ಅಸಹಿಷ್ಣುತೆಯ ನಡುವೆ ಅನ್ಸಾರಿಯ ಆತಂಕ

Update: 2017-08-11 18:47 GMT

ಹಿರಿಯ ವಿದ್ವಾಂಸರೂ, ಮೇಧಾವಿಗಳೂ ಆಗಿರುವ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ತಮ್ಮ ಸ್ಥಾನದಿಂದ ನಿರ್ಗಮಿಸುವ ಸಂದರ್ಭದಲ್ಲಿ ಆಡಿರುವ ಮಾತೊಂದು ಸರಕಾರಕ್ಕೆ ಮುಜುಗರ ತಂದಿದೆ. ‘‘ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಅನೈತಿಕ ಪೊಲೀಸ್‌ಗಿರಿಯ ಘಟನೆಗಳಿಂದಾಗಿ ದೇಶದ ಮುಸ್ಲಿಮರಿಗೆ ಅಸುರಕ್ಷತೆಯ ಭಾವನೆ ಕಾಡಲಾರಂಭಿಸಿದೆ’’ ಎಂದು ಉಪರಾಷ್ಟ್ರಪತಿಯಾಗಿ ತಾನು ನೀಡಿದ ಕೊನೆಯ ಸಂದರ್ಶನದಲ್ಲಿ ಅನ್ಸಾರಿಯವರು ಅಭಿಪ್ರಾಯ ಪಟ್ಟಿದ್ದಾರೆ. ನಿರ್ಗಮಿಸುತ್ತಿರುವ ಉಪರಾಷ್ಟ್ರಪತಿ ತನ್ನ ಜೊತೆಗೆ ‘ಅನ್ಸಾರಿ’ ಎನ್ನುವ ಹೆಸರನ್ನೂ ತಳಕು ಹಾಕಿಕೊಂಡಿರುವುದರಿಂದ, ಅವರ ಮಾತುಗಳೊಳಗಿರುವ ಆತಂಕ, ಕಳವಳ, ಈ ದೇಶದ ಕುರಿತ ಅವರ ಪ್ರೀತಿ ಎಲ್ಲವೂ ಒಮ್ಮೆಲೆ ಪ್ರಶ್ನೆಗೊಳಗಾಯಿತು. ಅಥವಾ ಬಿಜೆಪಿಗೆ ಅದನ್ನು ‘ಪ್ರಶ್ನೆಗೊಳಪಡಿಸುವುದು’ ಅತ್ಯಗತ್ಯವಾಗಿತ್ತು.

