ಭಾರತಕ್ಕೆ ಕ್ಲೀನ್ ಸ್ವೀಪ್ ಗುರಿ: ಲಂಕೆಗೆ ವೈಟ್ ವಾಶ್ ಭೀತಿ

Update: 2017-08-11 18:31 GMT

ಪಲ್ಲೇಕೆಲೆ, ಆ.11: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಮೂರನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಲ್ಲೇಕೆಲೆಯಲ್ಲಿ ಶನಿವಾರ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಗುರಿ ಹೊಂದಿದೆ. ಆದರೆ ಆತಿಥೇಯ ಲಂಕೆಗೆ ವೈಟ್ ವಾಶ್ ಭೀತಿ ಉಂಟಾಗಿದೆ.

ಎರಡು ಟೆಸ್ಟ್‌ಗಳಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಈಗಾಗಲೇ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಕಾರಣದಿಂದಾಗಿ ಮೂರನೆ ಟೆಸ್ಟ್‌ನಲ್ಲಿ ಯಾವುದೇ ಒತ್ತಡವಿಲ್ಲದೆ ಕೊಹ್ಲಿ ಬಳಗ ಕಣಕ್ಕಿಳಿಯಲಿದೆ. ಆದರೆ ತವರಿನಲ್ಲಿ ಹೀನಾಯ ಸೋಲು ಅನುಭವಿಸಿರುವ ಶ್ರೀಲಂಕಾದ ಆಟಗಾರರು ಅಂತಿಮ ಟೆಸ್ಟ್‌ನಲ್ಲಿ ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದಾರೆ.

ಗಾಲೆಯಲ್ಲಿ ಮೊದಲ ಟೆಸ್ಟ್‌ನಲ್ಲಿ ಭಾರತ 304 ರನ್‌ಗಳ ಅಂತರದಲ್ಲಿ ಜಯ ಗಳಿಸಿತ್ತು. ಕೊಲಂಬೊದಲ್ಲಿ ಎರಡನೆ ಟೆಸ್ಟ್‌ನಲ್ಲಿ ಇನಿಂಗ್ಸ್ ಗೆಲುವು ದಾಖಲಿಸಿದ ಭಾರತ ಮೂರು ಟೆಸ್ಟ್‌ಗಳ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ವಶಪಡಿಸಿಕೊಂಡಿತು.

ಅತ್ಯುತ್ತಮ ಫಾರ್ಮ್‌ನಲ್ಲಿರುವ ಭಾರತ ತಂಡ ಎರಡೂ ಟೆಸ್ಟ್‌ಗಳ ಮೊದಲ ಇನಿಂಗ್ಸ್‌ನಲ್ಲಿ 600ಕ್ಕೂ ಅಧಿಕ ರನ್ ದಾಖಲಿಸಿ ಲಂಕೆಗೆ ಸೋಲುಣಿಸಿತ್ತು. ಭಾರತ ಮತ್ತೊಮ್ಮೆ ಇದೇ ಪ್ರದರ್ಶನವನ್ನು ಮುಂದುವರಿಸಿ ಶ್ರೀಲಂಕಾ ತಂಡವನ್ನು ಬಗ್ಗು ಬಡಿಯುವ ತಯಾರಿಯಲ್ಲಿದೆ.

ಮಳೆಯ ಭೀತಿ: ಎರಡು ದಿನಗಳ ಮೊದಲು ಪಲ್ಲೇಕೆಲೆಯಲ್ಲಿ ಮಳೆಯಾಗಿದೆ. ಈ ಕಾರಣಗಳಿಂದಾಗಿ ಉಭಯ ತಂಡಗಳು ಶುಕ್ರವಾರ ಅಭ್ಯಾಸ ನಡೆಸಲಿಲ್ಲ. ಭಾರೀ ಮಳೆ ಕಾಣಿಸಿಕೊಂಡರೆ ಆಟ ನಡೆಯುವುದು ಕಷ್ಟ. ಪಿಚ್‌ನ್ನು ಮಳೆಯಿಂದ ರಕ್ಷಿಸಲು ಹೊದಿಕೆ ಹಾಸಲಾಗಿದೆ. ಮೋಡ ಮುಸುಕಿದ ವಾತಾವರಣ ಇದೆ. ಇದರಿಂದಾಗಿ ಆಟಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಉಭಯ ತಂಡಗಳಿಗೂ ಟಾಸ್ ನಿರ್ಣಾಯಕವಾಗಲಿದೆ.

