‘‘ಔಷಧಿ ಖರೀದಿಸಿ ಹಿಂದೆ ಬರುವಷ್ಟರಲ್ಲಿ ನನ್ನ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು’’

Update: 2017-08-12 08:26 GMT

ಗೋರಖಪುರ, ಆ.12: ಹುಟ್ಟಿ ಹತ್ತು ದಿನಗಳಷ್ಟೇ ಆಗಿದ್ದ ತನ್ನ ಗಂಡು ಮಗುವಿಗೆ ಔಷಧಿ ಖರೀದಿಸಲು ದೀಪ್ ಚಂದ್ ಗೋರಖಪುರದ ಬಿ.ಆರ್.ಡಿ. ಮೆಡಿಕಲ್ ಕಾಲೇಜಿನಿಂದ ಹೊರ ನಡೆದಿದ್ದ. ಅರ್ಧ ಗಂಟೆಯೊಳಗಾಗಿ ಆತ ಹಿಂದೆ ಬರುವಷ್ಟರ ಹೊತ್ತಿಗೆ ಮಗು ಪ್ರಾಣ ತ್ಯಜಿಸಿತ್ತು.

ಕಳೆದ ಕೆಲ ದಿನಗಳಿಂದ ಗೋರಖಪುರದ ಈ ಸರಕಾರಿ ಆಸ್ಪತ್ರೆಯಲ್ಲಿ ಒಂದು ಮಗುವಾದ ನಂತರ ಇನ್ನೊಂದು ಮಗು ಅಮ್ಲಜನಕದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತಲೇ ಇದ್ದು, ಹಲವಾರು ಹೆತ್ತವರು ಕಂಗಾಲಾಗಿ ಹೋಗುವಂತಹ ಪರಿಸ್ಥಿತಿ ಇದಾಗಿತ್ತು. ಇದು ಮುಖ್ಯಮಂತ್ರಿ ಆದಿತ್ಯನಾಥ್ ಅವರ ತವರು ಕ್ಷೇತ್ರದ ಆಸ್ಪತ್ರೆಯಾಗಿದೆ.

ಖಾಸಗಿ ಗುತ್ತಿಗೆದಾರನೊಬ್ಬ ಪಾವತಿ ಸಂಬಂಧಿತ ವಿವಾದದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ನಿಲ್ಲಿಸಿದ ನಂತರ ಏಳು ದಿನಗಳ ಅವಧಿಯಲ್ಲಿ ಕನಿಷ್ಠ 63 ಮಕ್ಕಳು ಮೃತಪಟ್ಟಿದ್ದಾರೆ,

ಆಮ್ಲಜನಕದ ಕೊರತೆಯಿರಲಿಲ್ಲವೆಂದು ಸರಕಾರ ಹೇಳಿಕೊಂಡಿದ್ದರೂ ಮೃತಪಟ್ಟ ಮಕ್ಕಳ ಹೆತ್ತವರು ಇದನ್ನು ಒಪ್ಪಲು ಸಿದ್ಧರಿಲ್ಲ.

‘‘ಇಲ್ಲಿ ಮಕ್ಕಳು ಸಾಯಲಾರಂಭಿಸಿದ್ದಾರೆ ಎಂದು ಬೆಳಗ್ಗಿನಿಂದ ನಾವು ಕೇಳುತ್ತಿದ್ದೆವು. ಆದರೆ ನಾವು ಕೂಡ ನಮ್ಮ ಮಗುವನ್ನು ಕಳೆದುಕೊಳ್ಳುತ್ತೇವೆ ಎಂದು ತಿಳಿದಿರಲಿಲ್ಲ’’ ಎಂದು ತನ್ನ ಏಳು ವರ್ಷದ ಪುತ್ರಿಯನ್ನು ಕಳೆದುಕೊಂಡ ಸರೋಜ್ ದೇವಿ ಎಂಬ ಮಹಿಳೆ ಹೇಳಿದ್ದಾಳೆ. ವೈದ್ಯರೇ ಮಕ್ಕಳ ಸಾವುಗಳಿಗೆ ಕಾರಣ ಎಂದು ಆಕೆ ಹೇಳುತ್ತಾಳೆ.

