿ ಅಭ್ಯರ್ಥಿಯನ್ನು ಹೆಸರಿಗಷ್ಟೇ ಕಣಕ್ಕಿಳಿಸುತ್ತವೆ. ಆದರೆ ಈ ಬಾರಿ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ರೂಪಿಸಿದ ಕಾರ್ಯತಂತ್ರ ಪ್ರಜಾಸತ್ತೆಯನ್ನು ಬುಡಮೇಲುಗೊಳಿಸುವಂತಹದು. ಹತ್ತಕ್ಕೂ ಅಧಿಕ ಶಾಸಕರ ಕೊರತೆಯಿರುವಾಗ, ಆ ಚುನಾವಣೆಯನ್ನು ಗೆಲ್ಲುತ್ತೇವೆ ಎಂದು ಹೊರಡುವುದು ಪ್ರಜಾಸತ್ತೆಗೆ ಹಾಕಿದ ಸವಾಲೇ ಸರಿ.

ಅಮಿತ್‌ಶಾ ಅವರು ಸೋಲಿಸಲು ಹೊರಟದ್ದು ಕಾಂಗ್ರೆಸ್ ಅಭ್ಯರ್ಥಿಯನ್ನಲ್ಲ, ಪ್ರಜಾಸತ್ತೆಯನ್ನು. ಇಡೀ ದೇಶವೇ ನೋಡನೋಡುತ್ತಿದ್ದಂತೆಯೇ ಆರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದರು. ಕೆಲವರು ಬಂಡಾಯವೆದ್ದರು. ಕಾರಣ ಸ್ಪಷ್ಟ. ಬಿಜೆಪಿ ಕೋಟಿ ಕೋಟಿ ಹಣವನ್ನು ತನ್ನ ಅಭ್ಯರ್ಥಿಯ ಗೆಲುವಿಗೆ ಎನ್ನುವುದಕ್ಕಿಂತ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗಾಗಿ ಸುರಿದಿದೆ. ನೋಟು ನಿಷೇಧದ ಬಳಿಕ ಶ್ರೀಮಂತರೆಲ್ಲ ಹಣವಿಲ್ಲದೆ ಒದ್ದಾಡುತ್ತಿದ್ದಾರೆ ಎಂದು ಬಣ್ಣಿಸುವ ನರೇಂದ್ರ ಮೋದಿಯವರ ಪಕ್ಷವು ಒಬ್ಬ ಯಕಶ್ಚಿತ್ ರಾಜ್ಯಸಭಾ ಸದಸ್ಯನನ್ನು ಗೆಲ್ಲಿಸುವುದಕ್ಕಾಗಿ ನೂರಾರು ಕೋಟಿ ರೂಪಾಯಿ ಚೆಲ್ಲುತ್ತದೆ ಎಂದಾದರೆ, ನೋಟು ನಿಷೇಧದ ನಿಜವಾದ ಫಲಾನುಭವಿಗಳು ಯಾರು ಎನ್ನುವುದನ್ನು ನಾವು ಸುಲಭವಾಗಿ ಊಹಿಸಬಹುದು. ಗುಜರಾತ್‌ನಲ್ಲಿ ಹಲವು ನೂರು ಕೋಟಿ ರೂಪಾಯಿಗಳಲ್ಲಿ ಕುದುರೆ ವ್ಯಾಪಾರ ನಡೆಯುತ್ತಿರುವುದನ್ನು ನೋಡಿಯೂ ಐಟಿ ಅಧಿಕಾರಿಗಳು ಅತ್ತ ಕಣ್ಣೆತ್ತಿಯೂ ನೋಡಲಿಲ್ಲ. ಕಾಂಗ್ರೆಸ್ ಎಂತಹ ದಯನೀಯ ಸ್ಥಿತಿಯನ್ನು ಅನುಭವಿಸಿತ್ತು ಎಂದರೆ, ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಬೆಂಗಳೂರಿನ ರೆಸಾರ್ಟ್‌ನಲ್ಲಿ ಬಚ್ಚ್ಡಿಡಬೇಕಾಯಿತು.