 ತಂಡದ ಸಮಾಚಾರ: ಶ್ರೀಲಂಕಾ ಇಬ್ಬರು ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಕಳೆದ ಎರಡು ಟೆಸ್ಟ್‌ಗಳಲ್ಲಿ ಶ್ರೀಲಂಕಾ ತಂಡ ಗಾಯಾಳುಗಳ ಸಮಸ್ಯೆಯಿಂದಾಗಿ ತೊಂದರೆ ಅನುಭವಿಸಿತ್ತು. ಮೂರನೆ ಟೆಸ್ಟ್‌ನಲ್ಲೂ ತಂಡದ ಸಮಸ್ಯೆ ನಿವಾರಣೆಯಾಗಿಲ್ಲ.ಗಾಯದ ಕಾರಣದಿಂದಾಗಿ ರಂಗನ ಹೆರಾತ್ ಮತ್ತು ನುವಾನ್ ಪ್ರದೀಪ್ ತಂಡದ ಸೇವೆಗೆ ಲಭ್ಯರಿಲ್ಲ.

   ಹೆರಾತ್ ಮತ್ತು ಪ್ರದೀಪ್ ಅನುಪಸ್ಥಿತಿಯಲ್ಲಿ ದುಶ್ಮಂಥ್‌ಚಾಮೀರಾ ಮತ್ತು ಲಹಿರು ಗಾಮಗೆ ತಂಡದ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇವರೊಂದಿಗೆ ವಿಶ್ವ ಫೆರ್ನಾಂಡೊ ಮತ್ತು ಲಹಿರು ಕುಮಾರ್ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸಲಿದ್ದಾರೆ. ಲಹಿರು ತಿರಿಮನ್ನೆ ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ. ಅವರಿಗೆ ಧನಂಜಯ್ ಡಿ ಸಿಲ್ವ ಸ್ಥಾನ ತೆರವುಗೊಳಿಸಬೇಕಾಗುತ್ತದೆ.

ಜಡೇಜ ಹೊರಕ್ಕೆ: 

ಮೂರನೆ ಟೆಸ್ಟ್‌ನಲ್ಲಿ ಭಾರತಕ್ಕೆ ಒತ್ತಡವಿಲ್ಲದಿದ್ದರೂ, ವಿಶ್ವದ ನಂ.1 ಆಲ್‌ರೌಂಡರ್ ರವೀಂದ್ರ ಜಡೇಜ ಐಸಿಸಿಯ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಒಂದು ಟೆಸ್ಟ್‌ಗೆ ನಿಷೇಧದ ಸಜೆ ಎದುರಿಸುವಂತಾಗಿದೆ. ಅವರ ಬದಲಿಗೆ ತಂಡದಲ್ಲಿ ಯಾರನ್ನು ಸೇರಿಸಬೇಕು ? ಎಂಬ ವಿಚಾರ ನಾಯಕ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿಗೆ ತಲೆನೋವಾಗಿ ಪರಿಣಮಿಸಿದೆ. ಲಭ್ಯ ಮಾಹಿತಿ ಪ್ರಕಾರ ಸ್ಪಿನ್ನರ್ ಕುಲದೀಪ್ ಯಾದವ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇದೇ ವೇಳೆ ಅಕ್ಷರ್ ಪಟೇಲ್ ಕೂಡ ಪೈಪೋಟಿಗಿಳಿದಿದ್ದಾರೆ. ಇದು ನಿಮಗೆ ಗೊತ್ತೇ ?