ಮುಹಮ್ಮದ್ ಝಾಹಿದ್ ಮತ್ತು ಅಮೈರಾ ದಂಪತಿಯ ಏಳು ತಿಂಗಳ ಪುತ್ರಿ ಇನ್ನೂ ಜೀವಂತವಿದ್ದರೂ, ಆಕೆ ಬದುಕುಳಿಯುತ್ತಾಳೆ ಎಂಬ ಭರವಸೆ ಅವರಿಗಿಲ್ಲ.

‘‘ಆಕೆಯ ದೇಹ ತಣ್ಣಗಾಗಿದೆ. ವೈದ್ಯರು ಆಕೆಯನ್ನು ನೋಡಲು ಬಿಡುತ್ತಿಲ್ಲ. ದೇವರಿಗೆ ಪ್ರಾರ್ಥಿಸಬೇಕೆಂದು ವೈದ್ಯರು ಹೇಳುತ್ತಿದ್ದಾರೆ’’ ಎಂದು ಝಾಹಿದ್ ಅಳುತ್ತಾ ಹೇಳುತ್ತಾನೆ.

ತಮ್ಮ ಮಕ್ಕಳ ಕಳೇಬರಗಳನ್ನು ಕೈಯ್ಯಲ್ಲಿ ಹಿಡಿದುಕೊಂಡ ಹೆತ್ತವರ ಆಕ್ರಂದನ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದೆ.

ಔಷಧಿ ಮತ್ತು ರಕ್ತದ ಬಾಟಲಿಗಳನ್ನು ಹಿಡಿದುಕೊಂಡು ಆಸ್ಪತ್ರೆಗೆ ಧಾವಿಸಿದ್ದ ದೀಪ್ ಚಂದ್ ಗೆ ತನ್ನ ಮಗು ಸಾವಿಗೀಡಾಗಿದೆ ಎಂಬ ಸುದ್ದಿ ಬರಸಿಡಿಲಿನಂತೆ ಎರಗಿದೆ.

ಕೆಲವು ವೈದ್ಯರು ತಮ್ಮ ಮಕ್ಕಳನ್ನು ನೋಡಬೇಕೆಂಬ ತವಕದಲ್ಲಿರುವ ಸಂಬಂಧಿಕರಿಗೆ ಹೊಡೆಯುತ್ತಿದ್ದಾರೆ. ಸಿಸಿಟಿವಿ ಕ್ಯಾಮರಾ ದಾಖಲೆಗಳಲ್ಲಿ ಇದನ್ನು ಪರಿಶೀಲಿಸಬಹುದು’’ ಎಂದು ಅವಧಿಪೂರ್ವ ಪ್ರಸವದ ಮೂಲಕ ಜನಿಸಿದ ತನ್ನ ಮಗುವನ್ನು ಆಸ್ಪತ್ರೆಗೆ ದಾಖಲಿಸಿರುವ ಮೃತ್ಯುಂಜಯ್ ಹೇಳುತ್ತಾನೆ.

‘‘ಶೇ 90ರಷ್ಟು ಔಷಧಿಗಳನ್ನು ಹೊರಗಿನಿಂದ ತರಲು ಹೇಳುಲಾಗುತ್ತದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕಂಪ್ಯೂಟರಿನಲ್ಲಿ ಗೇಮ್ ಆಡುವುದರಲ್ಲಿ ಮಗ್ನರಾಗಿರುತ್ತಾರೆ’ ಎಂದು ಆತ ದೂರಿದ್ದಾನೆ.

ಅಧಿಕಾರಿಗಳು ಆಸ್ಪತ್ರೆಗೆ ಅಗತ್ಯ ಆಮ್ಲಜನಕ ಪೂರೈಕೆಗೆ ಕ್ರಮ ಕೈಗೊಂಡರಾದರೂ ಅಷ್ಟರೊಳಗಾಗಿ ಬಹಳ ತಡವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News