ವಿಪರ್ಯಾಸವೆಂದರೆ, ತನ್ನ ಕುದುರೆ ವ್ಯಾಪಾರಕ್ಕೆ ಕೇಂದ್ರ ಸರಕಾರ ಐಟಿಯಂತಹ ಸಂಸ್ಥೆಯನ್ನು ಬಳಸುವುದಕ್ಕೂ ಹಿಂಜರಿಯಲಿಲ್ಲ. ಡಿಕೆಶಿ ಅವರು ಐಟಿ ದಾಳಿಗೆ ಸರ್ವ ರೀತಿಯಲ್ಲಿ ಅರ್ಹರೇ ಆಗಿದ್ದರೂ, ವಾರಗಳ ಹಿಂದೆ ಅವರ ಮೇಲೆ ನಡೆದಿರುವ ದಾಳಿ ಮಾತ್ರ ಅಪ್ಪಟ ರಾಜಕೀಯದ ಭಾಗವಾಗಿತ್ತು. ಕೊನೆಗೂ ತನ್ನೆಲ್ಲ ಹಣಬಲ ಮತ್ತು ಅಧಿಕಾರ ಬಲವನ್ನು ಬಳಸಿ ರಾಜ್ಯಸಭೆಯಲ್ಲಿ ಮೂರನೆ ಅಭ್ಯರ್ಥಿಯನ್ನು ಬಿಜೆಪಿ ಇನ್ನೇನು ಗೆಲ್ಲಿಸಿಯೇ ಬಿಡಬೇಕು ಎನ್ನುವಷ್ಟರಲ್ಲಿ, ಪ್ರಜಾಸತ್ತೆಯ ಶಕ್ತಿ ಇನ್ನೊಂದು ರೂಪದಲ್ಲಿ ಪ್ರಕಟವಾಗಿ ಬಿಜೆಪಿ ಭಾರೀ ಮುಖಭಂಗವನ್ನು ಅನುಭವಿಸಬೇಕಾಯಿತು.

ಅದಾಗಲೇ ತಮ್ಮನ್ನು ಮಾರಿಕೊಂಡ ಕಾಂಗ್ರೆಸ್‌ನ ಶಾಸಕರು ಮಾಡಿರುವ ಒಂದು ಎಡವಟ್ಟು ಬಿಜೆಪಿಯ ಎಲ್ಲ ಯೋಜನೆಗಳನ್ನೂ ಮಕಾಡೆ ಮಲಗಿಸಿ ಪ್ರಜಾಸತ್ತೆ ತಲೆಯೆತ್ತಿ ನಿಲ್ಲುವಂತಾಯಿತು. ಚುನಾವಣೆಯನ್ನು ಬುಡಮೇಲು ಗೊಳಿಸಿ ಫಲಿತಾಂಶವನ್ನು ತಮಗೆ ಪೂರಕವಾಗಿ ಮಾಡಿಕೊಳ್ಳಬಲ್ಲೆವು ಎನ್ನುವುದನ್ನು ಸಾಧಿಸಿ ತೋರಿಸುವುದಕ್ಕೆಂದೇ ಸವಾಲನ್ನು ತಾವಾಗಿ ಮೈಮೇಲೆ ಎಳೆದುಕೊಂಡು, ಹಣ, ಸಮಯ, ಶ್ರಮ, ಅಧಿಕಾರ ಎಲ್ಲವನ್ನೂ ವ್ಯಯ ಮಾಡಿ ಅತ್ಯಂತ ಹೀನಾಯ ರೀತಿಯಲ್ಲಿ ಅಮಿತ್ ಶಾ ಬಳಗ ಮುಖಭಂಗ ಅನುಭವಿಸಿತು. ಆದರೆ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಗೆದ್ದಿತು ಎನ್ನುವಂತಿಲ್ಲ. ಯಾಕೆಂದರೆ ಕೈ ತುಂಬಾ ಶಾಸಕರನ್ನು ಇಟ್ಟುಕೊಂಡೂ, ಅಹ್ಮದ್ ಪಟೇಲ್‌ರಂತಹ ವರ್ಚಸ್ಸಿನ ರಾಜಕಾರಣಿಯನ್ನು ರಾಜ್ಯಸಭೆಗೆ ಆಯ್ಕೆ ಮಾಡಿಸಲು ಕಾಂಗ್ರೆಸ್ ಇಷ್ಟೊಂದು ತಿಣುಕಾಡಬೇಕಾಯಿತು ಎಂದರೆ, ಅದು ಕಾಂಗ್ರೆಸ್‌ನ ಸೋಲೇ ಆಗಿದೆ. ಒಂದು ರೀತಿಯಲ್ಲಿ, ಕಾಂಗ್ರೆಸ್‌ನೊಳಗಿರುವ ಸಮಯಸಾಧಕ ರಾಜಕಾರಣಿಗಳ ಬಣ್ಣ ಈ ಚುನಾವಣೆಯಿಂದ ಬಯಲಾಯಿತು.