ಮುಸ್ಲಿಮ್ ಹೆಸರಿರುವ ದೇಶದ ಅತ್ಯುನ್ನತ ನಾಯಕನೊಬ್ಬ ‘ತನ್ನ ದೇಶದ ಬಗ್ಗೆ ವ್ಯಕ್ತಪಡಿಸುವ ಆತಂಕ’ವೂ ಪೂರ್ವಾಗ್ರಹ ಪೀಡಿತವಾಗಿ ವಿಶ್ಲೇಷಣೆಗೊಳಗಾಗುವುದೇ ಈ ದೇಶದೊಳಗೆ ಅದೆಂತಹ ಅಸಹಿಷ್ಣುತೆಯ ಮನಸ್ಥಿತಿ ತಲೆಯೆತ್ತುತ್ತಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಅನ್ಸಾರಿಯವರು ದೇಶದ ಸದ್ಯದ ಸ್ಥಿತಿಯ ಕುರಿತಂತೆ ಆತಂಕವನ್ನು ವ್ಯಕ್ತಪಡಿಸಿದ್ದರೆ, ಬಿಜೆಪಿ ಮತ್ತು ಅದರ ಪರಿವಾರಗಳು ಅದನ್ನು ಅನ್ಸಾರಿಯ ವೈಯಕ್ತಿಕ ಅನಿಸಿಕೆ ಎಂಬಂತೆ ವಿರೂಪಗೊಳಿಸಿದವು. ಅನ್ಸಾರಿಯವರು ವ್ಯಕ್ತಪಡಿಸಿರುವ ಅನಿಸಿಕೆಗಳಿಗೆ ವಿರೋಧಿಗಳಿಂದ ದೊರಕಿರುವ ಮೊದಲ ಪ್ರತಿಕ್ರಿಯೆ ‘‘ಈವರೆಗೆ ವೌನವಾಗಿದ್ದವರು ಈಗ ಯಾಕೆ ಬಾಯಿ ತೆರೆದರು?’’. ಅನ್ಸಾರಿಯವರು ಈ ದೇಶದ ‘ಬಹುತ್ವ’ ‘ವೈವಿಧ್ಯ’ಗಳ ಕುರಿತಂತೆ ಹಲವು ಬಾರಿ ಮಾತನಾಡಿದ್ದಾರೆ. ಪ್ರಜಾಸತ್ತೆಗೆ ಎದುರಾಗುತ್ತಿರುವ ಆತಂಕಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ, ರಾಜ್ಯಸಭೆಯ ಸಭಾಪತಿಯೂ ಆಗಿರುವ ಅನ್ಸಾರಿ, ತನ್ನ ಮಾತುಗಳು ಸದಸ್ಯರಲ್ಲಿ ಪೂರ್ವಾಗ್ರಹಗಳನ್ನು ಬಿತ್ತದಂತೆ ಸಮಚಿತ್ತವನ್ನು ಸದಾ ಕಾಪಾಡಿಕೊಂಡು ಬಂದಿದ್ದಾರೆ. ತಮ್ಮ ಸ್ಥಾನದ ಘನತೆಗೆ ಚ್ಯುತಿ ಬರುವಂತೆ ಯಾವತ್ತೂ ನಡೆದುಕೊಂಡವರಲ್ಲ. ಒಬ್ಬ ರಾಷ್ಟ್ರಪತಿಯಾಗಲಿ, ಉಪರಾಷ್ಟ್ರಪತಿಯಾಗಲಿ ವಿದಾಯ ಮಾತುಗಳನ್ನು ಆಡುವಾಗ ಅದಕ್ಕೆ ತನ್ನಷ್ಟಕ್ಕೇ ಮಹತ್ವ ಬಂದು ಬಿಡುತ್ತದೆ. ಈ ದೇಶದ ಸದ್ಯದ ಸಂದರ್ಭವನ್ನು ಮೇಲ್ಜಾತಿಯ ಪ್ರಣವ್ ಮುಖರ್ಜಿ ನೋಡುವ ದೃಷ್ಟಿಗೂ ಒಬ್ಬ ದಲಿತ ಅಥವಾ ಮುಸ್ಲಿಮ್ ಸಮುದಾಯದಿಂದ ಬಂದಿರುವ ನಾಯಕ ನೋಡುವ ದೃಷ್ಟಿಗೂ ವ್ಯತ್ಯಾಸವಿದೆ.

ತಿಂಗಳಿಗೊಮ್ಮೆ ತಿರುಪತಿಗೆ ತೆರಳಿ ಅಲ್ಲಿ ಅಂಗಿ ಬಿಚ್ಚಿ ನಿಲ್ಲುತ್ತಿದ್ದ ಪ್ರಣವ್ ಮುಖರ್ಜಿಯಿಂದ ಈ ದೇಶದ ಶೋಷಿತ ಸಮುದಾಯ ಯಾವತ್ತೂ ಹಿರಿದಾದುದನ್ನು ನಿರೀಕ್ಷಿಸಿಲ್ಲ. ಇದೇ ಸಂದರ್ಭದಲ್ಲಿ, ವಿದಾಯದ ಹೊತ್ತಿನಲ್ಲಿ ದೇಶದ ಸ್ಥಿತಿಗತಿಗೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ ಅನ್ಸಾರಿಯವರು, ಅತ್ಯುನ್ನತ ಸ್ಥಾನದಲ್ಲಿ ನಿಂತು ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಉಪರಾಷ್ಟ್ರಪತಿಯಂತಹ ಅತ್ಯುನ್ನತ ಸ್ಥಾನ ನಿರ್ವಹಿಸಿದ ವ್ಯಕ್ತಿ ಹೇಳಿದ ಮಾತುಗಳಲ್ಲಿ ವಾಸ್ತವವೆಷ್ಟು? ಎನ್ನುವುದು ಚರ್ಚೆಯಾಗಬೇಕಲ್ಲದೆ, ಅವರು ಅಂತಹ ಹೇಳಿಕೆಯನ್ನು ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸುವುದೇ ಬಿಜೆಪಿ ಪರಿವಾರದೊಳಗಿನ ‘ಅಸಹಿಷ್ಣುತೆ’ಯನ್ನು ಹೊರಗೆಡಹುತ್ತದೆ. ದೇಶಾದ್ಯಂತ ಗೋರಕ್ಷಕರ ತಾಂಡವಗಳ ಕುರಿತಂತೆ ನರೇಂದ್ರ ಮೋದಿಯವರೇ ಹಲವು ಬಾರಿ ಹೇಳಿಕೆಗಳನ್ನು ನೀಡಿದ್ದಾರೆ.

