ಮುಂಬೈಯಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತಿವೆ ನಾಯಿಗಳು : ಕಾರಣವೇನು ಗೊತ್ತೇ ?

Update: 2017-08-11 08:44 GMT

ಮುಂಬೈ ,ಆ.11: ನವೀ ಮುಂಬೈಯ ತಲೋಜಾ ಕೈಗಾರಿಕಾ ಪ್ರದೇಶದಲ್ಲಿರುವ ನಾಯಿಗಳ ಮೈಬಣ್ಣವೇಕೆ ನೀಲಿಯಾಗುತ್ತಿದೆ  ಎಂಬ ಪ್ರಶ್ನೆಗೆ  ಕಲುಷಿತವಾಗಿರುವ  ಹತ್ತಿರದ ಕಸಡಿ ನದಿಯೇ ಉತ್ತರ ನೀಡುವುದು.

ಬೀದಿ ನಾಯಿಗಳು ಆಗಾಗ ಈ ನದಿ ನೀರನ್ನು ಪ್ರವೇಶಿಸಿ  ಆಹಾರಕ್ಕಾಗಿ ತಡಕಾಡುವುದರಿಂದ  ನದಿ ನೀರಿನಲ್ಲಿರುವ ಕೈಗಾರಿಕಾ ತ್ಯಾಜ್ಯದ ರಾಸಾಯನಿಕಗಳು  ಅವುಗಳ ರೋಮವನ್ನು ನೀಲಿ ಬಣ್ಣಕ್ಕೆ ತಿರುಗಿಸುತ್ತಿವೆ.

ಎರಡು ದಿನಗಳ ಹಿಂದೆ ನವಿ ಮುಂಬೈ ಪ್ರಾಣಿ ರಕ್ಷಣಾ ಘಟಕದ ಕಾರ್ಯಕರ್ತರು ಹೀಗೆ ನೀಲಿ ಬಣ್ಣಕ್ಕೆ ತಿರುಗಿದ ನಾಯಿಯೊಂದರ ಫೋಟೊಗಳನ್ನು ತೆಗೆದು ನಂತರ   ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರೊಂದನ್ನು ಸಲ್ಲಿಸಿ  ಕೈಗಾರಿಕಾ ಘಟಕಗಳು ತಮ್ಮ ತ್ಯಾಜ್ಯವನ್ನು ನೇರವಾಗಿ ನದಿಗೇ ಹರಿಯಬಿಡುವುದರಿದ ಪ್ರಾಣಿಗಳು ಸಂಕಷ್ಟಕ್ಕೀಡಾಗಿವೆ ಎಂದು ದೂರಿದ್ದರು. ಈ ಪ್ರದೇಶದಲ್ಲಿ ಸುಮಾರು 1000 ಕೈಗಾರಿಕಾ ಘಟಕಗಳಿದ್ದು ಅವುಗಳಲ್ಲಿ ಫಾರ್ಮಾ, ಆಹಾರ ಮತ್ತು ಇಂಜಿನಿಯರಿಂಗ್ ಫ್ಯಾಕ್ಟರಿಗಳಿವೆ.

ಈ ಪ್ರದೇಶದ ನಿವಾಸಿಗಳು ತಾವು ನೀಲಿ ಬಣ್ಣಕ್ಕೆ ತಿರುಗಿದ ಕನಿಷ್ಠ ಐದು ನಾಯಿಗಳನ್ನು ನೋಡಿದ್ದಾಗಿ ಹೇಳುತ್ತಾರೆ. ಈ ಕಲುಷಿತ ನೀರು ಮನುಷ್ಯರ ಆರೋಗ್ಯಕ್ಕೂ ಮಾರಕವಾಗಬಹುದೆಂಬ ಭಯವಿದೆ. ಕಳೆದ ವರ್ಷ ಮೀನುಗಾರರೂ ಈ ಕಲುಷಿತ ನೀರಿನಿಂದ ಮೀನುಗಳಿಗೆ ಹಾನಿಯಾಗುತ್ತಿವೆ ಎಂದು ದೂರಿದ್ದರು. ತ್ಯಾಜ್ಯ ನೀರು ನಿರ್ವಹಣಾ ಘಟಕವಿದ್ದರೂ ಅದು ಸಾಕಾಗುತ್ತಿಲ್ಲ.

ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ  ನೀಡಿದ ಹಲವು ದೂರುಗಳ ಪರಿಣಾಮ ಕಸಡಿ ನದಿ ಹೊರಸೂಸುತ್ತಿದ್ದ ವಾಸನೆ ಕಡಿಮೆಯಾಗಿದ್ದರೂ ಮಾಲಿನ್ಯ ಮಾತ್ರ ನಿಂತಿಲ್ಲ. ನದಿ ನೀರಿಗೆ ಹಾನಿಕಾರಕ ರಾಸಾಯನಿಕಗಳನ್ನು ಹರಿಯ ಬಿಡುವ ಕೈಗಾರಿಕ ಘಟಕಗಳ ವಿರುದ್ಧ  ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡುತ್ತಾರೆ.

ಕಲ್ಮಷ ನೀರಿನಿಂದಾಗಿ ಇಲ್ಲಿಯ ತನಕ ನಾವು ಕೇವಲ ನಾಯಿಗಳ ಮೈಬಣ್ಣ ನೀಲಿಯಾಗಿದ್ದನ್ನು ನೋಡಿದ್ದೇವೆ.ಆದರೆ  ಇದರಿಂದ ಎಷ್ಟು ಪಕ್ಷಿಗಳು ಮತ್ತಿತರ ಜಲಚರಗಳು ಬಾಧಿತವಾಗಿವೆಯೆಂದು ತಿಳಿದಿಲ್ಲ ಎಂದು ಪ್ರಾಣಿ ಹಕ್ಕು ಕಾರ್ಯಕರ್ತರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News