ಈ ಚುನಾವಣೆಯ ಅಡೆತಡೆಗಳಿಂದ ಕಾಂಗ್ರೆಸ್ ಪಾಠ ಕಲಿತು, ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಿದರೆ ಒಂದಿಷ್ಟು ಸ್ಥಾನಗಳನ್ನಾದರೂ ಭವಿಷ್ಯದಲ್ಲಿ ಗೆಲ್ಲಬಹುದು. ಬಿಜೆಪಿ ತನ್ನ ಹಣದಿಂದ ಕೇವಲ ಕಾಂಗ್ರೆಸ್‌ನ ಸಮಯಸಾಧಕ ಶಾಸಕರನ್ನಷ್ಟೇ ಕೊಂಡುಕೊಂಡಿಲ್ಲ. ಗುಜರಾತ್ ಬೆಳವಣಿಗೆಯಲ್ಲಿ ಸಮಯ ಸಾಧಕ ಮಾಧ್ಯಮಗಳ ಕೊಡುಗೆ ಅತಿ ದೊಡ್ಡದು. ಬಿಜೆಪಿ ಹಾಡುಹಗಲೇ ಕುದುರೆ ವ್ಯಾಪಾರ ನಡೆಸುತ್ತಿರುವಾಗ, ಮಾಧ್ಯಮಗಳು ಅದರ ಸರಿತಪ್ಪುಗಳನ್ನು ವಿಮರ್ಶಿಸಬೇಕಾಗಿತ್ತು. ಹರಿದಾಡುತ್ತಿರುವ ಕೋಟಿ ಕೋಟಿ ರೂಪಾಯಿಗಳ ಬಗ್ಗೆ ವಿವರಗಳನ್ನು ಮುಂದಿಟ್ಟು ರಾಜಕೀಯ ವಿಶ್ಲೇಷಣೆ ಮಾಡಬೇಕಾಗಿತ್ತು. ಆದರೆ ಮಾಧ್ಯಮಗಳು ಅಮಿತ್ ಶಾನರ ರಾಜಕೀಯ ಮೋಸಗಳನ್ನು, ನಡೆಯುತ್ತಿರುವ ಭ್ರಷ್ಟಾಚಾರವನ್ನು ರಾಜಕೀಯ ತಂತ್ರವೆಂದು ಶ್ಲಾಘಿಸತೊಡಗಿದವು. ಗುಜರಾತ್‌ನಲ್ಲಿ ನಡೆಯುತ್ತಿರುವುದು ಪ್ರಜಾಸತ್ತೆಯ ಕಗ್ಗೊಲೆ ಎನ್ನುವುದನ್ನು ಮುಚ್ಚಿಟ್ಟು, ಕೊಲೆಗಾರರನ್ನೇ ಹಾಡಿ ಹೊಗಳಿದ ಮಾಧ್ಯಮಗಳು ಈ ಕುದುರೆ ವ್ಯಾಪಾರದ ಭಾಗವೇ ಆಗಿದ್ದವು.

ಇಂತಹ ಮಾಧ್ಯಮಗಳಿಗೆ ಭ್ರಷ್ಟ ರಾಜಕಾರಣಿಗಳನ್ನು ಟೀಕಿಸುವ ನೈತಿಕ ಹಕ್ಕಾದರೂ ಎಲ್ಲಿದೆ? ಒಂದು ವೇಳೆ ಈ ಚುನಾವಣೆಯನ್ನು ಅಮಿತ್ ಶಾ ಬಳಗ ಗೆದ್ದಿದ್ದರೆ, ಒಂದು ವಾರಗಳ ಕಾಲ ಮೋದಿ ಮತ್ತು ಅಮಿತ್‌ಶಾರ ‘ರಾಜಕೀಯ ಮುತ್ಸದ್ದಿತನ’ದ ಭಜನೆಗೆ ಮಾಧ್ಯಮಗಳಿಗೆ ಭಾರೀ ಮೊತ್ತದ ಹಣ ನಿಗದಿಯಾಗಿತ್ತು ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಒಂದು ಕಾಲದಲ್ಲಿ ನೆಹರೂ, ಶಾಸ್ತ್ರಿ, ಅಟಲ್‌ರಂತಹ ಸಜ್ಜನ ರಾಜಕಾರಣಿಗಳ ಕಾರ್ಯತಂತ್ರ ದೇಶಕ್ಕೆ ಮಾದರಿಯಾಗಿತ್ತು. ಆದರೆ ಇಂದು ಅಮಿತ್‌ಶಾರಂತಹ ಕಪಟ ರಾಜಕಾರಣಿಗಳನ್ನು ದೇಶದ ರಾಜಕೀಯಕ್ಕೆ ಮಾದರಿಯಾಗಿಸಲು ಯತ್ನಿಸುತ್ತಿರುವ ಮಾಧ್ಯಮಗಳೇ ಪ್ರಜಾಸತ್ತೆಯ ಅತಿ ದೊಡ್ಡ ಶತ್ರುಗಳು ಎನ್ನುವುದನ್ನು ಗುಜರಾತ್‌ನ ಸದ್ಯದ ಬೆಳವಣಿಗೆ ಸಾಬೀತು ಮಾಡಿದೆ. ಒಟ್ಟಿನಲ್ಲಿ ಅಮಿತ್ ಶಾ ಬಳಗ ಮಾತ್ರವಲ್ಲ, ಈ ದೇಶದ ಮಾಧ್ಯಮಗಳೂ ಕುದುರೆ ವ್ಯಾಪಾರದೊಳಗೆ ನೇರವಾಗಿ ಭಾಗವಹಿಸಿವೆ. ಆದರೆ ಕುದುರೆಗಳ ವ್ಯಾಪಾರದಲ್ಲಿ ಅವರಿಗೆ ಸಿಕ್ಕಿರುವುದು ಮಾತ್ರ ಕತ್ತೆಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News