ಈ ದೇಶದ ನ್ಯಾಯಾಲಯ ಸರಕಾರಕ್ಕೆ ಪದೇ ಪದೇ ಎಚ್ಚರಿಕೆಯನ್ನು ನೀಡಿದೆ. ಪ್ರಧಾನಮಂತ್ರಿಯವರು ‘ಗೋರಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ರಾಜ್ಯ ಸರಕಾರಗಳ ಹೊಣೆಗಾರಿಕೆ’ ಎಂದೂ ಸೂಚನೆ ನೀಡಿದ್ದಾರೆ. ಜುನೈದ್ ಎನ್ನುವ ಅಮಾಯಕನನ್ನು ರೈಲಿನಲ್ಲಿ ಹಾಡಹಗಲೇ ಕೊಲೆಗೈದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಎಲ್ಲ ಘಟನೆಗಳೂ ಮುಸ್ಲಿಮರನ್ನೇ ಗುರಿಯಾಗಿಸಿ ನಡೆದಿವೆ ಎನ್ನುವುದನ್ನು ಬಿಜೆಪಿ ನಾಯಕರು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಗೋರಕ್ಷಣೆ ಇಲ್ಲಿ ಒಂದು ನೆಪ ಮಾತ್ರವಾಗಿದೆ. ಅವರ ಉದ್ದೇಶ ಆ ಮೂಲಕ ಅಲ್ಪಸಂಖ್ಯಾತರಲ್ಲಿ ಅಭದ್ರತೆಯನ್ನು ಸೃಷ್ಟಿಸುವುದು. ಅನ್ಸಾರಿ ಎತ್ತಿದ ಪ್ರಶ್ನೆ ಇಲ್ಲಿ ಚರ್ಚೆಗೊಳಗಾಗಬೇಕೇ ಹೊರತು, ಅನ್ಸಾರಿಯೇ ಪ್ರಶ್ನೆಗೊಳಗಾಗುವುದು ಅಲ್ಲ. ಅನ್ಸಾರಿಯವರ ಆತಂಕವನ್ನು ಗೌರವಿಸಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಅವರಿಗೆ ನೀಡುವುದು ಸರಿಯಾದ ಕ್ರಮವಾಗಿದೆ.

ಆದರೆ ದುರದೃಷ್ಟವಶಾತ್, ಉಪರಾಷ್ಟ್ರಪತಿಯ ಬಾಯಿಯನ್ನೇ ಮುಚ್ಚಿಸಿ ಈ ದೇಶದ ಸದ್ಯದ ವಿಪರ್ಯಾಸಗಳನ್ನು ಮುಚ್ಚಿಡುವುದಕ್ಕೆ ಸರಕಾರ ಹವಣಿಸುತ್ತಿದೆ. ‘‘ಇಂತಹ ಉನ್ನತ ಹುದ್ದೆಯಲ್ಲಿರುವವರಿಂದ ಈ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ’’ ಎಂದು ಬಿಜೆಪಿ ಹೇಳಿದೆ. ಅಂದರೆ ಉನ್ನತ ವ್ಯಕ್ತಿಗಳ ಹೊಣೆಗಾರಿಕೆಯೇನು? ವಾಸ್ತವಗಳಿಗೆ ವಿಮುಖ ವಾಗಿ, ಸಿಹಿಯಾದ ಸುಳ್ಳುಗಳನ್ನು ಹೇಳಿ ದೇಶದ ಜನರನ್ನು ರಂಜಿಸುವುದು ಅವರ ಕೆಲಸವೇ? ಮುಸ್ಲಿಮರೂ ಈ ದೇಶದ ನಾಗರಿಕರು. ಅವರೊಳಗೆ ಅಭದ್ರತೆ ಮೂಡುವುದೆಂದರೆ ಅದು ದೇಶದೊಳಗಿನ ಭದ್ರತೆಗೆ ಅಪಾಯವೇ ಸರಿ. ಈ ಹಿನ್ನೆಲೆಯಲ್ಲಿ ಅನ್ಸಾರಿಯವರ ಹೇಳಿಕೆಯನ್ನು ಧನಾತ್ಮಕವಾಗಿ ಸ್ವೀಕರಿಸುವುದು ಸರಕಾರದ ಹೊಣೆಗಾರಿಕೆ. ಇಂದು ದೇಶಾದ್ಯಂತ ಗೋರಕ್ಷಕರ ವೇಷದಲ್ಲಿ ಕ್ರಿಮಿನಲ್‌ಗಳು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ.