►ಭಾರತ ಮೂರನೆ ಟೆಸ್ಟ್‌ನಲ್ಲೂ ಜಯ ಗಳಿಸಿದರೆ 1968ರ ಬಳಿಕ ವಿದೇಶದಲ್ಲಿ ಸತತ ಮೂರು ಟೆಸ್ಟ್‌ಗಳಲ್ಲಿ ಜಯ ಗಳಿಸಿದ ಮೊದಲ ತಂಡವೆಂಬ ದಾಖಲೆ ಬರೆಯಲಿದೆ. ಶ್ರೀಲಂಕಾದಲ್ಲಿ 2004ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಶ್ರೀಲಂಕಾ 3-0 ಅಂತರದಲ್ಲಿ ಸೋಲಿಸಿತ್ತು.

►20ಭಾರತದ ಕುಲ್‌ದೀಪ್ ಯಾದವ್ ಮತ್ತು ಲಂಕಾದ ಲಕ್ಷಣ್ ಸಂಡಕನ್ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆದರೆ ಉಭಯ ತಂಡಗಳಲ್ಲೂ 2004ರ ಬಳಿಕ ಮೊದಲ ಬಾರಿ ಚೈನಾಮೆನ್ ಬೌಲರ್‌ಗಳು ಕಾಣಿಸಿಕೊಂಡಂತಾಗುತ್ತದೆ.

►20ಶ್ರೀಲಂಕಾದ ಪರ ಗರಿಷ್ಠ ವಿಕೆಟ್ ಪಡೆದಿರುವ ನುವಾನ್ ಪ್ರದೀಪ್(6) ಮತ್ತು ರಂಗನ ಹೆರಾತ್ (5) ಅಂತಿಮ ಟೆಸ್ಟ್‌ಗೆ ಲಭ್ಯರಿಲ್ಲ.

►20ಭಾರತದ ಚೇತೇಶ್ವರ 2 ಟೆಸ್ಟ್‌ಗಳ 3 ಇನಿಂಗ್ಸ್‌ಗಳಲ್ಲಿ 2 ಶತಕಗಳನ್ನು ಒಳಗೊಂಡ 301 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ಧಾರೆ. ಕರುಣರತ್ನೆ 265 ರನ್ , ಶಿಖರ್ ಧವನ್ 239ರನ್ ಮತ್ತು ಅಜಿಂಕ್ಯ ರಹಾನೆ 212 ರನ್ ಗಳಿಸಿದ್ದಾರೆ.

 ಬೌಲರ್‌ಗಳ ಪೈಕಿ ಭಾರತದ ರವೀಂದ್ರ ಜಡೇಜ 13 ಮತ್ತು ರವಿಚಂದ್ರನ್ ಅಶ್ವಿನ್ 11 ವಿಕೆಟ್ ಪಡೆದಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಚೇತೇಶ್ವರ ಪೂಜಾರ, ರೋಹಿತ್ ಶರ್ಮ, ಆರ್.ಅಶ್ವಿನ್, ಅಕ್ಷರ್ ಪಟೇಲ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಇಶಾಂತ್ ಶರ್ಮ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ಕುಲದೀಪ್ ಯಾದವ್, ಅಭಿನವ್ ಮುಕುಂದ್.

ಶ್ರೀಲಂಕಾ: ದಿನೇಶ್ ಚಾಂಡಿಮಾಲ್(ನಾಯಕ), ಉಪುಲ್ ತರಂಗ, ದ್ವಿಮುತ್ ಕರುಣರತ್ನೆ, ಕುಶಾಲ್ ಮೆಂಡಿಸ್, ಆ್ಯಂಜೆಲೊ ಮ್ಯಾಥ್ಯೂಸ್, ಲಹಿರು ತಿರಿಮನ್ನೆ, ಧನಂಜಯ್ ಡಿ ಸಿಲ್ವ, ನಿರೋಶನ್ ಡಿಕ್ವೆಲ್ಲಾ, ದಿಲ್ರುವಾನ್ ಪೆರೆರಾ, ಲಕ್ಷಣ್ ಸಂಡಕನ್, ವಿಶ್ವ ಫೆರ್ನಾಂಡೊ, ಲಹಿರು ಕುಮಾರ, ಲಹಿರು ಗಾಮಗೆ, ದುಶ್ಮಂಥ್ ಚಾಮೀರಾ.

 ಪಂದ್ಯದ ಸಮಯ : ಬೆಳಗ್ಗೆ 10: ಗಂಟೆಗೆ ಆರಂಭ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News