ಈ ದೇಶದಲ್ಲಿ ಗೋರಕ್ಷಣೆಯ ವೇಷದಲ್ಲಿರುವ ಸಂಘಟನೆಗಳನ್ನು ನಿಷೇಧಿಸಲು ಸಮಯ ಹತ್ತಿರ ಬಂದಿದೆ. ಶೋಷಿತರು, ಅಲ್ಪಸಂಖ್ಯಾತರ ನಡುವೆ ಅಭದ್ರತೆಯನ್ನು ಬಿತ್ತುವುದಕ್ಕೆ ಕಾರಣವಾಗಿರುವ ಯಾರೇ ಇರಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ, ಎಲ್ಲ ಸಮುದಾಯಗಳನ್ನು ಒಂದೇ ತೆಕ್ಕೆಯಲ್ಲಿ ತೆಗೆದುಕೊಂಡು ಹೋಗುವುದು ಸರಕಾರದ ಕರ್ತವ್ಯ. ದೇಶದ ಹಿತದೃಷ್ಟಿಯಿಂದಲೂ ಇದು ಅಗತ್ಯ. ತನ್ನ ಮಾತುಗಳ ಮೂಲಕ ಈ ಹೊಣೆಗಾರಿಕೆಗಳನ್ನು ಸರಕಾರಕ್ಕೆ ಅನ್ಸಾರಿ ನೆನಪಿಸಿಕೊಟ್ಟಿದ್ದಾರೆ. ಸತ್ಯವನ್ನು ಹೇಳಿದ ಅನ್ಸಾರಿಯವರ ಮೇಲೆ ಸಿಟ್ಟಾಗದೇ, ಅವರು ತೋಡಿಕೊಂಡ ಆತಂಕ, ಕಳವಳವನ್ನು ಸರಕಾರ ಗಂಭೀರವಾಗಿ ಸ್ವೀಕರಿಸಬೇಕು.

ಅನ್ಸಾರಿಯವರು ತಮ್ಮ ವಿದಾಯ ಭಾಷಣದಲ್ಲಿ ‘‘ಟೀಕೆಗಳಿಲ್ಲದ ಪ್ರಜಾಪ್ರಭುತ್ವ ನಿರಂಕುಶವಾದದ ಕಡೆಗೆ ಸಾಗಬಹುದು’’ ಎಂದು ಹೇಳಿದ್ದರು. ಅನ್ಸಾರಿಯ ಸಣ್ಣದೊಂದು ಟೀಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲದ ನಮ್ಮ ನಾಯಕರು ಈ ಮೂಲಕ ಅನ್ಸಾರಿ ಮಾತುಗಳಿಗೆ ಸಮರ್ಥನೆಗಳನ್ನು ನೀಡಿದ್ದಾರೆ. ಬಹುಶಃ ಅನ್ಸಾರಿಯವರ ‘ಅಭದ್ರತೆ’ಯ ಹೇಳಿಕೆಯ ವಿರುದ್ಧದ ಬಿಜೆಪಿಯ ನಾಯಕರ ಟೀಕೆಗೆ, ಅನ್ಸಾರಿ ಅವರ ವಿದಾಯ ಭಾಷಣದಲ್ಲೇ ಸ್ಪಷ್ಟ ಉತ್ತರವಿದೆ. ಪ್ರಶ್ನೆಗಳನ್ನು, ಟೀಕೆಗಳನ್ನು ಅದುಮಿ ಹಾಕುವ ಸರಕಾರದ ಸರ್ವಾಧಿಕಾರಿ ಮನಸ್ಥಿತಿಯ ಕುರಿತು ದೇಶವನ್ನು ಪರೋಕ್ಷವಾಗಿ ಎಚ್ಚರಿಸಿ ಉಪರಾಷ್ಟ್ರಪತಿ ಅನ್ಸಾರಿ ತನ್ನ ಸ್ಥಾನದಿಂದ ನಿರ್ಗಮಿಸಿದ್ದಾರೆ. ಅತ್ಯುನ್ನತ ಸ್ಥಾನದಿಂದ ನಿರ್ಗಮಿಸುವ ಸಂದರ್ಭದಲ್ಲಿಯಾದರೂ ಇಂತಹದೊಂದು ಧೈರ್ಯ ತೋರಿಸಿದ್ದಕ್ಕೆ ಅನ್ಸಾರಿ ಅಭಿನಂದನಾರ್ಹರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News